Tuesday , February 19 2019
ಕೇಳ್ರಪ್ಪೋ ಕೇಳಿ
Home / Purana Swarasya / ಒಡಬಾಗ್ನಿ ಜನಕ ಔರ್ವ

ಒಡಬಾಗ್ನಿ ಜನಕ ಔರ್ವ

ಈ ದೇಶ ಋಷಿ ಸಂಸ್ಕøತಿಯಿಂದ ಬೆಳೆದಿದೆ, ಬೆಳಗಿದೆ. ವೇದಗಳಿಂದ ತೊಡಗಿ ಪುರಾಣಗಳವರೆಗೆ ಜ್ಞಾನ ಸಾಮ್ರಾಜ್ಯವನ್ನು ಕಟ್ಟಿದವರು ನಮ್ಮ ಋಷಿಗಳು. ಜಗತ್ತಿನ ಇನ್ನಾವುದೋ ದೇಶದ ಸಾಹಿತ್ಯದಲ್ಲಿ ಸಿಗದ ಜ್ಞಾನದ ಹಿಮಾಲಯವೇ ನಮ್ಮಲ್ಲಿದೆ. ಈ ಋಷಿಗಳಲ್ಲಿ ಭೃಗು ಸಂತತಿಯವರ ಕೊಡುಗೆ ವಿಶೇಷ. ಭೃಗು, ಚ್ಯವನ, ಶುಕ್ರ, ಜಮದಗ್ನಿ, ಪರಶುರಾಮ, ರುಚಿಕ ಹೀಗೆ ಭೃಗು ಸಂತತಿಯ ಋಷಿಗಳ ದೊಡ್ಡ ಪರಂಪರೆಯೇ ಇದೆ. ಇದೇ ಸಾಲಿನಲ್ಲಿ ಬರುವ ಇನ್ನೊಬ್ಬ ಮಹಾಋಷಿ ಔರ್ವ.

ಔರ್ವ ಚ್ಯವನ ಮಹರ್ಷಿಗಳ ಮಗ. ಭೃಗುಗಳಲ್ಲಿ ವಿಶೇಷ ಮರ್ಯಾದೆಯುಳ್ಳ ಋಷಿ. ಪುರಾಣ ಲೋಕ ಕಂಡ ಅತಿ ವಿಚಿತ್ರ ವಿಶಿಷ್ಟ ವ್ಯಕ್ತಿ. ಈತನ ಬದುಕಿನ ಸ್ವಾರಸ್ಯವನ್ನು ಕುರಿತು ಒಂದಿಷ್ಟು ಮೆಲುಕು ಹಾಕೋಣ.

