Wednesday , January 23 2019
ಕೇಳ್ರಪ್ಪೋ ಕೇಳಿ
Home / Interval / ನೆನಪಿನಂಗಳಕ್ಕೆ ಸರಿದ ವಿಜಯನಗರದ ವೀರಪುತ್ರ : ಇಲ್ಲಿದೆ ಸುದರ್ಶನ್ ಹೆಜ್ಜೆ ಗುರುತು

ನೆನಪಿನಂಗಳಕ್ಕೆ ಸರಿದ ವಿಜಯನಗರದ ವೀರಪುತ್ರ : ಇಲ್ಲಿದೆ ಸುದರ್ಶನ್ ಹೆಜ್ಜೆ ಗುರುತು

ಬೆಂಗಳೂರು : ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಯೊಂದು ನೆನಪಿನಂಗಳಕ್ಕೆ ಸರಿದಿದೆ. ಹಿರಿಯ ನಟ ಆರ್​.ಎನ್​.ಸುದರ್ಶನ್​​ ವಿಧಿವಶರಾಗಿದ್ದಾರೆ… ಈ ಮೂಲಕ ಸ್ಯಾಂಡಲ್​ವುಡ್​​ನ ಪ್ರತಿಭೆಯ ಪ್ರಖರ ಪ್ರಭೆಯೊಂದು ಮರೆಯಾಗಿದೆ… ಇದು ಎಲ್ಲರನ್ನೂ ನೋವಿನ ಕಡಲಲ್ಲಿ ಮುಳುಗುವಂತೆ ಮಾಡಿದೆ…

ಆರ್​.ಎನ್​.ಸುದರ್ಶನ್​​. ಕನ್ನಡ ಸಿನೆಮಾ ಲೋಕ ಅದ್ಭುತ ಪ್ರತಿಭೆ… ಕಂಚಿನ ಕಂಠ, ಗಂಟಿಕ್ಕಿದ ಮುಖ, ಅಜಾನುಬಾಹು ದೇಹ… ನೋಡಿದರೇನೆ ಭಯ ಹುಟ್ಟಿಸುವಂತಹ ನಿಲುವು, ಭಂಗಿ.. ಹೀಗೆ, ಒಂದು ಕ್ಷಣಕ್ಕೆ ಭಯ ಹುಟ್ಟಿಸುವಂತೆ ಕಂಡರೂ ಹೃದಯ ಮಾತ್ರ ಮುಗುವಿನಂತಹದ್ದು…ನಟನೆಗೆ ನಿಂತರೆ ಸುದರ್ಶನ್​ ಅವರನ್ನು ಹಿಂದಿಕ್ಕುವವರೇ ಇಲ್ಲ. ಅವರೊಬ್ಬ ಅದ್ಭುತ ಪ್ರತಿಭೆಯ ಗಣಿ… ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದವರು ಸುದರ್ಶನ್​​… ನಾಯಕನಾಗಿ ಅಲ್ಲದೆ, ವಿವಿಧ ಪಾತ್ರದಲ್ಲಿ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಇವರು ಗಮನ ಸೆಳೆದಿದ್ದಾರೆ…

