Monday , January 22 2018
Home / Sudina Special / ಡೆಡ್ಲಿ ಬ್ಲೂವೇಲ್ : ಏನಿದು ಆಟ…? : ಮಕ್ಕಳು ಬಲಿಯಾಗುವುದು ಯಾಕೆ?, ಹೇಗೆ?
Buy Bitcoin at CEX.IO

ಡೆಡ್ಲಿ ಬ್ಲೂವೇಲ್ : ಏನಿದು ಆಟ…? : ಮಕ್ಕಳು ಬಲಿಯಾಗುವುದು ಯಾಕೆ?, ಹೇಗೆ?

ಈಗ ಎಲ್ಲಿ ನೋಡಿದರೂ `ಬ್ಲೂವೇಲ್’ ಎಂಬ ಡೆಡ್ಲಿ ಗೇಮ್‍ನದ್ದೇ ಸದ್ದು. ಡೆಡ್ಲಿ ಚಾಲೆಂಜ್‍ಗಳ್ಳುಳ್ಳ ಈ 50 ದಿನಗಳ ಆಟ ಮುಗ್ಧ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕೊನೆಗೆ ಅದೇ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಇಂತಹ ಭಯಾನಕ ಗೇಮ್‍ಗೆ ಮರುಳಾಗಿ, ಮಕ್ಕಳು ಹಾಗೂ ಹದಿಹರೆಯದವರು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

ಈ ಡೆಡ್ಲಿ ಗೇಮ್‍ನ ರೂವಾರಿ ಫಿಲಿಪ್ ಬುಡ್ಡಿಟೀನ್. ಈತ ಮನಃಶಾಸ್ತ್ರದ ವಿದ್ಯಾರ್ಥಿ. ಅವನ ಪ್ರಕಾರ ಈ ಗೇಮ್‍ನ ಬಲಿಪಶುಗಳು `ಬಯೋಲಾಜಿಕಲ್ ವೇಸ್ಟ್’ ಅಥವಾ `ಹ್ಯಾಪಿ ಟು ಡೈ’. ಸಮಾಜದ ಉಪಯೋಗಕ್ಕೆ ಬಾರದ ಜನರನ್ನು ಸಮಾಜದಿಂದ ತೊಲಗಿಸುವುದೇ ತನ್ನ ಉದ್ದೇಶ ಅನ್ನೋದು ಈತನ ಅಂಬೋಣ. ಆದರೆ, ಈತನಿಗೆ ತಾನು ಬೇರೆಯವರ ಜೀವದೊಂದಿಗೆ ಆಟ ಆಡುತ್ತೇನೆ ಎಂಬ ಕಿಂಚಿತ್ತೂ ಜ್ಞಾನ ಇದ್ದಂತಿಲ್ಲ.

ಬಹುತೇಕ ಹದಿಹರೆಯದವರೇ ಈ ಆಟದ ಬಲಿಪಶುಗಳು. ಹದಿಹರೆಯದವರನ್ನು ಸುಲಭವಾಗಿ ತಮಗೆ ಬೇಕಾದಂತೆ ಬಾಗಿಸುವಂತೆ ಅರ್ಥಾತ್ ಇಂಪ್ರೆಸ್ ಅಥವಾ ಇನ್‍ಫ್ಲುಯನ್ಸ್ ಮಾಡಬಹುದು. ಟೀನೇಜ್ ಎಂಬುದು ಜೀವನದ ಪ್ರಮುಖ ಘಟ್ಟ. ಈ ಹಂತದಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತಿರುತ್ತವೆ. ಈ ಹಂತದಲ್ಲಿ ಮನಸ್ಸು ಚಂಚಲವಾಗಿರುತ್ತದೆ ಹಾಗೂ ಮನಸ್ಸಿನಲ್ಲಿ ಗೊಂದಲಗಳಿರುತ್ತವೆ. ಹೀಗಾಗಿಯೇ, ಬ್ಲೂವೇಲ್ ಗೇಮ್‍ಗೆ ಹೆಚ್ಚು ಹೆಚ್ಚು ಹದಿಹರೆಯದವರು ಬಲಿಯಾಗುತ್ತಿದ್ದಾರೆ. ಹಾಗಂತ, ಎಲ್ಲಾ ಮಕ್ಕಳು ಈ ಗೇಮ್‍ನ ಚಲಕ್ಕೆ ಬೀಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಗಮನಿಸಬೇಕಾದಂತಹ ಪ್ರಮುಖ ವಿಷಯವಿದೆ. ದುರ್ಬಲ ಮನಸ್ಸಿನ ಮಕ್ಕಳು ಈ ಗೇಮ್‍ಗೆ ಸುಲಭವಾಗಿ ದಾಸರಾಗುತ್ತಾರೆ. ಮನಸ್ಸಿನಲ್ಲಿರುವ ನೋವು, ಬೇಜಾರು, ಒಂಟಿತನ, ಗೊಂದಲ ಹಾಗೂ ಆತ್ಮಹತ್ಯಾ ಯೋಚನೆಗಳು ಕೆಲವು ಮುಗ್ಧ ಮಕ್ಕಳನ್ನು ಈ ಗೇಮ್‍ನತ್ತ ಸುಲಭವಾಗಿ ಕೊಂಡೊಯ್ಯುತ್ತದೆ.