tapasuಕೃತವೀರ್ಯನೆಂಬ ರಾಜ ಮಾಹಿಷ್ಮತಿಯಲ್ಲಿ ಆಳುತ್ತಿದ್ದ ಕಾಲ. ಈ ಅರಸ ಭೃಗು ವಂಶದ ಋಷಿಗಳಿಗೆ ಆಪ್ತನಾಗಿದ್ದು ಅವರಿಂದ ಸದಾ ಯಜ್ಞಯಾಗಾದಿಗಳನ್ನು ಮಾಡಿಸುತ್ತಿದ್ದ. ತನ್ನ ಸಾಮ್ರಾಜ್ಯದ ಕೋಶಾಧಿಕಾರಿಗಳಿಂದ ದ್ರವ್ಯಗಳ ರಾಶಿಯನ್ನೇ ಈ ಬ್ರಾಹ್ಮಣರಿಗೆ ದಾನ ಮಾಡಿದ. ಧರ್ಮಾತ್ಮನಾದ ಈ ರಾಜ ಆಳುತ್ತಿದ್ದಷ್ಟು ಕಾಲವೂ ದೇಶ ಸುಭಿಕ್ಷವಾಗಿತ್ತು. ಕೃತವೀರ್ಯ ಮರಣ ಹೊಂದಿದ. ಮುಂದಿನ ಅರಸರು ದುಷ್ಟರಾದರು. ದೇಶಕ್ಕೂ ದುರ್ಭಿಕ್ಷ ಬಂತು. ತಮ್ಮ ಸಂಪತ್ತನ್ನೆಲ್ಲಾ ಭೃಗುಗಳು ಪಡೆದುಕೊಂಡಿದ್ದಾರೆಂದು ತಿಳಿದು ಈ ಕ್ಷತ್ರಿಯರು ಬ್ರಾಹ್ಮಣರನ್ನು ಪೀಡಿಸತೊಡಗಿದರು. ಹೆದರಿದ ಕೆಲವರು ಅಷ್ಟಿಷ್ಟು ಕೊಟ್ಟರು. ಉಳಿದವರು ಮನೆಯಲ್ಲಿ ಹುಗಿದಿಟ್ಟರು. ದುಷ್ಟ ಕ್ಷತ್ರಿಯರು ಹಣ ಕೊಡದವರನ್ನು ಕೊಂದರು, ದೋಚಿದರು. ಹೆಂಗಸರು, ಮಕ್ಕಳು, ವೃದ್ಧರನ್ನೂ ಬಿಡಲಿಲ್ಲ. ಭೃಗುಗಳ ಕುಡಿಯೇ ಉಳಿಯಬಾರದೆಂದು ಗರ್ಭಿಣಿಯರನ್ನೂ ಕೊಲ್ಲತೊಡಗಿದರು. ಈ ಸಂದರ್ಭದಲ್ಲಿ ಚ್ಯವನ ಮಹರ್ಷಿಯ ಪತ್ನಿ ಅರುಷಿ ಗರ್ಭಿಣಿಯಾಗಿದ್ದಳು. ಆಕೆ ಈ ದುಷ್ಟರಿಗೆ ಹೆದರಿ ಪರ್ವತವೊಂದರ ಗವಿಯೊಳಗೆ ಅಡಗಿಕೊಂಡಿದ್ದಳು. ಅಲ್ಲಿಗೂ ಕ್ಷತ್ರಿಯರು ಬಂದಾರು ಎಂದು ಹೆದರಿದ ಮಹಾ ಯೋಗಿನಿಯಾದ ಆಕೆ ತನ್ನ ಮಗುವನ್ನು ಉಳಿಸಿಕೊಳ್ಳಬೇಕೆಂದು ಬಯಸಿ ಯೋಗ ಬಲದಿಂದ ತನ್ನ ಗರ್ಭವನ್ನು ತೊಡೆಗೆ ಸೇರಿಸಿಬಿಟ್ಟಳು. ಆದರೆ ಇವಳ ಜೊತೆಗಿದ್ದ ಇನ್ನೊಬ್ಬ ಬ್ರಾಹ್ಮಣಿ ತನ್ನ ಸಾವಿಗೆ ಹೆದರಿ ಕ್ಷತ್ರಿಯರಿಗೆ ಈ ಸುದ್ದಿ ಹೇಳಿಬಿಟ್ಟಳು. ಕ್ರೂರಿ ಕ್ಷತ್ರಿಯರು ಅಲ್ಲಿಗೂ ದಾಳಿ ಇಟ್ಟು ಅರುಷಿಯನ್ನು ಕೊಲ್ಲಬೇಕೆನ್ನುವಾಗ ತೊಡೆಯಲ್ಲಿ ಸೇರಿಸಲ್ಪಟ್ಟ ಈ ಬ್ರಹ್ಮತೇಜ ತೊಡೆಯನ್ನೇ ಸೀಳಿಕೊಂಡು ಹೊರಗೆ ಬಂತು. ಈ ಮಗುವಿನ ತೇಜಸ್ಸು ಎಷ್ಟು ಪ್ರಖರವಾಗಿತ್ತೆಂದರೆ ಕಣ್ಣು ಬಿಟ್ಟು ನೋಡುತ್ತಲೇ ಆ ಎಲ್ಲಾ ದುಷ್ಟ ಕ್ಷತ್ರಿಯರ ದೃಷ್ಟಿಯೇ ಇಂಗಿ ಹೋಯಿತು. ಅವರು ನಡೆಯಲಾರದೆ ಹಳ್ಳ-ಕೊರಕಲುಗಳಲ್ಲಿ ಬಿದ್ದು ಒದ್ದಾಡ ತೊಡಗಿದರು. ಈ ಮಗುವಿನ ಅಪ್ಪ ಭೃಗು ಪುತ್ರ ಚ್ಯವನನೂ ಹುಟ್ಟಿದಾಗಲೇ ಪುಲೋಮನೆಂಬ ರಾಕ್ಷಸನನ್ನು ಸುಟ್ಟಿದ್ದ. ಗತಿಗಾಣದೆ ಮಗುವಿನ ತಾಯಿಯನ್ನು `ಅಮ್ಮಾ… ರಕ್ಷಿಸಬೇಕು’ ಎಂದು ಬೇಡಿಕೊಂಡರು. ಕೋಪಗೊಂಡ ಮಗು ಅನುಗ್ರಹಿಸಿದರೆ ಮಾತ್ರ ಇದು ಸಾಧ್ಯ ಎಂದು ಆಕೆ ಹೇಳಿದಳು. ಅವರು ಮಗುವನ್ನೇ ಪ್ರಾರ್ಥಿಸಿದರು.

