Wednesday , March 20 2019
ಕೇಳ್ರಪ್ಪೋ ಕೇಳಿ
Home / Yashasse Haadi / ಯಶಸ್ಸೇ ಹಾದಿ : ನೇಪಥ್ಯ ಗಾನ

ಯಶಸ್ಸೇ ಹಾದಿ : ನೇಪಥ್ಯ ಗಾನ

ಸಕ್ಸೆಸ್ ಈಸ್ ನಾಟ್ ದಿ ಡೆಸ್ಟಿನೇಷನ್… ಇಟ್ಸ್ ದಿ ಜರ್ನಿ ಎನ್ನುವ ಫಲಕವನ್ನು ಯಾವುದೋ ಆಫೀಸಿನಲ್ಲಿ ನೋಡಿದ್ದೆ. ಕೆಲ ಕಾಲ ಯೋಚಿಸಿದ ಮೇಲೆ ನಿಜ ಅಲ್ಲವೇ ಎನ್ನಿಸತೊಡಗಿತು.

ಯಶಸ್ಸು ನಮ್ಮ ಗುರಿಯಾಗಬಾರದು, ಅದರತ್ತ ಪಯಣ ನಮ್ಮದಾಗಬೇಕು. ಅಂದರೆ ನಾವು ನಡೆಯುವ ದಾರಿಯೇ ಯಶಸ್ಸಿನದಾಗಬೇಕು.
ಇದನ್ನು ಮಸ್ತಕದಲ್ಲಿ ಮಥಿಸುತ್ತಿದ್ದಂತೆ ನನಗೆ ಮಹಾಭಾರತದ ಪಾಂಡವರ ನೆನಪಾಯಿತು. `ಪಾಪ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ’ ಎನ್ನುವ ಗಾದೆ ಮಾತು ಎಲ್ಲರಿಗೂ ತಿಳಿದಿರುವಂತಹದ್ದೇ. ಅವರುಗಳು ಸಿಂಹಾಸನವೇರುವ ವೇಳೆಗೆ ಅನುಭವಿಸಿದ ವನವಾಸ, ಅವಮಾನ, ಕೊಲೆ ಯತ್ನಗಳು ಅನೇಕ. ಅಲ್ಲಿ ದೇವರು ನಮಗೆ `ಕಷ್ಟ ಪಟ್ಟರೂ ಕೊನೆಗೆ ಸುಖ ಅನುಭವಿಸುತ್ತಾರೆ. ಅದಕ್ಕೆ ಸಜ್ಜನಿಕೆಯಿಂದಲೇ ಇರಬೇಕು’ ಎನ್ನುವ ನೀತಿಯನ್ನು ಬೋಧಿಸಿದ್ದಾನೆ ಎನ್ನಿಸುತ್ತದೆ. ಸ್ವಲ್ಪ ಹಿಂದಿನ ದಿನಗಳ ಸಿನಿಮಾದಲ್ಲಿ ನಾಯಕನಿಗೆ ಉಂಟಾಗುವ ಪಾಡುಗಳು ಅದೆಷ್ಟೆಂದರೆ ಕೊನೆಯ ದೃಶ್ಯದಲ್ಲಿ ಅವನು ಪ್ರೇಕ್ಷಕರಿಗೆ ಕೈ ಮುಗಿಯುತ್ತಾ ಹಸನ್ಮುಖ ತೋರಿದಾಗ ನಾವು ‘ಅಬ್ಬಾ, ಮುಗಿಯಿತು ಅವನ ಕಷ್ಟ’ ಎಂದುಕೊಳ್ಳದೇ ಇರಲಾರೆವು.

