Wednesday , January 23 2019
ಕೇಳ್ರಪ್ಪೋ ಕೇಳಿ
Home / Sandalwood / ಕುರುಕ್ಷೇತ್ರ ಚಿತ್ರಕ್ಕೆ ಅದ್ಧೂರಿ ಮುಹೂರ್ತ : ಕ್ಲಾಪ್ ಮಾಡಿ ಶುಭಕೋರಿದ ಸಿಎಂ

ಕುರುಕ್ಷೇತ್ರ ಚಿತ್ರಕ್ಕೆ ಅದ್ಧೂರಿ ಮುಹೂರ್ತ : ಕ್ಲಾಪ್ ಮಾಡಿ ಶುಭಕೋರಿದ ಸಿಎಂ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್​​​ ದರ್ಶನ್​​ 50ನೇ ಚಿತ್ರದ ಟೇಕಾಫ್​ ಆಗಿದೆ… ಪೌರಾಣಿಕ ಚಿತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು, ದುರ್ಯೋಧನನಾಗಿ ಮಿಂಚಲಿದ್ದಾರೆ. ಎಲ್ಲಾ ಅಂದ್ಕೊಂಡಂತೆ ಆದರೆ, ಸಂಕ್ರಾಂತಿ ವೇಳೆಗೆ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ… ಈ ಬಿಗ್​ಬಜೆಟ್​ ಚಿತ್ರದ ಮುಹೂರ್ತ ಸಮಾರಂಭವೇ ಎಲ್ಲರನ್ನು ಬೆರಗುಗೊಳಿಸಿದೆ…

ಭಾನುವಾರ ಮುನಿರತ್ನ ಕುರುಕ್ಷೇತ್ರ ಸಿನೆಮಾದ ಮುಹೂರ್ತ ಸಮಾರಂಭ ನಡೆದಿದೆ.  ಯಶವಂತ ಪುರ ಸಮೀಪದ ಡಾ.ಪ್ರಭಾಕರ್​ ಕೋರೆ ಕನ್ವೆಷನಲ್​ ಹಾಲ್​ನಲ್ಲಿ ಅದ್ದೂರಿ ಮುಹೂರ್ತ ಸಮಾರಂಭ ನಡೆದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಅದ್ಧೂರಿ ಚಿತ್ರಕ್ಕೆ ಕ್ಲಾಪ್​​​​ ಮಾಡಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ…

ಕುರುಕ್ಷೇತ್ರ ಪೌರಾಣಿಕ ಚಿತ್ರ… ಬಹಳ ವರ್ಷಗಳ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಪೌರಾಣಿಕ ಚಿತ್ರವೊಂದು ಸೆಟ್ಟೇರುತ್ತದೆ… ಪಕ್ಕಾ ಕಮರ್ಷಿಯಲ್​ ಚಿತ್ರಗಳ ನಡುವೆ ಸೆಟ್ಟೇರಿರುವ ಈ ಕುರುಕ್ಷೇತ್ರ ಈಗಾಗಲೇ ಕುತೂಹಲ ಮತ್ತು ನಿರೀಕ್ಷೆಯನ್ನು ಇಮ್ಮಡಿಯಾಗಿಸಿದೆ… ಈ ಚಿತ್ರದ ನಿರ್ಮಾಪಕ ಶಾಸಕ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ. ಬಹಳ ಆಸೆ ಮತ್ತು ನಿರೀಕ್ಷೆ ಇಟ್ಟುಕೊಂಡು ಇವರು ಚಿತ್ರ ಮಾಡಿದ್ದಾರೆ… ಕನ್ನಡದ ಮಟ್ಟಿಗೆ ಇದೊಂದು ಬಹುತಾರಾಗಣ ಇರುವ ಬಿಗ್​ ಬಜೆಟ್​ ಮೂವಿ… ಐದು ವರ್ಷಗಳ ಬಳಿಕ ಮುನಿರತ್ನ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮುನಿರತ್ನ ಈ ಹಿಂದೆ ನಿರ್ಮಿಸಿದ್ದ ಕಡೆಯ ಚಿತ್ರ ಕಠಾರಿವೀರ ಸುರಸುಂದರಾಂಗಿ… ಇದೀಗ, ಲಾಂಗ್ ಗ್ಯಾಪ್​ನ ಬಳಿಕ ಮುನಿರತ್ನ ಅದ್ಧೂರಿ ಚಿತ್ರದೊಂದಿಗೆ ಮತ್ತೆ ಬಂದಿದ್ದಾರೆ…

