Tuesday , February 19 2019
ಕೇಳ್ರಪ್ಪೋ ಕೇಳಿ
Home / Purana Swarasya / ಪೌಂಡ್ರಕನೆಂಬ ವೇಷಧಾರಿ

ಪೌಂಡ್ರಕನೆಂಬ ವೇಷಧಾರಿ

ಕರೂಷ ಎಂಬ ದೇಶವಿತ್ತು. ಇದಕ್ಕೆ ಪುಂಡ್ರ ಎಂಬ ಹೆಸರೂ ಇತ್ತಂತೆ. ಇಲ್ಲಿ ವಸುದೇವನೆಂಬ ರಾಜ ಇದ್ದ. ಆತನ ಮಗ ಪೌಂಡ್ರಕ. ಈ ಪೌಂಡ್ರಕ ಶ್ರೀಕೃಷ್ಣನ ಸಮಕಾಲೀನನಾಗಿದ್ದು ಸುಮಾರಾಗಿ ಸಮ ವಯಸ್ಕನೂ ಆಗಿದ್ದ. ಕೃಷ್ಣ ವಿರೋಧಿಯಾದ ಈತ ಆ ಕಾಲದ ಪ್ರಬಲ ಅರಸನಾದ ಜರಾಸಂಧನ ಅನುಯಾಯಿಯೂ ಆಗಿದ್ದ. ಇವನಿಗೆ ಆತ್ಮೀಯನಾಗಿದ್ದವನು ಕಾಶೀರಾಜ. ದುರಹಂಕಾರಿಯಾದ ಪೌಂಡ್ರಕ ತಾನೇ ವಾಸುದೇವನೆಂದೂ, ಶ್ರೀಕೃಷ್ಣನು ಕೇವಲ ಗೊಲ್ಲರ ಹುಡುಗನೆಂದೂ ನಿಂದಿಸುತ್ತಾ ಕೃಷ್ಣನಿಗಿಂತ ತಾನೇ ಶ್ರೇಷ್ಠನೆಂದು ತನ್ನ ಆಪ್ತ ರಾಜರ ನಡುವೆ ಬಡಾಯಿ ಬಿಡುತ್ತಿದ್ದ. ಇದಕ್ಕಾಗಿ ಈತ ಕೃತಕವಾದ ಕೀಲಿನ ಗರುಡನನ್ನೂ, ಲೋಹದ ಸಾವಿರ ಅರೆಯುಳ್ಳ ಚಕ್ರವನ್ನೂ, ಒಂದು ವಿಶೇಷ ಖಡ್ಗವನ್ನೂ, ಗದೆಯನ್ನೂ ಧರಿಸಿ ಈ ವಿಷ್ಣುವಿನ ವಸ್ತುಗಳು ತನ್ನಲ್ಲೂ ಇವೆ, ನಾನೇ ಅವತಾರ ಪುರುಷ ಎನ್ನುತ್ತಾ ಇವುಗಳಿಗೆ ಸುದರ್ಶನ, ನಂದಕೀ, ಕೌಮೋದಕಿ ಮುಂತಾದ ಹೆಸರನ್ನಿಟ್ಟುಕೊಂಡು ಕೊರಳಿಗೆ ತುಳಸೀಮಾಲೆ ಧರಿಸಿ, ಶಂಖಪಾಣಿಯಾಗಿ ಮುಖಕ್ಕೆ ನೀಲಿ ಬಣ್ಣ ಬಳಿದುಕೊಂಡು ತನ್ನ ಪರಿವಾರದ ಆಶ್ರಿತ ರಾಜರ ನಡುವೆ ಮೆರೆದಾಡುತ್ತಿದ್ದ. ಇವನ ಕೈ ಕೆಳಗಿನವರಾದ ಕಾರಣ ಅವರು ಹೌದು-ಹೌದೆಂದು ತಲೆಯಾಡಿಸಿದಂತೆ ಇವನಿಗೆ ದೈವತ್ವದ ಅಮಲು ಏರುತ್ತಿತ್ತು.

