Wednesday , January 24 2018
Home / Sudina Special / ಮಾಲಿನ್ಯಕ್ಕೆ ಮಾಸಿದ ತಾವರೆಯ ಸೊಬಗು!
Buy Bitcoin at CEX.IO

ಮಾಲಿನ್ಯಕ್ಕೆ ಮಾಸಿದ ತಾವರೆಯ ಸೊಬಗು!

ಪ್ರವಾಸಿಗರನ್ನು ಆಕರ್ಷಿಸುವ ತಾಣಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ಕೂಡಾ ಒಂದು. ಪ್ರತಿದಿನ ದೇಶ ವಿದೇಶದಿಂದ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹುಮಾಯುನ್ ಸಮಾಧಿ, ಇಂಡಿಯಾ ಗೇಟ್, ಅಕ್ಷರಧಾಮ ಮೊದಲಾದ ತಾಣಗಳ ಸೌಂದÀರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಹೀಗಾಗಿಯೇ ದೆಹಲಿಯಲ್ಲಿ ಜನ ಸಂಖ್ಯೆಗೇನು ಬರವಿಲ್ಲ. ಜನ ಸಂಖ್ಯೆ ಹೆಚ್ಚುತ್ತಿದ್ದಂತೆ ರಾಷ್ಟ್ರ ರಾಜಧಾನಿಯ ವಾಸ್ತವ ಸ್ಥಿತಿ ಕೂಡಾ ಬದಲಾಗುತ್ತಿದೆ. ದಿನಕಳೆದಂತೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಕೂಡಾ ಏರಿಕೆಯಾಗಿದೆ. ವಾಯು ಮಾಲಿನ್ಯ, ಶಬ್ದಮಾಲಿನ್ಯ ಕೂಡಾ ಮಿತಿ ಬೀರಿದೆ. ಈ ಮಧ್ಯೆ ಇತ್ತೀಚೆಗೆ ಬಂದಿರುವ ಸುದ್ದಿ ಎಲ್ಲರನ್ನೂ ಚಿಂತಿಸುವಂತೆ ಮಾಡಿದೆ.

ದೆಹಲಿಯಲ್ಲಿರುವ ಪ್ರಖ್ಯಾತ ಕಮಲ ದೇಗುಲ (ಲೋಟಸ್ ಟೆಂಪಲ್)ನ ಬಣ್ಣ ಮಾಸುತ್ತಿದೆ. ಬಿಳಿ ಬಣ್ಣದ ಮಾರ್ಬಲ್‍ಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಅಷ್ಟಕ್ಕೂ ಈ ಬದಲಾವಣೆಗೆ ಕಾರಣ ವಾಯು ಮಾಲಿನ್ಯ..! ಹೌದು. ಆಗ್ರಾದಲ್ಲಿ ವಿಶ್ವವಿಖ್ಯಾತ ತಾಜ್‍ಮಹಲ್‍ಗೆ ಒದಗಿದ ಸ್ಥಿತಿಯೇ ಈಗ ಮನಮೋಹಕ ಲೋಟಸ್ ಟೆಂಪಲ್‍ಗೂ ಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್) ನೇಮಿಸಿದ ಆಯುಕ್ತರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜಗತ್ತಿನ ಬಹಾಯಿ ಧರ್ಮದ 7 ದೇವಸ್ಥಾನಗಳ ಪೈಕಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಲೋಟಸ್ ಟೆಂಪಲ್ ಮುಂದಿನ ಸ್ಥಿತಿ ಬಗ್ಗೆ ಪ್ರವಾಸಿಗರಲ್ಲಿ ಆತಂಕ ಮೂಡಿದೆ.

ಅಂದ ಹಾಗೆ ಮಾರ್ಬಲ್‍ಗಳು ಈ ರೀತಿ ಬಣ್ಣ ಕಳೆದುಕೊಳ್ಳಲು ಕಾರಣ ವಾಹನಗಳ ಸಂಚಾರ ದಟ್ಟಣೆ. ಇದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಿಸಿದ ಆಯುಕ್ತರು ಸ್ವತಃ ಪರೀಕ್ಷೆಗೆ ಇಳಿದಾಗ ಹೊರಬಿದ್ದ ಸತ್ಯ. ದೇಗುಲದ ಸಮೀಪ ವಾಹನ ಓಡಾಟ ಹೆಚ್ಚಾಗಿದ್ದು, ಮಾರ್ಬಲ್ ಬಣ್ಣ ಕಳೆದುಕೊಳ್ಳಲು ಇದೇ ಕಾರಣ ಎನ್ನುವುದು ಬಹಾಯಿ ಹೌಸ್ ಪ್ರಾರ್ಥನಾ ಮಂದಿರದ ಆಡಳಿತ ಮಂಡಳಿ ಅಭಿಪ್ರಾಯ.

