Saturday , January 19 2019
ಕೇಳ್ರಪ್ಪೋ ಕೇಳಿ
Home / News NOW / 94ಸಿಯಲ್ಲಿ ಹಕ್ಕು ಪತ್ರ ವಿತರಣೆಗೆ ಆಗ್ರಹ

94ಸಿಯಲ್ಲಿ ಹಕ್ಕು ಪತ್ರ ವಿತರಣೆಗೆ ಆಗ್ರಹ

ಬಂಟ್ವಾಳ : 94ಸಿಯಲ್ಲಿ ಹಕ್ಕು ಪತ್ರ ನೀಡುವಲ್ಲಿ ತಡವಾಗುತ್ತಿದ್ದು, ಶೀಘ್ರ ವಿತರಿಸುವಂತೆ ಗ್ರಾಮಸ್ಥರು ಬಡಗ ಕಜೆಕಾರು ಗ್ರಾಮಸಭೆಯಲ್ಲಿ ಆರೋಪಿಸಿ ವಿವರಣೆಯನ್ನು ಕೋರಿದರು. ಪಾಂಡವರಕಲ್ಲು ಸಮುದಾಯ ಭವನ ಸಭಾಂಗಣದಲ್ಲಿ ಜರಗಿದ ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮ ಪಂಚಾಯತ್‍ನ 2016-17ನೇ ಪ್ರಥಮ ಹಂತದ ಗ್ರಾಮಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ವಜ್ರಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಕ್ಷಣ ಸಂಯೋಜಕಿ ಸುಜಾತ ಅವರು ಮಾರ್ಗದರ್ಶಿ ಅಕಾರಿಯಾಗಿ ಸಭೆ ನಿರ್ವಹಿಸಿದರು.

ಬಡಗ ಕಜೆಕಾರು ಗ್ರಾ.ಪಂ.ಗೆ ಸಂಬಂಧಿಸಿ 94ಸಿ ಯೋಜನೆ ಮೂಲಕ ನಿವೇಶನದ ಹಕ್ಕು ಪತ್ರಗಳನ್ನು ಈಗಾಗಲೇ ನೀಡುತ್ತಿದ್ದು ,ಉಳಿದ ಹಕ್ಕು ಪತ್ರ ಶೀಘ್ರ ವಿತರಿಸಲಾಗುವುದು. ಗ್ರಾಮೀಣ ಪ್ರದೇಶದ ಜನತೆಗೆ ಈ ಮೊದಲು ನಿಗದಿಪಡಿಸಿದ್ದ ಐದೂವರೆ ಸೆಂಟ್ಸ್ ಸ್ಥಳದ ಬದಲಾಗಿ ಇದೀಗ 9 ಸೆಂಟ್ಸ್ ಸ್ಥಳದ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ಗ್ರಾಮ ಕರಣಿಕ ರಾಜು ಅವರು ಉತ್ತರಿಸಿದರು.

ಬಡಗಕಜೆಕಾರು ಸರಕಾರಿ ಹಿ.ಪ್ರಾ.ಶಾಲೆಗೆ ಆವರಣ ಗೋಡೆ ರಚಿಸಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಾಲತಿ ಶೋಭಾ ಅವರು ವಿನಂತಿಸಿದರು. ಮಡವು-ಐಂಬಲೋಡಿ ರಸ್ತೆ ಅಭಿವೃದ್ಧಿ ಬಗ್ಗೆ ರಾಘವ ಐಂಬಲೋಡಿ ಅವರು ಪ್ರಸ್ತಾವಿಸಿದರು. ಗ್ರಾ.ಪಂ.ನಿಂದ 25 ಸಾವಿರ ರೂ.ಅನುದಾನ ಮಂಜೂರುರಾಗಿದ್ದು ಮಳೆಗಾಲ ಮುಗಿದ ಕೂಡಲೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸುವುದಾಗಿ ಅಧ್ಯಕ್ಷರು ತಿಳಿಸಿದರು.ಪಾಂಡವರಕಲ್ಲು-ನೀರಾರಿ-ಬೆರ್ಕಳ ರಸ್ತೆ ಡಾಮರೀಕರಣಗೊಂಡು ಸುಮಾರು 20 ವರ್ಷ ಕಳೆದರೂ ಮರು ಡಾಮರೀಕರಣಗೊಂಡಿಲ್ಲ. ಪ್ರಸ್ತುತ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಾಬು ಪೂಜಾರಿ ನೀರಾರಿ ಅವರ ಆಗ್ರಹಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಅಭಿಯಂತರ ಕೃಷ್ಣ ಅವರು ಸದ್ರಿ ರಸ್ತೆ ಮರು ಡಾಮರೀಕರಣ ಗೊಂಡಿಲ್ಲ .ಈ ರಸ್ತೆಯನ್ನು ಮೇಲ್ದರ್ಜೆಗೇರಿಸಿ ವಿಶೇಷ ಅನುದಾನ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ವಿನಂತಿಸುವುದಾಗಿ ತಿಳಿಸಿದರು. ಕೋಮಿನಡ್ಕದಲ್ಲಿ ಸಾರ್ವಜನಿಕ ರಸ್ತೆಗೆ ಕಂಪೌಂಡ್ ಗೋಡೆ ಕಟ್ಟಿದ ಕಾರಣ ಪರಿಸರದವರಿಗೆ ಸಂಪರ್ಕಕ್ಕೆ ತೊಂದರೆಯಾಗಿದೆ. ಇದನ್ನು ತೆರವುಗೊಳಿಸಬೇಕೆಂದು ಮಹಮ್ಮದ್ ಶರೀಫ್ ಅವರು ಆಗ್ರಹಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪಿಡಿಒ ತಿಳಿಸಿದರು.

ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ಆಯುಷ್ ವೈದ್ಯಾಕಾರಿ ಡಾ|ಸೋಹನ್ ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣ ನಾಯಕ್, ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ನಂದಿನಿ,ಪಶು ವೈದ್ಯಾಕಾರಿ ರಾಜವರ್ಮ ಜೈನ್, ಮೆಸ್ಕಾಂ ಕಿರಿಯ ಅಭಿಯಂತರ ನಿತಿನ್, ಶಿಕ್ಷಣ ಸಂಯೋಜಕಿ ಸುಜಾತ ಅವರು ಇಲಾಖಾ ಮಾಹಿತಿ ನೀಡಿದರು.

ಗ್ರಾ.ಪಂ.ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಕೆ.ಜಯ ಬಂಗೇರ, ಸುರೇಶ್ ಬಾರ್ದೊಟ್ಟು, ಗಂಗಾಧರ ಪೂಜಾರಿ, ಅತಾವುಲ್ಲಾ, ಪ್ರವೀಣ್‍ಗೌಡ, ವಿನೋದಾ, ಸುರೇಖ, ವಿದ್ಯಾಲಕ್ಷ್ಮಿ, ಶಾಲಾ ಮುಖ್ಯ ಶಿಕ್ಷಕಿ ನವೀನ ಕುಮಾರಿ, ಕಜೆಕಾರು ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಕಾರಿ ಸರಸ್ವತಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿ ವರ್ಗ ಉಪಸ್ಥಿತರಿದ್ದರು.
ಪಂ.ಅ.ಅಧಿಕಾರಿ ಮೋನಮ್ಮ ಅವರು ವರದಿ ವಾಚಿಸಿದರು. ಸಿಬಂದಿ ಮೋಹನ್ ಸ್ವಾಗತಿಸಿ, ವಂದಿಸಿದರು.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!