Wednesday , March 20 2019
ಕೇಳ್ರಪ್ಪೋ ಕೇಳಿ
Home / Sandalwood / ರಜನಿಕಾಂತ್ ಗಿರಿಕನ್ಯೆ ಚಿತ್ರದ ವಿಲನ್ ಆಗಬೇಕಿತ್ತು!

ರಜನಿಕಾಂತ್ ಗಿರಿಕನ್ಯೆ ಚಿತ್ರದ ವಿಲನ್ ಆಗಬೇಕಿತ್ತು!

ಲೇಖನ : ವಿನಾಯಕರಾಮ್ ಕಲಗಾರು

ರಜನಿ ಇಂದು ಇಡೀ ವಿಶ್ವವನ್ನೇ ವ್ಯಾಪಿಸಿದ್ದಾರೆ. ಸೂಪರ್ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಇಡೀ ಜಗತ್ತು ಒಮ್ಮೆ ಜಗ್ಗಿ ಜಿಗಿಯುತ್ತದೆ. ಅಂಥ ರಜನಿಕಾಂತ್ ಒಂದು ಕಾಲದಲ್ಲಿ ಕನ್ನಡದ ಸಾಮಾನ್ಯ ನಟರಲ್ಲಿ ಸಾಮಾನ್ಯರಾಗಿದ್ದರು. ಬಸ್ ಕಂಡಕ್ಟರ್ ಆಗಿದ್ದುಕೊಂಡು ಅದೆಷ್ಟೋ ನಿರ್ಮಾಪಕರ-ನಿರ್ದೇಶಕರ ಮುಂದೆ ಹಲ್ಲುಗಿಂಜಿದ್ದರು. ಕೆಲಸಕ್ಕೆ ಕೈ ಕಟ್ಟಿ ನಿಂತಿದ್ದರು…

ಅಂಥ ರಜನಿ ಕುರಿತು, ಅವರು ಬೆಳೆದುಬಂದ ಹಾದಿಯ ಕುರಿತು ಉತ್ಖನನ ಮಾಡುತ್ತಾ ಹೋದಂತೇ ಒಂದಷ್ಟು ಕೌತುಕಗಳು ಕಟ್ಟಿಕೊಳ್ಳುತ್ತಾ ಹೋದವು. ಅಂಥ ಒಂದಷ್ಟರಲ್ಲಿ ಈ ಒಂದು ಇಂಟರೆಸ್ಟಿಂಗ್ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು. ಅಂಥದ್ದೊಂದು ವಿಚಾರ ನಡೆದಿತ್ತಾ ಎಂದು ಅನುಮಾನ ಮೂಡುವ ಮಟ್ಟಕ್ಕೆ-ಮಟ್ಟಿಗೆ ಯೋಚಿಸಬೇಕಾದ ಪ್ರಮೇಯ ಬಂದರೆ ಅದೂ ಒಂದು ರೀತಿಯಲ್ಲಿ ತಪ್ಪಿಲ್ಲ. ಆದರೆ ರಜನಿ ಕುರಿತ ಈ ಕೆಳಗಿನ ಸುದ್ದಿ ಓದಿ, ನೀವೊಮ್ಮೆ ಆಶ್ಚರ್ಯ ಸೂಚಕ ಚಿಹ್ನೆಯನ್ನು ನೆನಪಿಸಿಕೊಳ್ಳದಿದ್ದರೆ ಹೇಳಿ!

ಆಗತಾನೇ ರಜನಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿ ಗುರುತಿಸಿಕೊಂಡಿದ್ದರು. ಗುರುತರವಾದ ಸಕ್ಸಸ್ ಸಿಗದೇ ಇದ್ದರೂ ಒಂದು ಮಟ್ಟಕ್ಕೆ ರಜನಿ ನೋಟ್ ಆಗಿದ್ದರು. ನಡೆಯುವ ಸ್ಟೈಲು, ಮಾತನಾಡುವ ಶೈಲಿ ಎಲ್ಲವೂ ಡಿಫರೆಂಟ್ ಎನ್ನುವ ಹಂತಕ್ಕೆ ಚರ್ಚೆಯಾಗಿತ್ತು. ಆಗತಾನೇ ಕೆ.ಬಾಲಚಂದರ್ ಅವರ ಮೌನರಾಗಂಗಳ್ ಸಿನಿಮಾದಲ್ಲಿ ನಟಿಸಿಬಂದಿದ್ದರು.