ಇದು 50 ದಿನಗಳ ಆಟ. ಈ 50 ದಿನಗಳಲ್ಲಿ 50 ವಿವಿಧ ಆಟಗಳನ್ನು ಪೂರ್ಣಗೊಳಿಸುವ ಟಾಸ್ಕ್‍ಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ಸುಲಭ ಸುಲಭದ ಹಂತಗಳಿದ್ದು, ನಂತರ ಕಷ್ಟದ ಚಾಲೆಂಜ್‍ಗಳು ಇರುತ್ತವೆ. ಬೆಳಗ್ಗೆ 4.20ಕ್ಕೆ ಎದ್ದೇಳುವುದು, ಹಾರರ್ ಚಿತ್ರಗಳನ್ನು ನೋಡುವುದು. ಕೊನೆಗೆ ಆತ್ಮಹತ್ಯೆ ಮಾಡುವುದು ಹೀಗೆ ವಿವಿಧ ಟಾಸ್ಕ್‍ಗಳು ಇಲ್ಲಿರುತ್ತವೆ. ಈ ಗೇಮ್ ಆಡುವ ಮಕ್ಕಳು `ವೇಲ್’ ಅಂತ ಕರೆಯಲ್ಪಡುತ್ತಾರೆ.

ಈ ಗೇಮ್ ಅನ್ನು ನಡೆಸುವವರು ಹದಿಹರೆಯದ ಮಕ್ಕಳ ದೌರ್ಬಲ್ಯವನ್ನು ಚೆನ್ನಾಗಿ ಅರಿತುಕೊಂಡಿರುತ್ತಾರೆ. ಕೆಲವು ಹದಿಹರೆಯದ ಮಕ್ಕಳು ಗೊಂದಲ, ಬೇಜಾರು, ಖಿನ್ನತೆಗೊಳಗಾಗಿರುತ್ತಾರೆ ಮತ್ತು ಕೆಲವರು ನಿರ್ದಿಷ್ಟ ಗುರಿಯನ್ನು ತಲುಪಲು ಕಷ್ಟಪಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಈ ಬ್ಲೂವೇಲ್ ಗೇಮ್‍ನ ಅಡ್ಮಿನ್ಸ್ ಮಾನಸಿಕವಾಗಿ ಕುಗ್ಗಿರುವ ಮಕ್ಕಳನ್ನು ಈ ಗೇಮ್‍ನತ್ತ ಆಕರ್ಷಿಸುತ್ತಾರೆ. ಈ ಗೇಮ್‍ನ ಲಿಂಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಸುಲಭವಾಗಿ ಮಕ್ಕಳಿಗೆ ಸಿಗುತ್ತದೆ. ಈ ಮುಗ್ಧ ಮಕ್ಕಳು ತಮ್ಮ ಮಾನಸಿಕ ಭಾವನೆಗಳು ಹಾಗೂ ಗೊಂದಲಗಳಿಂದ ದೂರ ಸರಿಯಲು ಇಂತಹ ಕೆಲವು ಚಟಗಳಿಗೆ ಬಲಿಯಾಗುತ್ತಾರೆ. ಇಂತಹ ಮುಗ್ಧ ಮಕ್ಕಳನ್ನು ಬ್ಲೂವೇಲ್ ಗೇಮ್ ತನ್ನ ಬುಟ್ಟಿಗೆ ಹಾಕಿಕೊಂಡು ಬಲಿ ತೆಗೆದುಕೊಳ್ಳುತ್ತದೆ.

