ಬೆಂಗಳೂರು : ಅಪಹರಣಕ್ಕೊಳಗಾಗಿ ಕೊಲೆಯಾಗಿರುವ ಐಟಿ ಅಧಿಕಾರಿ ಪುತ್ರ ಶರತ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಈ ಪ್ರಕರಣದ ಹಿಂದೆ ಪ್ರೀತಿಯ ವಿಷಯವೂ ಬೆಳಕಿಗೆ ಬರಲಾರಂಭಿಸಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಶರತ್ ಅಕ್ಕನ ಪ್ರಿಯಕರ ವಿಶಾಲ್ ಈ ಪ್ರಕರಣದ ಸೂತ್ರದಾರಿ.
ಆರ್ಟಿಓ ಕಚೇರಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿರುವ ವಿಶಾಲ್, ಶರತ್ ಅಕ್ಕನನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ವಿಶಾಲ್ ನಾಲ್ಕರಿಂದ ಐದು ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ, ಈ ಹಣಕ್ಕಾಗಿ ಈ ಕಿಡ್ನ್ಯಾಪ್ ತಂತ್ರ ರೂಪಿಸಲಾಗಿತ್ತು ಎನ್ನಲಾಗಿದೆ. ಹೀಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಬೆದರಿದ್ದರು. ಹೀಗಾಗಿ, ಎಲ್ಲಿ ತಮ್ಮ ಗುಟ್ಟು ಬಯಲಾಗುತ್ತದೋ ಎಂಬ ಭಯದಿಂದ ಅಂದೇ ಇವರು ಶರತ್ನನ್ನು ಕೊಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಈ ನಡುವೆ, ಶರತ್ ಆರೋಪಿ ವಿಶಾಲ್ ತಂಗಿ ಮೇಲೆ ಕಣ್ಣಿಟ್ಟಿದ್ದ. ಇದು ಕೂಡಾ ವಿಶಾಲ್ ಕೋಪಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಹೀಗಾಗಿ, ಈ ಪ್ರಕರಣ ಗೋಜಲು ಗೋಜಲಾಗಿದೆ. ಆದರೆ, ನಾವು ಈಗಲೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಸದ್ಯ ಇವೆಲ್ಲಾ ಬರೀ ಮೂಲಗಳ ಮಾಹಿತಿ ಅಷ್ಟೇ. ಆದರೆ, ಸಂಪೂರ್ಣ ತನಿಖೆ ನಡೆದ ಬಳಿಕಷ್ಟೇ ಸತ್ಯಾಸತ್ಯತೆಗಳು ಬಯಲಾಗಲಿವೆ.