ಆದರೆ ಒಂದು ವಿಷಯ ಗಮನಿಸೋಣ. ಸಿನಿಮಾದ ಖಳನಾಯಕ ಮೊದಲಿನಿಂದ ಕೊನೆಯವರೆಗೂ ಹಾಯಾಗಿ ತಿಂದು, ಕುಡಿದು ಅನ್ಯಾಯಗಳನ್ನು ಮಾಡುತ್ತಿರುತ್ತಾನೆ. ಅವನಿಗೆ ಪೆಟ್ಟು ಬೀಳುವುದು ಸಿನಿಮಾದ ಕ್ಲೈಮ್ಯಾಕ್ಸ್‍ನಲ್ಲಿ! ಇದು ಮಹಾಭಾರತದ ಕಾಲದಿಂದಲೂ ಅನೂಚಾನವಾಗಿ ನಡೆದು ಬಂದಿದೆ. ದುರ್ಯೋಧನ ಇದಕ್ಕೆ ಅತ್ಯಂತ ಸರಿಯಾದ ಉದಾಹರಣೆ! ರಾಜನಲ್ಲದವನ ಮಗನಾದರೂ ಮುಕುಟವಿಲ್ಲದ ಮಹಾರಾಜನಂತೆ ಬದುಕಿ, ಭೀಮನಿಂದ ತೊಡೆಗಳನ್ನು ಮುರಿಸಿಕೊಂಡಾಗ ಸೋಲುತ್ತಾನೆ.
ಇದೆಲ್ಲಾ ನಮಗೆ ಸತ್ಯಕ್ಕೇ ಜಯ, ಸುಳ್ಳಿಗೆ, ಮೋಸಕ್ಕೆ ಎಂದಾದರೊಂದು ದಿನ ಕೊನೆ ಇದೆ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಕೊಡಲು ಮಾಡುತ್ತಿರುವ ಪ್ರಯತ್ನ. ಎಂದಿದ್ದರೂ ಸತ್ಯಂ ಮೇವ ಜಯತೆ…

ಯಶಸ್ಸಿನ ಹಾದಿ ಹೇಗಿರಬೇಕು ಎಂಬುದಕ್ಕೆ ಇಲ್ಲೊಂದು ನಿದರ್ಶನ ದೊರೆಯುತ್ತದೆ. ಅವಳ ಅಪ್ಪ ಅಮ್ಮ ಯಾವ ಕ್ಷಣದಲ್ಲಿ ತಮ್ಮ ಮಗಳಿಗೆ ಕೋಕಿಲಾ ಎಂಬ ಹೆಸರಿಟ್ಟರೋ… ಅವಳು ಒಬ್ಬ ಅದ್ಭುತ ಗಾಯಕಿಯಾದಳು. ಸಾಧನೆಯ ಹಾದಿ ಸುಲಭದ್ದೇನಾಗಿರಲಿಲ್ಲ. ಇಲ್ಲಿದೆ ಆ ಶ್ರದ್ಧೆಯ ಕಥೆ.

yashashe hadi 2“ನಿಮ್ಮ ಮಗಳು ಅದೆಷ್ಟು ಸುಶ್ರಾವ್ಯವಾಗಿ ಹಾಡುತ್ತಾಳೆ… ಬಹಳ ಒಳ್ಳೆಯ ಸಿಂಗರ್ ಆಗ್ತಾಳೆ’ ಎನ್ನುವ ಹೊಗಳಿಕೆಯನ್ನು ತಂದೆ, ತಾಯಿಯರ ಸ್ನೇಹಿತರು, ಬಂಧುಗಳು ಹೇಳುತ್ತಿದ್ದುದು ಕೋಕಿಲಾಳ ಕಿವಿಗೆ ಬೀಳುತ್ತಿತ್ತು. ಅದು ಅವಳಿಗೆ ಮತ್ತಷ್ಟು ಚೆನ್ನಾಗಿ ಹಾಡಲು ಉತ್ತೇಜನ ಕೊಡುತ್ತಿತ್ತೇ ಹೊರತು ಅವಳಲ್ಲಿ ಅಹಂಕಾರವನ್ನಂತೂ ಉಂಟುಮಾಡಲಿಲ್ಲ.

ಶಾಲೆಯಲ್ಲಿ ಮೊಟ್ಟಮೊದಲ ಪ್ರಾರ್ಥನೆ ಇವಳಿಂದ, ಅವಳ ಮನೆಯ ಬಡಾವಣೆಯಲ್ಲಿ ಯಾವ ಗಣೇಶೋತ್ಸವ ನಡೆದರೂ ಇವಳದೇ ಗೀತೆ… ಹೀಗೆ ಬಹಳವೇ ಉತ್ಸಾಹದಿಂದ ಹಾಡುತ್ತಾ ಹೋದಳು. ಮನೆಯಲ್ಲಿ ಅವಳು ಅಭ್ಯಾಸ ಮಾಡುತ್ತಿದ್ದುದು ಆ ರಸ್ತೆಯಲ್ಲಿ ಹೋಗುವವರಿಗೆಲ್ಲಾ ಕೇಳಿಸಿ, ಒಂದು ಕ್ಷಣ ನಿಂತು ಆ ಸ್ವರವನ್ನು ಸವಿದು ಮುಂದೆ ಹೋಗುತ್ತಿದ್ದರು.

