ಮುಂಬೈ : ಬಾಲಿವುಡ್ ಬದಲಾಗುತ್ತಿದೆ.. ಜೊತೆಗೆ ಬೋರಲು ಬೀಳುತ್ತಿದೆ… ಇದಕ್ಕೆ ಕಾರಣ ಸಾಲು ಸಾಲು ಸೋಲುಗಳು… ಹೊಸಬರ ಚಿತ್ರಗಳು ಇಲ್ಲಿ ಸೋಲುತ್ತಿಲ್ಲ. ಸ್ಟಾರ್ ನಟರ ಚಿತ್ರಗಳೇ ಇಲ್ಲಿ ಬೋರಲು ಬೀಳುತ್ತಿದೆ…!
ಬಾಲಿವುಡ್ನಲ್ಲಿ ಈಗ ಹೊಸದೊಂದು ಚರ್ಚೆ ಶುರುವಾಗಿದೆ… ಬದಲಾಗುತ್ತಿರುವ ಟ್ರೆಂಡ್ ಈ ಚರ್ಚೆಗೆ ಕಾರಣ… ಅಂದರೆ, ಪ್ರೇಕ್ಷಕರು ಈಗ ಬದಲಾವಣೆ ಬಯಸುತ್ತಿದ್ದಾರೆ… ಒಂದೇ ಮಾದರಿಯ ಚಿತ್ರಗಳನ್ನು ಸಾರಾಗಟಾಗಿ ತಿರಸ್ಕರಿಸುತ್ತಿದ್ದಾರೆ ಪ್ರೇಕ್ಷಕರು. ಸ್ವತ್ವ ಇಲ್ಲದ ಸಿನೆಮಾದಲ್ಲಿ ಸ್ಟಾರ್ಗಳು ಇದ್ದರೂ ಮುಲಾಜಿಲ್ಲದೆ ಸೋಲಿಸುವ ಅದೇ ಪ್ರೇಕ್ಷಕರ ಪ್ರಭು, ಸತ್ವ ಪೂರ್ಣ ಹೊಸಬರ ಚಿತ್ರವಾದರೂ ಗೆಲುವಿನ ಮಾಲೆಯನ್ನು ಹಾಕುತ್ತಾರೆ… ಸ್ಟಾರ್ಗಳ ಸಾಲು ಸಾಲು ತೋಪು ಚಿತ್ರಗಳೇ ಇದಕ್ಕೆ ಸಾಕ್ಷಿ…
ಬೇರೆ ನಟರು ಬೇಡ… ಶಾರೂಖ್ ಮತ್ತು ಸಲ್ಮಾನ್ ಖಾನ್ ಚಿತ್ರಗಳೇ ಬಾಕ್ಸ್ ಆಫೀಸ್ನಲ್ಲಿ ಸೋತು ಸೊರಗಿವೆ ಎಂಬುದು ಸದ್ಯದ ಸತ್ಯ. ಮತ್ತು ಇದು ಬಾಲಿವುಡ್ನ ಭವಿಷ್ಯದ ಹಾದಿಯ ಮುನ್ಸೂಚನೆಯೂ ಹೌದು… ನಮಗೆಲ್ಲಾ ಗೊತ್ತಿರುವ ಹಾಗೆ ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಫೇಮಸ್.. ಸಲ್ಮಾನ್ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಸೋತದ್ದು ಬಹಳ ಕಡಿಮೆ… ಹಾಗಂತ, ಸಲ್ಮಾನ್ ಸೋಲನ್ನೇ ಅನುಭವಿಸಿಲ್ಲ ಎಂದಲ್ಲ. ಒಂದು ಟೈಮ್ನಲ್ಲಿ ಸೋತು ಸೊರಗಿದ್ದ ಸಲ್ಮಾನ್ ಇನ್ನು ಮೇಲೆ ಬರಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದ್ದೂ ಇದೆ. ಆದರೆ, ಈ ಎಲ್ಲಾ ಸೋಲಿನ ಬಳಿಕವೂ ಸಲ್ಲು ಫಿನಿಕ್ಸ್ನಂತೆ ಎದ್ದು ನಿಂತರು… ಅಲ್ಲದೆ, ಕೋಟಿ ಕೋಟಿ ಬಾಚುವ ನಾಯಕನಾಗಿ ಹೊರಹೊಮ್ಮಿದ್ದರು…
ಈದ್ ಸಂದರ್ಭದಲ್ಲಿ ರಿಲೀಸ್ ಆದ ಸಲ್ಮಾನ್ ಅವರ ಯಾವ ಚಿತ್ರವೂ ಈ ಒಂದು ಹತ್ತು ವರ್ಷದಲ್ಲಿ ಸೋತ ಉದಾಹರಣೆಯೇ ಇಲ್ಲ… ಎಲ್ಲಾ ಕೋಟಿ ಕೋಟಿ ಗಳಿಸಿ ಗೆದ್ದಿದ್ದವು… ಸಲ್ಮಾನ್ಗೂ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಪಟ್ಟ ತಂದುಕೊಟ್ಟಿದ್ದವು… ಆದರೆ, ಈ ಬಾರಿ ಪರಿಸ್ಥಿತಿ ಹಿಂದಿನಂತಿರಲಿಲ್ಲ… ಈ ಈದ್ ಸಂದರ್ಭದಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ಅವರ ಟ್ಯೂಬ್ಲೈಟ್ ಚಿತ್ರ ಯಾವ ಚಿತ್ರ ಮಂದಿರದಲ್ಲೂ ಅಷ್ಟು ಪ್ರಕಾಶಮಾನವಾಗಿ ಉರಿದೇ ಇಲ್ಲ… ಇದರಿಂದ ಪ್ರದರ್ಶಕರಿಗೆ, ವಿತರಕರಿಗೆ ಕೋಟಿ ಕೋಟಿ ನಷ್ಟ…
