Tuesday , April 23 2019
ಕೇಳ್ರಪ್ಪೋ ಕೇಳಿ
Home / Sandalwood / ಹೊಸ ಬಾಳಿಗೆ ಕಾಲಿಟ್ಟ ಪ್ರಿಯಾಮಣಿ : ಬೆಂಗಳೂರಿನ ರಿಜಿಸ್ಟರ್ ಕಚೇರಿಯಲ್ಲಿ ಕಲ್ಯಾಣ

ಹೊಸ ಬಾಳಿಗೆ ಕಾಲಿಟ್ಟ ಪ್ರಿಯಾಮಣಿ : ಬೆಂಗಳೂರಿನ ರಿಜಿಸ್ಟರ್ ಕಚೇರಿಯಲ್ಲಿ ಕಲ್ಯಾಣ

ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ… ಅದೂ ತುಂಬಾ ಸರಳವಾಗಿ ಅಂದರೆ ತುಂಬಾ ಸರಳವಾಗಿ ಪ್ರಿಯಾಮಣಿ ಮದುವೆ ನಡೆದಿದೆ. ಬೆಂಗಳೂರಿನ ರಿಜಿಸ್ಟರ್ ಕಚೇರಿಯಲ್ಲಿ ದಾಖಲೆಗೆ ಸಹಿ ಹಾಕುವ ಮೂಲಕ ಪ್ರಿಯಾಮಣಿ ಮದುವೆ ಸಾಂಗವಾಗಿ ನೆರವೇರಿದೆ. ಈ ಕ್ಷಣಕ್ಕೆ ಮನೆಯವರು ಮಾತ್ರ ಸಾಕ್ಷಿ ಆಗಿದ್ದಾರೆ…

ಸ್ಟಾರ್​ಗಳ ಮದುವೆ ಎಂದರೆ ನಮಗಿರುವ ಕಲ್ಪನೆಗಳೇ ಬೇರೆ… ಕಣ್ಣು ಕೋರೈಸುವಷ್ಟು ಅಲಂಕಾರ, ಸ್ವರ್ಗವೇ ಧರಿಗಿಳಿದಂತಹ ಅನುಭವ ಕೊಡುವಂತಹ ವೇದಿಕೆ… ಹೀಗೆ… ಸಿನೆಮಾ ನಟ , ನಟಿಯರ ಮದುವೆ ಅಂದರೆ ನಮ್ಮ ಕಣ್ಣ ಮುಂದೆ ಬರೀ ವೈಭವದ ದೃಶ್ಯಗಳೇ ಸುಳಿದಾಡುತ್ತವೆ… ಆದರೆ, ಬಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ ಮಾತ್ರ ಇದಕ್ಕಿಂತ ತುಂಬಾ ತದ್ವಿರುದ್ಧ… ಸ್ಟಾರ್​ ಪಟ್ಟದ ಕಿರೀಟ ತಲೆಯ ಮೇಲೆ ಹೊಳೆಯುತ್ತಿದ್ದರೂ ಪ್ರಿಯಾಮಣಿ ಸಿಂಪಲ್​ ಆಗಿ ಮದುವೆ ಆಗಿ ಗಮನ ಸೆಳೆದಿದ್ದಾರೆ…

ಬೆಂಗಳೂರಿನ ಜಯನಗರದ ರಿಜಿಸ್ಟರ್​ ಕಚೇರಿಯಲ್ಲಿ ಪ್ರಿಯಾಮಣಿ ಸಿಂಪಲ್ ಕಲ್ಯಾಣ ನಡೆದಿದೆ. ತನ್ನ ಬಹುಕಾಲದ ಗೆಳೆಯ ಮುಸ್ತಫಾ ರಾಜ್​ ಪ್ರಿಯಾಮಣಿ ಬಾಳ ಸಂಗಾತಿಯಾಗಿ ಬಂದಿದ್ದಾರೆ. ಈ ಪ್ರೇಮಪತಂಗಗಳು ಸತಿಪತಿಗಳಾಗುವ ಕ್ಷಣಕ್ಕೆ ಎರಡೂ ಮನೆಯವರಷ್ಟೇ ಸಾಕ್ಷಿ ಆಗಿದ್ದಾರೆ…