“ನಮ್ಮ ಆರ್ಕೆಸ್ಟ್ರಾದಲ್ಲಿ ಹಾಡುವೆಯಾ?” ಎಂದು ನಗರದ ಅತ್ಯಂತ ಪ್ರಸಿದ್ಧ ವಾದ್ಯಗೋಷ್ಠಿಯವರು ಕೇಳಿದಾಗ ಇಲ್ಲವೆನ್ನಲಿಲ್ಲ. ಪ್ರತಿಯೊಂದು ಹಾಡನ್ನೂ ಶ್ರದ್ಧೆಯಿಂದ ಅಭ್ಯಸಿಸಿ ಕೇಳುಗರ ಮನಕ್ಕೆ ಮುದ ನೀಡುತ್ತಿದ್ದಳು.

ಸಂಗೀತ ನಿರ್ದೇಶಕನೊಬ್ಬ ಅವಳನ್ನು ಒಮ್ಮೆ ಕರೆಯಿಸಿಕೊಂಡು ಪ್ರಸಿದ್ಧ ಗಾಯಕಿಯ ಟ್ರ್ಯಾಕ್ ಸಂಗೀತವನ್ನು ಹಾಡಿಸಿದ. ಮೊದಮೊದಲು ಈ ವಿಷಯ ಅಚ್ಚರಿಯೆನ್ನಿಸುತ್ತಿತ್ತು ಕೋಕಿಲಾಗೆ. ತಾನು ಸುಪ್ರಸಿದ್ಧ ಗಾಯಕನೊಂದಿಗೆ ಹಾಡಿದ್ದರೂ ಸಿ.ಡಿ. ಬಂದಾಗ ಅದೇ ಹಾಡು ಬೇರೊಬ್ಬ ಪ್ರಸಿದ್ಧ ಗಾಯಕಿಯ ಧ್ವನಿಯಲ್ಲಿ ಇರುತ್ತಿತ್ತು.

ಹಣ ಬರುತ್ತಿದ್ದುದರಿಂದ ಅವಳು ಎಂದಿಗೂ ಬೇಸರಗೊಳ್ಳಲಿಲ್ಲ. ಹೆಚ್ಚು ಕಡಿಮೆ ಎಲ್ಲ ಸಂಗೀತ ನಿರ್ದೇಶಕರ ನಿರ್ದೇಶನದಲ್ಲಿ ಹಾಡಿದ್ದಳು. ಒಂದು ದಿನವೂ ಅವಳಲ್ಲಿ ತನ್ನ ಹೆಸರು ಬೆಳಕಿಗೆ ಬರುವುದಿಲ್ಲವಾದ್ದರಿಂದ ಏಕೆ ಅಷ್ಟು ಶ್ರದ್ಧೆಯಿಂದ ಹಾಡಬೇಕು ಎನ್ನುವ ಬೇಸರ ಉಂಟಾಗಲಿಲ್ಲ. ಇವಳ ನಿಯತ್ತು ನಿಷ್ಠೆಗಳಿಗೆ ಮಾರುಹೋಗಿದ್ದರು ಸಂಗೀತ ನಿರ್ದೇಶಕರುಗಳೆಲ್ಲಾ. ಆದರೆ ಮಾರ್ಕೆಟ್‍ನಲ್ಲಿ ಸಿ.ಡಿ. ಮಾರಾಟ, ನಿರ್ಮಾಪಕನ ಆದ್ಯತೆ ಇವುಗಳಿಂದಾಗಿ ಕೋಕಿಲಾಳ ಧ್ವನಿ ಅಂತಿಮವಾಗಿ ಅಳಿಸಿ ಹೋಗುತ್ತಿತ್ತು.

ಆದರೂ ಅವಳ ಕೆಲಸದಲ್ಲಿ ಎಂದಿಗೂ ಲೋಪವಿರಲಿಲ್ಲ.

ಅದೊಂದು ದಿನ ಅವಳ ಟ್ರ್ಯಾಕ್ ಆಲಿಸಿ, ಹಾಡಲು ಬಂದ ಪ್ರಸಿದ್ಧ ಗಾಯಕಿಗೆ ಏನೋ ತುರ್ತು ಸ್ಥಿತಿ ಉಂಟಾಯಿತು. ಅವಳಾಗ ಕೋಕಿಲಾಳ ಧ್ವನಿಯನ್ನು ಕೇಳಿಸಿಕೊಂಡು ಅಭ್ಯಾಸ ಮಾಡುತ್ತಿದ್ದಳು.

