Friday , April 20 2018
Home / Interval / ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…!

ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…!

ಇದು 1988ರ ಸುಮಾರಿನ ಮಾತು. ಬಾಲಿವುಡ್‍ನಲ್ಲಿ `ಖಯಾಮತ್ ದೇ ಖಯಾಮತ್ ತಕ್’ ಬಿಡುಗಡೆಯಾದ ಸಂದರ್ಭ ಅದು. ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಅಭಿನಯದ ಈ ಚಿತ್ರ ಸಖತ್ ಹಿಟ್ ಆಗಿತ್ತು. ಈ ಚಿತ್ರ ಇಬ್ಬರಿಗೂ ಸ್ಟಾರ್ ವಾಲ್ಯೂ ತಂದಿತ್ತು.
1991ರಲ್ಲಿ ನಿರ್ದೇಶಕ ದೀಪಕ್ ಬರ್ಹಿ ಒಂದು ಕತೆ ಸಿದ್ಧ ಮಾಡಿಕೊಂಡಿದ್ದರು. ಅದರಲ್ಲಿ ಜೂಹಿ ಚಾವ್ಲಾ ನಾಯಕಿಯಾಗಬೇಕೆನ್ನುವುದು ದೀಪಕ್ ಬಯಕೆಯಾಗಿತ್ತು. ಹೀಗಾಗಿ, ದೀಪಿಕ್ ಜೂಹಿಗೆ ಕತೆ ಹೇಳಿದರು. ಜೂಹಿಗೆ ಕತೆಯೂ ಇಷ್ಟವಾಗಿತ್ತು. ಆದರೆ, ಈ ಚಿತ್ರದಲ್ಲಿ ನಟಿಸಬೇಕಾ ಬೇಡವಾ ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ ಎಂದು ದೀಪಕ್‍ರನ್ನು ಕಳುಹಿಸಿಕೊಟ್ಟಿದ್ದರು ಜೂಹಿ. ಯಾಕೆಂದರೆ, ಜೂಹಿ ಅದಾಗಲೇ ಕೊಂಚ ಯಶಸ್ಸಿನ ಅಮಲಿನಲ್ಲಿದ್ದರು.

ಇತ್ತ, ದೀಪಕ್ ಚಿತ್ರಕ್ಕೆ ನಾಯಕನಾಗಿ ಸಲ್ಮಾನ್‍ರನ್ನು ಆಯ್ಕೆ ಮಾಡಿಕೊಂಡು ಜೂಹಿ ಉತ್ತರಕ್ಕಾಗಿ ಕಾಯುತ್ತಿದ್ದರು. ಸಲ್ಮಾನ್ ಕೂಡಾ ಅದಾಗಲೇ `ಮೈನೇ ಪ್ಯಾರ್ ಕಿಯಾ’ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಯಶಸ್ಸಾಗಿತ್ತು. ಆದರೆ, ದೀಪಕ್ ಎಷ್ಟು ಕಾದರೂ ಜೂಹಿಯ ಉತ್ತರ ಬರಲೇ ಇಲ್ಲ. ಕರೆ ಮಾಡಿದರೂ ಹೇಳುತ್ತೇನೆ ಎಂದಷ್ಟೇ ಹೇಳಿ ಸಾಗಹಾಕುತ್ತಿದ್ದರು. ದೀಪಕ್‍ಗೂ ಇದು ಕೊಂಚ ಬೇಸರ ತರಿಸಿತ್ತು. ಕಡೆಗೆ ಜೂಹಿ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದರು. ಆದರೆ, ಅದಕ್ಕೆ ಒಂದು ಷರತ್ತು ಹಾಕಿದರು…!