ಇಲ್ಲಿ ಮತ್ತೊಂದು ವಿಶೇಷ ಇದೆ. ದರ್ಶನ್​ ಮೊದಲ ಸಿನೆಮಾಕ್ಕೆ ಕ್ಲಾಪ್ ಮಾಡಿದವರು ಇದೇ ಮುನಿರತ್ನ, ಇದೀಗ ಅದೇ ದರ್ಶನ್​ ಅವರ 50ನೇ ಚಿತ್ರವನ್ನು ಪ್ರೊಡ್ಯೂಸ್​ ಮಾಡುತ್ತಿರುವವರು ಕೂಡಾ ಇದೇ ಮುನಿರತ್ನ… ಕಾಕತಾಳೀಯವಾದರೂ ಈ ಸಂಗತಿ ಇಲ್ಲಿ ಸಂಭ್ರಮವನ್ನು ಇಮ್ಮಡಿಯಾಗಿಸಿದ್ದು ಮತ್ತು ಭಾವನಾತ್ಮಕವಾಗಿ ಬಹಳಷ್ಟು ಹತ್ತಿರವಾಗಿದ್ದು ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ…

ಭಾನುವಾರ ನಡೆದ ಈ ಸಮಾರಂಭಕ್ಕೆ ರಾಜ್ಯದ ಗಣ್ಯಾತಿಗಣ್ಯರೆಲ್ಲಾ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿ, ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್​, ಹಿರಿಯ ನಟ ಅಂಬರೀಷ್​, ಫಿಲಂ ಚೇಂಭರ್ ಅಧ್ಯಕ್ಷ ಸಾರಾ.ಗೋವಿಂದು, ರಾಕ್​ಲೈನ್ ವೆಂಕಟೇಶ್​, ರಾಮು, ಅರ್ಜುನ್​ ಸರ್ಜಾ, ರವಿಶಂಕರ್​, ರವಿಚಂದ್ರನ್​, ದರ್ಶನ್​ ಸೇರಿದಂತೆ ಹಲವರು ಈ ಸಮಾರಂಭಕ್ಕೆ ಸಾಕ್ಷಿಯಾದರು… ಇವರೆಲ್ಲಾ ಈ ಸಂಭ್ರಮದಲ್ಲಿ ಮತ್ತೊಂದು ಭಾಗವಾಗಿದ್ದರು…

ಈ ಹಿಂದೆ ದರ್ಶನ್​ ಸ್ವಾತಂತ್ರ್ಯ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಾಗಿ ದರ್ಶನ್​ ಮಿಂಚಿದ್ದರು… ಸಂಗೊಳ್ಳಿ ರಾಯಣ್ಣ ಚಿತ್ರವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು… ಇಷ್ಟು ದಿನ ದರ್ಶನ್​ ಮಾಡಿದ್ದ ಚಿತ್ರಗಳಿಗಿಂತ ಸಂಪೂರ್ಣ ಡಿಫ್ರೆಂಟ್​ ಆಗಿದ್ದ ಚಿತ್ರ ಸಂಗೋಳ್ಳಿ ರಾಯಣ್ಣ ಆಗಿತ್ತು… ಇದೀಗ ಕುರುಕ್ಷೇತ್ರ ಚಿತ್ರದ ಮೂಲಕ ಮತ್ತೆ ಅದೇ ರೀತಿಯ ವಿಭಿನ್ನ ಚಿತ್ರದ ಮೂಲಕ ದರ್ಶನ್​ ಮಿಂಚಲಿದ್ದಾರೆ… ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದ ನಾಗಣ್ಣ ಅವರೇ ಈ ಚಿತ್ರಕ್ಕೂ ಆಕ್ಷನ್​ ಕಟ್​ ಹೇಳುತ್ತಿದ್ದಾರೆ.

