Wednesday , January 24 2018
Home / Sudina Special / ಗಿರಕಿ ಹೊಡೆಯೋ ಸೂರ್ಯಪ್ಪ! : ಸೂರ್ಯನಿಗೆ ಚಲನೆ ಇದೆಯೋ? ಇಲ್ಲವೋ?
Buy Bitcoin at CEX.IO

ಗಿರಕಿ ಹೊಡೆಯೋ ಸೂರ್ಯಪ್ಪ! : ಸೂರ್ಯನಿಗೆ ಚಲನೆ ಇದೆಯೋ? ಇಲ್ಲವೋ?

ಒಂದು ಕ್ಷಣ ಯೋಚಿಸಿ ಪ್ರತಿಯೊಬ್ಬರೂ ಕೊಡುವ ಉತ್ತರ… ಸೂರ್ಯ ನಕ್ಷತ್ರ. ನಕ್ಷತ್ರ ಚಲಿಸದು. ಹೀಗಾಗಿ ಸೂರ್ಯನೂ ಸ್ಥಿರ.

ಆದರೆ ನಕ್ಷತ್ರ ಚಲಿಸದು ಎಂಬ ಮೊದಲ ಯೋಚನೆಯೇ ತಪ್ಪು. ಹೀಗಾಗಿ ಸೂರ್ಯನಿಗೆ ಚಲನೆ ಇದೆ!
ವಿಜ್ಞಾನವನ್ನು ಅದರಲ್ಲೂ ಖಗೋಳ ವಿಜ್ಞಾನವನ್ನು ಅರಿತ ಮಂದಿಗೆ ಇದೇನೂ ಹೊಸ ವಿಚಾರವಾಗಿರುವುದಿಲ್ಲ. ಆದರೆ ಸುಮ್ಮನೆ ಹತ್ತು ಮಂದಿಯನ್ನು ಇದೇ ಪ್ರಶ್ನೆ ಕೇಳಿ ನೋಡಿ. ಕನಿಷ್ಟ ಏಳು ಮಂದಿ ನಕ್ಷತ್ರ ಚಲಿಸದು ಎಂದೇ ಉತ್ತರಿಸುತ್ತಾರೆ! ಇನ್ನುಳಿದ ಇಬ್ಬರು ಸುಮ್ಮನೆ ಅಂದಾಜಿಗೆ ಗುಂಡು ಹೊಡೆದಿರುತ್ತಾರೆ ಅಷ್ಟೆ!

ಆದರೆ ಸೂರ್ಯನಿಗೂ ಚಲನೆ ಇದೆ. ಎಂತಹ ಚಲನೆ? ಯಾವ ಆಕಾಶಕಾಯದ ಸುತ್ತ ಸೂರ್ಯ ಗಿರಕಿ ಹೊಡೆಯುತ್ತಾನೆ? ಭೂಮಿಯಂತೆ ತನ್ನ ಅಕ್ಷದಲ್ಲೂ ಸುತ್ತುತಾನಾ? ಇಲ್ಲಿದೆ ಈ ಎಲ್ಲಾ ಸಂದೇಹಗಳಿಗೆ ಉತ್ತರ.
ಸೂರ್ಯನಿಗೆ ಚಲನೆ ಇದೆ. ಅಂತೆಯೇ ಎಲ್ಲಾ ನಕ್ಷತ್ರಗಳಿಗೂ ಚಲನೆ ಇದೆ. ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ ಎನ್ನುವುದು ಬಹಳ ಹಿಂದೆ ಇದ್ದ ಕಲ್ಪನೆ. ಆದರೆ ವಿಜ್ಞಾನಿಗಳ ಸಂಶೋಧನೆಯಿಂದ ಇದು ನಿಜವಲ್ಲ ಎನ್ನುವುದು ಸಾಬೀತಾಗಿದ್ದು ಹಳೇ ಸಂಗತಿ.

