Tuesday , February 19 2019
ಕೇಳ್ರಪ್ಪೋ ಕೇಳಿ
Home / Sudina Special / ಆನ್‍ಲೈನ್ ಖರೀದಿ: ಇರಲಿ ಎಚ್ಚರ

ಆನ್‍ಲೈನ್ ಖರೀದಿ: ಇರಲಿ ಎಚ್ಚರ

* ಸುದರ್ಶನ್ ಬೆಳ್ಮಣ್ಣು
ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲಾ ಮನುಷ್ಯನ ಆಲಸ್ಯತನ ಹೆಚ್ಚುತ್ತಿದೆ ಎನ್ನುವ ಮಾತಿದೆ. ಈಗ ಏನಿದ್ದರೂ ನಮಗೆ ಕೈಬೆರಳ ತುದಿಯಲ್ಲೇ ಸಿಗುವಂತಿರಬೇಕು. ಸ್ವಲ್ಪ ಕೈಚಾಚಲೂ ಉದಾಸೀನ ಎಂಬಂತಹ ಸ್ಥಿತಿ.

ಈ ಹಿಂದೆ ವಸ್ತ್ತುಗಳ ಖರೀದಿಗೆ ಮಾರ್ಕೆಟ್, ಶಾಪಿಂಗ್ ಎಂದು ಸುತ್ತುವ ಪರಿಪಾಠವಿತ್ತು. ವೀಕ್ ಎಂಡ್‍ನಲ್ಲಂತೂ ಪತಿ-ಪತ್ನಿ ಜಾಲಿಯಾಗಿ ಊರೆಲ್ಲಾ ಸುತ್ತಾಡಿಕೊಂಡು, ಶಾಪಿಂಗ್ ಹೆಸರಲ್ಲಿ ತಮ್ಮ ಅಗತ್ಯದ ವಸ್ತುಗಳನ್ನು ಖರೀದಿಸುತ್ತಿದ್ದರು. ಮತ್ತೆ ಮುಂದಿನ ವಾರದ ಶಾಪಿಂಗ್‍ಗಾಗಿ ಕಾಯುತ್ತಿದ್ದ ದಿನಗಳವು. ಆದರೆ ಈಗ ಆನ್‍ಲೈನ್ ಶಾಪಿಂಗ್ ಯುಗ. ಅಂತರ್ಜಾಲ ಮೂಲಕ ಗ್ರಾಹಕರನ್ನು ಸೆಳೆದುಕೊಂಡು ಅವರಿಗೆ ಬೇಕಾದ ವಸ್ತುಗಳನ್ನು ಅವರ ಮನೆಯಂಗಳಕ್ಕೇ ತಲುಪಿಸಿ ಬಿಡುವ ಸಂಸ್ಥೆಗಳಿವೆ. ಅದೂ ಅಂಗಡಿಯ ಖರೀದಿಗಿಂತ ಅಗ್ಗದ ದರದಲ್ಲಿ ಸಿಗುತ್ತದೆ ಎಂದಾದಾಗ ಯಾರಿಗೆ ಬೇಡ ಹೇಳಿ? ಹೀಗಾಗಿಯೇ ಹಲವು ಕಂಪೆನಿಗಳು ದೇಶದಲ್ಲಿ ಆನ್‍ಲೈನ್ ಮಾರಾಟದ ಅಗ್ರಗಣ್ಯ ಕಂಪೆನಿಗಳೆಂಬ ಮಾನ್ಯತೆ ಪಡೆದಿವೆ.
ಆನ್‍ಲೈನ್‍ನಲ್ಲಿ ಖರೀದಿ ಎಂಬುದು ಈಚಿನ ದಿನಗಳಲ್ಲಿ ಪ್ಯಾಶನ್ ಎಂಬಂತಾಗಿ ಬಿಟ್ಟಿದೆ. ಮನೆಗೆ ಬೇಕಾದ ರೇಶನ್‍ನಿಂದ ಹಿಡಿದು, ಟಿವಿ, ಫ್ರಿಡ್ಜ್.. ಇತ್ಯಾದಿ ವಸ್ತುಗಳೂ ಈಗ ಆನ್‍ಲೈನ್ ಮೂಲಕ ಸುಲಭ ಖರೀದಿ ಸಾಧ್ಯವಾಗಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆನ್‍ಲೈನ್ ಖರೀದಿಯ ಸಮಸ್ಯೆಗಳು: ಆನ್‍ಲೈನ್ ಖರೀದಿ ಹೆಚ್ಚು ಲಾಭ ಮತ್ತು ಸುಲಭ ಎಂದಾದರೂ ಇಲ್ಲಿ ಗ್ರಾಹಕ ತುಸು ಎಚ್ಚರ ವಹಿಸಬೇಕಾದ ಅಗತ್ಯವಿದೆ. ಆನ್‍ಲೈನ್ ಖರೀದಿ ಬಗ್ಗೆ ಈಚೆಗೆ ಗ್ರಾಹಕರಿಂದ ಹಲವಾರು ದೂರುಗಳು ಕೇಳಿ ಬರುತ್ತಿವೆ. ಕಳೆದ ತಿಂಗಳು ಉಡುಪಿಯ ಛಾಯಾಗ್ರಾಹಕರೊಬ್ಬರು 50,000 ರೂ. ಬೆಲೆಬಾಳುವ ಕ್ಯಾಮೆರಾವನ್ನು ಆನ್‍ಲೈನ್ ಮಾರಾಟ ಸಂಸ್ಥೆಯ ಮೂಲಕ ಪಡೆದಿದ್ದರು. ಹಣ ಪಾವತಿಸಿದ ಬಳಿಕ ಆ ಸಂಸ್ಥೆಯ ಪ್ರತಿನಿಧಿ ಕ್ಯಾಮೆರಾದ ಬಾಕ್ಸ್ ಅನ್ನು ಅವರಿಗೆ ನೀಡಿ ಹೊರಟುಹೋಗಿದ್ದ. ಅದನ್ನು ಬಿಚ್ಚಿ ನೋಡಿದಾಗ ಅವರಿಗೆ ಆಘಾತ ಕಾದಿತ್ತು. ಆ ಬಾಕ್ಸ್‍ನೊಳಗೆ ಇದ್ದದ್ದು ಭಾರೀ ತೂಕದ ಒಂದು ಕಲ್ಲು. ಕಲ್ಲನ್ನು ಆಕರ್ಷಕವಾಗಿ ಪ್ಯಾಕ್ ಮಾಡಿ ಕಳಿಸಲಾಗಿತ್ತು. ತಕ್ಷಣ ಆ ಛಾಯಾಗ್ರಾಹಕರು ಆನ್‍ಲೈನ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಪ್ರಕರಣದ ಗಂಭೀರತೆ ಅರಿತ ಸಂಸ್ಥೆಯವರು ಕೂಡಲೇ ತಪ್ಪು ಒಪ್ಪಿಕೊಂಡು ಹಣ ಮರಳಿಸಿದರು.

