Sunday , February 17 2019
ಕೇಳ್ರಪ್ಪೋ ಕೇಳಿ
Home / Interval / ಯೌವನದಲ್ಲಿ ಎದುರಾಳಿಗಳು… ಈಗ ಸ್ನೇಹಿತರು…

ಯೌವನದಲ್ಲಿ ಎದುರಾಳಿಗಳು… ಈಗ ಸ್ನೇಹಿತರು…

ಒಬ್ಬರು ಉರಿಗಣ್ಣ ಸುಂದರ… ಇನ್ನೊಬ್ಬರು ಆರಡಿಯ ಸುರಸುಂದರಾಂಗ… ಒಂದು ಕಾಲದಲ್ಲಿ ಇವರಿಬ್ಬರಿದ್ದರೆಂದರೆ ಬಾಲಿವುಡ್‍ನಲ್ಲಿ ಆ ಚಿತ್ರ ಹಿಟ್ ಎಂದೇ ಲೆಕ್ಕ… ಅಲ್ಲಿ ತನಕ ಒಟ್ಟಾಗಿದ್ದ ಈ ಜೋಡಿ ಒಂದು ಹಂತದಲ್ಲಿ ದೂರವಾಯಿತು… ಅಲ್ಲಿಂದ ಇಬ್ಬರನ್ನು ಜೊತೆಯಾಗಿ ತೆರೆಯಲ್ಲಿ ನೋಡುವ ಭಾಗ ಅಭಿಮಾನಿಗಳಿಗೆ ಸಿಗಲೇ ಇಲ್ಲ… ಬರೀ ಇಷ್ಟೇ ಅಲ್ಲ. ಈ ಇಬ್ಬರು ಪಕ್ಕಾ ಎದುರಾಳಿಗಳಾಗಿದ್ದರು. ಅಷ್ಟೇ ಅಲ್ಲ ಹಾವು ಮುಗುಸಿಯ ಪ್ರತಿರೂಪದಂತಿದ್ದರು…! ಅಷ್ಟರ ಮಟ್ಟಿಗೆ ಇವರಿಬ್ಬರ ನಡುವೆ ವೈರತ್ವವಿತ್ತು…! ಯಾರವರು? ಅಂತೀರಾ…? ಅವರೇ ಬಿಗ್ ಬಿ ಅಮಿತಾಭ್ ಮತ್ತು ಶತ್ರುಘ್ನಾ ಸಿನ್ಹಾ.

ಬಾಲಿವುಡನ್ನು ಹತ್ತಿರದಿಂದ ಬಲ್ಲವರಿಗೆ ಅಮಿತಾಭ್ ಮತ್ತು ಶತ್ರುಘ್ನಾರ ನಡುವಣ ಸಂಬಂಧದ ವಿಚಾರ ಗೊತ್ತು. ಒಂದು ಟೈಮ್‍ನಲ್ಲಿ ಒಬ್ಬರ ಮುಖವನ್ನು ನೋಡಿದರೆ ಇನ್ನೊಬ್ಬರಿಗಾಗುತ್ತಿರಲಿಲ್ಲ. ಪರಸ್ಪರ ಎದುರಾಗುವ ಸಂದರ್ಭ ಬಂದರೂ ಇಬ್ಬರೂ ಹೇಗಾದರೂ ಅಲ್ಲಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದರು!

