Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಆತ್ಮರಕ್ಷಣೆಗಾಗಿ ಭಾಸ್ಕರ್ ಶೆಟ್ಟಿ ಹತ್ಯೆ…! : ರಾಜೇಶ್ವರಿ ಶೆಟ್ಟಿ ತಾಯಿಯ ಮಾತು…!

ಆತ್ಮರಕ್ಷಣೆಗಾಗಿ ಭಾಸ್ಕರ್ ಶೆಟ್ಟಿ ಹತ್ಯೆ…! : ರಾಜೇಶ್ವರಿ ಶೆಟ್ಟಿ ತಾಯಿಯ ಮಾತು…!

ಉಡುಪಿ : ಬಹುಕೋಟಿ ಮೌಲ್ಯದ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಕೇಸ್‍ನ ರಹಸ್ಯ ಬಗೆದಷ್ಟು ಹೊರಬರುತ್ತಿದೆ. ಜೊತೆಗೆ ಅಷ್ಟೇ ಜಟಿಲವಾಗುತ್ತಿದೆ. ಕೊಲೆ ಆರೋಪ ಹೊತ್ತಿರುವ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ತಾಯಿ ಈಗ ಬೇರೆಯದ್ದೇ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಆತ್ಮರಕ್ಷಣೆಗಾಗಿ ರಾಜೇಶ್ವರಿ ತನ್ನ ಗಂಡನನ್ನು ಹತ್ಯೆ ಕೊಂದಿರಬಹುದು ಎಂದು ರಾಜೇಶ್ವರಿ ತಾಯಿ ಸುಮತಿ ಶೆಟ್ಟಿ ಹೇಳಿದ್ದಾಗಿ ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಭಾಸ್ಕರ್ ಶೆಟ್ಟಿ ತನ್ನ ಮಗಳು ಮತ್ತು ಮೊಮ್ಮಗನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಅಲ್ಲದೆ, ಪತ್ನಿಯ ನಡತೆಯ ಬಗ್ಗೆ ಸದಾ ಅನುಮಾನದಿಂದ ನೋಡುತ್ತಿದ್ದರು. ಈ ಎಲ್ಲಾ ಕಾರಣದಿಂದ ಸದಾ ನಡೆಯುತ್ತಿದ್ದ ಗಲಾಟೆಯಿಂದ ಬೇಸತ್ತ ರಾಜೇಶ್ವರಿ ತನ್ನ ಮಗನ ಸಹಾಯದಿಂದ ಗಂಡನ ಹತ್ಯೆ ಮಾಡಿರಬಹುದು ಎಂಬುದು ಸುಮತಿ ಶೆಟ್ಟಿ ಮಾತು.

bhaskar shetty case (8)ಮತ್ತೊಂದು ಸಂಬಂಧ…? : ಈ ನಡುವೆ, ತನ್ನ ಅಳಿಯ ಭಾಸ್ಕರ್ ಶೆಟ್ಟಿಗೆ ಸೌದಿ ಅರೇಬಿಯಾ ಮೂಲದ ನರ್ಸ್ ಜೊತೆ ಅಕ್ರಮ ಸಂಬಂಧ ಇತ್ತು. ಇವರಿಗೆ ಮೂರು ವರ್ಷದ ಹೆಣ್ಣು ಮಗು ಕೂಡಾ ಇದೆ ಎಂದು ಸುಮತಿ ಶೆಟ್ಟಿ ಆರೋಪ ಮಾಡಿದ್ದಾರೆ. ಇದೇ ವಿಷಯದಲ್ಲಿ ಭಾಸ್ಕರ್ ಶೆಟ್ಟಿ ಮತ್ತು ರಾಜೇಶ್ವರಿ ನಡುವೆ ಸದಾ ಜಗಳ ಆಗುತ್ತಿತ್ತು. ಭಾಸ್ಕರ್ ಶೆಟ್ಟಿ ವಿಚ್ಚೇಧನವನ್ನೂ ಕೇಳಿದ್ದರು. ಕೊಡದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಸುಮತಿ ದೂರಿದ್ದಾರೆ. ಇದೇ ಗಲಾಟೆ ಸಂದರ್ಭದಲ್ಲಿ ಮಗ ನವನೀತ್ ತಂದೆ ಮೇಲೆ ಹಲ್ಲೆ ಮಾಡಿದ್ದ ಎಂಬುದನ್ನೂ ಸುಮತಿ ಶೆಟ್ಟಿ ಬಿಚ್ಚಿಟ್ಟಿದ್ದಾರೆ… ಹೀಗಾಗಿ, ಈ ಒಟ್ಟು ಪ್ರಕರಣ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತಿದೆ.