`ಹೊಸಬರೊಂದಿಗೆ ನಾನು ನಟಿಸುವುದಿಲ್ಲ’ ಎಂಬ ಷರತ್ತು ಅದು. ಸಲ್ಮಾನ್ ಆಗ ಹೊಸಬರು ಹೌದು. ಒಂದು ಚಿತ್ರ ಮಾತ್ರ ಮಾಡಿದ್ದರು. ಹೀಗಾಗಿ, ಜೂಹಿ ಬೇರೆ ನಟರನ್ನು ಆಯ್ಕೆ ಮಾಡುವಂತೆ ದೀಪಕ್‍ಗೆ ಹೇಳಿದ್ದರು. ಇದರಿಂದ ನಿರ್ದೇಶಕ ದೀಪಕ್‍ಗೆ ಕಸಿವಿಸಿ ಆಯ್ತು. ಸಲ್ಮಾನ್‍ರನ್ನು ಬಿಡಲು ಅವರಿಗೆ ಮನಸ್ಸಿರಲಿಲ್ಲ. ಹೀಗಾಗಿ, ದೀಪಕ್ ಜೂಹಿ ಅವರನ್ನೇ ಚಿತ್ರದಿಂದ ಕೈ ಬಿಟ್ಟರು ಮತ್ತು ಆಯೀಷಾ ಜುಲ್ಕಾರನ್ನು ಹೀರೋಯಿನ್ ಮಾಡಿ ಚಿತ್ರ ತೆಗೆದರು. ಇದು ಆಯೀಷಾ ಅವರ ಮೊದಲ ಚಿತ್ರ. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲೂ ಒಳ್ಳೆಯ ಗಳಿಕೆಯನ್ನೇ ಮಾಡಿತ್ತು.
ಹೀಗೆ ದಿನಗಳು ಉರುಳಿದವು. `ಹೊಸಬರೊಂದಿಗೆ ನಟಿಸಲ್ಲ’ ಎಂದು ಜೂಹಿ ತನ್ನನ್ನು ತಿರಸ್ಕರಿಸಿದ ವಿಷಯವೂ ಸಲ್ಲೂ ಕಿವಿಗೆ ಬಿದ್ದಿತ್ತು. ಇದರಿಂದ ಬೇಸರಗೊಂಡ ಸಲ್ಮಾನ್, ಇನ್ನೆಂದೂ ಜೂಹಿ ಜೊತೆ ನಟಿಸಲ್ಲ ಎಂದು ತನ್ನಲ್ಲೇ ಗಟ್ಟಿ ನಿರ್ಧಾರ ಮಾಡಿಕೊಂಡರು. ಮಾಡಿದ ನಿರ್ಧಾರದಂತೆ ಸಲ್ಮಾನ್ ಜೂಹಿ ಜೊತೆ ನಟಿಸಲೇ ಇಲ್ಲ. ಇದೇ ಕಾರಣಕ್ಕೆ ಹಲವಾರು ಅವಕಾಶಗಳನ್ನು ಸಲ್ಮಾನ್ ಬಿಟ್ಟಿದ್ದರು.

ಇದಾಗಿ ತುಂಬಾ ವರ್ಷಗಳಾಗಿವೆ. ತೀರಾ ಇತ್ತೀಚಿನ ದಿನಗಳ ವರೆಗೆ ಇವರಿಬ್ಬರು ಒಟ್ಟಾಗಿ ನಟಿಸಿಯೇ ಇಲ್ಲ. ನಾಯಕ ನಾಯಕಿಯಾಗಿ ಸಲ್ಮಾನ್ ಮತ್ತು ಜೂಹಿಯ ಒಂದೇ ಒಂದು ಚಿತ್ರ ಇದುವರಗೆ ಇಲ್ಲ. ಹಾಗಂತ, ಇವರಿಬ್ಬರು ಚಿತ್ರ ಮಾಡಿಯೇ ಇಲ್ಲ ಎಂದಲ್ಲ. ಮಾಡಿದ್ದಾರೆ. ಅದೂ ತೀರಾ ಇತ್ತೀಚಿನ ವರ್ಷಗಳಲ್ಲಿ. ಆದರೆ, ಅವುಗಳ ಸಂಖ್ಯೆ ಕಡಿಮೆ. ಅಂದರೆ, ಬರೀ ಐದು. ಅದೂ ಅತಿಥಿ ಪಾತ್ರ, ಪೋಷಕ ಪಾತ್ರ ಅಷ್ಟೇ…

