Saturday , January 19 2019
ಕೇಳ್ರಪ್ಪೋ ಕೇಳಿ
Home / Yashasse Haadi / ದುಡಿಯುವ ಕೈಗಳು

ದುಡಿಯುವ ಕೈಗಳು

ಎಲ್ಲರಿಗೂ ಓದುವ ಅದೃಷ್ಟವಿರುವುದಿಲ್ಲ. ಕೆಲವರಿಗೆ ಅವಕಾಶವಿದ್ದೂ ಓದುವುದಿಲ್ಲ. ಮತ್ತೆ ಕೆಲವರು ಅವಕಾಶ ವಂಚಿತರೆಂದೇ ಹೇಳಬೇಕು. ಆದರೆ, ಅದು ಅವರನ್ನು ಏನೂ ಮಾಡದೇ ನಿರಾಶರಾಗಿ ಬದುಕು ಕಳೆಯಲು, ಕಳೆದುಕೊಳ್ಳಲು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬಾರದು.

ಅವಕಾಶವೆನ್ನುವುದು ಒಂದು ಬಾಗಿಲಿನ ಆಚೆ ಕಡೆ ಇರುವ ಶಕ್ತಿ. ಅದು ಯಾವಾಗ ಬೇಕಾದರೂ ಆ ಬಾಗಿಲನ್ನು ತಟ್ಟಬಹುದು. ಆದರೆ, ಅದು ತಟ್ಟಲಿದೆ ಎಂದು ನಾವು ಕಾಯುವ ಅಗತ್ಯವಿಲ್ಲ. ಬಾಗಿಲು ತೆರೆದಿಟ್ಟು ಅದು ಯಾವಾಗ ಕದ ತಟ್ಟಲು ಬರುವುದೋ ಆಗ ಅದನ್ನು ಕೈ ಹಿಡಿದು ಒಳಗೆ ಕರೆದೊಯ್ದು ಇನ್ನೆಂದೂ ಬಿಡದಂತೆ ಆಲಿಂಗಿಸಿಕೊಳ್ಳಬೇಕು.

ರಾಬರ್ಟ್‍ಎಚ್. ಗಾಡ್ಡರ್ಡ್ ಪ್ರಕಾರ ನಿನ್ನೆಯ ಕನಸು, ಇಂದಿನ ಭರವಸೆ ಮತ್ತು ನಾಳಿನ ವಾಸ್ತವಿಕತೆ – ಈ ಮೂರರಲ್ಲಿ ಯಾವುದು ಅಸಾಧ್ಯ ಎಂದು ಹೇಳುವುದು ಕಷ್ಟ.
ಇಲ್ಲಿ ನಾವು ಅಮರನ ಬದುಕನ್ನು ನೋಡೋಣ.

“ಲೋ ಅಮರಾ! ಎಸ್ಸೆಸ್ಸೆಲ್ಸಿ ಮೂರು ಸಲ ಕಟ್ಟಿ ಢುಮ್ಕಿ ಹೊಡೆದೆ. ಹದಿನೆಂಟು ಆಯ್ತು ನಿನಗೆ. ಏನು ಮಾಡ್ತೀಯ ಮುಂದಕ್ಕೆ?” ಕೇಳಿದ ಗೆಳೆಯ ಅಕ್ಬರ್. ಅಮರನಿಗೆ ಹೇಳಲು ಏನೂ ಇರಲಿಲ್ಲ. ಅವನ ವಿಧವೆ ತಾಯಿ ಹಪ್ಪಳ, ಸಂಡಿಗೆ, ಚಟ್ನಿ ಪುಡಿ ಮಾಡಿ, ಅವುಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದರು. “ಇನ್ನು ಮುಂದಕ್ಕೆ ಓದಲ್ಲ ಮಾರಾಯಾ. ನನಗೆ ಕೆಲಸ ಬೇಕು. ಅಮ್ಮ ಕೆಲಸ ಮಾಡೋದು ನೋಡಲಿಕ್ಕಾಗ್ತಿಲ್ಲ. ಅವರಿಗೂ ವಯಸ್ಸಾಯ್ತು. ಆರೋಗ್ಯವೂ ಸರಿಯಿಲ್ಲ” ಎಂದ ಅಮರ ಬಹಳವೇ ದುಃಖದಿಂದ.

