Monday , January 22 2018
Home / Spoorthiya Sele / ಅವನು ಆಕೆಯ ಕೈಯಲ್ಲಿ ಊಟ ಮಾಡುತ್ತಾನೆ : ಅವಳು ಆತನ ಕಾಲಲ್ಲಿ ನಡೆಯುತ್ತಾಳೆ!
Buy Bitcoin at CEX.IO

ಅವನು ಆಕೆಯ ಕೈಯಲ್ಲಿ ಊಟ ಮಾಡುತ್ತಾನೆ : ಅವಳು ಆತನ ಕಾಲಲ್ಲಿ ನಡೆಯುತ್ತಾಳೆ!

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬುದು ಹಳೇ ಮಾತು. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ನಂಬಿದವರಿಗೆ ಹೌದು, ಇಲ್ಲದವರಿಗೆ ಇಲ್ಲ. ಸ್ವರ್ಗದಲ್ಲಿ ನಿಶ್ಚಯವಾದರೂ ಮದುವೆ ನಂತರ ಕೆಲ ದಂಪತಿ ದೂರವಾಗುವುದಾದರೂ ಯಾಕೆ? ಅದಕ್ಕೂ ನಮ್ಮಲ್ಲಿ ಉತ್ತರ ಇಲ್ಲ. ಆದರೆ, ಜೊತೆಯಾಗಿ-ಅರ್ಥ ಮಾಡಿಕೊಂಡು ನಡೆದರೆ ದಾಂಪತ್ಯವೇ ಸ್ವರ್ಗ. ಅದಕ್ಕೊಂದು ಉದಾಹರಣೆ ಈ ಜೋಡಿ. ನೀವೇನಾದರೂ ಪ್ರೀತಿಯಿಂದ ವಂಚಿತರಾಗಿದ್ದರೆ ಅಥವಾ ಪ್ರೀತಿಯನ್ನು ನೀಡುವಲ್ಲಿ ವಂಚಿಸಿದ್ದರೆ ಈ ಜೋಡಿಯ ಜೀವನವನ್ನೊಮ್ಮೆ ನೋಡಲೇಬೇಕು. ಆಗ ಗೊತ್ತಾಗುತ್ತದೆ ಸುಖ ದಾಂಪತ್ಯವೆಂದರೇನು? ಅದರ ಮಾಧುರ್ಯವೆಂದರೆ ಏನು ಎಂದು.

ಅಹಮ್ಮದ್ ಮತ್ತು ಫಾತಿಮಾ ಈ ಕತೆಯ ಹೀರೋ ಹಿರೋಯಿನ್. ಆದರೆ, ಆ ದೇವರು ಇಲ್ಲಿ ವಿಲನ್! ಯಾಕೆಂದರೆ, ಈ ಜೋಡಿಯಲ್ಲಿ ಪ್ರೀತಿ, ವಿಶ್ವಾಸ, ಗೌರವ, ನಂಬಿಕೆ, ಬದುಕುವ ಛಲ ತುಂಬಿದ ಆ ದೇವರು ಪ್ರಮುಖ ಅಂಗವನ್ನೇ ನೀಡದೆ ವಂಚಿಸಿದ್ದಾನೆ. ಅಹಮ್ಮದ್‍ಗೆ ಕೈಗಳಿಲ್ಲ, ಫಾತಿಮಾಗೆ ನಡೆಯಲು ಸಾಧ್ಯವಿಲ್ಲ. ಇಂತಹದ್ದೊಂದು ಸಮಸ್ಯೆ ಈ ಜೋಡಿಗಿದೆ. ಆದರೆ, ದೇವರೇ ಶಾಕ್ ಆಗುವಂತೆ ಬದುಕುತ್ತಿದ್ದಾರೆ ಈ ದಂಪತಿ. ಅಹಮ್ಮದ್‍ಗೆ ಫಾತಿಮಾ ತೋಳುಗಳಾದರೆ, ಫಾತಿಮಾಗೆ ಅಹಮ್ಮದ್ ಕಾಲ್ಬಲವಾಗಿದ್ದಾರೆ. ಹ್ಯಾಟ್ಸ್ ಆಫ್ ಹೇಳಲೇಬೇಕು ಇವರಿಗೆ, ಇವರ ಛಲಕ್ಕೆ, ಬದುಕುವ ರೀತಿಗೆ…

