Thursday , November 15 2018
ಕೇಳ್ರಪ್ಪೋ ಕೇಳಿ
Home / Gulf News / ಅಮ್ಮ ಕೇರಳದಲ್ಲಿ ಮಗ ಸೂಡಾನ್​ನಲ್ಲಿ : 17 ವರ್ಷದ ಬಳಿಕ ಒಂದಾದ ತಾಯಿ ಮಗ…! :  ಶಾರ್ಜಾದಲ್ಲಿ ಕಣ್ಣಾಲಿಗಳು ಮಂಜಾಗುವ ದೃಶ್ಯ

ಅಮ್ಮ ಕೇರಳದಲ್ಲಿ ಮಗ ಸೂಡಾನ್​ನಲ್ಲಿ : 17 ವರ್ಷದ ಬಳಿಕ ಒಂದಾದ ತಾಯಿ ಮಗ…! :  ಶಾರ್ಜಾದಲ್ಲಿ ಕಣ್ಣಾಲಿಗಳು ಮಂಜಾಗುವ ದೃಶ್ಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಶಾರ್ಜಾ : ಇದು ಎಲ್ಲರ ಕಣ್ಣುಗಳೂ ಮಂಜಾಗುವಂತಹ ದೃಶ್ಯ… ತಾಯಿ ಮಗ ಬರೋಬ್ಬರಿ 17 ವರ್ಷಗಳ ಬಳಿಕ ಒಂದಾದ ನೋಟ… ಬಿಗಿದಪ್ಪುವ ತಾಯಿಯ ಕಣ್ಣಲ್ಲಿ ನೀರು, ಹೆತ್ತಮ್ಮನ ಆಲಿಂಗನದಲ್ಲಿ ಲೋಕವೇ ಮರೆತ ಮಗ… ಅರೆ ಕ್ಷಣಕ್ಕೇ ಎಲ್ಲರ ಕಣ್ಣಾಲಿಗಲ್ಲೂ ಅವರಿಗೇ ಗೊತ್ತಿಲ್ಲದಂತೆ ಜಿನುಗುತ್ತಿತ್ತು ನೀರು…! ಖಂಡಿತಾ ಇದು ಪದಗಳಲ್ಲಿ ಕಟ್ಟಿಕೊಡುವಂತಹ ದೃಶ್ಯವಂತೂ ಅಲ್ಲ. ಹೃದಯಕ್ಕೆ ಮಾತ್ರ ಅರ್ಥವಾಗುವ ನೋಟ…ಈ ದೃಶ್ಯಕ್ಕೆ ಸಾಕ್ಷಿ ಆಗಿದ್ದು ಶಾರ್ಜಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಏನದು ಘಟನೆ : ಕೇರಳದ ಕೋಝೀಕೋಡ್​​​ ಜಿಲ್ಲೆಯ ನರಿಕ್ಕುನಿ ಗ್ರಾಮದ ನೂರ್​​ ಜಹಾನ್​ ಕಣ್ಣುಗಳು ಮಗನಿಗಾಗಿ ಹುಡುಕುತ್ತಿತ್ತು… ವಿಮಾನದಿಂದ ಇಳಿದು ಒಳಗೆ ಕಾಲಿಡುತ್ತಿದ್ದಂತೆಯೇ ಅವರ ಹೃದಯಬಡಿತವೂ ಹೆಚ್ಚಾಗಿತ್ತು. ಮಗನನ್ನು ಕಾಣುವ ತವಕ ಅವರಲ್ಲಿತ್ತು… ಇತ್ತ ಮಗ ಹನಿ ಕೂಡಾ ಅಷ್ಟೇ… ತಾಯಿಗಾಗಿ ಪ್ರತೀ ಕ್ಷಣ ಹಪಹಪಿಸುತ್ತಿದ್ದ ಜೀವ ಹನಿ… ಯಾಕೆಂದರೆ, ಆತ ತಾಯಿಯನ್ನು ನೋಡಿದ್ದು ಅವನಿಗೆ 4 ವರ್ಷ ಆಗಿದ್ದಾಗ… ಇದಾಗಿ ಬರೋಬ್ಬರಿ 17 ವರ್ಷ ಉರುಳಿದೆ… ಹನಿಯೂ ತಾಯಿಯನ್ನು ನೋಡದೆ ಚಡಪಡಿಸುತ್ತಿದ್ದ…

