Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood / ಶಾರೂಖ್​, ಅನುಷ್ಕಾ ಅಭಿನಯದ ‘ಜಬ್​ ಹ್ಯಾರಿ ಮೆಟ್​ ಸೇಜಲ್​’ ಹೇಗಿದೆ…?

ಶಾರೂಖ್​, ಅನುಷ್ಕಾ ಅಭಿನಯದ ‘ಜಬ್​ ಹ್ಯಾರಿ ಮೆಟ್​ ಸೇಜಲ್​’ ಹೇಗಿದೆ…?

ಮುಂಬೈ : ಕಿಂಗ್ ಖಾನ್ ಶಾರೂಖ್​ ಮತ್ತು ಅನುಷ್ಕಾ ಶರ್ಮಾ ಅಭಿನಯದ ಜಬ್ ಹ್ಯಾರಿ ಮೆಟ್​ ಸೇಜಲ್​ ಚಿತ್ರಕ್ಕೆ ಜನರಿಂದ ಆರಂಭಿಕ ದಿನವೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಕ್ಕೆ ಸಿಕ್ಕ ಓಪನಿಂಗ್​ ಡಲ್​ ಆಗಿದ್ದು, ಕತೆಯೂ ಬಂಡಲ್ ಆಗಿದೆ ಎಂದು ಜನ ಮಾತನಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಯಾಣದಿಂದಲೇ ಪ್ರೇಕ್ಷಕರು ಪ್ರಯಾಸಪಡುತ್ತಾರೆ ಎಂಬಂತಹ ಮಾತುಗಳು ವಿಮರ್ಶಾಕಾರರಿಂದ ಕೇಳಿ ಬಂದಿದೆ…

ಜಬ್​ ಹ್ಯಾರಿ ಮೆಟ್​ ಸೇಜಲ್​ ಬಾಲಿವುಡ್​ನ ಕಿಂಗ್ ಅಫ್​ ರೋಮ್ಯಾನ್ಸ್​ ಶಾರೂಖ್​ ಖಾನ್ ಮತ್ತು ಅನುಷ್ಕಾ ಶರ್ಮಾ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ಚಿತ್ರ… ಈ ಚಿತ್ರದ ಮೂಲಕ ಮೂರನೇ ಬಾರಿಗೆ ಈ ಜೋಡಿ ಒಂದಾಗಿತ್ತು… ಈ ಹಿಂದೆ 2008ರಲ್ಲಿ ರಬ್​ ನೇ ಬನಾದಿ ಜೋಡಿ, 2012ರಲ್ಲಿ ಜಬ್​ ತಕ್​ ಹೇ ಜಾನ್​ ಚಿತ್ರದಲ್ಲಿ ಶಾರೂಖ್ ಮತ್ತು ಅನುಷ್ಕಾ ಮೋಡಿ ಮಾಡಿದ್ದರು… ಈ ಎರಡೂ ಚಿತ್ರಗಳು ಸೂಪರ್ ಹಿಟ್​ ಆಗಿದ್ದವು…

ಇನ್ನು, ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದ ವಿಚಾರಕ್ಕೆ ಬರುವುದಾದರೆ ಪ್ರಯಾಣ, ಪ್ರವಾಸ, ಪ್ರೀತಿಗೆ ಹೆಚ್ಚು ಆದ್ಯತೆ ನೀಡುವ ಇಮ್ತಿಯಾಜ್ ಅಲಿ ಈ ಚಿತ್ರದ ಡೈರೆಕ್ಟರ್​… ಆಗಸ್ಟ್​ 4 ರಂದು ವಿಶ್ವದ 3000 ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಹ್ಯಾರಿ ಮತ್ತು ಸೇಜಲ್​ ಪ್ರೇಮಕತೆ ಪ್ರದರ್ಶನವಾಗುತ್ತಿದೆ…

ಹಳಿ ತಪ್ಪಿದ್ದ ಸಿನಿ ಜೀವನವನ್ನು ಮತ್ತೆ ಸರಿದಾರಿಗೆ ತರುವ ಯೋಚನೆ ಕೂಡಾ ಶಾರೂಖ್​ಗೆ ಇತ್ತು. ಹೀಗಾಗಿ, ಈ ಚಿತ್ರದ ಮೇಲೆ ಶಾರೂಖ್​ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೂ ಇದೆ… ಜೊತೆಗೆ, ಶಾರೂಖ್​ ಕೂಡಾ ಒಂದಷ್ಟು ಭರವಸೆಯನ್ನು ಮೂಡಿಸಿದ್ದರು. ಆದರೆ, ಈ ನಿರೀಕ್ಷೆ, ಭರವಸೆಗಳು ಒಂದೊಂದೇ ಕರಗುತ್ತವಾ ಎಂಬ ಆತಂಕ ಸ್ವತಃ ಶಾರೂಖ್​ಗೆ ಶುರುವಾದಂತಿದೆ. ಯಾಕೆಂದರೆ, ಜಬ್​ ಹ್ಯಾರಿ ಮೆಟ್​ ಸೇಜಲ್​ ಚಿತ್ರಕ್ಕೆ ಆರಂಭದ ದಿನವೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಕೇಂದ್ರಗಳಲ್ಲಿ ಚಿತ್ರದ ಓಪನಿಂಗ್​ ಸಖತ್​ ಡಲ್​ ಆಗಿಯೇ ಇತ್ತು…