ಅವನ ದುಗುಡದ ಅರಿವಿದ್ದ ಅಕ್ಬರ್ ಅವನ ಬೆನ್ನ ಮೇಲೆ ಕೈಯಿಟ್ಟು, “ನಾನೊಂದು ಕೆಲಸ ಹೇಳಿದರೆ ಮಾಡ್ತೀಯಾ?”ಎಂದ ಮೃದುವಾಗಿ.

“ಹೇಳು ಅಕ್ಬರ್!”ಎಂದ ಉದ್ವೇಗದಿಂದ.

“ನಮ್ಮ ಗ್ಯಾರೇಜಿನಲ್ಲಿ ನನ್ನ ಜೊತೆಗೆ ಒಬ್ಬ ಸಹಾಯಕ ಬೇಕು. ನಮ್ಮ ಬಾಸ್ ಅಂತೋಣಿ ನಿನ್ನ ಗೆಳೆಯ ಯಾರಾದ್ರೂ ಇದ್ರೆ ಕರೆದು ತಾ ಅಂದರು” ಎಂದ ಸಂಕೋಚದಿಂದ.

ಅಮರ ಒಂದು ಕ್ಷಣ ಕಲ್ಲಾದ. ತಾನು ಗ್ಯಾರೇಜಿನಲ್ಲಿ ಕೆಲಸ ಮಾಡುವುದೇ? ಏಕೆಂದರೆ ಅವನು ಶಿಸ್ತುಗಾರ ಪುಟ್ಟಸ್ವಾಮಿ. ಮೈ, ಬಟ್ಟೆ ಯಾವುದರ ಕೊಳೆಯನ್ನೂ ಸಹಿಸುವವನಲ್ಲ.

ಅವನ ಮೌನವನ್ನು ಕಂಡು ಅಕ್ಬರ್, “ನನಗೆ ನಿನ್ನ ಸ್ವಭಾವಗೊತ್ತು. ಮೈ ಗಲೀಜು ಆಗುವ ಕೆಲಸ ನಿನಗೆ ಇಷ್ಟ ಇಲ್ಲ ಅಲ್ವಾ?”ಎಂದ.

ಅಮರ ಮತ್ತೊಂದು ಘಳಿಗೆ ಆಲೋಚಿಸಿದ. ಅಯಾಚಿತವಾಗಿ ಬಂದ ಕೆಲಸ ಇದು. ಅವನ ಮೇಷ್ಟರು ದೇವದತ್ತ ಹೇಳಿದ್ದ ಒಂದು ಮಾತು ಅವನಿಗೆ ನೆನಪಾಯಿತು. `ಯಾವ ಕೆಲಸವೂ ಕೀಳಲ್ಲ. ಕಸ ತೆಗೆಯುವವರು ಅದನ್ನು ಕೀಳು ಎಂದು ಆ ಕೆಲಸ ಮಾಡದಿದ್ದರೆ ಜನರ ಆರೋಗ್ಯದ ಗತಿಯೇನು?’ ಎಂದಿದ್ದರು ದೇವದತ್ತ. ಜೊತೆಗೆ, ಕ್ಷೀಣಿಸುತ್ತಿರುವ ತಾಯಿಯ ಆರೋಗ್ಯದ ನೆನಪಾಗಿ ಅಕ್ಬರ್‍ನ ಕೈ ಹಿಡಿದು, “ಬಾ, ಈಗಲೇ ನಾನು ಬರೋಕ್ಕೆ ಸಿದ್ಧ” ಎಂದ. ಮನೆಯೊಳಗೆ ನಡೆದು ತನ್ನ ಬಳಿಯಿದ್ದ ಅತ್ಯಂತ ಹಳೆಯ ಆದರೆ ಗಟ್ಟಿಮುಟ್ಟಾದ ಉಡುಪು ಧರಿಸಿ ಅಕ್ಬರ್‍ನ ಹಿಂದೆ ಹೊರಟ ಅಮರ್.

ಗ್ಯಾರೇಜ್ ಮಾಲೀಕ ಅಂತೋಣಿ ಅಮರನನ್ನು ಕಂಡು, “ನೋಡೋಕ್ಕೆ ಕಟ್ಟುಮಸ್ತಾಗಿದ್ದೀ. ಕೆಲಸ ಚೆನ್ನಾಗಿ ಕಲಿ. ಮುಂದೆ ನನ್ನ ಹಾಗೆ ನೀನೂ ಮಾಲೀಕ ಆಗಬಹುದು. ನಾನೂ ಹಿಂದೊಂದು ದಿನ ಹೀಗೇ ಗ್ಯಾರೇಜ್ ಸೇರಿ ಕೆಲಸ ಕಲಿತವನು” ಎಂದ.

