Wednesday , March 27 2019
ಕೇಳ್ರಪ್ಪೋ ಕೇಳಿ
Home / Sudina Special / ಮಾನವೀಯತೆ ಮೀರಿದ ಧರ್ಮವಿಲ್ಲ

ಮಾನವೀಯತೆ ಮೀರಿದ ಧರ್ಮವಿಲ್ಲ

ಧರ್ಮ ಎಂದರೇನು? ಧಾರ್ಮಿಕ ಪದ್ಧತಿಗಳು ಎಂದರೇನು? ದೇವರಿಗೆ ಪೂಜೆ ಮಾಡುವುದು ಯಾಕೆ? ಎಂಬಂತೆ ಎಲ್ಲಾ ಸವಾಲುಗಳಿಗೂ ಒಂದೇ ಉತ್ತರ. ಉತ್ತಮ ಸಮಾಜಕ್ಕಾಗಿ, ಸಮಾಜದಲ್ಲಿರುವ ಎಲ್ಲಾ ಜನರು ಸುಖವಾಗಿ ಬಾಳುವುದಕ್ಕಾಗಿ ಇದರ ಅಗತ್ಯವಿದೆ. ಆದ್ದರಿಂದ ದೇವರಲ್ಲಿ ಪ್ರಾರ್ಥನೆ ಮಾಡುವಾಗ “ನನ್ನನ್ನು ಚೆನ್ನಾಗಿ ಇಟ್ಟಿರಪ್ಪ” ಅಥವಾ “ನನ್ನ ಸಮಸ್ಯೆಗಳನ್ನು ದೂರ ಮಾಡಪ್ಪಾ” ಎಂದು ಬೇಡಿಕೊಳ್ಳುತ್ತೇವೆ. ರಾಮ, ಕೃಷ್ಣ, ರಹೀಮ್ ಅಥವಾ ಜೀಸಸ್‍ನಲ್ಲೂ ಎಲ್ಲರೂ ವಿನಂತಿಸುವುದು ಇದನ್ನೇ. ಒಂದು ವೇಳೆ ಯಾರೇ ವ್ಯಕ್ತಿ “ಹೇ ಭಗವಂತ, ಇವತ್ತು ರಾತ್ರಿ ನಾನು ಬ್ಯಾಂಕ್ ದರೋಡೆ ಮಾಡಲು ಹೋಗುತ್ತಿದ್ದೇನೆ, ನನ್ನನ್ನು ಬಚಾವ್ ಮಾಡಪ್ಪಾ” ಎಂದು ಬೇಡಿಕೆ ಮಾಡಿದರೆ, ಅದು ತಪ್ಪು ಬೇಡಿಕೆ ಆಗಿರುತ್ತದೆ. ಅದು ಅಧರ್ಮ ಆಗಿರುತ್ತದೆ. ಜನರು ಪ್ರಾಮಾಣಿಕವಾಗಿ ಸಂಪಾದನೆ ಮಾಡಿ ಸುರಕ್ಷೆಗಾಗಿ ಬ್ಯಾಂಕ್‍ನಲ್ಲಿ ಹಣ ಇರಿಸುತ್ತಾರೆ. ದರೋಡೆ ಮಾಡುವುದು ಎಂದರೆ ಇನ್ನೊಬ್ಬರ ಸೊತ್ತನ್ನು ಕಸಿದುಕೊಳ್ಳುವುದು. ಇದಕ್ಕೆ ಯಾವ ಭಗವಂತನೂ ಒಪ್ಪಿಗೆ ನೀಡಲಾರ. ಯಾವ ಧರ್ಮವೂ ಇದನ್ನು ಒಪ್ಪುವುದಿಲ್ಲ. ಯಾವ ರೀತಿಯಲ್ಲಿ ತಪ್ಪು ಕೆಲಸಕ್ಕೆ ಭಗವಂತನ/ಧರ್ಮದ ಅನುಮತಿ ಇಲ್ಲವೋ, ಯಾರೇ ವ್ಯಕ್ತಿಯನ್ನು ಹತ್ಯೆ ಮಾಡುವುದು ಕೂಡಾ ತಪ್ಪು ಕೆಲಸವಾಗಿದೆ. ಹಾಗಿದ್ದರೂ, ಇತ್ತೀಚೆಗೆ ನಮ್ಮ ದೇಶದ ಹಲವಾರು ಭಾಗಗಳಲ್ಲಿ ಧಾರ್ಮಿಕ ಕಾರಣಕ್ಕೆ ಹಲವರ ಹತ್ಯೆ ನಡೆಯುತ್ತಿದೆ. ಒಬ್ಬರನ್ನು ಕೊಲ್ಲುವುದು ಅಷ್ಟೊಂದು ಸಿಂಪಲ್ ಆಗಿದೆಯೇ? ಕೊಲ್ಲುವುದು ಮಾತ್ರವಲ್ಲದೆ, ತಾವು ಮಾಡಿದ್ದು ಸರಿ! ಎಂದು ಕೆಲವೊಂದು ಗುಂಪುಗಳು ವಾದ ಮಾಡುವುದು ಕೂಡಾ ಇದೆ. ಒಮ್ಮೊಮ್ಮೆ ರಾಕ್ಷಸರಿಗಿಂತಲೂ ಭಯಾನಕವಾಗಿ ಮತ್ತು ಕ್ರೂರವಾಗಿ ಹತ್ಯೆಗಳು ನಡೆಯುತ್ತವೆ. ಇದು ಮಾನವೀಯತೆಯೆ? ಎಲ್ಲಿ ಹೋಯಿತು ನಮ್ಮ ಸಭ್ಯತೆ?