ಮಗು ನಕ್ಕಿತು. ದೃಷ್ಟಿ ಮರಳಿತು. ತಮ್ಮ ತಪ್ಪನ್ನು ಒಪ್ಪಿ, ಕ್ಷಮೆ ಬೇಡಿ ಕ್ಷತ್ರಿಯರು ತಮ್ಮ ರಾಜ್ಯಕ್ಕೆ ಮರಳಿದರು. ತೊಡೆಯನ್ನು (ಊರು=ತೊಡೆ) ಸೀಳಿ ಹುಟ್ಟಿದವನಾದ್ದರಿಂದ ಈತನಿಗೆ ಔರ್ವ ಎಂದು ಹೆಸರು ಬಂತು. ಊರುವಿನಿಂದ ಹುಟ್ಟಿದವನು `ಔರ್ವ’ನಾದ.
ಮಗು ದೊಡ್ಡವನಾಗಿ ತಂದೆಯಂತೆಯೇ ಮಹಾ ತಪಸ್ವಿಯಾದ. ಆದರೆ ಆತನ ಅಂತರಂಗದಲ್ಲಿ ತನ್ನ ಸಂತತಿಯವರನ್ನು ಕೊಂದ ಕ್ಷತ್ರಿಯರನ್ನು ಉಳಿಸಬಾರದು ಎಂಬ ಹಠ ಹುಟ್ಟಿಕೊಂಡಿತು. ಜೊತೆಗೆ ಋಷಿ ಸಂತತಿಯೇ ನಾಶವಾದಾಗ ಸಹಾಯಕ್ಕೆ ಬರದ ಜಗತ್ತನ್ನೇ ಧ್ವಂಸ ಮಾಡಬೇಕೆಂಬ ಸಂಕಲ್ಪವೂ ಸೇರಿತು. ಘೋರ ತಪಸ್ಸಿಗೆ ತೊಡಗಿದ. ಈತನ ತಪಸ್ಸಿನಿಂದ ಜಗತ್ತೇ ಸುಡತೊಡಗಿತು. ಹೀಗೆ ತಪ-ಕೋಪಗಳಿಂದ ಜಗತ್ತನ್ನು ಸುಡುತ್ತಿದ್ದ ಔರ್ವನ ಮುಂದೆ ಪಿತೃ ದೇವತೆಗಳು ಪ್ರತ್ಯಕ್ಷರಾಗಿ `ಮಗೂ.. ಜಗತ್ತನ್ನು ಧ್ವಂಸ ಮಾಡುವ ಪಾಪ ಕಾರ್ಯಕ್ಕೆ ತೊಡಗಬೇಡ. ಇದು ಒಳ್ಳೆಯದಲ್ಲ’ ಎಂದು ಕೇಳಿಕೊಂಡರು. ಅವರ ಮಾತನ್ನು ಒಪ್ಪದ ಔರ್ವ,

`ಯೋಹಿ ಕಾರಣತಃ ಕ್ರೋಧಂ ಸಂಜಾತಂ ಕ್ಷಂತುಮರ್ಹತಿ
ನಾಲಂ ಸ ಮನುಜಃ ಸಮ್ಯಕ್ತ್ರಿವರ್ಗಂ ಪರಿರಕ್ಷಿತಂ’

(ನ್ಯಾಯವಾದ ಕಾರಣದಿಂದ ಹುಟ್ಟಿಕೊಂಡ ಕೋಪವನ್ನು ಯಾರು ಹುದುಗಿಸಿಟ್ಟುಕೊಳ್ಳುವನೋ, ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಮಾಡುವುದಿಲ್ಲವೋ ಅವನು ಧರ್ಮ ಅರ್ಥ ಕಾಮಗಳೆಂಬ ತ್ರಿವರ್ಗಗಳನ್ನು ರಕ್ಷಿಸಲಾರ.)