ಲೋಟಸ್ ಟೆಂಪಲ್ ವಿಶೇಷತೆ ಏನು..? : ಲೋಟಸ್ ಟೆಂಪಲ್ ಇರುವುದು ದೆಹಲಿಯ ಬಹಾಪುರದಲ್ಲಿ. ಇದು ಬಹಾಯಿ ಧರ್ಮದ ದೇವಸ್ಥಾನ. ಕಮಲದ ಸೊಬಗು ನೋಡಿಯೇ ಈ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿರುವುದು ಅಬ್ದುಲ್ ಬಹಾ. ವಾಸ್ತುಶಿಲ್ಪಿ ಫರಿಬೊರ್ಜ್ ಸಹ್ಬ. ಈ ಲೋಟಸ್ ಟೆಂಪಲ್ ಸೌಹಾರ್ದತೆ ಹಾಗೂ ಐಕ್ಯತೆಯ ಪ್ರತೀಕ. ಇದು ಯಾವುದೇ ಒಂದು ಧರ್ಮದ ಜನರಿಗೆ ಮೀಸಲಾಗಿಲ್ಲ. ಎಲ್ಲಾ ಧರ್ಮದ ಜನರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಕಮಲ ಹೂವಿನ ವಿನ್ಯಾಸದಲ್ಲಿ ರಚನೆಯಾಗಿರುವುದೇ ಈ ದೇಗುಲದ ವಿಶೇಷತೆ. ಸುಂದರ ವಿನ್ಯಾಸ, ವಾಸ್ತುಶಿಲ್ಪ ಈ ದೇಗುಲದ ಪ್ರಖ್ಯಾತಿಗೆ ಬಹು ಮುಖ್ಯ ಕಾರಣ. ವಿಶೇಷ ವಿನ್ಯಾಸದಿಂದಾಗಿಯೇ ಲೋಟಸ್ ಟೆಂಪಲ್ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಸುತ್ತಿದೆ.
ಅಂದ ಹಾಗೆ ಈ ದೇಗುಲ ಆರಂಭವಾಗಿದ್ದು 1986ರಲ್ಲಿ. 10 ವರ್ಷಗಳ ಪರಿಶ್ರಮದ ಫಲವಾಗಿ ಈ ದೇಗುಲ ತಲೆ ಎತ್ತಿದೆ. ಮರಳು, ಅಮೃತಶಿಲೆಯಿಂದ ಈ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. 800 ಕಾರ್ಮಿಕರು ಇದಕ್ಕಾಗಿ ಶ್ರಮಿಸಿದ್ದಾರೆ. ಅರ್ಧ ಅರಳಿರುವ ಕಮಲದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಕಮಲ ದೇಗುಲದಲ್ಲಿ 27 ದಳಗಳನ್ನು ನಿರ್ಮಿಸಲಾಗಿದೆ. ಒಂದರ ಹಿಂದೆ ಒಂದರಂತೆ ಮೂರು ಸಾಲುಗಳಲ್ಲಿ ದಳಗಳ ವಿನ್ಯಾಸಗೊಳಿಸಲಾಗಿದೆ. ದೇಗುಲಕ್ಕೆ ಒಟ್ಟು 9 ದ್ವಾರಗಳಿದ್ದು, ಎಲ್ಲಾ ದ್ವಾರಗಳೂ ಮುಖ್ಯ ಸಭಾಂಗಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಏಕಕಾಲಕ್ಕೆ 2,500 ಮಂದಿ ಕುಳಿತುಕೊಂಡು ಇಲ್ಲಿ ಪ್ರಾರ್ಥನೆ ಮಾಡಬಹುದಾಗಿದೆ. ಹೀಗಾಗಿಯೇ ಇಲ್ಲಿ ಸರ್ವಧರ್ಮೀಯರು ಪ್ರಾರ್ಥನೆ, ಧರ್ಮಗ್ರಂಥಗಳ ಪಠಣ ಮಾಡುತ್ತಾರೆ.