ಭಾರತವು ಜಾತ್ಯಾತೀತ ರಾಷ್ಟ್ರ. ಇದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ದೇಶ ಕಟ್ಟಿದವರು ನಮ್ಮ ದೇಶ ಹೇಗಿರಬೇಕು, ಇದನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬುದನ್ನು ಸ್ಪಷ್ಟವಾಗಿ ರೂಪಿಸಿ ನಮಗೊಂದು ಉತ್ತಮ ಚೌಕಟ್ಟು ಒದಗಿಸಿ ಕೊಟ್ಟಿದ್ದಾರೆ. ಹಲವಾರು ನಿಯಮಗಳಿವೆ. ಹಲವಾರು ಪದ್ಧತಿಗಳಿವೆ. ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಯಾವ ರೀತಿಯಲ್ಲಿ ಶಿಕ್ಷೆ ನೀಡಬೇಕು ಎಂಬುದನ್ನು ಕೂಡಾ ತಿಳಿಸಲಾಗಿದೆ. ಅಂದರೆ ಕಾನೂನು ಮತ್ತು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಇವೆಗಳನ್ನೆಲ್ಲಾ ಯಾಕಾಗಿ ಮಾಡಿದ್ದೇವೆ? ಯಾರಿಗಾಗಿ ಮಾಡಿದ್ದೇವೆ? ಎಂಬ ಚಿಂತನೆ ನಮಗಿಲ್ಲವೇ? ಶಾಂತಿ-ಸೌಹಾರ್ದತೆಗಳನ್ನು ಪಾಲಿಸಬೇಕು ಎಂಬುದನ್ನು ನಾವು ಮರೆತಿದ್ದೇವೆಯೆ? ಎಲ್ಲೆಲ್ಲೂ ನಾವು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ವಿದ್ಯಾಭ್ಯಾಸಗಳನ್ನು ಪಡೆಯುತ್ತಿದ್ದೇವೆ. ನಾವು ಪಡೆಯುತ್ತಿರುವ ವಿದ್ಯಾಭ್ಯಾಸಗಳು ನಮ್ಮನ್ನು ಸುಶಿಕ್ಷಿತ ಮತ್ತು ನಾಗರಿಕ ಪ್ರಜೆಯನ್ನಾಗಿ ಮಾಡುವಲ್ಲಿ ವಿಫಲವಾಗಿದೆಯೇ?

ಈಗೀಗ ಅಪರಾಧಗಳ ಸಂಖ್ಯೆ ಜಾಸ್ತಿಯಾಗಿವೆ. ಮಹಿಳೆಯರನ್ನು ಗೌರವಿಸಬೇಕು ಹಾಗೂ ಅವರಿಗೆ ರಕ್ಷಣೆ ನೀಡಬೇಕು ಎಂದು ಹೆಚ್ಚು ಹೆಚ್ಚು ಪ್ರಚಾರ ಮಾಡಿದಂತೆಲ್ಲಾ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚುತ್ತಿವೆ. ಬಲಾತ್ಕಾರ ಪ್ರಕರಣಗಳೂ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಕಿರುಕುಳ ಹೆಚ್ಚುತ್ತಿದೆ. ಪುರುಷ – ಮಹಿಳೆ ನಡುವೆ ಭೇದ-ಭಾವ ಹೆಚ್ಚಿದೆ. ಇದನ್ನು ಸರಿಪಡಿಸಬೇಕಾದ ಮುಖಂಡರೇ ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಮಾಜ ಸಂಪೂರ್ಣವಾಗಿ ಕೆಟ್ಟು ಹೋಗಿದೆ.