ವೃತ್ತಿ ಮಾತ್ಸರ್ಯ, ಯೌವನದ ಗರ್ವ : ಬಿಗ್ ಬಿ ಅಮಿತಾಭ್ ಮತ್ತು ಶತ್ರುಘ್ನಾ ಒಟ್ಟಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕಾಲಾ ಪತ್ತರ್, ದೋಸ್ತಾನ ಮತ್ತು ಶಾನ್ ಸೇರಿದಂತೆ ಹಲವು ಹಿಟ್ ಚಿತ್ರಗಳು ಈ ಜೋಡಿಯಿಂದ ಬಂದಿವೆ. ಆದರೆ, ತೆರೆ ಮೇಲೆ ಸ್ನೇಹಿತರ ಪಾತ್ರವನ್ನೂ ಮಾಡಿದ್ದ ಈ ಜೋಡಿ ತೆರೆಯಾಚೆಗೆ ಉತ್ತಮ ಸ್ನೇಹಿತರಾಗಲೇ ಇಲ್ಲ. 70 ಮತ್ತು 80ರ ದಶಕಗಳಲ್ಲಿ ಈ ಇಬ್ಬರೂ ಬೇಡಿಕೆಯಲ್ಲಿ ಮುಂದಿದ್ದ ನಟರು. ಅಲ್ಲದೆ, ಬಹುತೇಕ ಚಿತ್ರಗಳಲ್ಲಿ ಇವರಿಬ್ಬರು ಜೊತೆಯಾಗಿಯೇ ಇದ್ದರು. ಆದರೆ, ಯಾವುದೋ ಒಂದು ಕ್ಷಣದಲ್ಲಿ ಇಬ್ಬರ ನಡುವೆ ವೈಮನಸ್ಯದ ಸಣ್ಣ ಬೀಜಾಂಕುರವಾಗಿತ್ತು. ಇಂಡಸ್ಟ್ರಿಯನ್ನು ಬಲು ಹತ್ತಿರದಿಂದ ಬಲ್ಲವರ ಪ್ರಕಾರ, ದೋಸ್ತಾನ ಚಿತ್ರದ ಶೂಟಿಂಗ್ ಆರಂಭದ ಸಂದರ್ಭದಿಂದ ಇವರಿಬ್ಬರು ಮಾನಸಿಕವಾಗಿ ದೂರವಾಗಲು ಆರಂಭಿಸಿದ್ದರು.

ಅಲ್ಲಿ ತನಕ ಜೊತೆಯಾಗಿ ಕೆಲಸ ಮಾಡಿದ್ದ ಈ ಇಬ್ಬರು ಜೊತೆಯಾಗಿ ನಟಿಸಲು ಮನಸ್ಸು ಮಾಡಲಿಲ್ಲ. ಇದಕ್ಕೆ ವೃತ್ತಿ ಮಾತ್ಸರ್ಯದ ಜೊತೆಗೆ `ಈಗೋ’ ಕೂಡಾ ಕಾರಣವಾಗಿರಬಹುದು. 1980ರಲ್ಲಿ ಶಾನ್ ಚಿತ್ರದಲ್ಲಿ ಇವರಿಬ್ಬರು ನಟಿಸಿದರು. ಇಲ್ಲಿ ಅಮಿತಾಭ್ ಪ್ರಮುಖಪಾತ್ರವನ್ನೇ ನಿರ್ವಹಿಸಿದ್ದರು. ಆದರೆ, ಶತ್ರುಘ್ನಾರ ಪಾತ್ರ ಅಷ್ಟಾಗಿ ಗುರುತಿಸಿಕೊಳ್ಳಲೇ ಇಲ್ಲ. ಇನ್ನು, ಈ ಚಿತ್ರ ಸಕ್ಸಸ್ ಆಯಿತಾದರೂ ಆ ಯಶಸ್ಸು ದೋಸ್ತಾನದ ಯಶಸ್ಸಿನಷ್ಟು ಮಟ್ಟಕ್ಕೆ ಇರಲಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಶಾನ್ ಬಳಿಕ ಬಹುತೇಕ ಈ ಜೋಡಿ ದೂರವೇ ಆಯಿತು. ಅಷ್ಟು ದಿನ ಮಾನಸಿಕವಾಗಿ ದೂರವಾಗಿದ್ದ ಅಮಿತಾಭ್ ಶತ್ರುಘ್ನಾ ಈ ಚಿತ್ರದ ಬಳಿಕ ವೃತ್ತಿಪರವಾಗಿಯೂ ದೂರ ದೂರವಾಗಿಯೇ ಉಳಿದರು. ಅಮಿತಾಭ್, ಶತ್ರುಘ್ನಾ ಮತ್ತು ಹೊಸ ಪ್ರತಿಭೆ ಕನ್ವಲ್‍ಜಿತ್ ಅವರನ್ನಿಟ್ಟುಕೊಂಡ ರಮೇಶ್ ಸಿಪ್ಪಿ ಅವರ ಹೊಸ ಪ್ರಾಜೆಕ್ಟ್ ಕೂಡಾ ಅಲ್ಲಿಗೆ ಕಣ್ಣು ಮುಚ್ಚಿತ್ತು.