ಇಂತಹ ಮಹಾನ್ ನಟ ಈಗ ನಮ್ಮೊಂದಿಗಿಲ್ಲ. ಬಹು ಅಂಗಾಂಗ್ಯ ವೈಫಲ್ಯದಿಂದ ಸುದರ್ಶನ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುದರ್ಶನ್ ಕೊನೆಯುಸಿರೆಳೆದಿದ್ದಾರೆ… ಕಳೆದ ಶುಕ್ರವಾರ ಮನೆಯಲ್ಲಿ ಜಾರಿ ಬಿದ್ದಿದ್ದ ಸುದರ್ಶನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು… ಈ ವೇಳೆ, ತಿಳಿಯಿತು ಸುದರ್ಶನ್​ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂಬ ಸಂಗತಿ. ಹೃದಯದ ಸಮಸ್ಯೆ, ಯಕೃತ್​ನ ತೊಂದರೆ ಅಲ್ಲದೆ, ಜಾಂಡೀಸ್​ನಿಂದಲೂ ಸುದರ್ಶನ್​ ಬಳಲುತ್ತಿದ್ದರು. ಬಹುಶಃ ಇದೇ ಕಾರಣದಿಂದ ಇವರು ಮನೆಯ ಬಾತ್​ರೂಮ್​ನಲ್ಲಿ ಜಾರಿ ಬಿದ್ದಿರಲೂ ಬಹುದು ಎಂದು ವೈದ್ಯರು ಅಂದು ಹೇಳಿದ್ದರು… ಆದರೆ, ಇದೀಗ ಕರುನಾಡ ಜನರನ್ನು ನೋವಿನ ಕಡಲಲ್ಲಿ ಮುಳುಗಿಸಿ ಸುದರ್ಶನ್ ಮರೆಯಾಗಿದ್ದಾರೆ… ಕಾಲನ ಕರೆಗೆ ಓಗೊಟ್ಟ ಈ ವೀರಪುತ್ರ ಬಣ್ಣದ ಲೋಕದ ಯಾತ್ರೆ ಮುಗಿಸಿ ಮುನ್ನಡೆದಿದ್ದಾರೆ…

ಸುದರ್ಶನ್ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಸಿದ್ದರು. ಇತ್ತೀಚೆಗೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ಸ್ವಾಮೀಜಿಯ ಪಾತ್ರವನ್ನು ಮಾಡುತ್ತಿದ್ದರು… ನಾಯಕನಾಗಿ ಚಿತ್ರರಂಗಕ್ಕೆ ಬಂದ ಇವರು ಗಾಯಕನಾಗಿಯೂ ಗಮನ ಸೆಳೆದಿದ್ದರು. ಅಲ್ಲದೆ, ಖಡಕ್​ ವಿಲನ್​ ಆಗಿಯೂ ಸುದರ್ಶನ್ ಪಾತ್ರ ಮಸ್ತ್ ಮಸ್ತ್​… ದ್ವಾರಕೀಶ್ ಅಭಿನಯದ ಪ್ರಚಂಡ ಕುಳ್ಳ ಚಿತ್ರದಲ್ಲಿ ಸುದರ್ಶನ್ ಅವರ ಕಿಂಕಿಣಿ ಶರ್ಮಾ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಆದಲ್ಲದೆ ಮಾಂತ್ರಿಕನ ಪಾತ್ರದಲ್ಲಿ ಸುದರ್ಶನ್​ ಅವರನ್ನು ಹಿಂದಿಕ್ಕುವವರೇ ಇಲ್ಲ ಎಂಬಂತಹ ಸ್ಥಿತಿ ಒಂದು ಸಲ ಇತ್ತು… ಸುದರ್ಶನ್ ಅವರ ದೇಹ ಮತ್ತು ಮುಖ, ಹಾವಭಾವ ಇಂತಹ ಅತಿಮಾನುಷ ಪಾತ್ರಗಳಿಗೆ ಹೇಳಿ ಮಾಡಿದಂತಿತ್ತು… ಎಲ್ಲರಿಗೂ ಬೇಕಾದಂತಹ ನಟ ಇವರು, ತುಂಬಾ ಸ್ನೇಹಮಯಿ.. ಆದರೆ, ಇವೆಲ್ಲಾ ಈಗ ಬರೀ ನೆನಪಷ್ಟೇ…