ಇಂದು ನಾವು ಎಲ್ಲಾ ವಿಚಾರಗಳಲ್ಲೂ ತುಂಬಾ ಹತ್ತಿರವಾಗಿದ್ದೇವೆ. ಯಾವ ಊರಿನಲ್ಲಿ ಯಾವುದೇ ಪ್ರಕರಣ ನಡೆದರೂ ಅದು ಇಡೀ ದೇಶಕ್ಕೆ ತಿಳಿದು ಬರುತ್ತದೆ. ಸಮಾಚಾರ ಪತ್ರಿಕೆಗಳು ಸುದ್ದಿ ಸಾರುತ್ತವೆ. ಟಿವಿ ಮಾದ್ಯಮಗಳು ಚಿತ್ರಣ ನೀಡುತ್ತವೆ. ಹಾಗಾಗಿ, ಇಲ್ಲಿ ಯಾವ ವಿಚಾರಗಳೂ ಗುಪ್ತವಾಗಿಲ್ಲ. ಇವುಗಳನ್ನು ಮೀರಿ ಸಾಮಾಜಿಕ ಜಾಲ ತಾಣಗಳು, ಅಂದರೆ ಫೇಸ್‍ಬುಕ್, ಟ್ವಿಟ್ಟರ್, ಗೂಗಲ್, ಇನ್‍ಸ್ಟಾಗ್ರಾಮ್ ಮೊದಲಾದವುಗಳ ಮೂಲಕ ಇನ್ನಷ್ಟು ತೀವ್ರವಾಗಿ ಸುದ್ದಿಗಳು ಹರಡುತ್ತವೆ.

ನಮ್ಮಲ್ಲಿ ವೈವಿಧ್ಯತೆಗಳು ಹೆಚ್ಚಿವೆ. ಬೇರೆ ಬೇರೆ ಜಾತಿಯವರಿದ್ದಾರೆ. ಅವರದ್ದೇ ಆಚಾರ ವಿಚಾರಗಳಿವೆ. ಬೇರೆ ಬೇರೆ ಧರ್ಮದವರಿದ್ದಾರೆ. ಅಲ್ಲಿಯೂ ಪದ್ಧತಿಗಳು ವಿಭಿನ್ನ. ಹಾಗಿದ್ದರೂ, ನಮ್ಮಲ್ಲಿ ಇದೀಗ ಕಲಹಕ್ಕೆ ತಂದಿರುವ ವಿಚಾರವೆಂದರೆ ಮಾಂಸಾಹಾರ ಮತ್ತು ಸಸ್ಯಾಹಾರ ಪದ್ಧತಿಗಳು. ಅವರ ಪೂಜಾ ಕ್ರಮಗಳು, ಇವರ ಪೂಜಾ ಕ್ರಮಗಳು. ಒಂದು ಧರ್ಮದ ದೇವರನ್ನು ಇನ್ನೊಂದು ಧರ್ಮದವರು ಹೀಯಾಳಿಸುವುದು. ಜನರು ಇನ್ನೊಬ್ಬರನ್ನು ಅವಮಾನ ಮಾಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಇನ್ನೊಂದು ಉಗ್ರ ಪ್ರತಿಭಟನೆ ಬರುತ್ತದೆ. ಕೊನೆಗೆ ಸಾಮಾಜಿಕ ತಾಣದಲ್ಲಿ ಪ್ರಾರಂಭವಾಗ ಜಗಳ ಬೀದಿಗೆ ಬರುತ್ತದೆ. ಪರಿಸ್ಥಿತಿ ಕೈ ಮೀರುತ್ತದೆ. ಯಾರದ್ದೋ ಹತ್ಯೆ ನಡೆಯುತ್ತದೆ. ಹತ್ಯೆಗೆ ಒಳಗಾಗಿರುವವರ ಸಂಬಂಧಿಕರು ಅಥವಾ ಧರ್ಮದವರು ಪ್ರತೀಕಾರಕ್ಕಾಗಿ ಹೊಂಚು ಹಾಕುತ್ತಿರುತ್ತಾರೆ. ಸಂದರ್ಭ ನೋಡಿ ಇನ್ನೊಂದು ಹತ್ಯೆ ಆಚೆ ಕಡೆಯಲ್ಲಿ ನಡೆಯುತ್ತದೆ. ಹತ್ಯೆ ಮಾಡಬೇಡಿ ಎಂದು ಹೇಳುವವರು ಯಾರೂ ಇಲ್ವಾ ಅಥವಾ ಯಾರಾದರೂ ಹಿರಿಯ ಮುಖಂಡರು ಶಾಂತಿ ಸಂದೇಶವನ್ನು ಸಾರಿದಲ್ಲಿ ಅದನ್ನು ಪಾಲಿಸುವ ವಿವೇಕ ಯಾರಲ್ಲೂ ಇರುವುದಿಲ್ಲ. ಇಷ್ಟು ಮಾತ್ರವಲ್ಲ. ತಪ್ಪು ನಡೆದು ಹೋಗುತ್ತದೆ. ಹಾಗಿದ್ದರೂ, ತಾವು ಮಾಡಿದ್ದು ತಪ್ಪು, ನಾವು ಹೇಳಿದ್ದು ತಪ್ಪು ಎಂದು ಒಪ್ಪಿಕೊಳ್ಳುವ ವಿವೇಕವೂ ಇಂದು ಇಲ್ಲವಾಗಿದೆ.