ರೂಮ್‍ಮೇಟ್​​ಗಳು : ಬಹುಶಃ ಬಹು ಜನರಿಗೆ ಇದು ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ. ಅಮಿತಾಭ್ ಬಚ್ಚನ್, ಶತ್ರುಘ್ನಾ ಸಿನ್ಹಾ, ಸಂಜೀವ್ ಕುಮಾರ್ ಮತ್ತು ಸುಭಾಶ್‍ಘಾಯ್ ಸರಿಸುಮಾರು ಒಂದೇ ಕಾಲಘಟ್ಟದಲ್ಲಿ ಮುಂಬೈಗೆ ಬಂದವರು. ಮಹಾನಗರ ಮುಂಬೈಯಲ್ಲಿ ಅದೃಷ್ಟ ಹುಡುಕುವ ಸಲುವಾಗಿ ಇವರೆಲ್ಲಾ ಇಲ್ಲಿ ಸೇರಿದ್ದರು. ಇವರೆಲ್ಲಾ ಒಂದೇ ಪಿಜಿಯಲ್ಲಿ ಇದ್ದರು. ಜೊತೆಗೆ ರೂಮ್‍ಮೇಟ್ಸ್ ಕೂಡಾ ಆಗಿದ್ದರು. ಆರಂಭಿಕ ದಿನಗಳಲ್ಲಿ ಮುಂಬೈಯಲ್ಲಿ ಕಷ್ಟ ಅನುಭವಿಸಿದ್ದ ಇವರು ಆ ಕಷ್ಟ ಕಾಲದಲ್ಲೂ ಒಟ್ಟಾಗಿಯೇ ಇದ್ದವರು. ಪ್ರತಿದಿನ ಬೆಳಗ್ಗೆ ಇವತ್ತು ಯಾರನ್ನೆಲ್ಲಾ ತಾವು ಭೇಟಿಯಾಗಲಿದ್ದೇವೆ ಎಂಬುದನ್ನು ಎಲ್ಲರೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಸಂಜೆ ಮರಳಿ ಬಂದಾಗ ಒಟ್ಟಾಗಿ ಕುಳಿತು ಪಾನಗೋಷ್ಠಿಯೂ ನಡೆಯುತ್ತಿತ್ತು. ಇವೆಲ್ಲಾ ಇವರು ಚಿತ್ರರಂಗ ಪ್ರವೇಶಿಸುವ ಮುನ್ನ ಇದ್ದ ಸ್ಥಿತಿ. ಆದರೆ, ಚಿತ್ರರಂಗದಲ್ಲಿ ಬೇರೂರಿದ ಕೆಲವರ್ಷದಲ್ಲೇ ಈ ಸ್ನೇಹದ ಪರದೆ ಹರಿಯಲಾರಂಭಿಸಿತ್ತು.

ಅಭಿಷೇಕ್ ಮದುವೆಗೂ ಆಹ್ವಾನವಿರಲಿಲ್ಲ : ಅಮಿತಾಭ್ ಶತ್ರುಘ್ನಾ ವೈರತ್ವ ಅದೆಷ್ಟು ಮಟ್ಟಕ್ಕಿತ್ತೆನ್ನುವುದು ಅಭಿಷೇಕ್ ಬಚ್ಚನ್ ಮದುವೆ ಸಂದರ್ಭದಲ್ಲಿ ಬಯಲಾಗಿತ್ತು. ಅಷ್ಟು ದಿನ ವೃತ್ತಿಪರವಾಗಿ ವೈರತ್ವವನ್ನು ಹೊಂದಿದ್ದರೂ ಅಮಿತಾಭ್ ಮತ್ತು ಶತ್ರುಘ್ನಾ ಎದುರಾದರೆ ಸ್ವಲ್ಪವಾದರೂ ಮಾತನಾಡುತ್ತಿದ್ದರು. ಆದರೆ, ಅಭಿಷೇಕ್ ಬಚ್ಚನ್ ಮದುವೆ ಬಳಿಕ ಈ ಮಾತುಕತೆ ಕೂಡಾ ನಿಂತು ಹೋಗಿತ್ತು. ಅಂದು ಅಭಿಷೇಕ್ ಮದುವೆ ಸಂದರ್ಭದಲ್ಲಿ ಬಚ್ಚನ್ ಆಯ್ಕೆ ಮಾಡಿ ಗಣ್ಯರಿಗೆಲ್ಲರಿಗೂ ಆಹ್ವಾನ ನೀಡಿದ್ದರು. ಆದರೆ, ಆ ಗಣ್ಯರ ಪಟ್ಟಿಯಲ್ಲಿ ಶತ್ರುಘ್ನಾ ಹೆಸರಿರಲಿಲ್ಲ! ನಿಶ್ಚಯವಾಗಿ ಇದೊಂದು ದೊಡ್ಡ ಅವಮಾನ ಎಂದೇ ಬಿಹಾರಿ ಬಾಬು ಶತ್ರುಘ್ನಾ ಬಾವಿಸಿದರು. ಮದುವೆಯ ಬಳಿಕ ಎಲ್ಲಾ ಸ್ನೇಹಿತರಿಗೆ ಬಿಗ್ ಬಿ ಸಿಹಿ ತಿನಿಸು ಕಳುಹಿಸಿದ್ದರು. ಆದರೆ, ಈ ಸಿಹಿ ತಿನಿಸು ಶತ್ರುಘ್ನಾ ಅವರಿಗೂ ಹೋಗಿತ್ತು. ಈ ಸಂದರ್ಭದಲ್ಲಿ ತನ್ನ ಹಳೇ ಅಪಮಾನದ ಜ್ವಾಲೆಯನ್ನು ಹೊರಹಾಕಿದ ಶತ್ರುಘ್ನಾ ಸಿಹಿತಿನಿಸನ್ನು ನಿರಾಕರಿಸಿದ್ದೇ ಅಲ್ಲದೆ, ಸುದ್ದಿಗೋಷ್ಠಿಯಲ್ಲಿ ಅಮಿತಾಭ್ ವಿರುದ್ಧ ಬಹಿರಂಗ ಹೇಳಿಕೆಯನ್ನೇ ನೀಡಿದರು. `ಯಾರಿಗೆ ಆಹ್ವಾನ ಇರಲಿಲ್ಲವೋ ಅವರು ಸ್ನೇಹಕ್ಕೂ ಅರ್ಹರಲ್ಲ’ ಎಂದು ಶತ್ರುಘ್ನಾ ಹೇಳುವ ಮೂಲಕ ಅಮಿತಾಭ್ ಮತ್ತು ತಮ್ಮ ನಡುವೆ ಇದ್ದ ಅಂತರವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದರು.