ಈ ಚಿತ್ರಕ್ಕೆ ಈ ರೀತಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಲು ಕಾರಣ ಚಿತ್ರದ ಕತೆಯೂ ಆಗಬಹುದು… ಯಾಕೆಂದರೆ, ಬಹುತೇಕ ವಿಮರ್ಶಕರ ಪ್ರಕಾರ ಜಬ್​ ಹ್ಯಾರಿ ಮೆಟ್​ ಸೇಜಲ್​ ಚಿತ್ರದ ಕತೆಯಲ್ಲಿ ಗಟ್ಟಿತನ ಇಲ್ಲ. ಡೈರೆಕ್ಟರ್​ ಇಮ್ತಿಯಾಜ್ ಅಲಿ ತಮ್ಮ ಹಳೇ ಮಾದರಿಯಲ್ಲೇ ಚಿತ್ರ ಮಾಡಿರುವುದು ಇಲ್ಲೂ ಕಂಡು ಬಂದಿದೆ. ಇಮ್ತಿಯಾಜ್ ಚಿತ್ರ ಅಂದರೆ ಅಲ್ಲಿ ಪ್ರವಾಸ ಮತ್ತು ಪ್ರಯಾಣಕ್ಕೆ ಹೆಚ್ಚು ಆದ್ಯತೆ. ಈ ಪ್ರಯಾಣ ಮತ್ತು ಪ್ರವಾಸದಿಂದ ಕತೆ ಹೇಳುವ ಇಮ್ತಿಯಾಜ್​ ಒಮ್ಮೊಮ್ಮೆ ಈ ಪ್ರಯಾಣದಿಂದ ಪ್ರೇಕ್ಷಕರನ್ನು ತುಂಬಾ ಪ್ರಯಾಸಕ್ಕೆ ದೂಡುತ್ತಾರೆ. ಜಬ್​ ಹ್ಯಾರಿ ಮೆಟ್​ ಸೇಜಲ್​ನಲ್ಲೂ ಅದೇ ಆಗಿದೆ…

ಇಮ್ತಿಯಾಜ್​ ಅವರ ಜಬ್​ ವಿ ಮೆಟ್​, ಲವ್​ ಆಜ್​ ಕಲ್​, ಹೈವೇ, ತಮಾಷಾ ಚಿತ್ರಗಳಲ್ಲಿ ಇದ್ದಂತೆಯೇ ಇಲ್ಲಿಯೂ ಇರುವುದು ಬರೀ ಪ್ರಯಾಣವೇ… ಈ ಪ್ರಯಾಣದ ನಡುವೆ ಬರುವ ಪ್ರೀತಿ ಆಪ್ತವಾಗುವುದಕ್ಕಿಂತ ಹೆಚ್ಚು ಕಾಟ ಕೊಡುವುದೇ ಅಧಿಕ…

ಈ ಚಿತ್ರದಲ್ಲಿ ಶಾರೂಖ್ ನಿರ್ವಹಿಸಿದ್ದು ಹ್ಯಾರಿ ಎಂಬ ಟೂರಿಸ್ಟ್​ ಗೈಡ್​ನ ಪಾತ್ರ. ಅನುಷ್ಕಾರದ್ದು ಗುಜರಾತಿ ಹುಡುಗಿ ಸೇಜಲ್​ ಪಾತ್ರ… ನಿಶ್ಚಿತಾರ್ಥವಾಗಿದ್ದ ಹುಡುಗಿ ಯುರೋಪ್​ಗೆ ಬಂದ ಸಂದರ್ಭದಲ್ಲಿ ನಿಶ್ಚಿತಾರ್ಥದ ಉಂಗುರ ಕಳೆದುಕೊಳ್ಳುತ್ತಾಳೆ. ಈ ಉಂಗುರ ನಮ್ಮ ಮನೆತನದ ಪ್ರಶ್ನೆ ಎಂದು ಮದುವೆ ನಿಶ್ಚಯವಾದ ಹುಡುಗ ಹೇಳಿದ ಮಾತನ್ನು ಕೇಳಿದ ಸೇಜಲ್​​ ಉಂಗುರ ಹುಡುಕಾಟಕ್ಕೆ ಶುರು ಮಾಡುತ್ತಾಳೆ. ಈ ವೇಳೆ, ಈಕೆಗೆ ಜೊತೆಯಾಗುವುದು ಟೂರಿಸ್ಟ್​ ಗೈಡ್​ ಹ್ಯಾರಿ… ಹೀಗೆ ಸಾಗುವ ಕತೆ ಬಳಿಕ ಹ್ಯಾರಿ ಸೇಜಲ್​ ಪ್ರೇಮದ ಕತೆಯಾಗಿ ಮುಂದುವರಿಯುತ್ತದೆ… ಈ ಪ್ರೇಮಾಂಕುರದ ನಂತರ ಕತೆಗಳನ್ನೇ ಪೋಣಿಸಿ ಈ ಚಿತ್ರ ಮಾಡಲಾಗಿದೆ…

