ಉಡುಪಿ : ಬಹುಕೋಟಿ ಆಸ್ತಿ ಒಡೆಯ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಿಐಡಿ ತಂಡ ಉಡುಪಿಯಲ್ಲಿ ಬೀಡುಬಿಟ್ಟಿದೆ. ಸರಿಸುಮಾರು 10 ಅಧಿಕಾರಿಗಳು ಪ್ರಕರಣದ ನಾನಾ ರೀತಿಯ ತನಿಖೆಯಲ್ಲಿ ತೊಡಗಿದ್ದಾರೆ ಎಂದು ಸಿಐಡಿ ಮಹಾನಿರ್ದೇಶಕ ಎಚ್.ಸಿ. ಕಿಶೋರ್ ಚಂದ್ರ ತಿಳಿಸಿದ್ದಾರೆ. ಇವರೊಂದಿಗೆ ಸಿಐಡಿಯ ಡಿಐಜಿ ಸೋನಿಯಾ ನಾರಂಗ್ ಕೂಡಾ ಇದ್ದಾರೆ. ಈ ಅಧಿಕಾರಿಗಳ ತಂಡ ಉಡುಪಿಯಲ್ಲಿ ಬೀಡುಬಿಟ್ಟಿದ್ದು, ಉಡುಪಿ ಎಸ್ಪಿ ಬಾಲಕೃಷ್ಣರೊಂದಿಗೆ ಚರ್ಚೆ ನಡೆಸಿದೆ. ಅಲ್ಲದೆ, ಪ್ರಕರಣದ ಎಲ್ಲಾ ಆಯಾಮಗಳ ತನಿಖೆ ಮಾಡುವುದಾಗಿ ತಿಳಿಸಿದೆ.
ನ್ಯಾಯಾಂಗ ಬಂಧನ : ಇನ್ನು, ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ(48), ಪುತ್ರ ನವನೀತ್ ಶೆಟ್ಟಿ (20) ಮತ್ತು ಜ್ಯೋತಿಷಿ ನಿರಂಜನ್ ಭಟ್(26)ನನ್ನು ಸೆಪ್ಟೆಂಬರ್ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಜೆಎಂಎಫ್ಸಿ ನ್ಯಾಯಾಲಯದ ಆದೇಶ ಹೊರಡಿಸಿದೆ. ಇನ್ನು, ಪ್ರಕರಣದ ಸಂಬಂಧ ಬಂಧಿತರಾಗಿರುವ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಮತ್ತು ಕಾರು ಚಾಲಕ ರಾಘವೇಂದ್ರನನ್ನು ಆಗಸ್ಟ್ 29ರ ವರೆಗೆ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ತೀರ್ಪು ನೀಡಿದೆ.
ಡಿಎನ್ಎ ಪರೀಕ್ಷೆಗೂ ಅಸ್ತು : ಭಾಸ್ಕರ್ ಶೆಟ್ಟಿ ಪತ್ನಿ ಗುಲಾಬಿ ಶೆಟ್ಟಿ ಮತ್ತು ಸಹೋದರರ ಡಿಎನ್ಎ ಪರೀಕ್ಷೆಗೆ ನ್ಯಾಯಾಲಯ ಅಸ್ತು ಎಂದಿದೆ. ಪೊಲೀಸರು ಕೇಳಿದ ಅನುಮತಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ.
ಪೊಲೀಸರು ಈ ಪ್ರಕರಣದ ತನಿಖೆ ಚುರುಕುಗೊಳಿಸಿದರೂ ತನಿಖೆಯಲ್ಲಿ ಮಹತ್ವದ ಪ್ರಗತಿಯೇನು ಆಗಿಲ್ಲ. ಭಾಸ್ಕರ್ ಶೆಟ್ಟಿ ಮೃತದೇಹದ ಅವಶೇಷಗಳು ಇನ್ನೂ ಲಭ್ಯವಾಗಿಲ್ಲ. ಹೀಗಾಗಿ, ಭಾಸ್ಕರ್ ಶೆಟ್ಟಿ ಸಂಬಂಧಿಕರಲ್ಲಿ ಆತಂಕ ಮನೆ ಮಾಡಿದೆ.