ಮೊದಲೇ ಹೇಳಿದ ಹಾಗೆ ಕುರುಕ್ಷೇತ್ರ ಮಹಾಭಾರತದ ಪ್ರಮುಖ ಭಾಗ. ಮುನಿರತ್ನ ಕುರುಕ್ಷೇತ್ರ ಎಂದು ಚಿತ್ರಕ್ಕೆ ಹೆಸರಿಟ್ಟಿರುವುದರಿಂದ ಇದು ಮಹಾಭಾರತದ ಕಥೆಯೋ ಅಥವಾ ಬೇರೆ ಕಥೆಯೋ ಎಂಬ ಗೊಂದಲವೂ ಇತ್ತು. ಆದರೆ, ಈ ರೀತಿಯ ಗೊಂದಲ ಬೇಡ. ಇದೊಂದು ಮಹಾಭಾರತದ ಕತೆಯೇ ಎಂದು ನಿರ್ಮಾಪಕ ಮುನಿರತ್ನ ಸ್ಪಷ್ಟವಾಗಿ ಹೇಳಿದ್ದಾರೆ…

ಕುರುಕ್ಷೇತ್ರದಲ್ಲಿ ದರ್ಶನ್​ ನಿರ್ವಹಿಸುವ ಪಾತ್ರ ದುರ್ಯೋಧನನದ್ದು… ಇನ್ನು, ಶ್ರೀಕೃಷ್ಣದ ಪಾತ್ರದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಮಿಂಚಲಿದ್ದಾರೆ… ಭೀಷ್ಮಾಚಾರ್ಯರಾಗಿ ಅಂಬರೀಷ್​​, ಕರ್ಣನಾಗಿ ಅರ್ಜುನ್ ಸರ್ಜಾ, ಧೃತರಾಷ್ಟ್ರನಾಗಿ ಶ್ರೀನಾಥ್​​, ದ್ರೋಣನ ಪಾತ್ರದಲ್ಲಿ ಶ್ರೀನಿವಾಸಮೂರ್ತಿ, ಶಕುನಿಯಾಗಿ ರವಿಶಂಕರ್​, ದ್ರೌಪದಿಯಾಗಿ ಸ್ನೇಹಾ, ನರ್ತಕಿಯಾಗಿ ಹರಿಪ್ರಿಯಾ, ರೆಜಿನಾ ಕಾಣಿಸಿಕೊಂಡಿದ್ದಾರೆ… ಮತ್ತೋರ್ವ ನಟ ಶಶಿಕುಮಾರ್​ ಧರ್ಮರಾಯನ ಗೆಟಪ್​ನಲ್ಲಿ ಕಾಣಿಸಿಕೊಂಡರೆ, ಅಭಿಮನ್ಯುವಿನ ಪಾತ್ರದಲ್ಲಿ ಮಿಂಚಲಿರುವವರು ನಿಖಿಲ್​ ಕುಮಾರ್​… ಈ ಚಿತ್ರದ ವೆಚ್ಚ ಸುಮಾರು 60 ಕೋಟಿ ರೂಪಾಯಿ… ಮಲ್ಟಿ ಸ್ಟಾರ್​ಗಳು ಇರುವುದು ಈ ಚಿತ್ರದ ಮತ್ತೊಂದು ಮೆರುಗು… ದುರ್ಯೋಧನನಾಗಿ ಮಿಂಚುವ ದರ್ಶನ್​ಗೆ ಸಮವಾಗಿ ಭೀಮನ ಪಾತ್ರದಲ್ಲಿ ಮಿಂಚಲಿರುವವರು ಕನ್ನಡಕ್ಕೆ ಹೊಸಬರಾದ ಡ್ಯಾನಿಶ್​ ಅಖ್ತರ್​​. ಈಗಾಗಲೇ ಇಂತಹದ್ದೇ ಪೌರಾಣಿಕ ಧಾರವಾಹಿಯಲ್ಲಿ ಆಂಜನೇಯನ ಪಾತ್ರ ಮಾಡಿದ್ದ ಸ್ಯಾನಿಶ್​​​ ತುಂಬಾ ಖುಷಿಯಿಂದಲೇ ಭೀಮನ ಪಾತ್ರಕ್ಕೆ ಸಹಿ ಹಾಕಿದ್ದಾರೆ…