ಇದು ಸಲ್ಮಾನ್ ಒಬ್ಬರ ಮಾತಲ್ಲ. ಶಾರೂಖ್ ಖಾನ್ಗೂ ಇದೇ ಸ್ಥಿತಿ…ಇತ್ತೀಚಿನ ವರ್ಷಗಳಲ್ಲಿ ಶಾರೂಖ್ ಖಾನ್ ಹೇಳಿಕೊಳ್ಳುವ ದೊಡ್ಡ ಸಕ್ಸಸ್ ಪಡೆದಿಲ್ಲ. ಮಾಡಿದ ಅಷ್ಟೂ ಚಿತ್ರಗಳ ಸಾಧನೆ ಆವರೇಜ್ ಅಷ್ಟೇ… ಇದಾದ ಬಳಿಕ ಒಂದು ಬ್ರೇಕ್ಗಾಗಿ ಕಾಯುತ್ತಿದ್ದ ಕಿಂಗ್ ಖಾನ್ ಬಹಳ ಉತ್ಸಾಹದಿಂದ ಮಾಡಿದ ಚಿತ್ರ ಜಬ್ ಹ್ಯಾರಿ ಮೆಟ್ ಸೇಜಲ್…
ಆದರೆ, ಸೇಜಲ್ ಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಶಾರೂಖ್ನ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಸೇಜಲ್ ಗಳಿಕೆ ಅಷ್ಟೇನು ಸಮಾಧಾನಕರವಾಗಿಲ್ಲ ಎನ್ನುತ್ತದೆ ಬಾಕ್ಸ್ ಆಫೀಸ್ ರಿಪೋರ್ಟ್ಗಳು… ಈಗಲೂ ಈ ಚಿತ್ರ ಆಮೆ ನಡಿಗೆಯಲ್ಲೇ ಸಾಗುತ್ತಿದೆ…
ಈ ಟ್ಯೂಬ್ಲೈಟ್ ಮತ್ತು ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದ ನಡುವೆ ಬಂದ ಚಿತ್ರ ಜಗ್ಗ ಜಾಸೂಸ್. ಇದು ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಮಾಡಿದ ಚಿತ್ರ… ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದ ಈ ಚಿತ್ರ ಹೇಗೆ ಬಂತು ಹೇಗೆ ಹೋಯ್ತು ಎಂಬುದು ಯಾರಿಗೂ ಗೊತ್ತೇ ಆಗಿರಲಿಲ್ಲ…
ಅಂದರೆ ಇಲ್ಲೊಂದು ಸ್ಪಷ್ಟ… ಸ್ಟಾರ್ಗಳಿರಲಿ, ಇನ್ನಾರೋ ಇರಲಿ. ಸತ್ವ ಇಲ್ಲದ ಚಿತ್ರ ಕೊಟ್ಟರೆ ಸೋಲು ಗ್ಯಾರಂಟಿ… ಸ್ಟಾರ್ಗಳಿದ್ದರೆ ನಮ್ಮ ಚಿತ್ರ ಗೆದ್ದಂತೆ ಎಂಬ ನಿಲುವು ನಿರ್ಮಾಪಕರು ಮತ್ತು ವಿತರಕರದ್ದಾಗಿತ್ತು. ಆದರೆ, ಈ ಪರಿಸ್ಥಿತಿ ಈಗ ಕರಗುತ್ತಿದೆ ಎಂಬುದಕ್ಕೆ ಟ್ಯೂಬ್ಲೈಟ್ ಮತ್ತು ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರವೇ ಸಾಕ್ಷಿ… ಈ ಎರಡು ಚಿತ್ರಗಳಿಂದ ವಿತರಕನಿಗೆ ಆದ ನಷ್ಟ ಎಷ್ಟು ಗೊತ್ತಾ…? ಬರೋಬ್ಬರಿ 60 ಕೋಟಿಯಂತೆ…! ಎನ್ಎಚ್ ಸ್ಟುಡಿಯೋಸ್ನ ನರೇಂದ್ರ ಹಿರಾವತ್ ಟ್ಯೂಬ್ಲೈಟ್ ಮತ್ತು ಸೇಜಲ್ ಚಿತ್ರದ ವಿತರಣೆಯ ಹಕ್ಕು ಪಡೆದಿದ್ದರು. ಆದರೆ, ಎರಡೂ ಚಿತ್ರದಲ್ಲಿ ನನಗೆ ನಷ್ಟವಾಗಿದ್ದು ಪರಿಹಾರದ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂದರೆ, ಸ್ಟಾರ್ಗಳ ಚಿತ್ರ ಬಾಲಿವುಡ್ನಲ್ಲಿ ತೋಪಾಗುತ್ತಿದೆ. ಪ್ರಯೋಗಾತ್ಮಕ , ಕ್ರಿಯಾಶೀಲ ಚಿತ್ರಗಳತ್ತ ಪ್ರೇಕ್ಷಕರು ಮೊರೆ ಹೋಗುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ಕೂಡಾ ಒಳ್ಳೆಯ ಬೆಳವಣಿಗೆ… ಚಿತ್ರರಂಗ ಯಾವತ್ತೂ ಚಲನಶೀಲ ಮಾಧ್ಯಮ. ಇಲ್ಲಿ ಬದಲಾವಣೆಗಳು ಸಹಜ… ಇಂತಹ ಸ್ಥಿತ್ಯಂತರದಿಂದಲೇ ಒಳ್ಳೊಳ್ಳೆ ಚಿತ್ರಗಳು ಬರುವ ಸಾಧ್ಯತೆಯೂ ಹೆಚ್ಚು…