ಇಂಥಾ ಪ್ರಖ್ಯಾತ ಪ್ರಾರ್ಥನಾ ಮಂದಿರ ಈಗ ತನ್ನ ಅಸ್ಥಿತ್ವ ಕಳೆದುಕೊಳ್ಳುವ ಅಂಚಿನಲ್ಲಿದೆ. ವಾಯು ಮಾಲಿನ್ಯದ ಪರಿಣಾಮ ಲೋಟಸ್ ಟೆಂಪಲ್ ಮೇಲೆ ತಟ್ಟಿದೆ. ಕೆಲ ವರ್ಷಗಳ ಹಿಂದೆ ಪಳಪಳನೆ ಹೊಳೆಯುತ್ತಿದ್ದ ಪ್ರಾರ್ಥನಾ ಮಂದಿರದ ಮಾರ್ಬಲ್‍ಗಳು ಈಗ ಹಳದಿಯಾಗಿದೆ. ವಾಯು ಮಾಲಿನ್ಯ ಯಾವ ರೀತಿ ಪರಿಣಾಮ ಬೀರಿದೆಯೋ ಅದೇ ರೀತಿ ಶಬ್ದಮಾಲಿನ್ಯ ಕೂಡಾ ಪ್ರವಾಸಿಗರನ್ನು ಕಾಡುತ್ತಿದೆ. ವಾಹನಗಳ ಓಡಾಟದ ಸದ್ದು ಏಕಾಗ್ರತೆಯಿಂದ ಪ್ರಾರ್ಥನೆ ಮಾಡುವ ಮನಸ್ಥಿತಿಯನ್ನು ಕಸಿಯುತ್ತಿದೆ.

ಬಣ್ಣ ಮಾಸಿದ ಪ್ರೇಮಸೌಧ: ಪ್ರೀತಿಯ ದ್ಯೋತಕ ತಾಜ್‍ಮಹಲ್ ಬಣ್ಣ ಕೂಡಾ ಮಾಸುತ್ತಿದೆ. ಪ್ರವಾಸಿಗರ ಕಣ್ಮನ ಸೆಳೆಯುವ ತಾಜ್‍ಮಹಲ್ ಹಳದಿ ಬಣ್ಣಕ್ಕೆ ತಿರುಗಿದೆ. ಇದಕ್ಕೂ ಕೂಡಾ ವಾಯು ಮಾಲಿನ್ಯವೇ ಕಾರಣ. ತಾಜ್‍ಮಹಲ್ ಸುತ್ತಮುತ್ತ ಕಾರ್ಖಾನೆಗಳು ಹೆಚ್ಚಿರುವುದರಿಂದಾಗಿ ಪ್ರೇಮಸೌಧದ ಮಾರ್ಬಲ್‍ಗಳ ಬಣ್ಣ ಮಾಸಲು ಆರಂಭಿಸಿದೆ. ಹೀಗಾಗಿ ಪ್ರೇಮಸೌಧ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ.

ಬೆಂಗಳೂರು ನಿವಾಸಿಗಳೇ ಎಚ್ಚರ..! : ಸಿಲಿಕಾನ್ ಸಿಟಿ ಮಿತಿ ಮೀರಿ ಬೆಳೆದಿದೆ. ಇದು ಈಗ ಇಲ್ಲಿನ ನಿವಾಸಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ಡಬ್ಲ್ಯೂಎಚ್‍ಒ ಹೊಸ ರಾಷ್ಟ್ರೀಯ ವಾಯು ಗುಣಮಟ್ಟ ಸೂಚಿಯನ್ನು ಹೊರಡಿಸಿದೆ. ಇದರ ಪ್ರಕಾರ ರಾಜಧಾನಿ ದೆಹಲಿಗಿಂತ ಬೆಂಗಳೂರು ಅತ್ಯಂತ ಹೆಚ್ಚು ಮಾಲಿನ್ಯಯುತವಾಗಿದೆ ಎನ್ನುವ ಅಪಕೀರ್ತಿಗೆ ಪಾತ್ರವಾಗಿದೆ. ಇನ್ನು ಸರ್ಕಾರ ಹೊರಹಾಕಿರುವ ಇತ್ತೀಚಿನ ಮಾಹಿತಿಯಂತೆ 10 ನಗರಗಳಲ್ಲಿ 1.2 ಬಿಲಿಯನ್ ಜನರ ಮೇಲೆ ಮಾಲಿನ್ಯ ಪರಿಣಾಮ ಬೀರಿದೆ.

