ಮುಂಬೈ : ಮಾದಕ ದ್ರವ್ಯ ವ್ಯಸನ, ಜೈಲು ಜೀವನ ಸೇರಿದಂತೆ ಹಲವು ಕಷ್ಟಗಳನ್ನು ಎದುರಿಸಿರುವ ಸಂಜಯ್ ದತ್ ಮನಸ್ಸು ಈಗ ಮಾಗಿದೆ. ಬಿಸಿರಕ್ತದ ಸಂದರ್ಭದಲ್ಲಿ ಮಾಡಿದ ಕೆಲವೊಂದು ತಪ್ಪುಗಳು ಈಗ ಕಾಡಲಾರಂಭಿಸಿದೆ. ಹೀಗಾಗಿ, ನನ್ನ ಮಗ ನನ್ನಂತೆ ಆಗುವುದು ಬೇಡ ಎಂದು ಬಾಲಿವುಡ್ ನಟ ಸಂಜಯ್ ದತ್ ದಿನ ಪ್ರಾರ್ಥಿಸುತ್ತಿದ್ದಾರಂತೆ. ಅದೂ ಅಲ್ಲದೆ, ನನ್ನಂತೆ ಯಾರೂ ಆಗುವುದು ಬೇಡ, ನನ್ನ ಜೀವನವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಬದುಕು ಬದಲಾಯಿಸಿಕೊಳ್ಳಿ ಎಂದೂ ಸಂಜೂಬಾಬಾ ಎಲ್ಲರಿಗೂ ಕರೆ ನೀಡಿದ್ದಾರೆ.
ಬಾಲಿವುಡ್ನ ಹಿರಿಯ ನಟ ಸುನಿಲ್ ದತ್ ಮತ್ತು ನಟಿ ನರ್ಗೀಸ್ ದಂಪತಿ ಪುತ್ರ ಸಂಜಯ್. ತಾಯಿಯ ಕಾಲಾನಂತರ ಸಂಜಯ್ ಮಾದಕ ದ್ರವ್ಯದ ವ್ಯಸಗಿಯಾಗಿದ್ದರು, ಇದಾದ ಬಳಿಕ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಎಂಬ ಆರೋಪದ ಮೇಲೆ ಜೈಲು ಜೀವನವನ್ನೂ ಅನುಭವಿಸಿ ಬಂದಿದ್ದಾರೆ.
ಇಂತಹ ಸಂಜಯ್ಗೆ ಈಗ ತನ್ನ ಹಿಂದಿನ ದಿನಗಳು ಕಾಡಲಾರಂಭಿಸಿದೆ. ಹೀಗಾಗಿ, ತನ್ನ ಮಕ್ಕಳನ್ನು ನಾನು ನನ್ನಂತೆ ಬೆಳೆಸುತ್ತಿಲ್ಲ ಎಂದೂ ಸಂಜಯ್ ಹೇಳಿದ್ದಾರೆ.
ಸಂಜಯ್ ಹೇಳಿದ್ದಿಷ್ಟು…: ನನ್ನ ತಂದೆ ನಮ್ಮನ್ನೆಲ್ಲಾ ಸಾಮಾನ್ಯ ಮಕ್ಕಳಂತೆ ಬೆಳೆಸಿದ್ದರು. ನಾನು ಶಿಕ್ಷಣ ಪಡೆದದ್ದು ಬೋರ್ಡಿಂಗ್ ಶಾಲೆಯಲ್ಲಿ. ಈಗ ನಾನೂ ನನ್ನ ಮಕ್ಕಳನ್ನು ಹೀಗೆಯೇ ಬೆಳೆಸುತ್ತಿದ್ದಾನೆ. ಜೀವನ ಮೌಲ್ಯ ಕಲಿಸುತ್ತಿದ್ದೇನೆ, ಸಂಸ್ಕಾರ ಹೇಳಿಕೊಡುತ್ತಿದ್ದೇನೆ. ಹಿರಿಯರು ಕೆಲಸದವರೇ ಆಗಿದ್ದರೂ ಅವರಿಗೆ ಗೌರವ ನೀಡಬೇಕೆಂಬ ಒಳ್ಳೆಯ ಪಾಠ ಮಕ್ಕಳಿಗೆ ಕಲಿಸುತ್ತಿದ್ದೇನೆ. ಅದೂ ಅಲ್ಲದೆ, ನನ್ನ ಮಗ ನನ್ನಂತೆ ಯಾವತ್ತೂ ಆಗುವುದು ಬೇಡ ಎಂದೂ ಪ್ರಾರ್ಥಿಸುತ್ತಿದ್ದೇನೆ.