Saturday , January 19 2019
ಕೇಳ್ರಪ್ಪೋ ಕೇಳಿ
Home / Sudina Special / ಯಕ್ಷಗಾನದಲ್ಲಿ ಚುಂಬನದ ಸನ್ನಿವೇಶ : ಶುರುವಾಗಿದೆ ಪಾವಿತ್ರ್ಯದ ಚರ್ಚೆ

ಯಕ್ಷಗಾನದಲ್ಲಿ ಚುಂಬನದ ಸನ್ನಿವೇಶ : ಶುರುವಾಗಿದೆ ಪಾವಿತ್ರ್ಯದ ಚರ್ಚೆ

ಮಂಗಳೂರು : ಕರಾವಳಿಯಲ್ಲಿ ಯಕ್ಷಗಾನ ಎಂಬುದು ಬರೀ ಕಲೆಯಲ್ಲ. ಅದು ದೈವೀ ಸ್ವರೂಪ. ಇಂದಿಗೂ ಭಕ್ತಿಭಾವದಿಂದ ಹರಕೆ ಆಟಗಳನ್ನು ಆಡುವ ಸಂಪ್ರದಾಯ ಕರಾವಳಿ ಭಾಗದಲ್ಲಿ ಇದೆ ಮತ್ತು ಅದು ಹೀಗೆಯೇ ಇರುತ್ತದೆ. ಅದೆಷ್ಟು ಆಧುನಿಕತೆಯ ಹೊಡೆತದ ನಡುವೆಯೂ ಯಕ್ಷಗಾನ ಎಂಬುದು ತನ್ನ ಸ್ವಂತಿಕೆ, ಜೀವಂತಿಕೆ, ಶ್ರೀಮಂತಿಕೆಯನ್ನು ಉಳಿಸಿಕೊಂಡಿದೆ ಎಂದರೆ ಅದು ಯಕ್ಷಗಾನಕ್ಕಿರುವ ತಾಕತ್ತು… ಬಗೆಬಗೆ ಮನೋರಂಜನಾ ಮಾಧ್ಯಮಗಳ ನಾಗಾಲೋಟದ ನಡುವೆಯೂ ಯಕ್ಷಗಾನ ಇನ್ನೂ ಮೇರು ಸ್ಥಾನದಲ್ಲಿ ಇದೆ ಎನ್ನುವುದು ಕರಾವಳಿಗರ ಒಂದು ಹೆಮ್ಮೆ…

ಹಾಗಂತ, ಯಕ್ಷಗಾನ ನಿಂತ ನೀರಲ್ಲ. ಕಾಲಕಾಲಕ್ಕೆ ಇಲ್ಲೊಂದಷ್ಟು ಬದಲಾವಣೆಗಳು ಆಗುತ್ತಲೇ ಇವೆ. ಇವುಗಳಲ್ಲಿ ಕೆಲವು ಕೆಟ್ಟವೂ ಇವೆ. ಕೆಲವು ಒಳ್ಳೆಯವೂ ಇವೆ. ಇದು ಬಹಳ ವಿಸ್ತಾರವಾದ ಚರ್ಚೆ. ಹೀಗಾಗಿ, ಈ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಈ ಸಂದರ್ಭದಲ್ಲಿ ಯಕ್ಷಗಾನ ಲೋಕದಲ್ಲಿ ನಡೆಯುತ್ತಿರುವ ಹೊಸ ಚರ್ಚೆಯ ಬಗ್ಗೆ ನಾವು ಬೆಳಕು ಚೆಲ್ಲೋಣ.

