Tuesday , February 19 2019
ಕೇಳ್ರಪ್ಪೋ ಕೇಳಿ
Home / Spoorthiya Sele / ಬದುಕಿಗೆ ಸ್ಫೂರ್ತಿ ಕೊಡುವ `ಬಾಸ್ಕೆಟ್ ಬಾಲ್ ಹುಡುಗಿ’

ಬದುಕಿಗೆ ಸ್ಫೂರ್ತಿ ಕೊಡುವ `ಬಾಸ್ಕೆಟ್ ಬಾಲ್ ಹುಡುಗಿ’

Basketball Girl 3ಒಂದು ಅಪಘಾತ ಆ ಮಗುವಿನ ಜೀವನವನ್ನೇ ಕಸಿದುಕೊಳ್ಳುವುದರಲ್ಲಿತ್ತು. ಆ ಕಂದನ ಪುಣ್ಯವೋ? ದೇವರ ದಯೆಯೋ ಗೊತ್ತಿಲ್ಲ. ಪ್ರಾಣವೊಂದು ಉಳಿದಿತ್ತು. ಆದರೆ, ಇದು ಸಮಾಧಾನದ ವಿಚಾರವಾದರೂ ಸಂತೋಷದ ವಿಷಯವಂತೂ ಖಂಡಿತಾ ಆಗಿರಲಿಲ್ಲ. ಕಾರಣ, ಆ ಪುಟ್ಟ ಕಂದ ತನ್ನ ದೇಹದ ಅರ್ಧಭಾಗವನ್ನು ಕಳೆದುಕೊಂಡು ಆಗಿತ್ತು. ಆ ಭೀಕರ ಅಪಘಾತದಲ್ಲಿ ತನ್ನೆರಡು ಕಾಲನ್ನೂ ಕಳೆದುಕೊಂಡಿತ್ತು ಆ ಹೆಣ್ಮಗು.
Basketball Girl 22000ನೇ ಇಸವಿಯಲ್ಲಿ ನಡೆದ ಅಪಘಾತವಿದು. ಆಗ ಈ ಪುಟ್ಟ ಮಗುವಿಗೆ ನಾಲ್ಕುವರ್ಷ ತುಂಬುತ್ತಿತ್ತು ಅಷ್ಟೇ… ಕಾಲಚಕ್ರ ಉರುಳಿದಂತೆ ಈ ಹುಡುಗಿ ಬೆಳೆದು ದೊಡ್ಡವಳಾಗಿದ್ದಾಳೆ. ಈಗ ಈ ಹುಡುಗಿಗೆ ವಯಸ್ಸು 18. ಕಳೆದು ಹೋಗಿದ್ದ ಕಾಲಿನ ಜಾಗಕ್ಕೆ ಹೊಸ ಕಾಲು ಬಂದಿದೆ. ವಿಶ್ವದಾದ್ಯಂತ ಪ್ರಸಿದ್ಧಿಯೂ ಸಿಕ್ಕಿದೆ. ಸಂಕಷ್ಟದಲ್ಲಿರುವ ಜನರಿಗೆ ಈ ಹುಡುಗಿ ಮಾದರಿಯಾಗಿದ್ದಾಳೆ. ಬದುಕನ್ನು ಹೇಗೆ ಸವಾಲಾಗಿ ಸ್ವೀಕರಿಸಬೇಕೆಂಬುದಕ್ಕೆ ಈ ಹೆಣ್ಮಗಳೇ ಸಾಕ್ಷಿಯಾಗಿದ್ದಾಳೆ. ಕಾಲುಗಳಿಲ್ಲದಿದ್ದರೇನಂತೆ ಖ್ಯಾತಿ, ಪ್ರೀತಿ, ಮನ್ನಣೆ ಸೇರಿದಂತೆ ಎಲ್ಲಾ ಈ ಹುಡುಗಿಗೆ ಸಿಕ್ಕಿದೆ. ಇದೆಲ್ಲಾ ಸಾಧ್ಯವೇ? ಕಡು ಕಷ್ಟದಿಂದ ಈ ಪುಟ್ಟ ಹುಡುಗಿ ಈ ಪರಿ ಬೆಳೆದು ನಿಂತದ್ದು ಹೇಗೆ? ಇದೇ ರೋಚಕ, ಅಷ್ಟೇ ಸ್ಫೂರ್ತಿದಾಯಕ…