ಮೊದಲನೆಯದಾಗಿ ಸೂರ್ಯ ತನ್ನ ಅಕ್ಷದಲ್ಲಿ ಸುತ್ತುತ್ತಾನೆ (ಅಕ್ಷೀಯ ಪರಿಭ್ರಮಣೆ). ಇದಕ್ಕೆ ಸೂರ್ಯ ತೆಗೆದುಕೊಳ್ಳುವ ಸರಾಸರಿ ಅವಧಿ 25 ದಿನಗಳು. ಇದನ್ನು ಸೂರ್ಯನ ಮೇಲಿರುವ ಸೌರಕಲೆ (ಸನ್‍ಸ್ಪಾಟ್ಸ್) ಆಧಾರದ ಮೇಲೆ ಅಧ್ಯಯನ ಮಾಡಲಾಗಿದೆ. ಸೂರ್ಯ ಉರಿಯುವ ಅನಿಲದ ಉಂಡೆ. ಭೂಮಿಯಂತೆ ಸೂರ್ಯ ಘನವಸ್ತುಗಳಿಂದ ಆಗಿಲ್ಲದ ಕಾರಣ ಇದರ ಪರಿಭ್ರಮಣೆಯಲ್ಲಿ ಭೂಮಿಯ ಸ್ಥಿರತೆ ಇಲ್ಲ. ಮುಖ್ಯವಾಗಿ ಹೀಲಿಯಂ ಮತ್ತು ಜಲಜನಕದಂತಹ ಅನಿಲ ವಸ್ತುಗಳಿಂದ ಸೂರ್ಯ ಸೃಷ್ಟಿಯಾಗಿರುವ ಕಾರಣ ಈ ಸುತ್ತುವಿಕೆಯ ಅವಧಿ ಕೆಲವು ಬಾರಿ 27 ದಿನಗಳೂ ಆಗುತ್ತವೆ. ಅದು ತನ್ನ ಮಧ್ಯಭಾಗದಲ್ಲಿ (ಅಂದರೆ ಸಮಭಾಜಕ ರೇಖೆ) ಒಂದು ಸುತ್ತು ಮುಗಿಸಲು 25 ದಿನ ತೆಗೆದುಕೊಂಡರೆ, ತನ್ನ ಧ್ರುವಗಳಲ್ಲಿ ಸುತ್ತಲು 35 ದಿನವಾಗುತ್ತದೆ.

ಇನ್ನು ಸೂರ್ಯನ ಎರಡನೇ ಚಲನೆಯ ಬಗ್ಗೆ. ಇಡೀ ಸೌರವ್ಯವಸ್ಥೆ (ಸೋಲಾರ್ ಸಿಸ್ಟಮ್)ಯ ಕೇಂದ್ರವಾದ ಬ್ಯಾರಿಸೆಂಟರ್ ಆಧರಿಸಿ ಸೂರ್ಯ ತನ್ನ ಕಕ್ಷೆಯಲ್ಲಿ ಸುತ್ತುತ್ತಾನೆ. ಖಗೋಳ ವಿಜ್ಞಾನದ ಪರಿಭಾಷೆಯಲ್ಲಿ ಯಾವುದೇ ಪುಂಜದ ಅಥವಾ ಸಮೂಹದ ಕೇಂದ್ರವೇ ಈ ಬ್ಯಾರಿಸೆಂಟರ್. ಸೂರ್ಯ ಮತ್ತು ಇತರ ಆಕಾಶಕಾಯಗಳ ನಡುವಿನ ಗುರುತ್ವಾಕರ್ಷಣ ಶಕ್ತಿಯೇ ಈ ಬ್ಯಾರಿಸೆಂಟರ್ ಸುತ್ತ ತಿರುಗಲು ಮುಖ್ಯ ಕಾರಣವಾಗುತ್ತದೆ.

ಬ್ಯಾರಿಸೆಂಟರ್ ಎನ್ನುವುದು ಸೂರ್ಯನಿಗೆ ತೀರಾ ಸಮೀಪ ಇದೆ. ಎಷ್ಟು ಸಮೀಪ ಎಂದರೆ ಹೆಚ್ಚು ಕಡಿಮೆ ಸೂರ್ಯ ಇರುವಲ್ಲಿಯೇ ಇದೆ. ಹೀಗಾಗಿ ಸೂರ್ಯ ಬ್ಯಾರಿಸೆಂಟರ್ ಸುತ್ತ ತಿರುಗುವುದನ್ನು ಪ್ರತ್ಯೇಕವಾಗಿ ಕಾಣಲು ಸಾಧ್ಯವಿಲ್ಲ.
ಇನ್ನು ಸೂರ್ಯನ ಮೂರನೇ ಚಲನೆ. ನಾವಿರುವ ಮಿಲ್ಕೀ ವೇ ಅಥವಾ ಹಾಲುಹಾದಿ ಗೆಲ್ಯಾಕ್ಸಿಯ ಕಕ್ಷೆಯಲ್ಲೂ ಇಡೀ ಸೌರವ್ಯವಸ್ಥೆ ಸುತ್ತುತ್ತದೆ. ಹೀಗೆ ಸುತ್ತಲು ಬೇಕಾದ ಅವಧಿ ಬರೋಬ್ಬರಿ 200 ಮಿಲಿಯನ್ ವರ್ಷಗಳು! ಅಂದರೆ ನಮ್ಮ ಗೆಲ್ಯಾಕ್ಸಿಯ ಅಗಾಧತೆಯ ಅರಿವಾಗುತ್ತದೆ.

