ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ನಾಯಿಗಳು ದಾಳಿ ಮಾಡಿರುವ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ಸೆರೆಯಾದ ದೃಶ್ಯವಿದು. ಆದರೆ, ಬೆಂಗಳೂರಿನ ಬಹುಭಾಗದಲ್ಲಿ ಇಂತಹ ಸಮಸ್ಯೆ ಇದೆ. ಹೀಗಾಗಿ, ಜನರೆಲ್ಲಾ ನಡೆದಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಹಲವು ಜನರ ಮೇಲೆ ದಾಳಿ ಮಾಡಿರುವ ಈ ಶ್ವಾನಗಳು ಇವತ್ತು ಮತ್ತೊಂದು ಯುವತಿ ಮೇಲೆ ದಾಳಿ ಮಾಡಿವೆ. ಆಗ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದು, ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ನಾಯಿಗಳ ಸಮಸ್ಯೆ ಹಲವು ದಿನಗಳಿಂದ ಇದ್ದು ಈ ಬಗ್ಗೆ ಬಿಬಿಎಂಪಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.