Basketball Girl 1ಕಿಯಾನ್ ಹೊನ್ಗ್ಯಾನ್… ಈ ರೋಚಕ ಕತೆಯ ನಾಯಕಿ. ಚೀನಾದ ಈ ಹುಡುಗಿ ಈಗ ನಗುತ್ತಿದ್ದಾಳೆ. ಆದರೆ, ಈಕೆಯ ನಗುವಿನ ಹಿಂದೆ ಅದೆಷ್ಟೋ ಅಳು ಅಳಿದು ಹೋಗಿದೆ. ಅಂದು ಯಮನನ್ನೇ ಜಯಿಸಿದ್ದ ಕಿಯಾನ್ ಬದುಕು ಈಗ ಎಲ್ಲರಿಗೂ ಮಾದರಿ. ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಾಗ ಕಿಯಾನ್ ಧೃತಿಗೆಡಲಿಲ್ಲ. ಬದಲಾಗಿ ಮಾನಸಿಕವಾಗಿ ಇನ್ನಷ್ಟು ಗಟ್ಟಿಯಾದಳು. ಕಾಲಿಲ್ಲದಿದ್ದರೇನಂತೆ ನಡೆಯಲು ದಾರಿ ಹಲವು ಎಂಬಂತೆ ಬದುಕಿದಳು.
Basketball Girl 4ಬಾಸ್ಕೆಟ್ ಬಾಲ್ ಗರ್ಲ್ ಆದಳು ಕಿಯಾನ್ : 2005ರಲ್ಲಿ ಕಿಯಾನ್ ಕೈಗಳ ಸಹಾಯದಿಂದ ನಡೆಯುವುದಕ್ಕೆ ಆರಂಭಿಸಿದಳು. ತನ್ನ ತುಂಡಾಗಿದ್ದ ದೇಹಕ್ಕೆ ಅರ್ಧ ಬಾಸ್ಕೆಟ್ ಬಾಲನ್ನು ಸಿಕ್ಕಿಸಿ ಕಿಯಾನ್ ನಡೆಯಲು ಕಲಿಯುತ್ತಿದ್ದಳು. ಕಿಯಾನ್ ಪ್ರಯತ್ನ ಮತ್ತು ಆತ್ಮವಿಶ್ವಾಸಕ್ಕೆ ಮನೆಯವರು ಸೇರಿದಂತೆ ಸ್ಥಳೀಯರು ಪ್ರೋತ್ಸಾಹದ ಧಾರೆಯೆರೆದರು. ಸ್ಥಳೀಯರು ಕಿಯಾನ್‍ರನ್ನು `ಬಾಸ್ಕೆಟ್ ಬಾಲ್ ಗರ್ಲ್’ ಎಂದೇ ಕರೆಯುತ್ತಿದ್ದರು.
Basketball Girl 5ಕಿಯಾನ್ ಜೀವನೋತ್ಸಾಹ 2005ರಲ್ಲಿ ಮಾಧ್ಯಮದವರ ಗಮನವನ್ನೂ ಸೆಳೆದಿತ್ತು. ಮಾಧ್ಯಮವೊಂದರಲ್ಲಿ ಕಿಯಾನ್ ಬಗೆಗೆ ವಿಸ್ತøತ ವರದಿ ಪ್ರಕಟವಾಯಿತು. ಆ ಬಳಿಕ ಚೀನಾದ ಪುನರ್ವಸತಿ ಕೇಂದ್ರವೊಂದು ಕಿಯಾನ್‍ಗೆ ಉಚಿತ ಕೃತಕ ಕಾಲುಗಳನ್ನು ನೀಡಿತ್ತು. 