ಪ್ರಿಯಾಮಣಿ ಪ್ರೀತಿಗೆ ಬಿದ್ದು ಬಹಳ ವರ್ಷವೇ ಆಗಿದೆ… ಪ್ರಿಯಾಮಣಿ ಪ್ರೀತಿಯ ಸುದ್ದಿ ಬಹಳ ಹಳೆಯದ್ದೇ… ಆದರೆ, ಈಗ ಈ ಪ್ರಣಯ ಪರಿಣಯದಲ್ಲಿ ಸಾರ್ಥಕವಾಗುತ್ತಿದೆ… ಪ್ರಿಯಾಮಣಿ ಪ್ರೀತಿಗೆ ಬಿದ್ದಿದ್ದಾರಾ ಎಂಬ ಸುದ್ದಿಯೊಂದು ಒಂದೆರಡು ವರ್ಷಗಳ ಹಿಂದೆ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಿತ್ತು. ಆಗ ಇಲ್ಲಪ್ಪಾ, ಹಾಗೇನಿಲ್ಲ, ಇದೆಲ್ಲಾ ಸುಳ್ಳು ಎಂದು ಹೇಳುತ್ತಲೇ ಗಾಸಿಪ್​ಗಳನ್ನು ತಳ್ಳಿ ಹಾಕುತ್ತಾ ಬರುತ್ತಿದ್ದ ಪ್ರಿಯಾಮಣಿ ಕಳೆದ ವರ್ಷ ಇದಕ್ಕೆ ಉತ್ತರ ಕೊಟ್ಟಿದ್ದರು. ಹೌದು ತಾವು ಪ್ರೀತಿಗೆ ಬಿದ್ದಿರೋದಾಗಿ ಹೇಳಿದ್ದ ಪ್ರಿಯಾಮಣಿ, ಮುಸ್ತಫ ರಾಜ್ ತನ್ನ ಬಾಳಸಂಗಾತಿಯಾಗಲಿದ್ದಾರೆ ಎಂಬುದನ್ನೂ ಘೋಷಿಸಿದ್ದರು… ಜೊತೆಗೆ, ಟ್ವಿಟರ್​ನಲ್ಲಿ ತನ್ನ ಸಂಗಾತಿಯೊಂದಿಗೆ ಇದ್ದ ಸುಂದರ ಕ್ಷಣದ ಫೋಟೋಗಳನ್ನೂ ಪ್ರಿಯಾ ಅಪ್​ಲೋಡ್ ಮಾಡಿ ತನ್ನ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ್ದರು. ಈ ಫೋಟೋ ನೋಡಿ ಅದೆಷ್ಟು ಹುಡುಗನ ಎದೆ ಒಡೆದು ಹೋಗಿತ್ತಾ ಆ ದೇವರಿಗೇ ಗೊತ್ತು… ಇದಾದ ಬಳಿಕ ಕಳೆದ ವರ್ಷದ ಮೇ 27ಕ್ಕೆ ಪ್ರಿಯಾಮಣಿ, ಮುಸ್ತಪಾ ನಿಶ್ಚಿತಾರ್ಥವೂ ನಡೆದಿತ್ತು…

ಹೀಗೆ ನಿಶ್ಚಿತಾರ್ಥದ ಮೂಲಕ ತಮ್ಮ ಪ್ರೀತಿಯನ್ನು ಇನ್ನಷ್ಟು ಗಟ್ಟಿಯಾಗಿಸಿದ ಈ ಜೋಡಿ ಮತ್ತೊಂದು ಮಾದರಿ ನಿರ್ಧಾರ ತೆಗೆದುಕೊಂಡಿತ್ತು… ಅದೇ ಸರಳ ವಿವಾಹ… ತುಂಬಾ ಸಿಂಪಲ್​ ಆಗಿ ಮದುವೆಯಾಗುವುದು ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್​ ಕೈಗೊಂಡಿರುವ ನಿರ್ಧಾರ. ಹಾಗಂತ, ಇವರಿಗೆ ಎಲ್ಲರೂ ದಿಟ್ಟಿಸಿ ನೋಡುವಂತೆ ಮದುವೆ ಆಗುವ ಶಕ್ತಿ ಇಲ್ಲ ಎಂದಲ್ಲ. ಆದರೆ ಆ ರೀತಿಯ ಅದ್ಧೂರಿ ಮದುವೆ ಬೇಡ ಎಂಬುದಷ್ಟೇ ಇವರ ಮನಸ್ಸು… ಅದೂ ಅಲ್ಲದೆ, ಎರಡೂ ಧರ್ಮವನ್ನು ಗೌರವಿಸುವುದು ಕೂಡಾ ಇವರ ಈ ನಿರ್ಧಾರದ ಉದ್ದೇಶದಲ್ಲಿ ಒಂದು… ಯಾಕೆಂದರೆ, ಪ್ರಿಯಾಮಣಿ ಮತ್ತು ಮುಸ್ತಫಾ ಇಬ್ಬರ ಧರ್ಮವೂ ಬೇರೆ ಬೇರೆ… ಹೀಗಾಗಿ, ಸಾಂಪ್ರದಾಯಿಕವಾಗಿ ಮದುವೆಯಾಗಿ ಇಬ್ಬರಲ್ಲಿ ಯಾರ ಭಾವನೆಗೂ ಧಕ್ಕೆಯಾಗುವುದು ಬೇಡ ಎಂಬ ಉದ್ದೇಶದಿಂದಲೇ ಸಿಂಪಲ್ ಆಗಿಯೇ ಇವರಿಬ್ಬರು ಮದುವೆ ಆಗಿದ್ದಾರೆ. ಈ ಮೂಲಕ ಸಿನಿಲೋಕದಲ್ಲಿ ಮದುವೆಯಾಗುವ ಇನ್ನೊಂದಷ್ಟು ಜೋಡಿಗೆ ದಾರಿಯಾಗಿದ್ದಾರೆ…

