Monday , August 20 2018
ಕೇಳ್ರಪ್ಪೋ ಕೇಳಿ
Home / News NOW / ತಮಿಳುನಾಡಿಗೆ ನೀರು ಬಿಡಲು ನಿರ್ಧಾರ

ತಮಿಳುನಾಡಿಗೆ ನೀರು ಬಿಡಲು ನಿರ್ಧಾರ

ಬೆಂಗಳೂರು : ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಕರ್ನಾಟಕ ತಮಿಳುನಾಡಿಗೆ ನೀರು ಬಿಡಲು ನಿರ್ಧಾರ ಮಾಡಿದೆ. ಸಿಎಂ ನೇತೃತ್ವದಲ್ಲಿ ಸಂಜೆ ನಡೆದ ಸರ್ವಪಕ್ಷ ಸಭೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸುಪ್ರೀಂ ತೀರ್ಪು ಪಾಲನೆಗೆ ಕರ್ನಾಟಕ ನಿರ್ಧರಿಸಿದೆ.

ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಿನ್ನೆ ಪ್ರತಿದಿನ 15 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಈ ಆದೇಶ ಖಂಡಿಸಿ ಇವತ್ತು ರಾಜ್ಯದ ಬಹುಭಾಗದಲ್ಲಿ ಪ್ರತಿಭಟನೆ ನಡೆದಿತ್ತು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ರೈತರು ಆಗ್ರಹಿಸಿದ್ದರು. ಆದರೆ, ಈ ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಯಲಿದೆ… ಇನ್ನು, ಸರ್ಕಾರದ ತೀರ್ಮಾನಕ್ಕೆ ಸಂಸದ ಪುಟ್ಟರಾಜು, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸೇರಿ ಪ್ರತಿಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ…

ಸಭಾತ್ಯಾಗ : ಇತ್ತ, ತಮಿಳುನಾಡಿಗೆ ನೀರು ಬಿಡಲು ಸಿಎಂ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಸಭೆಯಿಂದ ಹೊರನಡೆದರು. ಸಿಎಂ ನಡೆಗೆ ವಿರೋಧ ವ್ಯಕ್ತಪಡಿಸಿ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಸಭೆಯಿಂದ ಹೊರನಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳ ವಿರೋಧ : ಇನ್ನು, ಸಭೆ ಬಳಿಕ ಮಾತನಾಡಿದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಸಮರ್ಥ ವಾದ ಮಂಡಿಸುವಲ್ಲಿ ನಮ್ಮ ಕಾನೂನು ತಂಡ ವಿಫಲವಾಗಿದೆ. ಸುಪ್ರೀಂಕೋರ್ಟ್‍ನಲ್ಲಿ ಪುನರ್ ಪರಿಶೀಲನೆ ಅರ್ಜಿಗೆ ಅವಕಾಶವಿದೆ. ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ಮುಂದಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದ್ದಾರೆ.

ತೀರ್ಪು ಪಾಲಿಸಲೇಬೇಕು : ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿದೆ. ತಮಿಳುನಾಡಿಗೆ ಇಂದಿನಿಂದಲೇ ನೀರು ಬಿಡುಗಡೆಯಾಗಲಿದೆ. ಭಾರವಾದ ಹೃದಯದಿಂದಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿದ್ದೇವೆ. ಇದರ ಜೊತೆಗೆ, ಕೋರ್ಟ್ ಆದೇಶ ಮಾರ್ಪಾಟು ಮಾಡುವಂತೆ ಮನವಿ ಮಾಡಿಕೊಳ್ಳುವುದಕ್ಕೂ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ಅಲ್ಲದೆ, ರೈತರು ಭಾವೋದ್ವೇಗಕ್ಕೊಳಗಾಗದೆ ಸಂಯಮದಿಂಧ ಇರಬೇಕೆಂದೂ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ. ಸಂವಿಧಾನಾತ್ಮಕ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘಿಸಲು ಸಾಧ್ಯವಿಲ್ಲ. ನಮ್ಮ ಮುಖ್ಯ ಅರ್ಜಿ ವಿಚಾರಣೆ ಅಕ್ಟೋಬರ್ 18 ರಂದು ಇದೆ. ರಾಜ್ಯದ ಪರ ನಿಲುವು ಪಡೆಯಬೇಕಾದರೆ ಈಗ ನೀರು ಬಿಡುವುದು ಅನಿವಾರ್ಯ. ಹೀಗಾಗಿ, ನಾವು ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಅವರು ಹೇಳಿದ್ದಾರೆ…

About sudina

Check Also

ದೇಶಕಂಡ ಅಪ್ರತಿಮ ನಾಯಕ, ಅಜಾತ ಶತ್ರು ಇನ್ನಿಲ್ಲ

ನವದೆಹಲಿ : ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ವಿಧಿವಶರಾಗಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ವಾಜಪೇಯಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!