ಉಡುಪಿಯ ಪೇಜಾವರ ಮಠದ ಸ್ವಾಮಿಯವರು ಮುಸ್ಲೀಮರಿಗಾಗಿ ಕೃಷ್ಣ ಮಂದಿರದಲ್ಲಿ ಒಂದು ಇಫ್ತಾರ್ ಪಾರ್ಟಿ ಇಟ್ಟಿದ್ದರು. ತುಂಬಾ ಸಂತೋಷದಿಂದ ಮುಸ್ಲೀಮ್ ಬಾಂಧವರು ಬಂದರು. ಹಬ್ಬದ ಊಟ. ದೇವರ ಪ್ರಾರ್ಥನೆ ಇಲ್ಲದೆಯೇ ಊಟ ಮಾಡುವುದು ಹೇಗೆ? ಹಾಗಾಗಿ ಮೊದಲು ನಮಾಜು ಮಾಡಿದರು. ಮತ್ತೆ ಊಟ ಮಾಡಿದರು. ಎರಡು ಧರ್ಮದ ನಡುವೆ ಉತ್ತಮ ಸೌಹಾರ್ದತೆ ಬೆಳೆಯುವುದಕ್ಕಾಗಿ ಇದು ಒಳ್ಳೆಯ ಪ್ರಯತ್ನ. ಟೀಕೆ ಏನಿದ್ದರೂ, ಇಂತಹ ಪ್ರಯತ್ನಗಳು ಅಲ್ಲಲ್ಲಿ, ಅಗಾಗ ಎಲ್ಲಾ ಧರ್ಮಗಳ ನಡುವೆಯೂ ನಡೆಯಬೇಕು. ಅದನ್ನು ಬಿಟ್ಟು ಇದರ ಬಗ್ಗೆ ಸಾಕಷ್ಟು ಚರ್ಚೆ ಖಂಡನೆಗಳು ಬಂದವು. ಕೃಷ್ಣ ಮಠ ಅಶುದ್ಧವಾಯಿತು ಎಂದು ಕೆಲವರು ಹೇಳಿದರು. ಹಾಗಿದ್ದರೆ, ಧರ್ಮ ಗುರು ಎಂದೆನಿಸಿಕೊಂಡವರು ಪರಸ್ಪರ ಜಗಳ ಮಾಡಿ ಎಂದು ತಮ್ಮ ಅನುಯಾಯಿಗಳಿಗೆ ಪ್ರೇರೇಪಿಸಬೇಕೆ? ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ, ಹೆಚ್ಚೇಕೆ, ಕರ್ನಾಟಕದಲ್ಲಿ ಹಿಂದು-ಮುಸ್ಲೀಮರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಸ್ನೇಹದಿಂದ ಬಾಳಿರುವ ಎಷ್ಟೋ ಪ್ರಕರಣಗಳಿವೆ. ಮುಸ್ಲೀಮರು ಹಿಂದೂಗಳನ್ನು ಹಾಗೂ ಹಿಂದೂಗಳು ಮುಸ್ಲೀಮರು ಅಥವಾ ಕ್ರಿಶ್ಚಿಯನ್ನರನ್ನು ಅಪಾಯಗಳಿಂದ ಪಾರು ಮಾಡಿರುವ ಪ್ರಕರಣಗಳಿವೆ. ಇವುಗಳಿಂದ ಮುಖಂಡರು, ಅಥವಾ ರಾಜಕೀಯ ವ್ಯಕ್ತಿಗಳು ಪಾಠ ಕಲಿಯಬೇಕು. ವೋಟ್ ಬ್ಯಾಂಕ್‍ಗಾಗಿ ಜನರನ್ನು ಒಡೆಯುವ ಕೆಲಸ ಮಾಡಬಾರದು. ಯಾವ ಧರ್ಮವೂ ನಮಗೆ ರಾಕ್ಷಸರಾಗಿ ಎಂದು ಹೇಳುವುದಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ಯಾರಿಗೂ ತೊಂದರೆ ಮಾಡಬಾರದು, ಯಾರನ್ನೂ ನಿಂದಿಸಬಾರದು, ಎಲ್ಲಾ ಧರ್ಮಗಳ ಸಾರ ಇದುವೇ ಆಗಿದೆ.