ಈ ಬಹಿರಂಗ ವಾಕ್‍ಸಮರದ ಎಪಿಸೋಡ್ ನಂತರ ಮುಂದುವರಿಯುತ್ತಲೇ ಇತ್ತು. ಅದರಲ್ಲಿ 2008ರ ಐಫಾ ಪ್ರಶಸ್ತಿ ಪ್ರದಾನ ಸಮಾರಂಭವೂ ಒಂದು. ಈ ಸಮಾರಂಭದಲ್ಲಿ ಶತ್ರುಘ್ನಾ ಅಮಿತಾಭ್ ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಅಮಿತಾಭ್ ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಿಯೆ ಕೊಟ್ಟು ಈ ಜಗಳಕ್ಕೆ ಇನ್ನಷ್ಟು ಕಾವು ಕೊಟ್ಟಿದ್ದರು. ಈ ಜಗಳ ಒಂದೆರಡು ದಿನ ಅಲ್ಲ ಹಲವು ದಿನಗಳ ಕಾಲ ಹಾಗೆಯೇ ಹಸಿಹಸಿ ಆಗಿತ್ತು. ಮಾಧ್ಯಮಗಳಿಗೂ ಭರ್ಜರಿ ರಸಗವಳವಾಗಿತ್ತು.

ಹೀಗೆ ಒಂದು ಕಾಲದ ರೂಮ್‍ಮೇಟ್ಸ್‍ಗಳು ವೃತ್ತಿಜೀವನದ ಉತ್ತುಂಗದಲ್ಲಿ ದೂರ ದೂರವಾಗಿದ್ದರು. ಅಮಿತಾಭ್ ಚಿತ್ರರಂಗದಲ್ಲಿ ಮಿಂಚುತ್ತಾ ಹೋದರೆ, ಶತ್ರುಘ್ನಾ ರಾಜಕೀಯವಾಗಿ ನೆಲೆ ಕಂಡುಕೊಂಡರು. ಆದರೆ, ರಾಜಕೀಯದ ವಿಚಾರದಲ್ಲಿ ಅಮಿತಾಭ್ ಸೋತಿದ್ದರು. ಬಾಲಿವುಡ್‍ನ ಮಟ್ಟಿಗೆ ರಾಜಕೀಯವಾಗಿ ಯಶಸ್ಸು ಕಂಡ ಸ್ಟಾರ್‍ಗಳೆಂದರೆ ಒಬ್ಬರು ಸುನಿಲ್ ದತ್ ಮತ್ತೊಬ್ಬರು ಶತ್ರುಘ್ನಾ ಸಿನ್ಹಾ. ಜನರಿಗೆ ಶತ್ರುಘ್ನಾ ಮತ್ತು ಅಮಿತಾಭ್ ನಡುವಣ ಸಂಬಂಧದ ಅಂತರ ಇರುವುದು ಗೊತ್ತಿತ್ತಾದರೂ ಕೆಲವು ಸಂದರ್ಭದಲ್ಲಿ ಶತ್ರುಘ್ನಾ ಅವರೇ ‘ನಮ್ಮಿಬ್ಬರ ನಡುವೆ ಏನೂ ಇಲ್ಲ. ಚೆನ್ನಾಗಿದ್ದೇವೆ’ ಎಂದು ಹೇಳಿದ್ದೂ ಇದೆ. ಸೇಮ್ ಡೈಲಾಗ್ ಅಮಿತಾಭ್ ಕಡೆಯಿಂದಲೂ ಬರುತ್ತಿತ್ತು.