ಇದೇ ರೀತಿಯ ಪ್ರಕರಣ ಮಂಗಳೂರಿನಲ್ಲಿಯೂ ನಡೆದಿದೆ. ಓರ್ವ ವಿದ್ಯಾರ್ಥಿ ಆನ್‍ಲೈನ್ ಮೂಲಕ ಶೂ ಖರೀದಿಸಲು ಆರ್ಡರ್ ಸಲ್ಲಿಸಿದ್ದ. ಆತನಿಗೆ ಪಾರ್ಸೆಲ್ ಬಂತು. ಮಾಮೂಲಿನಂತೆ, ಹಣ ಪಾವತಿಸದೆ ಬಾಕ್ಸ್ ಬಿಚ್ಚಿ ತೋರಿಸಲು ಪಾರ್ಸೆಲ್ ತಂದಿದ್ದ ವ್ಯಕ್ತಿ ನಿರಾಕರಿಸಿದ. ಹಣ ಪಾವತಿಸಿದ ಬಳಿಕ ಪಾರ್ಸೆಲ್ ಬಿಚ್ಚಿ ನೋಡಿದಾಗ ಒಂದು ಕಾಲಿನ ಶೂ ಕೆಂಪು ಬಣ್ಣದ್ದು, ಇನ್ನೊಂದು ಕಾಲಿನ ಶೂ ಬಣ್ಣ ನೀಲಿ! ಈ ಬಗ್ಗೆ ಆತ ಸಂಸ್ಥೆಗೆ ದೂರು ಸಲ್ಲಿಸಿದಾಗ ಅವರು ಆ ಶೂವನ್ನು ವಾಪಾಸು ಪಡೆದುಕೊಂಡು ಸಮರ್ಪಕ ರೀತಿಯಲ್ಲಿ ಶೂ ಸರಬರಾಜು ಮಾಡಲು ಒಪ್ಪಿಕೊಂಡರು.

