Wednesday , March 27 2019
ಕೇಳ್ರಪ್ಪೋ ಕೇಳಿ
Home / Sandalwood / ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ಡೇ : ಮೂವರು ಸ್ಟಾರ್​​ಗಳ ಹುಟ್ಟುಹಬ್ಬಕ್ಕೆ ಶುಭಹಾರೈಕೆ

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ಡೇ : ಮೂವರು ಸ್ಟಾರ್​​ಗಳ ಹುಟ್ಟುಹಬ್ಬಕ್ಕೆ ಶುಭಹಾರೈಕೆ

ಬೆಂಗಳೂರು : ಸೆಪ್ಟೆಂಬರ್ 18 ಅದು ಸ್ಯಾಂಡಲ್​ವುಡ್​ನಲ್ಲಿ ಸಖತ್ ಖುಷಿಯ ದಿನ. ಮೂವರು ಸ್ಟಾರ್​​​ ಕಲಾವಿದರ ಬರ್ತ್​ಡೇ ಕ್ಷಣ ಇದು. ಸ್ಯಾಂಡಲ್​ವುಡ್​ನ ಮೂರು ರತ್ನಗಳು ಜನಿಸಿದ ಈ ದಿನ ಇಡೀ ಚಿತ್ರರಂಗದಲ್ಲೂ ಸಂಭ್ರಮ ಮೂಡಿಸಿರುತ್ತದೆ…

ಕನ್ನಡ ಸಿನಿಮಾ ಲೋಕದ ಮೇರು ಪ್ರತಿಭೆ, ಸಾಹಸಸಿಂಹ ವಿಷ್ಣುವರ್ಧನ್​ ಜನಿಸಿದ್ದು ಇದೇ ದಿನ. ವಿಷ್ಣು ಬರೀ ನಟನಲ್ಲ. ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿ. ಕನ್ನಡದ ಸಾಕ್ಷಿಪ್ರಜ್ಞೆ… ಇಂದು ಭೌತಿಕವಾಗಿ ವಿಷ್ಣು ನಮ್ಮೊಂದಿಗಿಲ್ಲದೇ ಇರಬಹುದು. ಆದರೆ, ಅವರ ನೆನಪು ಕರುನಾಡಲ್ಲಿ ಶಾಶ್ವತ. ವಿಷ್ಣು ಈಗ ನಮ್ಮೊಂದಿಗಿದ್ದರೆ ಅವರ ವಯಸ್ಸು 67…

ಸೆಪ್ಟೆಂಬರ್​ 18, 1950ರಲ್ಲಿ ಜನಿಸಿದ ವಿಷ್ಣುವರ್ಧನ್​ ಏರಿದ ಎತ್ತರ ಈಗ ಇತಿಹಾಸ… ಮೈಸೂರಿನಲ್ಲಿ ಹೆಚ್​ ನಾರಾಯಣ್​ ರಾವ್ ಮತ್ತು ಕಾಮಾಕ್ಷಮ್ಮ ಇವರ ಹೆತ್ತವರು. ಇವರ ಮೂಲ ಹೆಸರು ಸಂಪತ್​ ಕುಮಾರ್​​. ಚಿಕ್ಕಂದಿನಿಂದಲೂ ಬಣ್ಣದ ಲೋಕದ ನಂಟು ಇವರಿಗಿತ್ತು. ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧರಿಸಿ, ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತರು ನಿರ್ದೇಶಿಸಿದ ವಂಶವೃಕ್ಷ ವಿಷ್ಣು ನಟನಾಗಿ ಬಣ್ಣ ಹಚ್ಚಿದ ಮೊದಲ ಚಿತ್ರ. ಈ ಚಿತ್ರದಲ್ಲಿ ವಿಷ್ಣು ಅವರದ್ದು ಸಣ್ಣ ಪಾತ್ರ. ಇಲ್ಲಿಂದ ವಿಷ್ಣು ಚಲನಚಿತ್ರ ಜೀವನ ಶುರುವಾಗಿತ್ತು… ಬಳಿಕ ಕನ್ನಡದ ಚಿತ್ರ ರಂಗದ ದಿಗ್ದರ್ಶಕ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದಿಂದ ವಿಷ್ಣು ಭವಿಷ್ಯವೇ ಬದಲಾಯ್ತು. ಇದು ನಾಯಕನಾಗಿ ವಿಷ್ಣು ಅಭಿನಯಿಸಿದ ಮೊದಲ ಚಿತ್ರ… ಇದಾದ ಬಳಿಕ ಸುಮಾರು 200ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು ವಿಷ್ಣು… ಬರೀ ಕನ್ನಡ ಅಷ್ಟೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲೂ ವಿಷ್ಣು ಹೆಜ್ಜೆ ಗುರುತುಗಳಿವೆ…