ಸುದರ್ಶನ್​ ಅವರು ಹುಟ್ಟಿದ್ದು 1939ರ ಮೇ 2 ರಂದು… ಇವರ ಪೂರ್ಣ ಹೆಸರು ರಟ್ಟಹಳ್ಳಿ ನಾಗೇಂದ್ರ ಸುದರ್ಶನ್​​…. ಕನ್ನಡ ಚಿತ್ರರಂಗದ ಮೊದಲ ಕುಟುಂಬ ಆರ್​.ನಾಗೇಂದ್ರ ರಾಯರ ಪುತ್ರ ಇವರು… ರತ್ನಭಾಯಿ ತಾಯಿ… ನಟನಾಗಿ ಅಷ್ಟೇ ಅಲ್ಲದೆ, ನಿರ್ಮಾಪಕರಾಗಿಯೂ ಗಮನ ಸೆಳೆದವರು ಸುದರ್ಶನ್​​​… ಇವರ ಪತ್ನಿ ಶೈಲಶ್ರೀ ಅವರು ಕೂಡಾ ಕನ್ನಡದಲ್ಲಿ ನಟಿಯಾಗಿದ್ದವರು…

ಹಲವು ದಶಕಗಳಿಂದ ಸುದರ್ಶನ್​ ಚಿತ್ರರಂಗದಲ್ಲಿ ಸಕ್ರಿಯ. ಇವರ ಮೊದಲ ಚಿತ್ರ ವಿಜಯನಗರದ ವೀರಪುತ್ರ… 1961ರಲ್ಲಿ ರಿಲೀಸ್ ಆದ ಚಿತ್ರ ಇದು… ಆಗ ಸುದರ್ಶನ್ ಅವರ ವಯಸ್ಸು 21…  ಈ ಚಿತ್ರವನ್ನು ನಿರ್ದೇಶಿಸಿದವರು ಸುದರ್ಶನ್ ಅವರ ತಂದೆ ಆರ್ ನಾಗೇಂದ್ರ ರಾವ್​ ಅವರು… ನಿರ್ಮಾಪಕರು ಕೂಡಾ ಇವರೇ… ಈ ಚಿತ್ರ ಅಪಾರ ಕೀರ್ತಿ ಗಳಿಸಿದಂತಹ ಭವ್ಯ ನಾಡಿದು ಹಾಡು ಸಾರ್ವಕಾಲಿಕ ಹಿಟ್​ ಗೀತೆ… ಇಂದಿಗೂ ಈ ಹಾಡು ಜನಜನಿತ…

ಇದಾದ ಬಳಿಕ ಸುಮಾರು 60 ಚಿತ್ರಗಳಲ್ಲಿ ಇವರು ನಾಯಕನಾಗಿ ನಟಿಸಿ ಮಿಂಚಿದ್ದರು… ನಾಯಕನಾಗಿ ಮಿಂಚುತ್ತಿದ್ದ ಸುದರ್ಶನ್ ಅವರನ್ನು ಬಳಿಕ ಕೈ ಬೀಸಿ ಕರೆದದ್ದು ಖಳನಾಯಕನ ಪಾತ್ರ… ಖಳಪಾತ್ರಕ್ಕೆ ಹೇಳಿ ಮಾಡಿಸಿದಂತಹ ದೇಹ ಸಿರಿ ಇವರದ್ದು… ಸುದರ್ಶನ್ ತೆರೆಗೆ ಬಂದರೆ ಸಾಕು ಮೈಯೆಲ್ಲಾ ಭಯದಿಂದ ನಡುಗುತ್ತಿದ್ದ ಕಾಲವೂ ಒಂದಿತ್ತು… ಹಾಗಂತ, ಖಳನಾಯಕನ ಪಾತ್ರವನ್ನಷ್ಟೇ ಇವರು ಮಾಡುತ್ತಿದ್ದರು. ಆದರೆ, ನಿಜ ಜೀವನದಲ್ಲಿ ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿ ಇವರು…

ಗಾಯಕನಾಗಿಯೂ ಸುದರ್ಶನ್ ಅವರು ಇಂದಿಗೂ ಜನಜನಿತ… ಇವರು ಹಾಡಿರುವುದು ಕೆಲವೇ ಕೆಲವು ಗೀತೆಯಾದರೂ ಆ ಎಲ್ಲಾ ಹಾಡುಗಳು ಇಂದಿಗೂ ಕಿವಿಗಿಂಪು… ತೀರಾ ಇತ್ತೀಚಿನ ದಿನಗಳಲ್ಲೂ ಕೈಯಲ್ಲಿ ಮೈಕ್​ ಸಿಕ್ಕರೆ ತಮ್ಮ ಹಳೆಯ ಗೀತೆಗಳನ್ನು ಹಾಡಿ ಸಂಭ್ರಮಿಸುತ್ತಿದ್ದರು ಸುದರ್ಶನ್​​​.. 1971ರ ಶುಭಮಂಗಲ ಚಿತ್ರದ ಹೂವೊಂದು ಬಳಿ ಬಂದು ತಾಕಿತು ಎನ್ನದೆಯ… ಹಾಡನ್ನು ಹಾಡಿದ್ದು ಇದೇ ಸುದರ್ಶನ್​ ಅವರು… ಇದೇ ವರ್ಷ ತೆರೆ ಕಂಡ ನಗುವ ಹೂವು ಚಿತ್ರದಲ್ಲೂ ಸುದರ್ಶನ್ ಅವರ ಹಾಡಿದೆ. ಇರಬೇಕು, ಇರಬೇಕು ಎಂಬ ಹಾಡದು…

ಜಗ್ಗೇಶ್ ಅಭಿನಯದ ಮಠ, ಉಪೇಂದ್ರ ಅಭಿನಯದ ಸೂಪರ್​ ಚಿತ್ರಗಳಲ್ಲಿ ಇವರು ನಟಿಸಿ ಗಮನ ಸೆಳೆದಿದ್ದರು. ಸುದರ್ಶನ್ ಅವರು ಕಡೇ ಬಾರಿಗೆ ಕಾಣಿಸಿಕೊಂಡಿದ್ದ ಚಿತ್ರ ಗೋಲ್ಡನ್​ ಸ್ಟಾರ್ ಗಣೇಶ್ ಅಭಿನಯದ ಝೂಮ್​​ ಸಿನೆಮಾ…

ಕನ್ನಡ ಅಂದರೆ ಸುದರ್ಶನ್ ಅವರಿಗೆ ಬಲು ಪ್ರೀತಿ… ಇದೇ ಕಾರಣಕ್ಕೆ ಚೆನ್ನೈನಿಂದ ಇವರು ಕರ್ನಾಟಕಕ್ಕೆ ಬಂದು ನೆಲೆಸಿದ್ದರು. ಕೊನೆಯ ದಿನಗಳನ್ನು ಬೆಂಗಳೂರಿನಲ್ಲೇ ಕಳೆದ ಸುದರ್ಶನ್​​ ಬಣ್ಣದ ಲೋಕದಿಂದ ಬಾರದ ಲೋಕಕ್ಕೆ ತೆರೆಳಿದ್ದಾರೆ… ಅಭಿಮಾನಿಗಳನ್ನು ನೋವಿನ ಕಡಲಲ್ಲಿ ಮುಳುಗಿಸಿದ್ದಾರೆ…

ಆರ್​ ನಾಗೇಂದ್ರ ರಾಯರು ಎಂದರೆ ಕನ್ನಡ ಸಿನೆಮಾರಂಗದಲ್ಲಿ ದೊಡ್ಡ ಹೆಸರು. ಕರ್ನಾಟಕ ಸಿನಿರಂಗದ ಮೊದಲ ಕುಟುಂಬ ಕೂಡಾ ಇವರದ್ದೇ… ರಂಗಕರ್ಮಿಯಾಗಿ, ನಟನಾಗಿ, ನಿರ್ದೇಶಕ ನಿರ್ಮಾಪಕನಾಗಿ ನಾಗೇಂದ್ರರಾಯರು ಪ್ರಾತಃಸ್ಮರಣೀಯರು… ಇವರ ಪುತ್ರನೇ ಸುದರ್ಶನ್​. ಕನ್ನಡ ಸಿನಿಲೋಕ ಕಂಡ ಅದ್ಭುತ ಗೀತ ರಚನೆಕಾರ ಆರ್​.ಎನ್​.ಜಯಗೋಪಾಲ್​ ಇವರ ಸಹೋದರ. ಇನ್ನೋರ್ವ ಸಹೋದರ ಕೃಷ್ಣ ಪ್ರಸಾದ್​ ಛಾಯಾಗ್ರಾಹಕ…