ಹೀಗಿರಲಾಗಿ ಒಮ್ಮೆ ನಾರದರು ಇವನ ಆಸ್ಥಾನಕ್ಕೆ ಬರುತ್ತಾರೆ. ಅವರನ್ನು ಸತ್ಕರಿಸಿ ನೀವು ನನ್ನನ್ನೇ ವಾಸುದೇವನೆಂದು ಲೋಕ ಲೋಕಗಳಲ್ಲಿ ಪ್ರಚಾರ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ. ನಾರದರು ನಕ್ಕು, ನೀನು ಅಂತಹ ಯೋಗ್ಯ ವ್ಯಕ್ತಿಯಲ್ಲ- ಶ್ರೀಕೃಷ್ಣನೇ ಭಗವಂತನೆಂದೂ ನೀನು ಶಿಕ್ಷಾರ್ಹ ಅಪರಾಧಿಯೆಂದೂ ಎಚ್ಚರಿಸಿದರೂ ಈ ಹುಂಬನ ತಲೆಗೆ ಹೋಗುವುದಿಲ್ಲ. ಈ ಪೌಂಡ್ರಕನಿಗೆ ನರಕಾಸುರನು ಆತ್ಮೀಯನಾಗಿದ್ದು ಅವನನ್ನು ಕೃಷ್ಣನು ಈಗಾಗಲೇ ಕೊಂದು ಮುಗಿಸಿದ್ದ. ಆ ಸಿಟ್ಟು, ಸೇಡು ಪೌಂಡ್ರಕನಲ್ಲಿತ್ತು. ನಾರದರು ಈ ಮೂರ್ಖನಿಗೆ ಉಪದೇಶ ಸರಿಯಲ್ಲವೆಂದು ಹೊರಟು ಹೋಗುತ್ತಾರೆ. ಆ ಸಮಯದಲ್ಲಿ ಶ್ರೀಕೃಷ್ಣನು ಶಿವನನ್ನು ಕುರಿತು ಉಪಾಸನೆ ಮಾಡಿ ಕೃತಾರ್ಥನಾಗಿ ಬದರಿಕಾಶ್ರಮಕ್ಕೆ ಹೋಗಿದ್ದ. ನಾರದರು ಅಲ್ಲಿಗೆ ಹೋಗಿ ದಾರಿ ತಪ್ಪಿದ ವೇಷಧಾರಿಯ ವರ್ತಮಾನವನ್ನು ಹೇಳುತ್ತಾರೆ. ಶ್ರೀಕೃಷ್ಣನು ನಕ್ಕು ‘ಅವನು ಬದುಕಿಕೊಳ್ಳಲಿ ಬಿಡಿ’ ಎಂದು ಬಿಡುತ್ತಾನೆ. ಪೌಂಡ್ರಕನು ಕೃಷ್ಣನನ್ನು ನಿಗ್ರಹಿಸಬೇಕೆಂದು ಸೇನಾ ಸಮೇತನಾಗಿ ದ್ವಾರಕೆಯ ಮೇಲೆ ದಾಳಿ ಮಾಡುತ್ತಾನೆ. ದ್ವಾರಕೆಯ ಕೋಟೆಯನ್ನು ಕೀಳಲು ಪ್ರಯತ್ನಿಸುತ್ತಾನೆ. ಯಾದವರು ಬಲರಾಮ-ಸಾತ್ಯಕಿಯರ ಮುಂದಾಳುತನದಲ್ಲಿ ಯುದ್ಧ ಮಾಡುತ್ತಾರೆ. ಸಾತ್ಯಕಿಯು ವಾಯುವ್ಯಾಸ್ತ್ರದಿಂದ ಸೇನೆಯನ್ನು ಧ್ವಂಸ ಮಾಡುತ್ತಾನೆ. ಬಲರಾಮನು ಈತನ ಬಲಗೈಯಂತಿದ್ದ ಏಕಲವ್ಯನೆಂಬ ನಿಷಾಧ ರಾಜನನ್ನು ಸೋಲಿಸಿ ಅವನ ನಿಷಾಧ ಸೈನ್ಯವನ್ನು ನಾಶ ಮಾಡುತ್ತಾನೆ. ಹೆದರಿದ ಏಕಲವ್ಯ ಸಮುದ್ರವನ್ನು ಹಾರಿ ಐದು ಯೋಜನ ದೂರದಲ್ಲಿರುವ ದ್ವೀಪವನ್ನು ಸೇರಿಕೊಳ್ಳುತ್ತಾನೆ. (ಇವನೇ ದ್ರೋಣ ಶಿಷ್ಯನಾದ ಏಕಲವ್ಯ)