ಇನ್ನು, ಬೇಡ ಬೇಡ ಎಂದರೂ ಅಮಿತಾಭ್ ಮತ್ತು ಶತ್ರುಘ್ನಾರ ವಿಚಾರ ಮಾಧ್ಯಮಗಳಿಗೆ ಸಿಗುತ್ತಲೇ ಇತ್ತು. `ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದ ವಿಚಾರದಲ್ಲೂ ಹಾಗೆಯೇ ಆಗಿತ್ತು. ಈ ಕಾರ್ಯಕ್ರಮವನ್ನು ಶತ್ರುಘ್ನಾ ಬೋಜ್‍ಪುರಿ ಭಾಷೆಯಲ್ಲಿ ನಡೆಸಿಕೊಡುತ್ತಿದ್ದರೆ, ಅಮಿತಾಭ್ ಹಿಂದಿಯಲ್ಲಿ ನಡೆಸಿಕೊಡುತ್ತಿದ್ದರು. ಒಂದು ಹಂತದಲ್ಲಿ ಶತ್ರುಘ್ನಾ ಅಮಿತಾಭ್‍ರನ್ನು ಅನುಕರಣೆ ಮಾಡುತ್ತಾರೆ ಎಂಬಂತಹ ಮಾತುಗಳು ಬಂತು. ಇದನ್ನು ಶತ್ರುಘ್ನಾ ಸಾರಾಸಗಟಾಗಿ ತಳ್ಳಿ ಹಾಕಿದರು. `ಅಮಿತಾಭ್ ಬಿಗ್ ಬಿ ಆದರೆ, ನಾನು ಡಬಲ್ ಬಿ(ಬಿಹಾರಿ ಬಾಬು)’ ಎಂದು ಕಿಚಾಯಿಸುತ್ತಲೇ ಶತ್ರುಘ್ನಾ ತಾನು ಅಮಿತಾಭ್‍ರನ್ನು ಯಾಕೆ ಅನುಕರಣೆ ಮಾಡಲಿ ಎಂದು ಮಾಧ್ಯಮದವರಿಗೆ ಪ್ರತಿ ಪ್ರಶ್ನೆ ಹಾಕುತ್ತಿದ್ದರು. `ಅಮಿತಾಭ್ ಅವರದ್ದೇ ಶೈಲಿಯಲ್ಲಿ ಕೆಬಿಸಿ ನಡೆಸಿಕೊಡುತ್ತಿದ್ದಾರೆ. ನಾನು ನನ್ನ ಶೈಲಿಯಲ್ಲಿ ಹೋಗುತ್ತಿದ್ದೇನೆ. ನಾನು ಅಮಿತಾಭ್‍ಗಿಂತ ಬಹಳ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ ಎಂದು ಹೇಳುತ್ತಿಲ್ಲ. ಹಾಗಂತ, ಅಮಿತಾಭ್‍ಗಿಂತ ಕೆಟ್ಟದಾಗಿಯೂ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ’ ಎಂದು ಹೇಳುತ್ತಲೇ ಸಿನ್ಹಾ ತಮ್ಮ ಸಮರ್ಥನೆಯನ್ನು ಮುಂದಿಡುತ್ತಿದ್ದರು.