ಸಿನಿಲೋಕದಲ್ಲಿ ತುಂಬಾ ಅಚ್ಚುಕಟ್ಟಾಗಿ ಬೆಳೆದಿದ್ದ ನಾಗೇಂದ್ರ ರಾಯರು ತಮ್ಮ ಮಕ್ಕಳನ್ನೂ ಅದೇ ರೀತಿ ಬೆಳೆಸಿದ್ದರು. ಸುದರ್ಶನ್ ನಟ ಮತ್ತು ಗಾಯಕನಾಗಿದ್ದರೆ, ಇನ್ನೋರ್ವ ಪುತ್ರ ಆರ್​.ಎನ್​.ಜಯಗೋಪಾಲ್​ರಿಗೆ ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದ್ದರು. ಮಗದೋರ್ವ ಪುತ್ರ ಕೃಷ್ಣ ಪ್ರಸಾದ್​ಗೆ ಛಾಯಾಗ್ರಾಹಣದ ಜವಾಬ್ದಾರಿ. ಅಂದರೆ ಒಂದು ಸಿನಿಮಾದ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವಂತಹ ಒಂದು ತಂಡವನ್ನು ನಾಗೇಂದ್ರರಾಯರು ತಮ್ಮ ಮನೆಯಲ್ಲೇ ಕಟ್ಟಿದ್ದರು. ಅಲ್ಲದೆ, ತಮ್ಮ ತಮ್ಮ ಕ್ಷೇತ್ರದಲ್ಲಿ ಮಕ್ಕಳಿಗೂ ಪ್ರೋತ್ಸಾಹವನ್ನೂ ನೀಡಿದ್ದರು. ಇದೇ ಕಾರಣಕ್ಕೆ ನಾಗೇಂದ್ರರಾಯರ ಪುತ್ರರು ದಕ್ಷಿಣ ಭಾರತದ ಸಿನಿಲೋಕದಲ್ಲಿ ಅದ್ಭುತ ಹೆಸರು ಮಾಡಲು ಸಾಧ್ಯವಾಗಿದ್ದು…

ಅದು 1957ರ ಕಾಲ. ತಂದೆ ನಾಗೇಂದ್ರ ರಾಯರು ಸುದರ್ಶನ್ ಅವರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಅಲ್ಲಿ ಮದರಾಸ್​ ರೈಡಿಂಗ್ ಕ್ಲಬ್​ ಸೇರಿಸಿದರು. ಸುದರ್ಶನ್ ಅವರು ತಮ್ಮ ಯೌವನದ ದಿನಗಳನ್ನು ಚೆನ್ನೈನಲ್ಲೇ ಕಳೆದಿದ್ದರು.

ಆಗ ಸಿನಿಲೋಕದ ಎಲ್ಲಾ ಕೆಲಸಗಳಿಗೂ ಮದ್ರಾಸ್​ ಅನ್ನೇ ಅವಲಂಭಿಸಬೇಕಾಗಿತ್ತು. ದಕ್ಷಿಣ ಭಾರತದ ಬಹುತೇಕ ಚಿತ್ರರಂಗದ ಕೆಲಸಗಳು ತಮಿಳುನಾಡಿನಲ್ಲೇ ಆಗುತ್ತಿದ್ದವು. ಹೀಗಾಗಿ, ಆ ಕಾಲ ಹಿರಿಯ ನಟರಿಗೆಲ್ಲಾ ಚೆನ್ನೈ ಕಾರ್ಯಕ್ಷೇತ್ರವಾಗಿತ್ತು… ಸುದರ್ಶನ್​ ಅವರಿಗೂ ಹಾಗೆಯೇ… ತಮಿಳುನಾಡಿನಲ್ಲಿ ಎಷ್ಟು ಖುಷಿಯಲ್ಲಿದ್ದರೂ ಸುದರ್ಶನ್ ಅವರಿಗೆ ತಾಯಿನಾಡಿನ ಮೇಲೆ ಪ್ರೀತಿ ಎಳ್ಳಷ್ಟೂ ಕಡಿಮೆ ಆಗಿರಲಿಲ್ಲ. ಇದೇ ಕಾರಣಕ್ಕೆ ಕರ್ನಾಟಕಕ್ಕೆ ಬರಲು ಇವರ ಮನಸ್ಸು ಸದಾ ತುಡಿಯುತ್ತಿತ್ತು. ಹೀಗಾಗಿ, ತಮ್ಮ ವಿಶ್ರಾಂತ ಜೀವನವನ್ನು ಕಳೆಯಲು ಸುದರ್ಶನ್ ಆಸೆ ಪಟ್ಟು ಕರ್ನಾಟಕಕ್ಕೆ ಬಂದಿದ್ದರು.