ಆ ಮಾತುಗಳು ಅಮರನ ಮನಸ್ಸಿಗೆ ಚೆನ್ನಾಗಿ ನಾಟಿದವು.

ಶ್ರದ್ಧೆಯಿಂದ ಕೆಲಸ ಮಾಡಲಾರಂಭಿಸಿದ. ಅಕ್ಬರ್ ಮಾಡದಿದ್ದ ಮತ್ತೊಂದು ಕೆಲಸವನ್ನು ಅವನು ಮಾಡುತ್ತಿದ್ದ. ವಾರದ ರಜೆಯಂದು ಮತ್ತು ಸಂಜೆಯ ಹೊತ್ತು ಅವನ ಮತ್ತೊಬ್ಬ ಗೆಳೆಯ ಶರತ್‍ನ ಮನೆಗೆ ಹೋಗಿ ಅವನ ಕಂಪ್ಯೂಟರ್‍ನಲ್ಲಿ ತಾನು ಮಾಡುತ್ತಿದ್ದ ರಿಪೇರಿಯ ಬಗ್ಗೆ ಓದಲಾರಂಭಿಸಿದ. ಯಾವ ಕಾರು, ಬೈಕ್ ಬಂದರೂ ಅದರ ವೆಬ್‍ಸೈಟಿಗೆ ಹೋಗಿ ತಾನು ದುರಸ್ತಿ ಮಾಡಿದ/ ಮಾಡಬೇಕಾದ ಬಿಡಿಭಾಗಗಳನ್ನು ಅಂತರ್ಜಾಲದಲ್ಲಿ ನೋಡಿ ಆ ವಿಷಯಗಳನ್ನು ತನ್ನ ನೋಟ್‍ಬುಕ್ ಒಂದರಲ್ಲಿ ಗುರುತು ಹಾಕಿಕೊಳ್ಳುತ್ತಿದ್ದ.

ನಳ ಮಹಾರಾಜನಿಗೆ ಕುದುರೆಯ ಬಗ್ಗೆಗಿನ `ಅಶ್ವಹೃದಯ’ ತಿಳಿದಿದ್ದಂತೆ ಅಮರ ತಾನು ರಿಪೇರಿ ಮಾಡಿದ ಪ್ರತಿ ಕಾರು, ಬೈಕು, ಸ್ಕೂಟರುಗಳ ಭಾಗಗಳ ಬಗ್ಗೆ ಚೆನ್ನಾಗಿ ಅಭ್ಯಾಸ ಮಾಡಿದ. ಅಕ್ಬರ್‍ನನ್ನೂ ಆ ವಿಷಯಗಳ ಬಗ್ಗೆ ತಿಳಿಯುವಂತೆ ಮಾಡಿದ. ಮಾಲೀಕ ಅಂತೋಣಿ ಸಂತೋಷಿಸಿದ. ರಿಪೇರಿಯು ಬೇಗ ಹಾಗೂ ಚೆನ್ನಾಗಿ ಆಗತೊಡಗಿತು. ಗಾಡಿಗಳ ಸಂಖ್ಯೆಯೂ ಹೆಚ್ಚಾಗತೊಡಗಿತು.

“ನೀನಂತೂ ಈ ವಾಹನಗಳ ಡಾಕ್ಟರ್ ಆಗಿದ್ದೀಯ ಅಮರ್!”ಎಂದು ಶ್ಲಾಘಿಸಿದ ಅಂತೋಣಿ. ಅಮರ ಕೇವಲ ಮುಗುಳ್ನಕ್ಕು ವಂದಿಸುತ್ತಿದ್ದ.

