Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಶ್ರೀ ಕ್ಷೇತ್ರ ನಂದಾವರಕ್ಕೆ ನೂತನ ರಸ್ತೆ ನಿರ್ಮಾಣ

ಶ್ರೀ ಕ್ಷೇತ್ರ ನಂದಾವರಕ್ಕೆ ನೂತನ ರಸ್ತೆ ನಿರ್ಮಾಣ

ಬಂಟ್ವಾಳ: ನೇತ್ರಾವತಿ ನದಿ ತೀರದಿಂದಲೇ ಪಾಣೆಮಂಗಳೂರಿನಿಂದ ಶ್ರೀ ಕ್ಷೇತ್ರ ನಂದಾವರಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ನೂತನ ರಸ್ತೆ ನಿರ್ಮಿಸಲು ಯೋಜನೆಯೊಂದನ್ನು ರೂಪಿಸಲಾಗಿದ್ದು ಈ ಸಂಬಂಧ ಈಗಾಗಲೇ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಪಾಣೆಮಂಗಳೂರು – ತೊಕ್ಕೊಟ್ಟು ಹಾಗೂ 1.75 ಕೋಟಿ ರೂ. ವೆಚ್ಚದಲ್ಲಿ ಮಾರ್ನಬೈಲ್ – ಸಜೀಪನಡುವರೆಗಿನ ರಸ್ತೆ ಅಭಿವೃದ್ಧಿಗೆ ಶನಿವಾರ ಸಂಜೆ ಶಿಲಾನ್ಯಾಸಗೈದು ಬಳಿಕ ಮಾತನಾಡಿದ ಅವರು, ಅಜಿಲಮೊಗೆರುವಿನಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕೆ ಕೂಡಾ ಈಗಾಗಲೇ ಮಂಜೂರಾತಿ ದೊರಕಿದ್ದು ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.

ಸುರತ್ಕಲ್ – ಕಬಕ ವರೆಗಿನ ರಸ್ತೆ ಅಭಿವೃದ್ಧಿಯಲ್ಲಿ ಪಾಣೆಮಂಗಳೂರು, ನಂದಾವರ ಪೇಟೆಯ ರಸ್ತೆ ಕೂಡಾ ಕಾಂಕ್ರೀಟಿಕರಣಗೊಂಡು ಅಭಿವೃದ್ಧಿಗೊಳ್ಳುವುದರ ಮೂಲಕ ಈ ಭಾಗದ ಜನರ ಬಹುದಿನದ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದ ಅವರು, ನಿರ್ಮಾಣ ಹಂತದಲ್ಲಿರುವ ತುಂಬೆ ವೆಂಟೆಡ್ ಡ್ಯಾಂ ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡುವ ಕೆಲಸ ಸರಕಾರದಿಂದ ನಡೆಯಲಿದೆ ಎಂದು ಹೇಳಿದರು.

ಮೆಲ್ಕಾರನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಸಲಾಗುತ್ತಿದ್ದು ವಿದ್ಯುತ್ ಕಂಬ, ಟೆಲಿಫೋನ್ ಕಂಬ, ನೀರಿನ ಪೈಪ್‍ಗಳನ್ನು ತೆರವುಗೊಳಿಸುವ ಸಣ್ಣಪುಟ್ಟ ಕಾರ್ಯಗಳು ನಡೆಯಬೇಕಾಗಿದೆ. ಮಳೆಗಾಲದ ಬಳಿಕ ಮೆಲ್ಕಾರ್ ಬೆಂಗಳೂರು ಮಾದರಿಯಲ್ಲಿ ಕಂಗೊಳಿಸಲಿದ್ದು, ಬಂಟ್ವಾಳ ತಾಲೂಕಿನಲ್ಲಿ ಒಂದು ಪ್ರಮುಖ ಪಟ್ಟಣವಾಗಿ ಮೂಡಿ ಬರಲಿದೆ ಎಂದು ಸಚಿವರು ಹೇಳಿದರು.

ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಟೀಕಿಸುವುದೇ ಕೆಲವರ ಅಭ್ಯಾಸವಾಗಿದೆ. ಆದರೆ ಈ ಟೀಕೆಯನ್ನು ನಾವು ಸವಾಲಾಗಿ ಸ್ವೀಕರಿಸಿ ಸಚಿವರ ನೇತೃತ್ವದಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸಲಿದ್ದೇವೆ ಎಂದರು.

ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಪದ್ಮಶೇಖರ್ ಜೈನ್, ಮಂಜುಳಾ ಮಾವೆ, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ನಸೀಮಾ ಬೇಗಂ, ಮಾಜಿ ಜಿಪಂ ಸದಸ್ಯ ಎ.ಸಿ.ಭಂಡಾರಿ , ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಶರೀಫ್ ನಂದಾವರ, ರಝಾಕ್ ಕುಕ್ಕಾಜೆ, ಪುರಸಭಾಧ್ಯಕ್ಷ ರಾವiಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಗುತ್ತಿಗೆದಾರ ಇಕ್ಬಾಲ್ ಅಹ್ಮದ್, ಮಾಜಿ ತಾಪಂ ಸದಸ್ಯ ಸಂಪತ್ ಕುಮಾರ್ ಶೆಟ್ಟಿ, ಅರಣ್ಯ ಅಭಿವೃದ್ಧಿ ನಿಗಮದ ಸದಸ್ಯ ಪರಮೇಶ್ವರ ಎಂ, ಮೊದಲಾದವರು ವೇದಿಕೆಯಲ್ಲಿದ್ದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ತಾಂತ್ರಿಕ ವರದಿಯನ್ನು ಮಂಡಿಸಿದರು. ಎಂಜಿನಿಯರ್‍ಗಳಾದ ಅರುಣ್ ಪ್ರಕಾಶ್, ಪ್ರೀತಂ, ಚಿದಂಬರ ಸ್ವಾಮಿ, ಗೋಪಾಲ್ ಉಪಸ್ಥಿತರಿದ್ದರು. ಕೊಳ್ನಾಡು ಪಂಚಾಯತ್ ಅಧ್ಯಕ್ಷ ಸುಭಾಶ್‍ಚಂದ್ರ ಶೆಟ್ಟಿ ಸ್ವಾಗತಿಸಿದರು. ಸಜಿಪಮೂಡ ಗ್ರಾಪಂ ಅಧ್ಯಕ್ಷ ಗಣಪತಿ ಭಟ್ ವಂದಿಸಿದರು. ಹಮೀದ್ ಗೊಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!