ಬಂದೇ ಬಿಟ್ಟಿತು ನೋಡಿ ಆ ಕ್ಷಣ…! ತಾಯಿ ಮತ್ತು ಮಗ ಒಂದಾದರು. ಅದು ಬರೋಬ್ಬರಿ 17 ವರ್ಷದ ಬಳಿಕ…! ಮಾತನಾಡಲು ಪದಗಳೇ ಇಲ್ಲ. ಅಲ್ಲಿದ್ದದ್ದು ಬರೀ ಕಣ್ಣೀರು ಮಾತ್ರ…! ತಾಯಿಗೆ ಮಗನನ್ನು ಎಷ್ಟು ಮುದ್ದಿಸಿದರೂ ಸಾಲದು… ನೂರ್​​ ಜಹಾನ್​ ಮಗನ್ನು ಪುಟ್ಟ ಕಂದನಂತೆ ಮುದ್ದಿಸಿದರು. ಇಷ್ಟು ದೊಡ್ಡ ಹುಡುಗ ಹನಿ ಎಲ್ಲವನ್ನೂ ಮರೆತು ತಾನೂ ಹಾಲುಗಲ್ಲದ ಕಂದನಂತಾದ… ತಾಯಿ ಸಿಕ್ಕ ಖುಷಿ ಆತನಿಗೆ, ಮಗ ಸಿಕ್ಕಿ ಖುಷಿ ಹೆತ್ತ ಕರುಳಿಗೆ…

ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿದ್ದರು ಅಲ್ಲಿದ್ದವರು… ಈ ದೃಶ್ಯವನ್ನು ನೋಡಿದಾಗ ಎಂತಹ ಕಲ್ಲು ಹೃದಯವೂ ಕರಗಿ ನೀರಾಗುತ್ತಿತ್ತು… ಜನರೂ ಕಣ್ಣೀರಿಟ್ಟರು…!


ಏಕೆ ದೂರವಾಗಿದ್ದರು…? :  ಸೂಡಾನ್​​​ನ ವ್ಯಕ್ತಿಯೊಬ್ಬ ಕೇರಳಕ್ಕೆ ವ್ಯಾಸಂಗಕ್ಕೆ ಹೋಗಿದ್ದ ಸಂದರ್ಭದಲ್ಲಿ ನೂರ್​ ಜಹಾನ್​ರನ್ನು ಮದುವೆಯಾಗಿದ್ದ. ಆದರೆ, ಹನಿ ಹುಟ್ಟಿದ ಬಳಿಕ ಪತ್ನಿಯನ್ನು ತ್ಯಜಿಸಿದ ಆತ ಮಗನನ್ನು ಕರೆದುಕೊಂಡು ಸೂಡಾನ್​ಗೆ ಬಂದ… ಆಗ ಹನಿಗೆ ವರ್ಷ 4… ತಾಯಿಂದ ದೂರವಾದ ಹನಿ ನಾದೇರ್​ ಮರ್ಗಾನಿ ಅಲಿ ಭಾರತದಲ್ಲಿರುವ ತನ್ನ ತಾಯಿಗಾಗಿ ಪ್ರತೀ ಕ್ಷಣ ಕಣ್ಣೀರಿಡುತ್ತಿದ್ದ… ತನ್ನ ಮೂವರು ಸಹೋದರಿಯರನ್ನೂ ನೋಡಲು ಈತ ಹಪಿಸುತ್ತಿದ್ದ… ಯಾಕೆಂದರೆ, ತನ್ನ ಮಲತಾಯಿಯಿಂದ ಮತ್ತು ತಂದೆಯಿಂದ ಈತ ಪ್ರತೀಕ್ಷಣ ನೋವು ತಿನ್ನುತ್ತಿದ್ದ. ಅವರಿಬ್ಬರು ಈತನನ್ನು ಪ್ರಾಣಿಗಿಂತ ಕಡೆಯಾಗಿ ನೋಡುತ್ತಿದ್ದರು. ಹೀಗಾಗಿ, ತನ್ನ ಸಾಮಾಜಿಕ ಜಾಲತಾಣದಲ್ಲಿ ತಾಯಿಯನ್ನು ಕಾಣುವ ಬಯಕೆಯ ಬಗ್ಗೆ ಈತ ಬರೆದುಕೊಂಡಿದ್ದ… ಈ ಸಂದೇಶ ಸಮೀರಾ ಎಂಬುವವರಿಗೆ ಬಹುವಾಗಿ ಕಾಡಲಾರಂಭಿಸಿತು. ತಕ್ಷಣ ಹನಿಯನ್ನು ಮತ್ತು ನೂರ್​ ಜಹಾನ್​ರನ್ನು ಸೇರಿಸುವ ಕಾರ್ಯಕ್ಕೆ ಇವರಿಳಿದರು. ಇದಕ್ಕಾಗಿಯೇ ಹನಿಯನ್ನು ದುಬೈಗೆ ಇವರು ಕರೆತಂದಿದ್ದರು…