ಇನ್ನು, ಮದುವೆಗೆ ಮುಂಚಿನ ದಿನದ ಮೆಹಂದಿ ಶಾಸ್ತ್ರ ಮಾತ್ರ ಅದ್ಧೂರಿಯಾಗಿಯೇ ನಡೆದಿದೆ… ತಾಜ್​ ವೆಸ್ಟ್​ಎಂಡ್​ನಲ್ಲಿ ಪ್ರಿಯಾಮಣಿ ಈ ಮೆಹಂದಿ ಕಾರ್ಯಕ್ರಮ ನಡೆದಿದ್ದು ಸಂಬಂಧಿಕರೆಲ್ಲಾ ಹಾಜರಾಗಿದ್ದರು. ಪ್ರಿಯಾಮಣಿ ದಕ್ಷಿಣ ಭಾರತದ ಬೇಡಿಕೆಯ ನಟಿ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿರಪರಿಚಿತ ನಟಿ ಇವರು. ಶಾರೂಖ್ ಅಭಿನಯದ ಚೆನ್ನೈ ಎಕ್ಸ್​ಪ್ರೆಸ್​ನಲ್ಲೂ ಪ್ರಿಯಾಮಣಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇಂತಹ ಪ್ರಿಯಾಮಣಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವ ಸಂದರ್ಭದಲ್ಲಿಯೇ ಮುಸ್ತಾಫಾ ಅವರೊಂದಿಗೆ ಪ್ರೀತಿಗೆ ಬಿದ್ದಿದ್ದರು.

ಮುಸ್ತಫಾ ಇವೆಂಟ್​ ಮ್ಯಾನೇಜ್​ಮೆಂಟ್​ ಕಂಪೆನಿ ಇಟ್ಟುಕೊಂಡಿದ್ದು, ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಸಂದರ್ಭದಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದು. ಈ ಭೇಟಿ ಬಳಿಕ ಸ್ನೇಹಕ್ಕೆ ತಿರುಗಿ, ಪ್ರೇಮವಾಗಿತ್ತು… ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರೂ ಒಪ್ಪಿಕೊಂಡಿದ್ದರು. ಇದಾದ ಬಳಿಕವೇ ಈ ಜೋಡಿ ತಮ್ಮನಿಶ್ಚಿತಾರ್ಥದ ಉಂಗುರ ಬದಲಾಯಿಸಿಕೊಂಡಿದ್ದು…

ಈಗ ಇವರಿಬ್ಬರು ಸತಿಪತಿಗಳಾಗಿದ್ದು, ಇಬ್ಬರ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಈ ನಡುವೆ, ಮದುವೆ ಬಳಿಕ ಪ್ರಿಯಾ ಚಿತ್ರರಂಗದಿಂದ ಬ್ರೇಕ್ ಪಡೀತಾರಾ ಎಂಬ ಪ್ರಶ್ನೆಯೂ ಹಲವರನ್ನು ಕಾಡಿದ್ದೂ ಇದೆ. ಆದರೆ, ಇದಕ್ಕೆಲ್ಲಾ ಉತ್ತರ ನೀಡಿರುವ ಪ್ರಿಯಾ, ಮದುವೆಯಾದ ಎರಡೇ ದಿನಕ್ಕೆ ಶೂಟಿಂಗ್​ಗೆ ಮರಳುತ್ತೇನೆ ಎನ್ನುವ ಮೂಲಕ ಸಿನಿಲೋಕದಲ್ಲಿ ಸಕ್ರಿಯರಾಗುವ ಸುಳಿವು ನೀಡಿದ್ದಾರೆ. ಅದೂ ಅಲ್ಲದೆ, ಪ್ರಿಯಾಮಣಿ ಕೈಯಲ್ಲಿ ಈಗ ಎರಡು ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳಿವೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!