ಹಳೇ ಸ್ನೇಹಿತರ ಬಾಳಲ್ಲಿ ಬೆಳಕಿನ ಹಬ್ಬ! : ಇಷ್ಟೆಲ್ಲಾ ಆಗುವಾಗ ಅಂದಿನ ಹಳೇ ಸ್ನೇಹಿತರಿಗೆ ಮತ್ತೆ ಒಂದಾಗಬೇಕು ಅನಿಸಿತ್ತೋ ಅಥವಾ ಯೌವನದ ದಿನಗಳಲ್ಲಿ ಆದ ಘಟನೆಗಳನ್ನು ಈಗ ಮುಂದುವರಿಸಿಕೊಂಡು ಹೋಗುವುದು ಬೇಡ ಎಂದೆನಿಸಿತೋ ಗೊತ್ತಿಲ್ಲ. ಆದರೆ, ಒಂದು ದೀಪಾವಳಿ ದಿನ ಶತ್ರುಘ್ನಾ ಅವರ ಕುಟುಂಬ ಅಮಿತಾಭ್ ಬಚ್ಚನ್ ಮನೆಗೆ ಬಂದಿತ್ತು. ಅಲ್ಲಿಗೆ ಇಬ್ಬರು ಸ್ನೇಹಿತರ ಬಾಳಲ್ಲಿ ಮತ್ತೆ ವೈರತ್ವದ ಕತ್ತಲು ಕರಗಿ ಬೆಳಕು ಬಂದಿತ್ತು. ಸಿನ್ಹಾ ಪತ್ನಿ ಪೂನಂ, ಮಗಳು ಸೋನಾಕ್ಷಿ, ಮಗಂದಿರಾದ ಲವ ಕುಶ ಅಂದು ಬಚ್ಚನ್ ಮನೆಯಲ್ಲೇ ದೀಪಾವಳಿ ಆಚರಿಸಿದರು. ಸಹಜವಾಗಿಯೇ ಇದು ಕೂಡಾ ಹೆಡ್‍ಲೈನ್ ಆಗುವಷ್ಟು ದೊಡ್ಡ ಸುದ್ದಿಯೇ ಆಗಿತ್ತು. ಅಮಿತಾಭ್, ಜಯ ಬಚ್ಚನ್, ಅಭಿಷೇಕ್, ಐಶ್ವರ್ಯ ಎಲ್ಲಾ ಖುಷಿಯಿಂದ ಕುಣಿದಾಡಿದರು. ಶತ್ರುಘ್ನಾ ಕೂಡಾ ಈ ದೀಪಾವಳಿ ಬಗ್ಗೆ ಮೆಚ್ಚುಗೆಯ ಮಾತನ್ನೇ ಆಡಿದ್ದರು. ನೆನಪಿರಲಿ, ಸರಿಸುಮಾರು 30 ವರ್ಷಗಳಿಂದ ಸಿನ್ಹಾ ಅಮಿತಾಭ್ ಮನೆಗೆ ಬಂದೇ ಇರಲಿಲ್ಲ!

ಶತ್ರುಘ್ನಾ ಹೇಳಿದ ಆ ಮಾತು : 80ರ ದಶಕದ ಈ ಸ್ಟಾರ್​ಗಳ ನಡುವೆ ವೈರತ್ವ ಬರಲು ಕಾರಣವೇನು ಎಂದು ಮಾಧ್ಯಮದವರು ನೇರವಾಗಿ ಒಂದು ಸಲ ಶತ್ರುಘ್ನಾ ಅವರನ್ನೇ ಕೇಳಿದ್ದರು. ಅದಕ್ಕೆ ಅವರು ಬಲು ಆದರ್ಶನೀಯ ಉತ್ತರವನ್ನೇ ಕೊಟ್ಟಿದ್ದರು. ‘ಯೌವನ ಇತ್ತು, ಜೋಷ್ ಇತ್ತು. ಅಹಂ ಕೂಡಾ ಇತ್ತು. ಈಗ ನಾವು ವಯಸ್ಕರಂತೆ, ಪರಿಪಕ್ವರಾದಂತೆ ವರ್ತಿಸುವಂತೆ ನಮ್ಮ ಅಂತಸ್ತು, ವಯಸ್ಸು ಹೇಳುತ್ತಿದೆ’ ಎಂದು ಅಂದು ಶತ್ರುಘ್ನಾ ಹೇಳಿದ್ದರು. ಅಲ್ಲಿಂದ ನಂತರ ಶತ್ರುಘ್ನಾ ಮತ್ತು ಅಮಿತಾಭ್ ನಡುವೆ ಆಲ್ ಇಸ್ ವೆಲ್ ಮಾತುಗಳೇ ಕೇಳಿ ಬರುತ್ತಿತ್ತು.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!