ಈತನ ಕತೆ ಕೇಳಿದ ಹಲವರು ಮನಸು ಕರಗಿ ಈತನಿಗೆ ಇಲ್ಲಿಯೇ ಉದ್ಯೋಗ ನೀಡುವ ಭರವಸೆ ನೀಡಿದರು. ತಾಯಿಯನ್ನು ಭೇಟಿಯಾಗುವ ತನಕ ಈತ ಟೈಪಿಂಗ್ ಸೆಂಟರ್​ನಲ್ಲಿ ಕೆಲಸಕ್ಕೂ ಸೇರಿದ್ದ.ಇಲ್ಲಿ ಈತನ ತಾಯಿಯನ್ನು ಕರೆತರುವ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಿದರು. ಪಾಕಿಸ್ತಾನದ ಉದ್ಯಮಿ ತಲಾಹ್​ ಶಾ ಎಂಬುವವರು ಇದಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ್ದರು. ಆ ಕ್ಷಣವೂ ಬಂದೇ ಬಿಟ್ಟಿತು. ತಾಯಿ ಮಗ ಶಾರ್ಜಾದಲ್ಲಿ ಒಂದಾದರು…

ಈಗ ಮಗನನ್ನು ಕೇರಳಕ್ಕೆ ಕರೆದುಕೊಂಡು ಹೋಗಲು ಈ ತಾಯಿ ಬಯಸಿದ್ದಾರೆ. ಅಣ್ಣನಿಗಾಗಿ ಅಲ್ಲಿ ಸಹೋದರಿಯರು ಕಾಯುತ್ತಿದ್ದಾರೆ. ಹೀಗಾಗಿ, ಮುಂದಿನ ಪ್ರಕ್ರಿಯೆಗಾಗಿ ಇವರೆಲ್ಲಾ ಕಾದು ಕುಳಿತಿದ್ದಾರೆ. ಒಟ್ಟಿನಲ್ಲಿ, ತಾಯಿ ಮಗ 17 ವರ್ಷದ ಬಳಿಕ ಒಂದಾದ ಖುಷಿ ಅಲ್ಲಿ ಎಲ್ಲರಲ್ಲೂ ಮನೆ ಮಾಡಿತ್ತು…

image and video courtesy : Khaleej Times

* ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿ ಕಮೆಂಟ್​ ಬಾಕ್ಸ್​ನಲ್ಲಿ ಹಾಕಿ.

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!