ಆಗ ಡಾ.ರಾಜ್-ಜಯಮಾಲಾ ಅಭಿನಯದ ಗಿರಿಕನ್ಯೆ ಚಿತ್ರದ ಬಗ್ಗೆ, ಆ ಸಿನಿಮಾ ಮಾಡುವ ಬಗ್ಗೆ ಅಣ್ಣಾವ್ರ ಆಪ್ತ ವಲಯದಲ್ಲಿ ಚರ್ಚೆ ನಡೆದಿತ್ತು. ಒಂದು ಹಾಗೂ ಒಂದಷ್ಟು ಹಂತದ ಮಾತುಕತೆ ಮುಗಿದು, ಇನ್ನೇನು ಕೆಲವೇ ವಾರದಲ್ಲಿ ಸಿನಿಮಾ ಶುರುವಾಗಬೇಕು ಎನ್ನುವ ಲೆವೆಲ್ಲಿಗೆ ಮುಂದುವರೆಯಲಾಗಿತ್ತು. ದೊರೈ-ಭಗವಾನ್ ಚಿತ್ರವನ್ನು ನಿರ್ದೇಶಿಸಿದರೆ ಚೆನ್ನಾಗಿರುತ್ತದೆ ಎಂದು ಅದಾಗಲೇ ವರದಪ್ಪನವರು(ಡಾಕ್ಟರ್ ರಾಜ್‍ಕುಮಾರ್ ಅವರ ಸಹೋದರರು ಹಾಗೂ ಚಿತ್ರೋದ್ಯಮದ ಚಿಲುಮೆಯಂತಿದ್ದವರು!) ಡಿಸೈಡ್ ಮಾಡಿಯಾಗಿತ್ತು.

ಆ ಚಿತ್ರದಲ್ಲಿ ಒಂದು ವಿಲನ್ ರೋಲ್ ಇತ್ತು. ಅದು ತುಂಬಾ ಚಾಲೆಂಜಿಂಗ್ ಆಗಿರುವುದರಿಂದ ಅದನ್ನು ರಜನಿಕಾಂತ್; ಆಗಿನ್ನೂ ಕೋ ಆರ್ಟಿಸ್ಟ್-ಸೈಡ್ ಆರ್ಟಿಸ್ಟ್ ಅಷ್ಟೇ ಆಗಿದ್ದ ಅದೇ ರಜನಿ ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ರಜನಿಗೆ ಅದು ಹೇಗೋ ಆ ವಿಷಯ ಗೊತ್ತಾಗಿತ್ತು. ಗೊತ್ತಾಗಿ ಖುಷಿಪಡುವ ಹೊತ್ತಿಗಾಗಲೇ ಗಿರಿಕನ್ಯೆ ತಂಡದವರಿಂದ ವಿಷಯ ಹೀಗೀಗೆ, ಹೀಗೀಗೆ.. ನೀವೇ ಆ ಪಾತ್ರ ಮಾಡಬೇಕು, ವಿಲನ್ ಪಾತ್ರ ಎಂಬ ವಿಚಾರ ರಜನಿಯವರನ್ನೂ ತಲುಪಿತು.