ಹಲವು ವರ್ಷಗಳಿಂದ ಸುದರ್ಶನ್ ಅವರು ಕರ್ನಾಟಕದಲ್ಲೇ ನೆಲೆಸಿದ್ದಾರೆ. ಬೆಂಗಳೂರಿನ ಕಾಮಾಕ್ಯ ಸಮೀಪದ ಮನೆಯಲ್ಲಿ ಇವರ ಜೀವನ ಸಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಸಿನಿರಂಗದ ಕೆಲಸಗಳಲ್ಲಿ ಇವರು ತೊಡಗಿಕೊಳ್ಳುತ್ತಿದ್ದರು. ಇದರ ಜೊತೆಗೆ ವಯೋ ಸಹಜ ಅನಾರೋಗ್ಯವೂ ಇವರನ್ನು ಕಾಡುತ್ತಿತ್ತು… ಎಷ್ಟೇ ವಯಸ್ಸಾಗಿದ್ದರೂ ಸುದರ್ಶನ್ ಅವರು ತಮ್ಮ ಹುಮ್ಮಸ್ಸು ಮಾತ್ರ ಕಳೆದುಕೊಂಡಿರಲಿಲ್ಲ. ಮುಖದಲ್ಲೇ ಅದೇ ಚೈತನ್ಯ ಕೊನೆಯ ತನಕ ಇದ್ದೇ ಇತ್ತು…

ಆದರೆ, ಏನು ಮಾಡುವುದು…? ಹುಟ್ಟಿದ ಮನುಷ್ಯ ಸಾಯಲೇಬೇಕು… ಇದು ನಿಜವಾದರೂ ಇಂತಹ ಮಹಾನ್ ಪ್ರತಿಭೆಗಳ ಅಗಲಿಕೆ ಖಂಡಿತಾ ಹೃದಯ ಹಿಂಡುವಂತಹ ಅನುಭವ ಕೊಡುತ್ತದೆ… ಸದ್ಯ ಕರ್ನಾಟಕ ಜನರಿಗೂ ಇದೇ ಅನುಭವವಾಗುತ್ತಿದೆ… ಯಾಕೆಂದರೆ, ಸುದರ್ಶನ್ ಅವರಂತಹ ಪ್ರಖರ ಪ್ರತಿಭೆ ಸೃಷ್ಟಿಸಿದ್ದ ಪ್ರಭೆ ಅಂತಹದ್ದು… ಒಂದು ಅಪೂರ್ವ ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ. ಖಂಡಿತಾ ಇದು ಕನ್ನಡ ಚಿತ್ರರಂಗಕ್ಕಾದ ದೊಡ್ಡ ನಷ್ಟ. ಆದರೆ, ದೈಹಿಕವಾಗಿ ಸುದರ್ಶನ್ ಅವರು ದೂರವಾದರೂ ಅವರ ನೆನಪು ಶಾಶ್ವತ. ಸಿನಿಲೋಕ ಇರುವ ತನಕ ಸುದರ್ಶನ್ ಅಜರಾಮರ…

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!