ಹೊರಗೆ ಹೋಗಲೇಬೇಕಾಗಿ ಬಂದಾಗ, ನಿರ್ಮಾಪಕ ಈಗಾಗಲೇ ಸಿ.ಡಿ. ಬಿಡುಗಡೆಗೆ ತಡವಾಯಿತೆಂದಾಗ “ಅರೆ… ಅದಕ್ಯಾಕೆ ಯೋಚನೆ? ಈ ಹುಡುಗಿ ಯಾರೋ ಬಹಳ ಚೆನ್ನಾಗಿ ಹಾಡಿದ್ದಾಳೆ. ಅದನ್ನೇ ಉಪಯೋಗಿಸಿಕೊಳ್ಳಿ” ಎಂದ ಗಾಯಕಿ, ನಿರ್ಮಾಪಕನನ್ನು ಹತ್ತಿರ ಕರೆದು, “ನಿಜ ಹೇಳಬೇಕೆಂದರೆ ನಾನು ಹಾಡಿದರೂ ಈ ಹಾಡು ಆ ಹುಡುಗಿಯಷ್ಟು ಚೆನ್ನಾಗಿ ಇರುವುದಿಲ್ಲ” ಎಂದು ಮೆಲ್ಲನುಸುರಿ ಹೊರಟುಹೋದಳು.
ನಿರ್ಮಾಪಕ ಕೋಕಿಲಾಳ ಸ್ವರದಲ್ಲಿಯೇ ಆ ಹಾಡನ್ನು ವಿಧಿಯಿಲ್ಲದೇ ಬಿಡುಗಡೆ ಮಾಡಿದ. ಪ್ರತಿಯೊಂದು ಚಾರ್ಟ್ ಬಸ್ಟರ್ ಪಟ್ಟಿಯಲ್ಲಿಯೂ ಅದು ನಂಬರ್ ಒನ್ ಗಾನವಾಯಿತು. ಎಲ್ಲೆಲ್ಲಿ ನೋಡಿದರೂ ಕೋಕಿಲಾಳ ಗುಣಗಾನ. ನಿರ್ಮಾಪಕ ನಿಟ್ಟುಸಿರಿಟ್ಟ. ಅವಳ ಜನಪ್ರಿಯತೆಯನ್ನು ಹಣವಾಗಿ ಬದಲಾಯಿಸಿಕೊಳ್ಳಲು ಅನೇಕ ಅವಕಾಶಗಳು ಕೋಕಿಲಾಳಿಗಿತ್ತು.

ಕೋಕಿಲಾ ನೇಪಥ್ಯ ಗಾಯನದಿಂದ ಹೊರಬಂದಿದ್ದಳು. ಯಶಸ್ವೀ ಗಾಯಕಿ ಎನಿಸಿಕೊಂಡಳು.

ಇಲ್ಲಿ ನಾವು ನೋಡಬೇಕಾದ ಅಂಶವೆಂದರೆ ಕೋಕಿಲಾಳ ಶ್ರದ್ಧೆ. ಅವಳೆಂದೂ ಯಶಸ್ಸಿನ ಬೆನ್ನು ಹತ್ತಲಿಲ್ಲ. ಅವಳಿಗೆ ಬೇಕಾದುದೆಲ್ಲಾ ಅವಳ ಸಂಗೀತದ ಅಭ್ಯಾಸ. ಅವಳ ಪ್ರಯತ್ನ ಅವಳ ಅದೃಷ್ಟದೊಂದಿಗೆ ಒಂದು ದಿನ ಕೈ ಜೋಡಿಸಿತು. ಅವಳು ಗೆದ್ದಳು.

ಇದು ಕೇವಲ ಕಥೆಯಲ್ಲ. ‘ಓ ಮಲ್ಲಿಗೆ’ ಹಾಡು ಹೇಳಿದ ರಮೇಶ್‍ಚಂದ್ರ, ಹಿಂದಿಯ ಅನುರಾಧ ಪೊದ್ವಾಳ್, ಸಾಧನಾ ಸರ್ಗಮ್ ಈ ರೀತಿ ಗೆದ್ದವರೇ. ಅವರ ಪ್ರತಿಭೆಗೆ ಅದೃಷ್ಟ ಸೇರಿ ಅವರು ಯಶಸ್ವಿಯಾದರು!

About sudina

Leave a Reply

Your email address will not be published. Required fields are marked *

error: Content is protected !!