Thursday , October 18 2018
ಕೇಳ್ರಪ್ಪೋ ಕೇಳಿ
Home / Sandalwood / ಅನಾಥವಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ ಈ ಹಿರಿಯ ನಟ…!

ಅನಾಥವಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ ಈ ಹಿರಿಯ ನಟ…!

ಕುಮಟಾ : ಕನ್ನಡ ಸಿನೆಮಾಲೋಕದ ಖ್ಯಾತ ನಟ ಮತ್ತು ಹಿರಿಯ ನಟ ಸದಾಶಿವ ಬ್ರಹ್ಮಾವರ ಈಗ ಅಕ್ಷರಶಃ ಅನಾಥರಾಗಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದ ಈ ನಟ ಈಗ ಜೀವನದ ಸಂಧ್ಯಾಕಾಲದಲ್ಲಿ ಬೀದಿಗೆ ಬಿದ್ದಿದ್ದಾರೆ. ಕುಮಟಾದಲ್ಲಿ ಅನಾಥವಾಗಿ ರಸ್ತೆ ಬದಿಯಲ್ಲಿ ಓಡಾಡುತ್ತಿದ್ದ ಸದಾಶಿವ ಬ್ರಹ್ಮಾವರ ಅವರನ್ನು ಸ್ಥಳೀಯರು ರಕ್ಷಿಸಿ ಊಟ, ವಸತಿ ಕಲ್ಪಿಸಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಬ್ರಹ್ಮಾವರ ಅವರನ್ನು ಮನೆಯವರು ಹೊರಗೆ ಹಾಕಿದ್ದಾರಂತೆ. ಇದಾದ ಬಳಿಕವೇ ಇವರು ಕುಮಟಾಕ್ಕೆ ಬಂದದ್ದು. ಇಲ್ಲಿ ಇವರನ್ನು ಸ್ಥಳೀಯರು ಗಮನಿಸಿ ಊಟ ಮತ್ತು ಹೊಟೇಲ್​ನಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸದಾಶಿವ ಬ್ರಹ್ಮಾವರ್​ ಮಕ್ಕಳೊಟ್ಟಿಗೆ ವಾಸವಾಗಿದ್ದರೂ ಯಾರೂ ಇವರ ಆರೈಕೆ ಮಾಡಿರಲಿಲ್ಲ. ಇವರ ಓರ್ವ ಪುತ್ರ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಉದ್ಯೋಗದಲ್ಲಿದ್ದಾರಂತೆ. ಆದರೆ, ತನ್ನ ಮಗನ ವಿಳಾಸವನ್ನು ಹೇಳುವುದಕ್ಕೆ ಇವರು ನಿರಾಕರಿಸಿದ್ದಾರೆ.

ಇವರನ್ನು ಮನೆಯಿಂದ ಹೊರಹಾಕುವಾಗ ಹಲವು ಫೋಟೋಗಳು ಹಾಗೂ ಇವರು ಪೂಜಿಸುತ್ತಿದ್ದ ದೇವರ ಮೂರ್ತಿಗಳನ್ನೂ ಕುಟುಂಬಸ್ಥರು ಹೊರಗೆ ಎಸೆದಿದ್ದಾರಂತೆ. ಆದರೆ, ಮಕ್ಕಳೊಂದಿಗೆ ಯಾವುದಾದರು ಕಲಹ ಇದೆಯಾ ಎಂಬ ವಿಷಯವನ್ನು ಇವರು ಬಹಿರಂಗಪಡಿಸಿಲ್ಲ.

ಬಣ್ಣದ ಲೋಕದ ಆಸೆಯಿಂದ ಸದಾಶಿವ ಬ್ರಹ್ಮಾವರ ಅವರು ಚಿಕ್ಕಂದಿನಲ್ಲೇ ಊರು ಬಿಟ್ಟಿದ್ದರು. ಸ್ವಾಲಂಬಿಯಾಗಿ ಬದುಕು ನಡೆಸಿದ್ದ ಬ್ರಹ್ಮಾವರ್ ಅವರಲ್ಲಿ ಈಗಲೂ ಸ್ವಾವಲಂಬಿ ಕೆಚ್ಚಿದೆ. ಸಹಾಯಕ್ಕಾಗಿ ಯಾರ ಮುಂದೆಯೂ ಕೈಯೊಡ್ಡಲ್ಲ ಎಂಬುದು ಇವರ ದೃಢ ಮಾತು.

ಇನ್ನು, ಬೆಂಗಳೂರಿಗೆ ಮರಳಲು ಸಹಾಯ ಮಾಡಬೇಕಾ ಎಂದು ಪೊಲೀಸರು ಕೇಳಿಕೊಂಡಾಗ ಇವರು ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ. ಅಲ್ಲದೆ, ಕುಮಟಾದಲ್ಲಿ ತನ್ನನ್ನು ರಕ್ಷಿಸಿದ ಯುವಕರಿಗೂ ಇವರು ಧನ್ಯವಾದ ಹೇಳಿದ್ದು, ತನಗೆ ಹುಬ್ಬಳ್ಳಿಯಲ್ಲಿ ಪರಿಚಿತರಿದ್ದು, ತಾನು ಅಲ್ಲಿಗೆ ಹೋಗಬೇಕು ಎಂದು ಹೇಳಿಕೊಂಡಿದ್ದಾರಂತೆ. ಇದಾದ ಬಳಿಕ ಇಲ್ಲಿನ ಯುವಕರು ಹುಬ್ಬಳ್ಳಿಗೆ ಟಿಕೆಟ್ ಮಾಡಿಕೊಟ್ಟು ಇವರನ್ನು ಭಾನುವಾರವೇ ತುಂಬಾ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!