ಸಾವಿರಾರು ಕೈಗಾರಿಕೆಗಳ ಧೂಳು, ಕಟ್ಟಡಗಳ ನಿರ್ಮಾಣ, ವಾಹನಗಳು ಬಿಡುವ ಹೊಗೆ ಜನರು ಉಸಿರಾಡುವುದಕ್ಕೂ ಕಷ್ಟ ಪಡಬೇಕಾದ ಸ್ಥಿತಿಗೆ ತಂದು ನಿಲ್ಲಿಸಿದೆ. ಬೋಸ್ಟನ್‍ನ ಆರೋಗ್ಯ ಸಂಸ್ಥೆ ಹಾಗೂ ದೆಹಲಿಯ ಎನರ್ಜಿ ರಿಸೋರ್ಸ್ ಇನ್ಸ್‍ಸ್ಟಿಟ್ಯೂಟ್ ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನದ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ವರ್ಷ ವಾಯು ಮಾಲಿನ್ಯದಿಂದಾಗಿಯೇ 3 ಸಾವಿರ ಮಂದಿ ಚಿಕ್ಕ ಪ್ರಾಯದಲ್ಲೇ ಸಾವಿನ ಮನೆ ಸೇರುತ್ತಿದ್ದಾರೆ.

ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನದ ವರದಿಯೊಂದನ್ನು ಬಿಡುಗಡೆ ಮಾಡಿತ್ತು. 1,600 ನಗರಗಳ ಕುರಿತಾಗಿ ಅಧ್ಯಯನದಲ್ಲಿ ಚೀನಾ ರಾಜಧಾನಿ ಬೀಜಿಂಗ್‍ಗಿಂತಲೂ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ ಎನ್ನುವ ಸತ್ಯ ಬಯಲು ಮಾಡಿತ್ತು. ಇನ್ನು ವಿಶ್ವದ ಅತಿ ಹೆಚ್ಚು ಮಾಲಿನ್ಯದಿಂದ ಕೂಡಿದ 20 ನಗರಗಳ ಪಟ್ಟಿಯಲ್ಲಿ ಭಾರತದ 13 ನಗರ ಸೇರಿಕೊಂಡಿತ್ತು ಎನ್ನುವುದು ನಿಜಕ್ಕೂ ಚಿಂತಿಸಬೇಕಾದ ವಿಚಾರ. ಆದರೆ, ಗಾರ್ಡನ್ ಸಿಟಿ ಮಾಲಿನ್ಯದಲ್ಲಿ ದೆಹಲಿಯನ್ನು ಮೀರಿಸಿದೆ ಎನ್ನುವುದು ನಿಜಕ್ಕೂ ಆತಂಕಕಾರಿ ಅಂಶ.

ನಾವೇನು ಮಾಡಬೇಕು..? : ಮಾಲಿನ್ಯ ಎನ್ನುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಪರಿಸರ ಇನ್ನಷ್ಟು ಹಾಳಾಗದಂತೆ ಎಚ್ಚರ ವಹಿಸಬಹುದು. ಸರ್ಕಾರ ಕೈಗೊಳ್ಳುವ ಕ್ರಮಗಳಿಂದಷ್ಟೇ ಮಾಲಿನ್ಯ ನಿಯಂತ್ರಣ ಸಾಧ್ಯವಿಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಕೂಡಾ ಹೌದು. ಮಾಲಿನ್ಯದ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾಲಿನ್ಯ ತಡೆಗೆ ತನ್ನ ಜವಾಬ್ದಾರಿ ಏನು ಎನ್ನುವ ಅರಿತು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಇಲ್ಲದೆ ಹೋದರೆ ಮುಂದೊಂದು ದಿನ ಉಸಿರಾಡುವುದಕ್ಕೂ ಕಷ್ಟಪಡಬೇಕಾದೀತು.

CEX.IO Bitcoin Exchange

About sudina

Check Also

ಸೊನ್ನೆಯ ಇತಿಹಾಸ : ಅಧ್ಯಯನದಿಂದ ಗೊತ್ತಾಯ್ತು ಮತ್ತೊಂದು ಸತ್ಯ : 500 ವರ್ಷ ಮತ್ತೆ ಹಿಂದಕ್ಕೆ ಹೋಗುತ್ತದೆ ಹಿಸ್ಟರಿ

ನವದೆಹಲಿ : ಗಣಿತಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಸೊನ್ನೆಯನ್ನು ಕಂಡು ಹಿಡಿದದ್ದು ಭಾರತೀಯರು ಎಂಬ ಹೆಮ್ಮೆ ಎಲ್ಲರಿಗೂ ಇದೆ. ಈ …

Leave a Reply

Your email address will not be published. Required fields are marked *

error: Content is protected !!