ಸದ್ಯ ಯಕ್ಷಗಾನದ ಶೃಂಗಾರ ಪದ್ಯವೊಂದರಲ್ಲಿ ಚುಂಬನ (ಸಾಮಾಜಿಕ ಜಾಲತಾಣದಲ್ಲಿ ಲಿಪ್ಲಾಕ್ ಎಂದು ಬರೆಯಲಾಗುತ್ತಿದೆ) ದೃಶ್ಯ ಚರ್ಚೆ ಹುಟ್ಟುಹಾಕಿದೆ. ಸಿನೆಮಾದಂತೆಯೇ ಯಕ್ಷಗಾನಕ್ಕೂ ಚುಂಬನ ದೃಶ್ಯಗಳು ಬಂದಿವೆ ಎಂಬುದು ಈ ಚರ್ಚೆ. ಈ ಚರ್ಚೆ ಹುಟ್ಟುಹಾಕಿದ್ದು ವಿಟ್ಲ ಸಮೀಪದ ಕನ್ಯಾನದ ವಗೆನಾಡು ಶ್ರೀ ಸುಬ್ರಾಯ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ. ಇಲ್ಲಿ ಪ್ರತಿವರ್ಷ ಯಕ್ಷಗಾನ ಗಾನ ನಾಟ್ಯ ವೈಭವ ನಡೆಯುತ್ತದೆ. ಈ ವರ್ಷವೂ ಸೆಪ್ಟೆಂಬರ್ 16 ರಂದು ಈ ಕಾರ್ಯಕ್ರಮ ಇಲ್ಲಿ ಸಂಪನ್ನಗೊಂಡಿದೆ. ಆದರೆ, ಇಲ್ಲಿ ಪ್ರದರ್ಶನಗೊಂಡ ಪ್ರಸಂಗವೊಂದರಲ್ಲಿ ಶೃಂಗಾರ ಪದ್ಯದಲ್ಲಿ ಅಭಿನಯಿಸಿದ ಇಬ್ಬರು ಕಲಾವಿದರು ತುಟಿ ಚುಂಬಿಸಿದಂತೆ ಭಾಸವಾಗುವಂತಹ ಅಭಿನಯ ತೋರಿದ್ದಾರೆ ಎಂಬುದು ಈಗ ದೊಡ್ಡ ಸುದ್ದಿಯಾಗುತ್ತಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ. ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ದೃಶ್ಯಗಳಿಂದ ಯಕ್ಷಗಾನದ ಸೊಬಗು, ಆಶಯಕ್ಕೆ ಧಕ್ಕೆಯಾಗುತ್ತದೆ ಎಂಬ ಕೂಗು ಈಗ ಬಲವಾಗಿ ಕೇಳಿ ಬಂದಿದೆ. ಇನ್ನು, ಕೆಲವರು ಅಭಿನಯದ ಭಾವ ಪರವಶತೆಯಲ್ಲಿ ಕಲಾವಿದರು ಹೀಗೆ ಮಾಡಿರಬಹುದು. ಅಥವಾ ಕ್ಯಾಮೆರಾ ಆಂಗಲ್ನಲ್ಲಿ ಅದು ಹೀಗೆ ಕಂಡಿರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ನಿಜ ಅದಲ್ಲ : ಆದರೆ, ಈ ಸನ್ನಿವೇಶದಲ್ಲಿ ಕಾಣಿಸಿಕೊಂಡ ಕಲಾವಿದ ರಾಜೇಶ್ ಅಡ್ಕ ವಾಸ್ತವವೇ ಬೇರೆ ಇದೆ ಎಂದು ಹೇಳಿದ್ದಾರೆ. ಯಕ್ಷಗಾನದಲ್ಲಿ ಕೆಲವೊಂದು ಸಲ ಸಹಕಲಾವಿದರಿಗೆ ಸೂಚನೆ ಕೊಡಬೇಕಾದ ಸನ್ನಿವೇಶ ಬರುತ್ತದೆ. ಯಕ್ಷಗಾನದ ಸೊಬಗು ಹಾಳಾಗದಂತೆ, ಪ್ರೇಕ್ಷಕರಿಗೂ ತಿಳಿಯದಂತೆ ಈ ಸೂಚನೆ ಕೊಡುವ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಹೀಗಾಗಿ, ಮೊನ್ನೆಯ ಸನ್ನಿವೇಶದಲ್ಲಿ ಕಿವಿಯಲ್ಲಿ ನಾನು ಸೂಚನೆ ಕೊಟ್ಟಿದ್ದಷ್ಟೇ. ಅದು ಚುಂಬನ ಅಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದರೆ, ಪದ್ಯ ಸನ್ನಿವೇಶಕ್ಕೆ ತಕ್ಕಂತೆ ಹಣೆಗೆ ಮುತ್ತಿಕ್ಕಿದ್ದು ಹೌದು ಎಂಬುದನ್ನೂ ಇವರು ಒಪ್ಪಿಕೊಂಡಿದ್ದಾರೆ.

ಅಂದಿನ ನಾಟ್ಯ ವೈಭದ ಕೊನೆಯ ಪದ್ಯ ಇದಾಗಿತ್ತು. ಹೀಗಾಗಿ. ಭಾಗವತರು ಬೇಗ ಮುಗಿಸುವಂತೆ ರಾಜೇಶ್ಗೆ ಹೇಳಿದ್ದರು. ಇದೇ ವಿಷಯವನ್ನು ರಾಜೇಶ್ ತನ್ನ ಸಹಕಲಾವಿದ ಪ್ರಶಾಂತ್ ನೆಲ್ಯಾಡಿ ಅವರಿಗೆ ರಂಗದಲ್ಲಿ ಹೇಳಿದ್ದಾರೆ ಎಂಬುದು ಇವರ ಸ್ಪಷ್ಟನೆ. ಒಟ್ಟಾರೆ, ಈ ವಿಚಾರ ಪರ ವಿರೋಧ ಚರ್ಚೆಗೂ ಕಾರಣವಾಗಿದ್ದಂತೂ ಸತ್ಯ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!