Monday , January 21 2019
ಕೇಳ್ರಪ್ಪೋ ಕೇಳಿ
Home / Sandalwood / ಹಿರಿಯ ನಟಿ ಬಿ.ವಿ.ರಾಧಾ ಇನ್ನಿಲ್ಲ : ಸಾವಿನಲ್ಲೂ ಸಾರ್ಥಕ ಮೆರೆದರು ಅಮ್ಮ

ಹಿರಿಯ ನಟಿ ಬಿ.ವಿ.ರಾಧಾ ಇನ್ನಿಲ್ಲ : ಸಾವಿನಲ್ಲೂ ಸಾರ್ಥಕ ಮೆರೆದರು ಅಮ್ಮ

ಬೆಂಗಳೂರು : ಸ್ಯಾಂಡಲ್‍ವುಡ್‍ಗೆ ಎರಡೇ ದಿನಗಳಲ್ಲಿ ಇನ್ನೊಂದು ಶಾಕ್. ಎರಡು ದಿನಗಳ ಹಿಂದಷ್ಟೇ ಹಿರಿಯ ನಟ ಸುದರ್ಶನ್ ಅವರನ್ನು ಕಳೆದುಕೊಂಡಿದ್ದ ಕನ್ನಡ ಚಿತ್ರರಂಗ ಈಗ ಮತ್ತೋರ್ವ ಅಪೂರ್ವ ಕಲಾವಿದೆಯನ್ನು ಕಳೆದುಕೊಂಡಿದೆ. ಹಲವು ದಶಕದಿಂದ ಸಿನಿಲೋಕದಲ್ಲಿ ಸಕ್ರಿಯರಾಗಿದ್ದ ಹಿರಿಯ ನಟಿ ಬಿ.ವಿ.ರಾಧಾ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ರಾಧಾ ಮೃತಪಟ್ಟಿದ್ದು, ಓರ್ವ ಪುತ್ರಿ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕನ್ನಡದ ಹಿರಿಯ ನಿರ್ದೇಶಕ ಕೆಎಸ್‍ಎಲ್ ಸ್ವಾಮಿ(ರವಿ)ಅವರ ಪತ್ನಿಯಾದ ರಾಧಾ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ವರ್ಷದ ಹಿಂದೆ ಇವರು ಪತಿ ರವಿ ಅವರನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು.

1964ರಲ್ಲಿ ತೆರೆಕಂಡ ರಾಜ್‍ಕುಮಾರ್ ಅಭಿನಯದ ನವಕೋಟಿ ನಾರಾಯಣ ರಾಧಾ ಮೊದಲ ಚಿತ್ರ. ಇದಾದ ಬಳಿಕ ಕಲಾವಿದೆಯಾಗಿ, ನಿರ್ಮಾಪಕಿಯಾಗಿ ರಾಧಾ ಅವರು ದೊಡ್ಡ ಹೆಸರು ಮಾಡಿದ್ದರು. ದಕ್ಷಿಣ ಭಾರತದ ಖ್ಯಾತನಾಮರೊಂದಿಗೆ ತೆರೆ ಹಂಚಿಕೊಂಡಿದ್ದ ರಾಧಾ ಅವರು ಕಿರುತೆರೆಯಲ್ಲೂ ಸಕ್ರಿಯರಾಗಿದ್ದರು. ತನ್ನ ನಟನಾ ಕೌಶಲ್ಯದಿಂದಲೇ ಇವರು ಹಲವು ಪ್ರಶಸ್ತಿ ಪುರಸ್ಕಾರಗಳಿಗೂ ಬಾಜನರಾಗಿದ್ದರು. ಕೆಲವು ವರ್ಷಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ರಾಧಾ ಅವರು ಈ ಸಮಸ್ಯೆಯಿಂದಲೂ ಹೈರಾಣಾಗಿದ್ದರು.

ಸಾವಿನಲ್ಲೂ ಸಾರ್ಥಕತೆ : ರಾಧಾ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕೊನೆಯುಸಿರೆಳೆದ ನಂತರ ತನ್ನ ಮೃತ ಶರೀರ ಇತರರಿಗೆ ಕೊಂಚವಾದರೂ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಇವರು ದೇಹದಾನ ಮಾಡಿದ್ದಾರೆ. ಹೀಗಾಗಿ, ಅಂತಿಮ ದರ್ಶನದ ಬಳಿಕ ರಾಧಾ ಅವರ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನವಾಗಿ ನೀಡಲು ನಿರ್ಧರಿಸಲಾಗಿದೆ. ರಾಧಾ ಅವರ ಇಚ್ಛೆಯಂತೆ ಈ ದಾನಕಾರ್ಯವೂ ನಡೆಯುತ್ತಿದೆ.

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!