ಬ್ಲೂವೇಲ್‍ನ ಸೈಕಾಲಜಿ ಏನು?: ಈ ಗೇಮ್‍ನ ಸೈಕಾಲಜಿ ತುಂಬಾ ಸರಳ. ಅದೇನೆಂದರೆ ಮಾನಸಿಕವಾಗಿ ಒತ್ತಡದಲ್ಲಿರುವ, ಗೊಂದಲದಲ್ಲಿರುವ ಹಾಗೂ ಮಾನಸಿಕ ಖಿನ್ನತೆಗೊಳಗಾಗಿರುವ ಕೆಲವು ಹದಿ ಹರೆಯದ ಮಕ್ಕಳಲ್ಲಿ ಭಾವನಾತ್ಮಕ ಸಂಬಂಧವನ್ನು ಬೆಳೆಸಿ ಈ ಗೇಮ್‍ನ ಎಲ್ಲಾ 50 ಹಂತಗಳನ್ನು ಮುಗಿಸಲೇಬೇಕು ಎನ್ನುವಂತಹ ಭಾವನಾತ್ಮಕ ಒತ್ತಡವನ್ನು ಹೇರುತ್ತಾರೆ. ಈ ಒತ್ತಡ ಬೆದರಿಸುವ ಮಟ್ಟದಲ್ಲಿಯೇ ಇರುತ್ತದೆ. ಅಂದರೆ, ಈ ಗೇಮ್ ಮುಗಿಸದೇ ಇದ್ದರೆ ಆಟ ಆಡುವ ಮಕ್ಕಳ ಕುಟುಂಬಸ್ಥರಿಗೆ ತೊಂದರೆ ಕೊಡುವುದಾಗಿ ಬೆದರಿಸುತ್ತಾರೆ. ಇದರಿಂದ ಭಯಭೀತಗೊಳ್ಳುವ ಈ ಮುಗ್ಧ ಮಕ್ಕಳು ಈ ಗೇಮ್‍ನ ಬಲಿಪಶುಗಳಾಗಿ ತಮ್ಮ ಅಮೂಲ್ಯ ಜೀವನವನ್ನು ನಾಶ ಮಾಡಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಭಾರತದಲ್ಲಿ ಹುಡುಗಿಯೊಬ್ಬಳು ಈ ಆಟದಿಂದ ಒಂದು ಸಲ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಕೆಯನ್ನು ರಕ್ಷಿಸಲಾಗಿತ್ತು. ಆದರೆ, ತನಗೆ ಕೊಟ್ಟ ಚಾಲೆಂಜ್ ಮುಗಿಸದೇ ಇದ್ದರೆ ತನ್ನ ತಾಯಿಯನ್ನು ಅಡ್ಮಿನ್‍ಗಳು ಕೊಲ್ಲುತ್ತಾರೆ ಎಂಬ ಭಯದಿಂದ ಈಕೆ ಇನ್ನೊಂದು ಸಲ ಆತ್ಮಹತ್ಯೆಗೆ ಯತ್ನಿಸಿದ್ದಳು…!

ಬ್ಲೂವೇಲ್ ಗೇಮ್ ಆಡುವ ಮಕ್ಕಳ ಭಾವನೆಗಳು: 
* ಬ್ಲೂವೇಲ್ ಗೇಮ್ ಆಡುವ ಮಕ್ಕಳಲ್ಲಿ ಗೇಮ್ ಹಂತ ಮುಗಿಸದಿದ್ದರೆ ಅಡ್ಮಿನ್‍ಗಳು ಏನಾದರೂ ಮಾಡುತ್ತಾರೇನೋ ಎಂಬ ಭಯ ಇರುತ್ತದೆ.
* ಯಾವುದೋ ಅತಿಮಾನುಷ ಶಕ್ತಿ ತಮ್ಮನ್ನು ನಿಯಂತ್ರಿಸುತ್ತಿದೆ ಎಂಬ ಆತಂಕ ಅವರಲ್ಲಿ ಇರುತ್ತದೆ
* ನನ್ನಿಂದ ಈ ಆಟ ಆಡಲು ಸಾಧ್ಯವಿಲ್ಲ ಎಂದು ಹೇಳಲು ಸಂಕೋಚ. ಹೀಗಾಗಿ, ಅನಿವಾರ್ಯವಾಗಿ ಆಟ ಮುಂದುವರಿಸುತ್ತಾರೆ