ಕೆಲಸದಲ್ಲಿ ನಿಯತ್ತು, ವೇಗ ಮತ್ತು ಆಸಕ್ತಿ ಎಲ್ಲವನ್ನೂ ನೋಡಿದ ಅಂತೋಣಿ ಮನದಲ್ಲಿಯೇ ಆಲೋಚಿಸಿ ಒಂದು ನಿರ್ಧಾರ ತೆಗೆದುಕೊಂಡು, “ಅಮರ್! ನಗರದ ಇನ್ನೊಂದು ಭಾಗದಲ್ಲಿ ನಾನು ಮತ್ತೊಂದು ಗ್ಯಾರೇಜ್ ಓಪನ್ ಮಾಡಬೇಕೆಂದಿದ್ದೇನೆ. ಇದು ಅನೇಕ ಗಿರಾಕಿಗಳ ಆಸೆ. ಅವರಿಗೆ ಇಷ್ಟು ದೂರ ಬರುವುದು ಕಷ್ಟವಂತೆ. ಆದರೆ ನಮ್ಮ ಸೇವೆಯೇ ಬೇಕಂತೆ” ಎಂದ.

ಅಮರನಿಗೆ ಮತ್ತಷ್ಟು ವಿವರ ನೀಡಿದ. “ಗ್ಯಾರೇಜ್ ನನ್ನ ಹೆಸರಲ್ಲಿ ಇರುತ್ತೆ ಕೆಲವು ವರ್ಷ. ನೀನು ನನಗೆ ತಿಂಗಳಿಗೆ ಇಷ್ಟು ಅಂತಕೊಟ್ಟರೆ ಮಿಕ್ಕ ಹಣವೆಲ್ಲಾ ನಿನ್ನದೇ. ಅಕ್ಬರ್ ಕೂಡಾ ನಿನ್ನೊಡನೆ ಇರುತ್ತಾನೆ. ನನ್ನ ಬಂಡವಾಳ ಬಂದೊಡನೆ ಆ ಗ್ಯಾರೇಜ್ ನಿನ್ನದು” ಎಂದ.

ಅಮರನಿಗೆ ಈ ಐಡಿಯಾ ಹಿಡಿಸಿತು….

ನಾಲ್ಕು ವರ್ಷಗಳ ನಂತರ ಇಂದು ಅಮರ ಆ ಗ್ಯಾರೇಜಿನ ಮಾಲೀಕ. ಅಕ್ಬರ್‍ನನ್ನು ಪಾಲುದಾರನನ್ನಾಗಿ ಮಾಡಿಕೊಂಡಿದ್ದಾನೆ. ಅವನಿಗೂ ಒಂದು ಗ್ಯಾರೇಜ್ ಮಾಡಿಕೊಡುವ ಹುಮ್ಮಸ್ಸಿನಲ್ಲಿದ್ದಾನೆ ಅಮರ್.
ಪಟ್ಟು ಹಿಡಿವ ಜನರು ತಮ್ಮ ಯಶಸ್ಸಿನ ಪಯಣವನ್ನು ಉಳಿದ ಜನ ಎಲ್ಲಿ ವಿಫಲರಾಗುವರೋ ಅಲ್ಲಿಂದ ಆರಂಭಿಸುತ್ತಾರೆ. ಕಲಿಯುವಿಕೆಯನ್ನು ಆಕಸ್ಮಿಕವಾಗಿ ಸಾಧಿಸಲು ಆಗುವುದಿಲ್ಲ. ಅದನ್ನು ಬಯಸಿ ವಶಪಡಿಸಿಕೊಳ್ಳಬೇಕು ಮತ್ತು ಶ್ರದ್ಧೆಯಿಂದ ಅದನ್ನು ನಮ್ಮದಾಗಿ ಮಾಡಿಕೊಳ್ಳಬೇಕು. ನಮಗೆ ಸಿಗುವ ಅವಕಾಶದಲ್ಲಿ ಎಷ್ಟು ಕಲಿತರೂ ಸಾಲದು. ಯಾರೋ ಒಬ್ಬ ದಾರ್ಶನಿಕ ಹೇಳಿದಂತೆ ಟೀ ಮಾಡುವ ಕೆಲಸವಾದರೂ ಅದನ್ನು ಶ್ರೇಷ್ಠ ರೀತಿಯಲ್ಲಿ ಮಾಡಬೇಕು. ಹುಲ್ಲು ಕತ್ತರಿಸುವ ಕೆಲಸವಾದರೂ ಅತ್ಯುತ್ತಮವಾಗಿ ಕತ್ತರಿಸಿ ಅಂದವಾಗಿ ಕಾಣುವಂತೆ ಮಾಡಬೇಕು.

About sudina

Leave a Reply

Your email address will not be published. Required fields are marked *

error: Content is protected !!