ಎಂದು ಹೇಳಿ ತನ್ನ ಕೋಪ ನ್ಯಾಯವಾದುದು. ತಾನು ಪ್ರತಿಜ್ಞಾಬದ್ಧನಾಗಿದ್ದೇನೆ. ಅಪರಾಧಿಗಳಾದ ಕ್ಷತ್ರಿಯರನ್ನು ನಾಶಮಾಡಲು ಬೇಕಾದ ಕ್ರೋಧವನ್ನು ಅಗ್ನಿ ರೂಪವಾಗಿ ಪಡೆದಿದ್ದೇನೆ. ಅದನ್ನು ಅಡಗಿಸಿಕೊಳ್ಳಲಾರೆ ಮತ್ತು ಹಾಗೆ ಅಡಗಿಸಿದರೆ ನನ್ನ ಕೋಪ ನನ್ನನ್ನೇ ಸುಡುತ್ತದೆ ಎನ್ನುತ್ತಾನೆ. ಆಗ ಪಿತೃ ದೇವತೆಗಳು ಆತನಿಗೆ ಸಾಕಷ್ಟು ತಿಳಿ ಹೇಳಿ, `ನಿನ್ನ ಶಪಥ ಸುಳ್ಳಾಗಬಾರದು. ಜಗತ್ತೂ ಉಳಿಯಬೇಕು. ಅದಕ್ಕೆ ಉಪಾಯ ಹೇಳುತ್ತೇನೆ’ ಎಂದರು.

ಯ ಏಷಮನುಜಸ್ತ್ವಗ್ನಿರ್ಲೋಕಾನಾಂ ಧಾತು ಮಿಚ್ಛತಿ
ಅಪ್ಲುತಂ ಮುಂಚ ಭದ್ರಂತೇ ಲೋಕಾಹ್ಯಪ್ಲು ಪ್ರತಿಷ್ಠಿತಾ|

(ನಿನ್ನ ಕೋಪದಿಂದ ಉದ್ಭವಗೊಂಡ ಅಗ್ನಿಯು ಲೋಕಗಳನ್ನೇ ಭಕ್ಷಿಸಲು ಇಚ್ಛಿಸುತ್ತಿವೆ. ಲೋಕಗಳೆಲ್ಲವೂ ನೀರಿನಿಂದ ಸೃಷ್ಟಿಗೊಂಡಿವೆ. ಆದ್ದರಿಂದ ನೀರಿನಲ್ಲಿ ಕೋಪವನ್ನು ನಿಕ್ಷಿಪ್ತಗೊಳಿಸು. ಆಗ ಪ್ರತಿಜ್ಞೆಯಂತೆ ಲೋಕಗಳನ್ನು ದಹಿಸಿದಂತೆಯೂ ಆಗುತ್ತದೆ. ಲೋಕವೂ ಉಳಿಯುತ್ತದೆ.)

ಆಗ ಔರ್ವನು ತನ್ನ ಕೋಪಾಗ್ನಿಯನ್ನು ಸಮುದ್ರದೊಳಕ್ಕೆ ಬಿಟ್ಟನು. ಅವನಿಂದ ಹೊರಟ ಆ ಕ್ರೋಧಾಗ್ನಿ ಕುದುರೆಯ ರೂಪವನ್ನು ತಾಳಿ ಬಾಯಿಯಲ್ಲಿ ಬೆಂಕಿಯನ್ನು ಉಗುಳುತ್ತಾ ಸಮುದ್ರವನ್ನು ಸೇರಿತು. ಇದು ಮುಂದೆ ವಡಬಾಗ್ನಿ ಎಂಬ ಹೆಸರನ್ನು ಪಡೆಯಿತು. ಈ ವಡಬಾಗ್ನಿ ಸಮುದ್ರದ ಒಳಗಿದ್ದರೂ ಸಮುದ್ರದ ನೀರನ್ನು ಸದಾ ಹೀರುತ್ತಿದೆಯಂತೆ. ನೀರಿನೊಳಗೂ ಮಹಾಗ್ನಿ ಇದೆ ಎಂದು ಈಗಲೂ ಜನ ನಂಬಿದ್ದಾರೆ. ಈ ವಡಬಾಗ್ನಿಯ ಜನಕನೇ ಮಹಾಮುನಿ ಔರ್ವ.

About sudina

Check Also

ದೂರ್ವೆ ಗಣಪತಿಗೆ ಪ್ರಿಯವಾಗಿದ್ದೇಕೆ…?

ಹಿಂದೆ ಕೌಂಡಿನ್ಯ ಎಂಬ ಋಷಿ ಆಶ್ರಮವನ್ನು ಸ್ಥಾಪಿಸಿ ತಪೋನಿರತನಾಗಿದ್ದ. ಈತ ಗಣಪತಿಯ ಉಪಾಸಕ. ಈತನ ಹೆಂಡತಿ ಆಶ್ರಯೆ. ಅವನ ಆಶ್ರಮವು …

Leave a Reply

Your email address will not be published. Required fields are marked *

error: Content is protected !!