ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಅಬು ದುಬೈ : ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಕಾರ್ಮಿಕ ನೀತಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿರುವ ತನ್ನ ದೇಶದ ಕಾರ್ಮಿಕರ ನೆರವಿಗೆ ಭಾರತ ಬಂದಿದೆ. ಕಾರ್ಮಿಕರ ಕಾನೂನು ಹೋರಾಟಕ್ಕೆ ಹಣಕಾಸಿನ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ತನ್ನ ನೆಲದ ಜನರ ಸಂಕಷ್ಟಕ್ಕೆ ಧ್ವನಿಯಾಗಲು ಹೊರಟಿದೆ.
ಯುಎಇಯಲ್ಲಿರುವ ಭಾರತೀಯ ದೂತವಾಸ ಕಚೇರಿ ಈ ರೀತಿಯ ಆರ್ಥಿಕ ನೆರವು ನೀಡಲಿದೆ. ಬರೀ ಕಾರ್ಮಿಕ ನೀತಿ ಮಾತ್ರವಲ್ಲದೆ ಇತರ ಕಾನೂನು ಹೋರಾಟಕ್ಕೂ ಭಾರತೀಯ ದೂತವಾಸ ಕಚೇರಿ ನೆರವಾಗಲಿದೆ. ಇಂಡಿಯನ್ ಕಮ್ಯೂನಿಟಿ ವೆಲ್ಫೇರ್ ಫಂಡ್ನಿಂದ ರಾಯಭಾರ ಕಚೇರಿ ಈ ಸಹಾಯ ಮಾಡಲಿದೆ. ಸೆಪ್ಟೆಂಬರ್ 1 ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.
ಇಲ್ಲಿ ಹಲವಾರು ಕಂಪೆನಿಗಳು ಮುಚ್ಚಿವೆ. ಪರಿಣಾಮ, ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಹಲವು ಪ್ರಕರಣಗಳು ನಡೆಯುತ್ತಿವೆ. ಇನ್ನು ಕೆಲ ಕಾರ್ಮಿಕರಿಗೆ ಸಾಕಷ್ಟು ತಿಂಗಳ ಸಂಬಳ ಬಾಕಿ ಇರುವ ಪ್ರಕರಣಗಳೂ ಇವೆ. ಹೀಗೆ ಸಂಕಷ್ಟ ಅನುಭವಿಸುತ್ತಿರುವವರು ನ್ಯಾಯಾಲಯದ ಮೆಟ್ಟಿಲೇರಲು ಹಣಕಾಸಿನ ಶಕ್ತಿ ಇರುವುದಿಲ್ಲ. ಈಗ ಈ ಹೊಸ ನೀತಿಯಿಂದ ಇಂತಹ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.