ಮಾನವರಾಗಿ ನಾವು ಪರಸ್ಪರ ಪ್ರೇಮದಿಂದ ಜೀವಿಸಬೇಕು, ಉತ್ತಮ ಸಮಾಜವನ್ನು ನಿರ್ಮಿಸಬೇಕು. ಕಾನೂನುಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇರುವುದಿಲ್ಲ. ಸಮಾಜದ ಸಮಗ್ರ ಏಳಿಗೆಗಾಗಿ ಪ್ರಯತ್ನಿಸಬೇಕು. ಅನ್ಯಾಯ ಯಾರು ಮಾಡಿದರೂ, ಅದು ತಪ್ಪು. ಇದರಲ್ಲಿ ಧರ್ಮ ಭೇದವಿಲ್ಲ.

ನಾವೆಲ್ಲಾ ಹಬ್ಬ-ಹರಿದಿನಗಳನ್ನು ಆಚರಿಸುತ್ತೇವೆ. ಆಗಾಗ ವಿಶೇಷ ಪೂಜೆಗಳನ್ನು ಮಾಡಿಸುತ್ತೇವೆ. ಸದ್ಗುರುಗಳ ಹಿತವಚನ ಆಲಿಸುತ್ತೇವೆ. ಬಸವೇಶ್ವರ, ಪುರಂದರದಾಸರು, ಕಬೀರ್​ದಾಸ್, ಕನಕದಾಸ, ಎಷ್ಟೋ ಮಹಾತ್ಮರ ಮಾರ್ಗದರ್ಶನಗಳಿಗೆ ಬದ್ಧರೆಂದು ಒತ್ತಿ ಒತ್ತಿ ಹೇಳುತ್ತೇವೆ. ಇತರರಿಗೂ ಇವುಗಳ ಭೋದನೆ ಮಾಡುತ್ತೇವೆ. ಹಾಗಿದ್ದರೂ, ನಾವು ನಮ್ಮಲ್ಲಿರುವ ಸ್ವಾರ್ಥ ಭಾವನೆಗಳನ್ನು, ಮನಸ್ಸಿನಲ್ಲಿ ಮೂಡುವ ಮಾತ್ಸರ್ಯಗಳನ್ನು ನಿಯಂತ್ರಿಸಲು ಆಗುತ್ತಿಲ್ಲ ಅಥವಾ ಬಿಟ್ಟು ಬಿಡಲು ತಯಾರಿಲ್ಲ ಯಾಕೆ? ಮೊದಲು ನಾವು ಮಾನವರಾಗಬೇಕು. ಇದು ನಮ್ಮ ಪರಮ ಧರ್ಮ, ಹಿಂಸೆಯನ್ನು ತ್ಯಜಿಸಬೇಕು. ಮಾನವೀಯತೆಯನ್ನು ಮೀರಿ ಯಾವುದೇ ಧರ್ಮವಿಲ್ಲ.

ಎ.ವಿ.ಚಿತ್ತರಂಜನ್​ ದಾಸ್​, ನವದೆಹಲಿ

                                                                                                                                                                                                                                                                                                               

                                                                                                                               

                                                                                                                                                         

 

 

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!