ಪಾತ್ರ ಪೋಷಣೆಯಲ್ಲಿ ಶಾರೂಖ್ ಮತ್ತು ಅನುಷ್ಕಾ ಇಷ್ಟವಾದರೂ ಜಾಳುಜಾಳು ಕತೆಯಿಂದ ಚಿತ್ರ ಅಷ್ಟಾಗಿ ಆಪ್ತವಾಗುವುದೇ ಇಲ್ಲ. ಈ ಚಿತ್ರ ಬಿಡುಗಡೆಗೆ ಮುಂಚೆ ಒಳ್ಳೆಯ ರೆಸ್ಪಾನ್ಸ್​ ನಿರೀಕ್ಷೆ ಮಾಡಲಾಗಿತ್ತು. ಆದರೆ, ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಕ್ಕಿಂತಲೂ ಕೊಂಚ ಕಡಿಮೆಯಾಗಿಯೇ ಮೊದಲ ದಿನ ಈ ಚಿತ್ರ ಕಲೆಕ್ಷನ್ ಮಾಡಿದೆ. ಇದುವರೆಗೆ ಶಾರೂಖ್ ಖಾನ್​ ಚಿತ್ರ ಮೊದಲ ದಿನ ಮಾಡಿದ ಅತೀ ಕಡಿಮೆ ಕಲೆಕ್ಷನ್​​ನನ್ನು ಜಬ್​ ಹ್ಯಾರಿ ಮೆಟ್​ ಸೇಜಲ್​ ಚಿತ್ರ ದಾಖಲಿಸಿದೆ…! ಈ ಚಿತ್ರ ಮೊದಲ ದಿನದ ಗಳಿಕೆ ಸುಮಾರು 16.5 ಕೋಟಿ… ಆದರೆ, ಇದೇ ಶಾರೂಖ್ ಅವರ ರಾಯಿಸ್ ಚಿತ್ರ ಮೊದಲ ದಿನ 20 ಕೋಟಿಯಷ್ಟು ಗಳಿಸಿತ್ತು…

ಕನಿಷ್ಟ ಏಳು ವರ್ಷದಿಂದ ಶಾರೂಖ್​ ದೊಡ್ಡ ಹಿಟ್​ಗಾಗಿ ಕಾಯುತ್ತಿದ್ದಾರೆ. ಶಾರೂಖ್ ನಿರೀಕ್ಷೆ ಮೂಡಿಸಿದಂತಹ ಯಾವೊಂದು ಚಿತ್ರವೂ ಅಷ್ಟು ದೊಡ್ಡ ಸಾಧನೆ ಮಾಡಿಲ್ಲ ಎಂಬುದು ನಿಜ. ಈ ಹಿಂದೆ ಫನ್​, ರಾಯಿಸ್​, ದಿಲ್​ವಾಲೆ ಹೀಗೆ ಸಾಕಷ್ಟು ಶಾರೂಖ್​ ಚಿತ್ರಗಳು ನಿರೀಕ್ಷೆ ಮೂಡಿಸಿ ನಿರಾಸೆ ತಂದಿದ್ದವು. ಇನ್ನು, ಮಾರುಕಟ್ಟೆ ತಜ್ಞರು ಚಿತ್ರದ ಬಗ್ಗೆ ಇನ್ನೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವೀಕೆಂಡ್ ಮತ್ತು ಸೋಮವಾರ ಇರುವ ಸಾರ್ವಜನಿಕ ರಜೆಯ ಕಾರಣದಿಂದ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಿಗೆಯಾಗಬಹುದು ಎಂಬುದು ಇವರೆಲ್ಲರ ನಿರೀಕ್ಷೆ… ಶಾರೂಖ್​ ಮನಸ್ಸಿನಲ್ಲೂ ಇದೇ ನಿರೀಕ್ಷೆ ಇದೆ… ಅಂತಿಮವಾಗಿ ಏನಾಗುತ್ತದೆ ಎಂಬುದು ಪ್ರೇಕ್ಷಕರ ನಿರ್ಧಾರದ ಮೇಲೆ ನಿಂತಿದೆ…

About sudina

Check Also

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ …

Leave a Reply

Your email address will not be published. Required fields are marked *

error: Content is protected !!