ವಿಷ್ಣು ಅಪಾರ ಅಭಿಮಾನಿಗಳ ಸರದಾರ. ಹೀಗಾಗಿ, ಇವರ ಜನುಮದಿನದ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಬಂದ ಅಭಿಮಾನಿಗಳು ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದ್ದಾರೆ. ಜೊತೆಗೆ, ವಿಷ್ಣು ಸಮಾಧಿ ನಿರ್ಮಾಣದ ವಿಳಂಬದ ಬಗ್ಗೂ ಅಸಮಾಧಾನ ಹೊರಹಾಕಿದ್ದಾರೆ. ಇನ್ನು, ಅಭಿಮಾನ್ ಸ್ಟುಡಿಯೋದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ರಕ್ತದಾನ, ಅನ್ನದಾನ ಕೂಡಾ ನಡೆದಿದೆ. ಇದೇ ವೇಳೆ, ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ನಟ ಅನಿರುದ್ಧ್ ಅಭಿನಯದ ‘ರಾಜಸಿಂಹ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿಖಿತಾ ತುಕ್ರಾಲ್, ಸಂಜನಾ, ಮತ್ತು ಭಾರತಿ ವಿಷ್ಣುವರ್ಧನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮತ್ತೊಂದು ಕಡೆ, ಇನ್ನೋರ್ವ ಸ್ಟಾರ್​​ ಬರ್ತ್​​ಡೇ ಸಂಭ್ರಮವೂ ಇದೇ ದಿನ… ರಿಯಲ್​ ಸ್ಟಾರ್ ಉಪೇಂದ್ರಗೆ ಈಗ 50ನೇ ವಸಂತದ ಖುಷಿ… ಈ ಖುಷಿಯೊಂದಿಗೆ ಈ ಬಾರಿಗೆ ಬರ್ತ್​ಡೇ ಉಪ್ಪಿಗೆ ಇನ್ನಷ್ಟು ಸ್ಪೆಷಲ್​… ಯಾಕೆಂದರೆ, ಉಪ್ಪಿ ಈ ವರ್ಷ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜನ ಸೇವೆಯ ದೃಷ್ಟಿಯಿಂದ ಉತ್ತಮ ಪ್ರಜಾ ಪಕ್ಷವನ್ನೂ ಕಟ್ಟಿ ಅದರ ಕೆಲಸದಲ್ಲಿ ತೊಡಗಿದ್ದಾರೆ. ಅದೂ ಅಲ್ಲದೆ, ಅದ್ಧೂರಿಯಾಗಿಯೂ ಉಪ್ಪಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ, ಮನೆಗೆ ಬಂದ ಅಭಿಮಾನಿಗಳಿಗೆ ಉಪ್ಪಿ ಸಿಕ್ಕಿದ್ದಾರೆ… ಮಡದಿ ಪ್ರಿಯಾಂಕಾ ನಿನ್ನೆಯೇ ಉಪ್ಪಿಗೆ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ. ಇನ್ನು, ಉಪ್ಪಿ ಬರ್ತ್​ಡೇ ಖುಷಿಯ ಸಂದರ್ಭದಲ್ಲಿ ‘ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ’ ಎಂಬ ಪುಸ್ತಕ ಕೂಡಾ ಸಿದ್ಧವಾಗಿದೆ.

ಕನ್ನಡದ ಖ್ಯಾತ ನಟಿ ಶೃತಿ ಅವರ ಜನುಮದಿನ ಕೂಡಾ ಇವತ್ತೇ… ಶೃತಿಗೆ ಇದು 42ನೇ ವಸಂತದ ಸಂಭ್ರಮ… ಇವರು ತಮ್ಮ ಶೂಟಿಂಗ್ ಸೆಟ್​ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಶೃತಿ ಅವರಿಗೂ ಎಲ್ಲರೂ ಶುಭ ಕೋರಿದ್ದಾರೆ…

About sudina

Check Also

ನಿರ್ದೇಶಕಿ ಪೂರ್ಣಿಮಾ ಮೋಹನ್ ವಿಧಿವಶ

ಬೆಂಗಳೂರು : ಸ್ಯಾಂಡಲ್​ವುಡ್​ ನಿರ್ದೇಶಕಿ ಪೂರ್ಣಿಮಾ ಮೋಹನ್​ ವಿಧಿವಶರಾಗಿದ್ದಾರೆ. ಶುಕ್ರವಾರ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 48 ವರ್ಷದ ಪೂರ್ಣಿಮಾ ಅವರನ್ನು …

Leave a Reply

Your email address will not be published. Required fields are marked *

error: Content is protected !!