ಹಾಗಿದ್ದರೆ ಸೌರವ್ಯವಸ್ಥೆ ಸುತ್ತುತ್ತಿರುವುದು ಯಾವುದನ್ನು ಆಧರಿಸಿ? ಯಾವುದನ್ನೋ ಸುತ್ತುತ್ತಿದೆ ಎಂದರೆ ಮಧ್ಯದಲ್ಲಿ ಏನೋ ಇರಬೇಕಲ್ಲ? ನಮ್ಮ ಗೆಲ್ಯಾಕ್ಸಿಯ ಮಧ್ಯದಲ್ಲಿ ಏನಿದೆ? ಇದಕ್ಕೆ ಉತ್ತರ ಇನ್ನೂ ದೊರಕಿಲ್ಲ. ಕೆಲ ಖಗೋಳವಿಜ್ಞಾನಿಗಳ ಪ್ರಕಾರ ದೊಡ್ಡದಾದ ಕಪ್ಪುರಂಧ್ರ (ಬ್ಲ್ಯಾಕ್ ಹೋಲ್) ಇದೆ. ಆದರೆ ಈ ಕುರಿತು ಸಮರ್ಥವಾದ ಸಂಶೋಧನೆ ಆಗಿಲ್ಲ.

ಇಷ್ಟೆಲ್ಲಾ ಕೇಳಿದ ನಂತರ ಇನ್ನೊಂದು ಸಂದೇಹ ಹುಟ್ಟಬಹುದು. ಭೂಮಿಯಂತೆ, ಚಂದ್ರನಂತೆ ಸೂರ್ಯ ಘನಕಾಯನಲ್ಲ. ಅನಿಲದ ಉಂಡೆಯಿಂದ ಆಗಿರುವ ಆತನ ಮೇಲೈನಲ್ಲಿರುವ ಸೌರಕಲೆಗಳನ್ನು ಆಧರಿಸಿ ಸೂರ್ಯ ಚಲಿಸುತ್ತಾನೆ ಎಂದು ಹೇಳಿದ್ದು ಹೇಗೆ? ಅಂತಹ ಸೌರಕಲೆ ಗುರುತಿಸುವುದಾದರೂ ಹೇಗೆ? ಆ ಕಲೆಗಳು ನಿಂತಲ್ಲೇ ನಿಲ್ಲುತ್ತವೆಯೇ? ಒಂದು ಕಪ್ಪನೆಯ ಕಲೆ ಘನವಲ್ಲದ ಸೂರ್ಯನ ಮೇಲ್ಮೈನಲ್ಲಿ ಎಷ್ಟು ಹೊತ್ತು ಇರಲು ಸಾಧ್ಯ? ಅದನ್ನು ಆಧರಿಸಿ ಅವನ ಚಲನೆ ಕಂಡುಹಿಡಿಯಲಾದರೂ ಸಾಧ್ಯವೇ?

ಈ ಸೌರಕಲೆಗಳನ್ನು ಅಧ್ಯಯನ ಮಾಡುವುದಕ್ಕೂ ಖಗೋಳ ವಿಜ್ಞಾನಿಗಳು ತರಹೇವಾರಿ ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ ಮತ್ತು ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಸುಮಾರು 400 ವರ್ಷಗಳಿಂದ ಈ ಕಾರ್ಯ ನಡೆಯುತ್ತಲೇ ಇದೆ. ಹೀಗಾಗಿ ಸೌರಕಲೆ ಅಧ್ಯಯನ ಎನ್ನುವುದು ಸಾಧ್ಯವಿದೆ. ಆ ಸಂಶೋಧನೆಯ ಫಲವೇ ಸೂರ್ಯನಿಗೆ ಚಲನೆ ಇದೆ ಎಂಬುದನ್ನು ಸಾಬೀತು ಪಡಿಸಿರುವುದು.

ಇನ್ನು ಮುಂದೆ ಧೈರ್ಯವಾಗಿ ಹೇಳಿ… ನಕ್ಷತ್ರಕ್ಕೆ ಚಲನೆ ಇದೆ. ಸೂರ್ಯನೂ ಗಿರಕಿ ಹೊಡೆಯುತ್ತಾನೆ ಅಂತ!

shreekala

 

 

 

 

                                                             

                                                             

 

                                                                                                ಶ್ರೀಕಲಾ ಡಿ.ಎಸ್.

CEX.IO Bitcoin Exchange

About sudina

Check Also

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ …

Leave a Reply

Your email address will not be published. Required fields are marked *

error: Content is protected !!