ಈ ಬಿಗ್​ ಬಜೆಟ್​ ಚಿತ್ರ ಸಂಪೂರ್ಣ ತ್ರಿಡಿ ತಂತ್ರಜ್ಞಾನದಲ್ಲಿ ಸಿದ್ಧವಾಗಲಿದೆ.. ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ…. ಚಿತ್ರಕ್ಕಾಗಿ ವಿಶೇಷವಾಗಿ ದ್ವಾರಕಾಪುರ, ಶ್ರೀಕೃಷ್ಣ ಮಂದಿರ, ಹಸ್ತಿನಾಪುರ ಸೇರಿದಂತೆ ವಿವಿಧ ಬಗೆಯ ಸುಮಾರು 16ಕ್ಕೂ ಹೆಚ್ಚು ಸೆಟ್​ಗಳನ್ನು ಕೂಡಾ ನಿರ್ಮಿಸಲಾಗಿದೆ… ಕುರುಕ್ಷೇತ್ರ ಚಿತ್ರದ ಮೂಲಕ ದರ್ಶನ್​ ಮತ್ತು ರವಿಚಂದ್ರನ್​ ಇದೇ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡಾ ದರ್ಶನ್ ಅಭಿಮಾನಿಗಳ ಖುಷಿಯನ್ನು ಹೆಚ್ಚು ಮಾಡಿದೆ. ಒಂದೇ ಶೆಡ್ಯೂಲ್ಡ್​ನಲ್ಲಿ ಸುಮಾರು 100 ದಿನಗಳಷ್ಟು ಕಾಲ ಈ ಚಿತ್ರದ ಶೂಟಿಂಗ್ ನಡೆಯಲಿದೆ ಎಂದು ನಿರ್ದೇಶಕ ನಾಗಣ್ಣ ಕೂಡಾ ತಿಳಿಸಿದ್ದಾರೆ… ಇನ್ನು, ಬಾಹುಬಲಿ ಚಿತ್ರಕ್ಕೆ ಗ್ರಾಫಿಕ್ಸ್ ಮಾಡಿದ ತಂಡವೇ ಈ ಚಿತ್ರಕ್ಕೂ ಗ್ರಾಫಿಕ್ಸ್​ ಮಾಡುವ ಹೊಣೆಯನ್ನು ಹೊತ್ತಿದೆ… ಎಲ್ಲಾ ಅಂದುಕೊಂಡಂತೆ ನಡೆದರೆ ಸಂಕ್ರಾಂತಿ ವೇಳೆಗೆ ಚಿತ್ರ ರಿಲೀಸ್ ಮಾಡೋದಕ್ಕೆ ನಿರ್ಮಾಪಕ ಮುನಿರತ್ನ  ನಿರ್ಧರಿಸಿದ್ದಾರೆ. ಹೀಗಾಗಿ, ಕೆಲಸಗಳು ಕೂಡಾ ಶುರುವಾಗಿದ್ದು, ಬಹುತೇಕ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲೇ ಯುದ್ಧದ ಸನ್ನಿವೇಶದ ಶೂಟಿಂಗ್ ನಡೆಯಲಿದೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!