ಡಾಕ್ಟರ್ ರಾಜ್ ಜೊತೆ ನಟಿಸುವುದು, ಜೊತೆಗೆ ಮೇನ್ ವಿಲನ್ ಪಾತ್ರ ಬೇರೆ! ಸಕ್ಸಸ್ ಕಟ್ಟಿಟ್ಟ ಬುತ್ತಿ. ರಜನಿ ಕನಸಿನ ಬುತ್ತಿ ಬಿಚ್ಚುತ್ತಾ ಹೋಯಿತು. ಇನ್ನೇನು ಶೂಟಿಂಗ್ ದಿನ ಸಮೀಪಿಸುತ್ತಿದೆ ಎನ್ನುವ ಹೊತ್ತಿಗೆ ಶಿವಾಜಿರಾವ್ ಗಾಯಕವಾಡ್ ಮೊಗದಲ್ಲಿ ಮಿಂಚಿನ ಸಂಚಾರ ಶುರುವಾಯಿತು. ಆಗ ರಜನಿ ಸ್ಥಾನದಲ್ಲಿ ನಾವೋ, ನೀವೋ ಯಾರೇ ಇದ್ದಿದ್ದರೂ ಅದೇ ಫೀಲ್ ಬರುತ್ತಿತ್ತು ಬಿಡಿ!

ಆದರೆ ಅಲ್ಲಿ ಆಗಿದ್ದೇ ಬೇರೆ. ಯಾವ ಗಿರಿಕನ್ಯೆ ಚಿತ್ರದ ವಿಲನ್ ಪಾತ್ರ ಮಾಡಬೇಕೆಂದು ರಜನಿ ತುಂಬಾ ಆಸೆಪಟ್ಟಿದ್ದರೋ ಆ ಪಾತ್ರ ಅವರ ಬದಲಾಗಿ ಬೇರೊಬ್ಬರ ಪಾಲಾಯಿತು. ಕಾರಣಾಂತರಗಳಿಂದ ಆ ಪಾತ್ರವನ್ನು ತೂಗುದೀಪ ಶ್ರೀನಿವಾಸ್ ಅವರು ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ನಿರ್ದೇಶಕದ್ವಯರಾದ ದೊರೈ-ಭಗವಾನ್ ರಜನಿ ಕಿವಿಗೆ ಮುಟ್ಟಿಸಿ ಸುಮ್ಮನಾಗಿಬಿಟ್ಟರು.

ಅಲ್ಲಿ ಏನು ನಡೆಯಿತೋ ಗೊತ್ತಿಲ್ಲ. ಎಲ್ಲವೂ ಓಕೆ ಆದ ಮೇಲೆ ರಜನಿ ಮಾಡಬೇಕಿದ್ದ ಪಾತ್ರ ಬೇರೆಯವರ ಪಾಲಾಯಿತು. ಹಾಗಂತ ರಜನಿ ಖಂಡಿತ ಬೇಸರ ಮಾಡಿಕೊಳ್ಳಲಿಲ್ಲ. ಯಾರ ಮೇಲೂ ಕೂಗಾಡಲಿಲ್ಲ. ತಮ್ಮ ಪಾಡಿಗೆ ತಾವಿದ್ದುಬಿಟ್ಟರು. ಒಂದು ಅಪರೂಪದ ಪಾತ್ರ ಮಿಸ್ ಆಯಿತಲ್ಲಾ ಎಂದು ಹೆಚ್ಚೆಂದರೆ ಒಂದು ಅಥವಾ ಎರಡು ದಿನ ಹಿಡಿಗಾತ್ರದಷ್ಟು ಬೇಸರ ಮಾಡಿಕೊಂಡಿದ್ದರೆ ಹೆಚ್ಚು!

ಗಿರಿಕನ್ಯೆ ರಿಲೀಸ್ ಆಯಿತು. ಚೆನ್ನಾಗಿಯೇ ಇತ್ತು. ಸೂಪರ್ ಹಿಟ್ ಕೂಡ ಆಯಿತು. ಅತ್ತ ಹಾಗಾದರೆ, ಇತ್ತ ರಜನಿ ಕೆಲವೇ ತಿಂಗಳು/ವರ್ಷದ ಗ್ಯಾಪ್‍ನಲ್ಲಿ ಸೂಪರ್ ಸ್ಟಾರ್ ಪಟ್ಟ ಏರಿ ಕೂತುಬಿಟ್ಟರು. ಸಾಲು ಸಾಲು ಹಿಟ್‍ಗಳು..ರಜನಿ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಕನ್ನಡದ ಹುಡುಗ ತಮಿಳಿನಲ್ಲಿ ತನ್ನದೇ ಆದ ಹೆಸರು-ಚಾಪು ಮೂಡಿಸಿಬಿಟ್ಟ. ಅಭಿಮಾನಿಗಳಷ್ಟೇ ಅಲ್ಲ, ಆರಾಧಕರು, ಪೂಜೆ ಮಾಡುವ ಪರಮ ಪವಿತ್ರ ಫ್ಯಾನ್‍ಗಳು ಹುಟ್ಟಿಕೊಂಡರು. ರಜನಿ ಚಿತ್ರೋದ್ಯಮದ ಭಾಷಾ-ಬಾದಶಹ ಎಲ್ಲವೂ ಆಗಿ ಬೆಳೆದುನಿಂತರು!