ಇಷ್ಟಾಗುವಾಗ ಶ್ರೀಕೃಷ್ಣ ದ್ವಾರಕೆಗೆ ಹಿಂತಿರುಗುತ್ತಾನೆ. ಪೌಂಡ್ರಕನಿಗೂ-ಕೃಷ್ಣನಿಗೂ ಯುದ್ಧ ಪ್ರಾರಂಭವಾಗುತ್ತದೆ. ಪೌಂಡ್ರಕನು “ಎಲವೋ ಗೊಲ್ಲ… ನಿನ್ನ ವಾಸುದೇವ ಹೆಸರನ್ನು ಬಿಡು-ವಾಸುದೇವ ನಾನೇ. ನಿನ್ನ ಚಕ್ರ, ಗದೆ, ಶಂಖಗಳನ್ನು ಕೊಟ್ಟು ಶರಣಾಗತನಾಗು” ಎಂದು ಅಬ್ಬರಿಸುತ್ತಾನೆ. ಕೃಷ್ಣನು ನಸುನಗುತ್ತಲೇ ಬಿಟ್ಟ ಬಾಣಗಳಿಂದ ಪೌಂಡ್ರಕನ ರಥ, ಸಾರಥಿ, ಸೈನ್ಯಗಳೆಲ್ಲಾ ನಾಶವಾಗುತ್ತದೆ. ಕೃಷ್ಣನ ಚಕ್ರದಿಂದ ಪೌಂಡ್ರಕನ ತಲೆಯೂ ಹಾರಿ ಹೋಗುತ್ತದೆ. ಕೃಷ್ಣನನ್ನು ಎದುರಿಸಲು ಬಂದ ಕಾಶೀರಾಜನ ತಲೆ ಹಾರಿ- ಕಾಶೀ ದೇಶದ ಹೊರದ್ವಾರದಲ್ಲಿ ಬೀಳುತ್ತದೆ.