ಅಜಯ್ ದೇವಗನ್ ಅವರ ಸನ್ ಆಫ್ ಸರ್ದಾರ್‍ನಲ್ಲಿ ಸಲ್ಲು ಇದ್ದಾರೆ. ಅದು ಗೆಸ್ಟ್ ಎಪಿಯರೆನ್ಸ್. ಸಲಾಂ ಇ ಇಸ್ಕ್‍ನಲ್ಲಿ ಜೂಹಿ ಚಾವ್ಲಾ ಇದ್ದರೂ ನಾಯಕಿ ಅಲ್ಲ. ಈ ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ. ಓಂ ಶಾಂತಿ ಓಂನಲ್ಲಿ ಒಂದು ಹಾಡಿನಲ್ಲಿ ಇಬ್ಬರೂ ಬರುತ್ತಾರೆ ಅಷ್ಟೇ… ದೀವಾನ ಮಸ್ತಾನದಲ್ಲೂ ಸಲ್ಮಾನ್‍ರದ್ದು ಅತಿಥಿ ಪಾತ್ರ. ಅಂದಾಜ್ ಅಪ್‍ನಾ ಅಪ್‍ನಾದಲ್ಲೂ ಜೂಹಿಗೆ ಪ್ರಮುಖ ಪಾತ್ರವೇನು ಇರಲಿಲ್ಲ. ಇವುಗಳು ಮಾತ್ರ ಜೂಹಿ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ಕಾಣಿಸಿಕೊಂಡಿರುವ ಚಿತ್ರ. ಜೊತೆಯಾಗಿ ಎಂದರೆ ನಾಯಕ, ನಾಯಕಿಯಾಗಿ ಅಲ್ಲ. ಒಂದೇ ಚಿತ್ರದಲ್ಲಿ ನಟಿಸಿದ್ದರು ಅಷ್ಟೇ. ಇದು ಬಿಟ್ಟು ಇಡೀ ಇವರಿಬ್ಬರ ಸಿನಿಜೀವನದಲ್ಲಿ ಇಬರಿಬ್ಬರು ಇರುವ ಯಾವುದೇ ಚಿತ್ರಗಳು ಸಿಗುವುದೇ ಇಲ್ಲ…

ಸಲ್ಮಾನ್ ಈಗ ಸ್ಟಾರ್. ಚಿತ್ರರಂಗದಲ್ಲಿ ಈಗಲೂ ಸಕ್ರಿಯ. ಹಳೆಯ ಘಟನೆಗಳೇನೇ ಇದ್ದರೂ ಜೂಹಿ ಮತ್ತು ಸಲ್ಮಾನ್ ಇಬ್ಬರೂ ಈಗ ಸ್ನೇಹಿತರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಸಲ್ಮಾನ್ ತಮ್ಮ ಬೇಸರವನ್ನು ಮರೆತಿದ್ದಾರೆ ಎಂದಲ್ಲ. ಜೂಹಿಯನ್ನು ಕ್ಷಮಿಸಿದ್ದಾರೆ ಅಷ್ಟೇ…

About sudina

Check Also

‘ಅಮರ್ ಅಕ್ಬರ್ ಅಂಥೋನಿ’ ಚಿತ್ರದ ಕತೆ ಹುಟ್ಟಿದ್ದು ಹೇಗೆ ಗೊತ್ತಾ…?

ಅದು 70ರ ದಶಕ. ನಿರ್ದೇಶಕ ಮನ್ಮೋಹನ್ ದೇಸಾಯಿ ಬೆಳಗ್ಗೆ ಪೇಪರ್ ಓದುತ್ತಿದ್ದರು. ಈ ವೇಳೆ. ಒಂದು ಸುದ್ದಿ ದೇಸಾಯಿ ಅವರನ್ನು …

Leave a Reply

Your email address will not be published. Required fields are marked *

error: Content is protected !!