ಬ್ಲೂವೇಲ್ ಗೇಮ್ ಆಡುವ ಮಕ್ಕಳ ಲಕ್ಷಣಗಳು:
* ದೇಹದ ಮೇಲೆ, ವಿಶೇಷ ಕೈ ಮತ್ತು ತುಟಿ ಭಾಗದಲ್ಲಿ ತಾವೇ ಮಾಡಿಕೊಂಡಿರುವ ಗಾಯಗಳಿರುತ್ತವೆ
* ಒಂಟಿಯಾಗಿ ಕುಳಿತುಕೊಳ್ಳುವುದು, ದೀರ್ಘವಾಗಿ ಏನನ್ನೋ ಯೋಚಿಸುವುದು, ಮಾನಸಿಕ ಗೊಂದಲದಲ್ಲಿ ಮುಳುಗಿರುವುದು
* ಪುಟ್ಟ ವಿಷಯಕ್ಕೂ ಕೋಪಗೊಳ್ಳುವುದು, ವಿಚಲಿತರಾಗುವುದು
* ವರ್ತನೆಯಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆ, ವರ್ತನೆಯಲ್ಲಿ ಏರಿಳಿತ
* ನಿದ್ದೆ ಬಾರದೆ ತೊಳಲಾಟ, ಎಲ್ಲದರಲ್ಲೂ ನಿರಾಸಕ್ತಿ, ಆತ್ಮಹತ್ಯಾ ಯೋಚನೆಗಳು

ಬ್ಲೂವೇಲ್ ಗೇಮ್ ಆಡುವ ಮಕ್ಕಳ ರಕ್ಷಣೆ ಹೇಗೆ?
* ಒಂದು ವೇಳೆ ನಿಮ್ಮ ಮಕ್ಕಳು ಒಂಟಿತನ, ಖಿನ್ನತೆ, ಗೊಂದಲದಲ್ಲಿ ಇದ್ದುದ್ದು ಕಂಡು ಬಂದರೆ ಅವರನ್ನು ಒಂಟಿಯಾಗಿ ಇರಲು ಬಿಡಬೇಡಿ. ಅವರ ಜೊತೆ ಹೋಗಿ ಮಾತನಾಡಿ
* ಮಕ್ಕಳು ಬೆಳಗ್ಗೆ 4.20ಕ್ಕೆ ಏಳುವುದು, ಸದಾ ಹಾರರ್ ಚಿತ್ರಗಳನ್ನು ನೋಡುವುದು, ವಿಲಕ್ಷಣ ಸಂಗೀತ ಕೇಳುತ್ತಿದ್ದರೆ ಸ್ವಲ್ಪ ಗಮನ ಇಡಿ
* ಈ ಗೇಮ್‍ನಿಂದ ಮಕ್ಕಳನ್ನು ಪಾರು ಮಾಡಲು ಶಾಲೆಗಳ ಪಾತ್ರವೂ ಮಹತ್ವದ್ದು. ಯಾಕೆಂದರೆ, ಮಕ್ಕಳು ಹೆಚ್ಚು ಕಾಲ ಕಳೆಯುವುದು ಶಾಲೆಯಲ್ಲಿಯೇ. ಹೀಗಾಗಿ, ಶಾಲೆಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.
* ಶಾಲೆಯಲ್ಲಿ ಶಿಕ್ಷಕರಿಗೆ ಮಕ್ಕಳಲ್ಲಿ ಈ ಮೇಲಿನ ಯಾವುದಾದರೂ ಲಕ್ಷಣಗಳು ಕಂಡು ಬಂದಲ್ಲಿ ಮಕ್ಕಳನ್ನು ಕೌನ್ಸಿಲಿಂಗ್ ಮಾಡಿ. ಅವರಿಗೆ ಮನವರಿಕೆ ಮಾಡಿ.
* ಈ ಗೇಮ್‍ನ ದಾಸರಾದ ಮಕ್ಕಳಿಗೆ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲ ಬಲು ಅಗತ್ಯ. ಹೆತ್ತವರು ತಮ್ಮ ಮಕ್ಕಳ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸಬೇಕು. ಜೊತೆ ಜೊತೆಗೆ ಮಕ್ಕಳ ಚಲನವಲನಗಳ ಮೇಲೂ ಕಣ್ಣಿಟ್ಟಿರಬೇಕು.
* ಮಕ್ಕಳು ಬ್ಲೂವೇಲ್ ಆಡುತ್ತಿದ್ದಾರೆ ಎಂಬ ಸಣ್ಣ ಸಂಶಯ ಬಂದರೂ ಮನಃಶಾಸ್ತ್ರಜ್ಞರಲ್ಲಿಗೆ ಕರೆದುಕೊಂಡು ಹೋಗಿ ಕೌನ್ಸಿಂಗ್ ಮಾಡಿಸಬೇಕು. ಸೈಕೋಥೆರಪಿ ಮಕ್ಕಳನ್ನು ಈ ಚಟದಿಂದ ದೂರ ಮಾಡಲು ಸಹಕಾರಿ.
* ಇವತ್ತು ಸಾಕಷ್ಟು ಆನ್‍ಲೈನ್ ಕೌನ್ಸಿಲಿಂಗ್ ಸೇವೆಗಳು ಲಭ್ಯವಿದೆ. ನಿಮ್ಮ ಮಕ್ಕಳಿಗೆ ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಉತ್ತೇಜಿಸಿ.