ಒಂದು ವರ್ಷದ ಹಿಂದಷ್ಟೇ ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿಯ ಹೊಂದಾಣಿಕೆ ನೋಡಿದಾಗ ಹೃದಯವೇ ತುಂಬಿ ಬರುತ್ತದೆ. ಒಬ್ಬ ದಂಪತಿ ಹೇಗೆ ಬದುಕಬಹುದು ಎಂಬುದಕ್ಕೆ ಇವರು ಮಾದರಿ. ದೈಹಿಕವಾಗಿ ವೈಕಲ್ಯವಿದ್ದರೇನಂತೆ ಮನಸ್ಸಿಗೆ ವೈಕಲ್ಯವಿಲ್ಲ, ಪ್ರೀತಿಗೆ ವೈಕಲ್ಯವಿಲ್ಲ, ಬಾಂಧವ್ಯಕ್ಕೆ ವೈಕಲ್ಯವಿಲ್ಲ… ಅಕ್ಷರಶಃ ಇದೇ ಮಾತಿನಂತೆ ಇವರು ಜೀವನ ಸಾಗಿಸುತ್ತಿದ್ದಾರೆ. ಮನೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಮನಸ್ಸಾದರೆ ಹೊರಗೆ ಹೋಗಿ ಕೊಂಚ ಸುತ್ತಾಡಿಯೂ ಬರುತ್ತಾರೆ. ಹಾಗಂತ, ಇವರು ಸಾಗುವ ಹಾದಿಯೇನು ಹೂವಿನದ್ದಲ್ಲ. ಆದರೆ, ಕಷ್ಟಗಳೇನು ಬಂದರೂ ಇವರ ಪ್ರೀತಿಯ ಎದುರು ಅವೆಲ್ಲಾ ಬರೀ ಹುಲ್ಲು ಕಡ್ಡಿ…

ಮದುವೆಯಾಗಿ ಕೆಲವೇ ತಿಂಗಳಲ್ಲಿ ದೂರವಾಗುವ, `ಇಗೋ’ ಕಾರಣಕ್ಕೆ ಮುನಿಸಿಕೊಂಡಿರುವ, ಕಾರಣವೇ ಅಲ್ಲದ ಕಾರಣವನ್ನು ಹಿಡಿದುಕೊಂಡು ಜಗಳ ಮಾಡುವ ದಂಪತಿಗಳೊಮ್ಮೆ ಇವರನ್ನು ನೋಡಬೇಕು. ವೈಕಲ್ಯವನ್ನೇ ಮೆಟ್ಟಿ ನಿಂತು ಬದುಕುತ್ತಿದ್ದಾರೆ ಇವರು. ವೈಕಲ್ಯ ಇಲ್ಲಿ ವೈಕಲ್ಯವೇ ಅಲ್ಲ!. ಜೀವನ ಪ್ರೀತಿಯೇ ಈ ದಂಪತಿಯ ಸಕಲೈಶ್ವರ್ಯ. ಹೀಗಾಗಿಯೇ, ಇವರಿಗೆ ತಮ್ಮ ಬಾಳೇ ಸುಂದರ… ಇದೇ ಕಾರಣದಿಂದಾಗಿ…

ಅವನು ಆಕೆಯ ಕೈಯಲ್ಲಿ ಊಟ ಮಾಡುತ್ತಾನೆ…
ಅವಳು ಆತನ ಕಾಲಲ್ಲಿ ನಡೆಯುತ್ತಾಳೆ!

CEX.IO Bitcoin Exchange

About sudina

Leave a Reply

Your email address will not be published. Required fields are marked *

error: Content is protected !!