ಹೀಗೇ ಕಾಲ ಗತಿಸಿತು… ಜೀವನಚಕ್ರ ಉರುಳಿತು… ಭಗವಾನ್ ಅವರ ಸಹೋದ್ಯೋಗಿ-ಸಹಪಾಠಿ ದೊರೈ ಅವರು ವಿಧಿವಶರಾದರು. ಅತ್ತ ರಜನಿ ಹಂತಹಂತವಾಗಿ ಇಡೀ ವಿಶ್ವವನ್ನೇ ವ್ಯಾಪಿಸುತ್ತಾ ಹೋದರು.

ಮುಂದೊಂದು ದಿನ ಇದೇ ಭಗವಾನ್ ಅವರು ತಾವೊಂದು ಸಿನಿಮಾ ಮಾಡುವುದಾಗಿಯೂ, ಡೇಟ್ಸ್ ಬೇಕು ಎಂಬುದಾಗಿಯೂ ಕೇಳಿಕೊಂಡು ರಜನಿ ಮನೆ ಬಾಗಿಲು ಬಡಿದರು. ರಜನಿ ಮನೆಗೆ ಬಂದ ಅತಿಥಿಯನ್ನು ಪ್ರೀತಿಯಿಂದ ಮಾತನಾಡಿಸಿದರು. ಆದರೆ ಡೇಟ್ ಕೊಡುವ ವಿಚಾರದಲ್ಲಿ ಮಾತ್ರ “ನೋಡೋಣ..ಖಂಡಿತಾ ಮಾಡೋಣ..” ಎಂದಷ್ಟೇ ಹೇಳಿಕಳಿಸಿದರು…

ಇತ್ತ ಪಾರ್ವತಮ್ಮನವರು ಹಾಗೂ ಡಾ.ರಾಜ್‍ಕುಮಾರ್ ಅವರು ರಜನಿಯ ಗೆಲುವು-ಸಾಹಸ ಕಂಡು ಹೆಮ್ಮೆಯ ಮಾತುಗಳನ್ನಾಡಿದರು. ಕನ್ನಡದ ಹುಡುಗನಿಗೆ ಸಿಕ್ಕ ಗೆಲುವು ನೋಡಿ ಖುಷಿ ವ್ಯಕ್ತಪಡಿಸಿದರು. ಮುಂದೊಂದು ದಿನ ಅದೇ ರಾಜ್ ಪುತ್ರ ಪುನೀತ್ ರಾಜ್‍ಕುಮಾರ್ ಅಭಿನಯದ ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭಕ್ಕೆ ಅದೇ ರಜನಿಯವರನ್ನು ಆಹ್ವಾನಿಸಿದರು. ಸನ್ಮಾನಿಸಿದರು. ಸತ್ಕರಿಸಿದರು. ಸಂಭ್ರಮಿಸಿದರು!

ಅದು ರಾಜ್ ಅವರಿಗಿದ್ದ ಸರಳತೆ ಹಾಗೂ ಎಲ್ಲೋ ಒಂದು ಕಡೆ ಯಾರಿಂದಲೋ ಗಿರಿಕನ್ಯೆ ಚಿತ್ರದ ಆ ಪಾತ್ರ ರಜನಿಕಾಂತ್ ಅವರಿಗೆ ಮಿಸ್ ಆಯಿತಲ್ಲಾ ಎಂಬ ನೋವು ಹಾಗೂ ಕಾಳಜಿಯ ಕೊನೇಹನಿ…!

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!