ಇನ್ನೊಂದು ಘಟನೆಯಲ್ಲಿ ಮಣಿಪಾಲದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವರು 1,499 ರೂ. ಬೆಲೆಯ ನೊವಾಸಿಸ್ ಸಂಸ್ಥೆಯ ಮೊಬೈಲ್ ಚಾರ್ಜರ್ ಪವರ್‍ಬ್ಯಾಂಕ್ ಅನ್ನು ಆನ್‍ಲೈನ್ ಮೂಲಕ ಆರ್ಡರ್ ಮಾಡಿದ್ದರು. ಮೊನ್ನೆ ಎ.2ರಂದು ಪಾರ್ಸೆಲ್ ಬಂದಿದೆ. ಹಣ ಪಾವತಿಸಿದ ಬಳಿಕ, ಡೆಲಿವರಿ ನೀಡಿದ ವ್ಯಕ್ತಿಯ ಎದುರೇ ಪಾರ್ಸೆಲ್ ಬಿಚ್ಚಿದರು. ಅಲ್ಲಿ ಸ್ಲ್ಯಾಬ್ ತುಂಡುಗಳು ಇದ್ದವು. ಕೂಡಲೇ ಪಾರ್ಸೆಲ್ ಹಿಂದಿರುಗಿಸಿ ಹಣ ಹಿಂಪಡೆದರು.

ಇಲ್ಲಿ ಸಂಸ್ಥೆಯ ಬೇಜವಾಬ್ದಾರಿ ಮೇಲ್ನೊಟಕ್ಕೇ ಸ್ಪಷ್ಟವಾಗುತ್ತಿದೆ. ಪೈಪೋಟಿಯ ಮಾರುಕಟ್ಟೆಯಲ್ಲಿ ಗ್ರಾಹಕರು ಸಂಸ್ಥೆಯ `ಖ್ಯಾತಿ’ಗಿಂತ ಆ ಸಂಸ್ಥೆಯವರು ಗ್ರಾಹಕರಿಗೆ ನೀಡುವ ಸೇವೆ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನುವುದು ಶತಃಸಿದ್ಧ. ಹೀಗಿರುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಆನ್‍ಲೈನ್ ಮಾರಾಟ ವ್ಯವಸ್ಥೆಯಲ್ಲಿ ಸಂಸ್ಥೆಗಳು ಈಗ ಕೆಲವೊಂದು ಮಾರ್ಪಾಡು ಮಾಡಿಕೊಂಡಿವೆ. ಈ ಮೊದಲು ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವಾಗ ಅದರ ಜೊತೆಗೇ `ಕ್ಯಾಶ್ ಇನ್‍ವಾಯ್ಸ್’ ಕೂಡಾ ಗ್ರಾಹಕರ ಕೈ ಸೇರುತ್ತಿತ್ತು. ಇದು ಗ್ರಾಹಕರು ಖರೀದಿ ಮಾಡಿದ್ದಕ್ಕೆ `ಪ್ರೂಫ್’ ಆಗಿರುತ್ತಿತ್ತು. ಆದರೆ, ಇದೀಗ ಆನ್‍ಲೈನ್ ಮಾರಾಟ ಸಂಸ್ಥೆಯವರು ಗ್ರಾಹಕರಿಗೆ ಇನ್‍ವಾಯ್ಸ್ ನೀಡುತ್ತಿಲ್ಲ. ಹಣ ಪಾವತಿ ಮಾಡುವಾಗ ಕೇಳಿದರೆ- ನಿಮ್ಮ ಈಮೇಲ್ ವಿಳಾಸಕ್ಕೆ ಮೇಲ್ ಮಾಡಿದ್ದೇವೆ. ಅದನ್ನೇ ಪ್ರಿಂಟ್ ಹಾಕಿಸ್ಕೊಳ್ಳಿ ಎನ್ನುತ್ತಾರೆ. ಯಾಕೆ ಹೀಗೆ ಎಂದು ಕೇಳಿದರೆ- ನಾವೀಗ ಪೇಪರ್‍ಲೆಸ್ ವ್ಯವಹಾರ ಮಾಡುತ್ತಿದ್ದೇವೆ ಎನ್ನುವ ಉತ್ತರ ಸಿಗುತ್ತದೆ. ಗ್ರಾಹಕರಿಗೆ ವಸ್ತುಗಳನ್ನು ಪಾವತಿಸಿದ ಮೇಲೆ ಕೊರಿಯರ್ ತರುವ ವ್ಯಕ್ತಿ ತನ್ನ ಸ್ಮಾರ್ಟ್ ಫೋನ್‍ನ ಪರದೆಯ ಮೇಲೆ ಗ್ರಾಹಕನ ಸಹಿ ಪಡೆಯುತ್ತಾನೆ. ಹಣ ಪಾವತಿಸದೆ ಆ ಪಾರ್ಸೆಲ್‍ನೊಳಗೆ ಏನಿದೆ ಎಂಬುದನ್ನು ಗ್ರಾಹಕರು ನೋಡುವಂತಿಲ್ಲ. ಒಮ್ಮೆ ಹಣ ಪಾವತಿಸಿದ ತಕ್ಷಣ ಕೊರಿಯರ್ ತರುವ ವ್ಯಕ್ತಿ ಅಲ್ಲಿ ನಿಲ್ಲುವುದಿಲ್ಲ. ಸ್ವಲ್ಪ ನಿಲ್ಲಿ ಮಾರಾಯ್ರೇ ಎಂದರೆ- ನೋಡಿ.. ನಮಗೆ ನೀವೊಬ್ಬರೇ ಕಸ್ಟಮರ್ ಅಲ್ಲ. ಇನ್ನೂ ಇಪ್ಪತ್ತು ಮಂದಿಗೆ ವಸ್ತುಗಳನ್ನು ತಲುಪಿಸಬೇಕಿದೆ. ಪಾರ್ಸೆಲ್‍ನಲ್ಲಿ ಏನಾದ್ರೂ ವ್ಯತ್ಯಾಸವಿದ್ದರೆ ಕಂಪೆನಿಯವರಲ್ಲಿ ಕಂಪ್ಲೇಂಟ್ ಮಾಡಿ.. ಎಂದು ಒರಟಾಗಿ ನುಡಿದು ಬೈಕ್ ಏರಿ ರೊಯ್ಯನೆ ಹಾರಿ ಬಿಡುತ್ತಾನೆ.