ಮಕ್ಕಳಿಗೆ ಒಂದಷ್ಟು ಸಲಹೆ :
* ಮಕ್ಕಳೇ ನೀವು ನಿಮ್ಮ ಜೀವನದ ಆರಂಭದ ಹಂತದಲ್ಲಿ ಇದ್ದೀರಿ. ಈ ಗೇಮ್‍ನ ಆಕರ್ಷಣೆಗೊಳಗಾಗಿ ನೀವು ಅಮೂಲ್ಯವಾದ ಜೀವನವನ್ನು ನಾಶ ಮಾಡದಿರಿ.
* ನಿಮಗೆ ಮಾನಸಿಕ ಖಿನ್ನತೆ ಅಥವಾ ಭಯ ಇದೆ ಅನಿಸಿದಲ್ಲಿ ನಿಮ್ಮ ಭಾವನೆಗಳನ್ನು ಸ್ನೇಹಿತರೊಂದಿಗೆ ಹಾಗೂ ಹೆತ್ತವರೊಂದಿಗೆ ಹಂಚಿಕೊಳ್ಳಿ.
* ಆನ್‍ಲೈನ್‍ನಲ್ಲಿ ಸಿಗುವ ಅಪರಿಚಿತರ ಆಂತರ್ಯದಲ್ಲಿರುವ ದುಷ್ಟ ಯೋಚನೆಗಳ ಬಗ್ಗೆ ಬೇಗ ಅರಿತುಕೊಳ್ಳಿ.
* ಇಂಟರ್‍ನೆಟ್‍ನಿಂದಾಗುವ ಅಪಾಯಗಳ ಬಗ್ಗೆಯೂ ನಿಮಗೆ ಗಮನ ಇರಲಿ.

ಈ ಗೇಮ್‍ನಿಂದ ಹೊರ ಬರಲು ಅಸಾಧ್ಯ ಎಂಬ ಯೋಚನೆ ಸುಳ್ಳು. ಅಂದುಕೊಂಡರೆ ಏನನ್ನೂ ಬೇಕಾದರೂ ಸಾಧಿಸಬಹುದು. ಆದರೆ, ನಾನು ಅಂದುಕೊಳ್ಳುವ ಆ ಯೋಚನೆ ಧನಾತ್ಮಕವಾಗಿ ಇರಬೇಕಷ್ಟೇ. ಜೊತೆಗೆ, ಕೌನ್ಸಿಲಿಂಗ್ ಮಕ್ಕಳಲ್ಲಿ ಇರುವ ನಕಾರಾತ್ಮಕ ಚಿಂತನೆ ಹಾಗೂ ಭಯವನ್ನು ತೊಡೆದು ಹಾಕುತ್ತದೆ. ಇದರಿಂದ ಒಂದು ಒಳ್ಳೆಯ ಜೀವನವನ್ನೂ ರೂಪಿಸಿಕೊಳ್ಳಬಹುದು…

ಲೇಖಕರು : ರಾಹುಲ್ ರೋಷನ್ ಸಿಕ್ವೇರಾ, ಮನಃಶಾಸ್ತ್ರಜ್ಞರು ಮತ್ತು ಸುದಿನ ಡಾಟ್ ಇನ್ ಗಲ್ಫ್ ಬ್ಯುರೋ ಮುಖ್ಯಸ್ಥರು, ದೋಹಾ- ಕತಾರ್

CEX.IO Bitcoin Exchange

About sudina

Check Also

ಆಪಲ್​ನ ಮೂರು ಹೊಸ ಐಫೋನ್​ಗಳ ಬೆಲೆ ಎಷ್ಟು..? ಭಾರತದಲ್ಲಿ ಯಾವಾಗ ಬಿಡುಗಡೆ…?

ನವದೆಹಲಿ : ಆಪಲ್​ ಹೊಸ ಫೋನ್​ಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಸುದ್ದಿಯನ್ನು ನೀವು ಕೇಳಿರಬಹುದು. ಮೂರು ಹೊಸ ನಮೂನೆಯ ಫೋನ್​​ಗಳನ್ನು ಆಪಲ್​ …

Leave a Reply

Your email address will not be published. Required fields are marked *

error: Content is protected !!