2007ರ ವರೆಗೆ ಕಿಯಾನ್‍ಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗಿದ್ದ ಕಾರಣ ಶಿಕ್ಷಣ ಅರ್ಧಕ್ಕೇ ನಿಂತಿತ್ತು. ಆದರೆ, ಕಿಯಾನ್ ಬೇರೆ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಸ್ಥಳೀಯ ಈಜು ಕೇಂದ್ರಕ್ಕೆ ಸೇರಿದ್ದ ಕಿಯಾನ್ ಈಗ ಅಪ್ರತಿಮ ಈಜುಪಟು. ದಿನಕ್ಕೆ ನಾಲ್ಕು ಗಂಟೆಗಳಷ್ಟು ಕಾಲ ಅಭ್ಯಾಸ ಮಾಡುತ್ತಾಳೆ ಈಕೆ. ಭವಿಷ್ಯದಲ್ಲಿ ಪ್ಯಾರಾ ಒಲಿಂಪಿಕ್‍ನಲ್ಲಿ ಖಂಡಿತಾ ದೇಶಕ್ಕೆ ಪದಕ ಗೆದ್ದು ತಂದೇ ತರುತ್ತೇನೆ ಎಂಬ ಕಿಯಾನ್ ಮಾತು ಈಕೆಯ ಆತ್ಮವಿಶ್ವಾಸ ಮತ್ತು ಜೀವನೋತ್ಸಾಹಕ್ಕೆ ಕೈಗನ್ನಡಿ.
Basketball Girl 6ಕಿಯಾನ್ ಚೀನಾದಲ್ಲಿ ಮನೆ ಮಾತು. ಯಾವುದೇ ಸೆಲೆಬ್ರಿಟಿಗಿಂತಲೂ ಕಮ್ಮಿ ಇಲ್ಲ ಈ ಹುಡುಗಿಯ ಖ್ಯಾತಿ. ಹಾಗಂತ, ಕಿಯಾನ್ ಸಾಗಿ ಬಂದ ಹಾದಿ ಹೂವಿನ ಮೆತ್ತೆಯಂತೂ ಖಂಡಿತಾ ಅಲ್ಲ. ಕಲ್ಲು ಮುಳ್ಳುಗಳನ್ನು ಮೆಟ್ಟಿಯೇ ಈಕೆ ಮುಂದೆ ಬಂದವಳು. ಆದರೆ, ಕಳೆದು ಹೋದ ಕಾಲಿಗಾಗಿ ಕಾಲಹರಣ ಮಾಡದೆ ಮುಂದಿರುವ ಹೊಸ ಬದುಕನ್ನು ಶೋಧಿಸಿದ ಕಿಯಾನ್ ನಮಗೆಲ್ಲರಿಗೂ ಮಾದರಿ. ಆತ್ಮವಿಶ್ವಾಸ, ದೃಢ ನಂಬಿಕೆ, ಸ್ಪಷ್ಟ ಗುರಿ, ಸತತ ಪ್ರಯತ್ನ ಮನುಷ್ಯನನ್ನು ಯಾವ ಯಶಸ್ವಿ ಶಿಖರಕ್ಕೂ ಕೊಂಡೊಯ್ಯಬಹುದು ಎಂಬುದಕ್ಕೆ ಈಕೆಯೇ ಸಾಕ್ಷಿ. ಬದುಕನ್ನು ಹೇಗೆ ಸವಿಯಬೇಕು ಎಂಬುದಕ್ಕೆ ಇವಳೇ ಸ್ಫೂರ್ತಿ.

About sudina

Leave a Reply

Your email address will not be published. Required fields are marked *

error: Content is protected !!