ಪಾರ್ಸೆಲ್ ಪಡೆದ ವ್ಯಕ್ತಿ ದೇವರಿಗೆ ಕೈಮುಗಿದು ಪಾರ್ಸೆಲ್ ಬಿಡಿಸುವ ಅನಿವಾರ್ಯತೆಯಿದೆ. ಯಾಕೆಂದರೆ `ಯಾವ ಹುತ್ತದ ಒಳಗೆ ಯಾವ ಹಾವಿದೆಯೋ..? ಎಂಬಂತೆ ಯಾವ ಪಾರ್ಸೆಲ್ ಒಳಗೆ ಏನಿದೆಯೋ ಆ ಆನ್‍ಲೈನ್ ಕಂಪೆನಿಯವರಿಗೇ ಗೊತ್ತು. ಅದೃಷ್ಟ ನೆಟ್ಟಗಿದ್ದರೆ ಪಾರ್ಸೆಲ್ ಒಳಗೆ ನೀವು `ಆರ್ಡರ್’ ಮಾಡಿದ ವಸ್ತು ನಿಮ್ಮ ಕೈ ಸೇರಬಹುದು. ಇಲ್ಲದಿದ್ದರೆ… ಆ ದೇವರೇ ಗತಿ..

ನಿಮ್ಮ ಗ್ರಹಚಾರಕ್ಕೆ ಪಾರ್ಸೆಲ್‍ನಲ್ಲಿ ವಂಚನೆಯಾಗಿದ್ದರೆ ಮುಂದೆ ಆನ್‍ಲೈನ್ ಕಂಪೆನಿಯ ಕಸ್ಟಮರ್ ಕ್ಯಾರ್‍ನಲ್ಲಿ ಕಂಪ್ಲೇಂಟ್ ದಾಖಲು ಮಾಡಿಕೊಳ್ಳಬೇಕು. ಅವರಿಂದ ನೂರೆಂಟು ವಿಚಾರಣೆ.. ಕಡೆಗೆ ನಮ್ಮ ಈ ಅಧಿಕೃತ ಸೇವಾದಾರರನ್ನು ಸಂಪರ್ಕಿಸಿ ಎಂಬ ಉತ್ತರ. ಇದೆಲ್ಲಾ ಆಗುವಾಗ ಸಾಕಷ್ಟು ಸಮಯ ವ್ಯರ್ಥ.. ಇದೆಲ್ಲಾ ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ಖರೀದಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು.

ಆದರೆ ಆನ್‍ಲೈನ್ ಖರೀದಿಯೇ ಸರಿಯಿಲ್ಲ ಎನ್ನುವುದೂ ತಪ್ಪಾಗುತ್ತದೆ. ಎಲ್ಲೋ ಒಂದೆರಡು ಸಂಸ್ಥೆಗಳಿಂದ ಆಗುವ ಕೆಲವು ಘಟನೆಗಳು ಇಡೀ ಆನ್‍ಲೈನ್ ಖರೀದಿಯ ವಿಶ್ವಾಸಾರ್ಹತೆಯನ್ನೇ ಬುಡಮೇಲುಗೊಳಿಸುತ್ತಿವೆ. ಈ ಕುರಿತು ಆನ್‍ಲೈನ್ ಮಾರಾಟ ರಂಗದ ದಿಗ್ಗಜರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!