bhaskar shetty case (2)ದಿಕ್ಕು ತಪ್ಪುತಿದೆಯಾ ತನಿಖೆಯ ಹಾದಿ…? : ಈ ಎಲ್ಲದರ ನಡುವೆ, ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎತ್ತ ಸಾಗುತ್ತಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ, ಆರೋಪಿಗಳಿಂದ ಪೊಲೀಸರಿಗೆ ಪ್ರಕರಣದ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗುತ್ತಿಲ್ಲ ಎಂಬುದು ಸುದ್ದಿ. ಅದೂ ಅಲ್ಲದೆ, ಕೊಲೆ ಪ್ರಕರಣ ಭೇದಿಸಲು ಬೇಕಾದ ಪೂರಕ ಸಾಕ್ಷ್ಯಗಳು ಇನ್ನೂ ಲಭ್ಯವಾಗಿಲ್ಲ. (Read Also :  ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಶವ ಸುಟ್ಟ ಬೂದಿ ಯಾವ ನದಿಗೆ ಎಸೆದಿದ್ದಾರೆ…? ) ಕೊಲೆಗೆ ಬಳಸಿದ ಆಯುಧಗಳು, ಮೃತದೇಹದ ಅವಶೇಷಗಳು ಸಿಕ್ಕಿಲ್ಲ. ಈ ಅವಶೇಷಗಳನ್ನು ಎಲ್ಲಿ ಎಸೆಯಲಾಗಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ… (Read Also : ಭಾಸ್ಕರ್ ಶೆಟ್ಟಿ ಪ್ರಕರಣ : ಅವಶೇಷಗಳು ಸಿಗದಿರುವಂತೆ ಮಾಡಲಾಗಿತ್ತಾ ಪ್ಲಾನ್…?) ನದಿಗೆ ಅವಶೇಷಗಳನ್ನು ಎಸೆಯಲಾಗಿದೆ ಎಂಬಂತಹ ಸುದ್ದಿ ಇದ್ದರೂ ಅದು ಯಾವ ನದಿಗೆ ಎಸೆಯಲಾಗಿದೆ ಮತ್ತು ಎಲ್ಲಿ ಎಲ್ಲಿ ಎಸೆಯಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಯೇ ಇಲ್ಲ. ಆದರೂ, ಈ ಕೂಡಾ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ… ಸರಿಯಾದ ದಾರಿಯಲ್ಲೇ ತನಿಖೆ ಸಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಬಾ ವ್ಯವಸ್ಥಿತವಾಗಿಯೇ ಈ ಕೊಲೆ ನಡೆದಿದ್ದು, ಯಾವುದೇ ಸಾಕ್ಷ್ಯ ಸಿಗದಂತೆ ಹಂತಕರು ಜಾಣ್ಮೆ ವಹಿಸಿದಂತಿದೆ. ಹೀಗಾಗಿ, ಈಗ ಸೆರೆಯಾಗಿರುವ ಐದು ಮಂದಿಯಿಂದ ಮಾತ್ರ ಈ ಕೆಲಸ ಆಗಿರುವ ಸಾಧ್ಯತೆ ತುಂಬಾ ಕಡಿಮೆ. ಈ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡ ಇರುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

bhaskar shetty case (4)ಆರೋಪಿಗಳಿಗೆ ರಾಜಾತಿಥ್ಯ ; ಇಲಾಖಾ ತನಿಖೆ : ಈ ನಡುವೆ, ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ರಾಜಾತಿಥ್ಯ ನೀಡಿದ್ದ ಆರೋಪ ಪೊಲೀಸರ ಮೇಲೆ ಆರಂಭದಲ್ಲೇ ಇತ್ತು. ಈ ಆರೋಪದ ಹಿನ್ನೆಲೆಯಲ್ಲಿ ಮಣಿಪಾಲ ಸರ್ಕಲ್ ಇನ್ಸ್‍ಪೆಕ್ಟರ್ ಎಸ್.ವಿ.ಗಿರೀಶ್ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಟಿ.ಬಾಲಕೃಷ್ಣ ಈ ಆದೇಶ ಹೊರಡಿಸಿದ್ದಾರೆ. ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಟ್ಟಿ ಮತ್ತು ಬಂಟರ ಸಂಘ ಎಎಸ್‍ಪಿ ವಿಷ್ಣುವರ್ಧನ್‍ರಿಗೆ ನೀಡಿದ ದೂರಿನ ಆಧಾರದಲ್ಲಿ ಈ ತನಿಖೆಗೆ ಆದೇಶ ನೀಡಲಾಗಿದೆ. ಅದೂ ಅಲ್ಲದೆ, ಭಾಸ್ಕರ್ ಶೆಟ್ಟಿ ನಾಪತ್ತೆಯಾದ ದಿನ ಅವರ ತಾಯಿ ಗುಲಾಬಿ ಶೆಟ್ಟಿ ಮಣಿಪಾಲ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ನೀಡಲು ಬಂದಿದ್ದಾಗ ಇನ್ಸ್‍ಪೆಕ್ಟರ್ ಗಿರೀಶ್ ಕೇವಲ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸುವಂತೆ ಹೇಳಿದ್ದರಂತೆ. ಜೊತೆಗೆ ಎಎಸ್‍ಪಿ ವಿಷ್ಣುವರ್ಧನ್ ಆದೇಶದ ಮೇರೆಗೆ ಎಫ್‍ಐಆರ್ ದಾಖಲಾಗುವ ಮುನ್ನ ಗುಲಾಬಿ ಶೆಟ್ಟಿ ಅವರನ್ನು ಗಿರೀಶ್ ತುಂಬಾ ಕಾಯಿಸಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಈ ಪ್ರಕರಣದ ತನಿಖಾಧಿಕಾರಿ ಸ್ಥಾನದಿಂದ ಗಿರೀಶ್ ಅವರನ್ನು ತೆಗೆದು ಹಾಕಲಾಗಿದ್ದು, ಕಾರ್ಕಳ ಎಎಸ್‍ಪಿ ಸುಮನಾರಿಗೆ ತನಿಖೆಯ ಹೊಣೆಯನ್ನು ನೀಡಲಾಗಿದೆ.

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!