ಆ ಕಾಶೀರಾಜನಿಗೆ `ಸುದಕ್ಷಿಣ’ ಎಂಬ ಮಗನಿದ್ದ. ಆತ ಕೃಷ್ಣನನ್ನು ಕೊಂದು ಪ್ರತೀಕಾರ ತೀರಿಸುತ್ತೇನೆಂದು ಶಿವನನ್ನು ಮೆಚ್ಚಿಸಿ ಉಪಾಯವನ್ನು ಕೇಳಿ ಮಾರಣಹೋಮವನ್ನು ಮಾಡುತ್ತಾನೆ. ಆಗ ಒಂದು ಘೋರ ರೂಪ ಹುಟ್ಟಿಕೊಳ್ಳುತ್ತದೆ. ಭಯಾನಕವಾಗಿ ಕಾಣುತ್ತಿದ್ದ ಆ ಮೂರ್ತಿ ಕೋರೆದಾಡೆ, ಕೆಂಗಣ್ಣುಗಳಿಂದ ತನ್ನ ಸುತ್ತಲೂ ಬೆಂಕಿಯನ್ನು ಹರಡುತ್ತಾ ಭೂತ-ಪ್ರೇತ, ಪಿಶಾಚಿಗಳೊಡನೆ ದ್ವಾರಕೆಗೆ ಬರುತ್ತದೆ. ದ್ವಾರಕೆಯ ಜನರೆಲ್ಲಾ ಭೀತಿಯಿಂದ ಕೃಷ್ಣನಿಗೆ ಶರಣಾಗುತ್ತಾರೆ. ಶ್ರೀಕೃಷ್ಣನು ಸುದರ್ಶನಕ್ಕೆ ಆಜ್ಞೆ ಕೊಡುತ್ತಾನೆ. ಅದು ಕೃತ್ಯವನ್ನು ಅಟ್ಟಿಸಿಕೊಂಡು ಹೋಗುತ್ತದೆ. ಭೂತ ಪಿಶಾಚಿಗಳನ್ನು ನಾಶ ಮಾಡುತ್ತದೆ. ಹೆದರಿದ ಕೃತ್ಯೆ ಮರಳಿ ಕಾಶಿಗೆ ಬಂದು ಅಭಿಚಾರ ಮಾಡಿದವರನ್ನೆಲ್ಲಾ ಧ್ವಂಸ ಮಾಡುತ್ತದೆ. ಸುದಕ್ಷಿಣನನ್ನೂ ಸುಟ್ಟು ಹಾಕುತ್ತದೆ. ಸುದರ್ಶನವು ಕಾಶಿಗೆ ಬಂದು ಆ ಕೃತ್ಯವನ್ನು ಧ್ವಂಸಗೊಳಿಸಿ ಮರಳಿ ಕೃಷ್ಣನನ್ನು ಬಂದು ಸೇರುತ್ತದೆ. ಆದ್ದರಿಂದಲೇ ಇಂದೂ ಕೂಡಾ ಮಾಟ-ಮಂತ್ರ-ಕೃತ್ರಿಮ- ಅಭಿಚಾರಗಳನ್ನು ನಿಗ್ರಹಿಸಲು ಸುದರ್ಶನ ಹೋಮ ಮಾಡಿಸುವ ಕ್ರಮವಿದೆ. ಈ ಘಟನೆಯನ್ನು ಕುರಿತು ಶ್ರೀಮದ್ಭಾವತದಲ್ಲಿ ಹೀಗೊಂದು ಶ್ಲೋಕವಿದೆ.

ಯ ಏತಚ್ಛ್ರಾವಯೇನ್ಮತ್ರ್ಯ ಉತ್ತಮ ಶ್ಲೋಕ ವಿಕ್ರಮಮ್
ಸಮಾಹಿತೋ ವಾ ಶೃಣುಯೂತ್ ಸರ್ವ ಪಾಪೈಃ ಪ್ರಮುಚ್ಯತೇ
(ಯಾವ ಮನುಷ್ಯನು ಈ ಉತ್ತಮ ಶ್ಲೋಕವನ್ನು, ವಿಕ್ರಮದ ಚರಿತ್ರೆಯನ್ನೂ ಕೇಳುತ್ತಾನೋ, ಹೇಳುತ್ತಾನೋ ಅವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.)

ದೇವರಾಗಲು ವೇಷ ಹಾಕಿದರೆ ಅದು ನಾಟಕದ ಪಾತ್ರವಾದೀತು. ದೇವರೇ ಆಗಲು ಸಾಧ್ಯವೇ?- ಆಗ ಹೊರಟರೆ ಪೌಂಡ್ರಕನ ಗತಿಯೇ ಆದೀತು. ನರಿಬಣ್ಣ ಹಚ್ಚಿದರೆ ಹುಲಿಯಾದೀತೇ?

About sudina

Check Also

ದೂರ್ವೆ ಗಣಪತಿಗೆ ಪ್ರಿಯವಾಗಿದ್ದೇಕೆ…?

ಹಿಂದೆ ಕೌಂಡಿನ್ಯ ಎಂಬ ಋಷಿ ಆಶ್ರಮವನ್ನು ಸ್ಥಾಪಿಸಿ ತಪೋನಿರತನಾಗಿದ್ದ. ಈತ ಗಣಪತಿಯ ಉಪಾಸಕ. ಈತನ ಹೆಂಡತಿ ಆಶ್ರಯೆ. ಅವನ ಆಶ್ರಮವು …

Leave a Reply

Your email address will not be published. Required fields are marked *

error: Content is protected !!