Saturday , September 22 2018
ಕೇಳ್ರಪ್ಪೋ ಕೇಳಿ
Home / Gulf News / ದೂರವಾಗಿದ್ದ ಸ್ನೇಹಿತರನ್ನು 23 ವರ್ಷಗಳ ಬಳಿಕ ಒಂದಾಗಿಸಿದ ಫೇಸ್​ಬುಕ್​…!

ದೂರವಾಗಿದ್ದ ಸ್ನೇಹಿತರನ್ನು 23 ವರ್ಷಗಳ ಬಳಿಕ ಒಂದಾಗಿಸಿದ ಫೇಸ್​ಬುಕ್​…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಅಬುದುಬೈ : ಇದೊಂದು ಅಪೂರ್ವ ಸಂದರ್ಭ. ಆ ಸಹೋದರರಿಬ್ಬರ ಭೇಟಿಯ ಕ್ಷಣ. ಈ ಭೇಟಿ ಅಂತಿಂತಹದ್ದಲ್ಲ. ಬರೋಬ್ಬರಿ 23 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿರುವ ಕ್ಷಣ ಅದು…! ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದು ಅಬುದುಬೈ ವಿಮಾನ ನಿಲ್ದಾಣ…

ಏನಿದು ಪ್ರಕರಣ…? : ಸೂಡನ್​ ದೇಶದ ಝಕರಿಯಾ ಪೀಟರ್ ಬೊಡಿಯಾ ತನ್ನ ಸಹೋದರ ಲಿನೋ ಪೀಟರ್ ಬೊಡಿಯಾರಿಂದ ದೂರ ಆಗಿದ್ದರು. 1995ರಲ್ಲಿ ಈ ಸಹೋದರರು ಪರಸ್ಪರ ದೂರವಾಗಿದ್ದರು. ಆಗ ಝಕರಿಯಾಗೆ ವಯಸ್ಸು ಬರೀ 14. ಆದರೆ, ವಿದ್ಯಾಭ್ಯಾಸದ ಕಾರಣದಿಂದ ಇವರು ಮನೆ ಬಿಟ್ಟಿದ್ದರು. ಹೀಗೆ ಮನೆ ಬಿಟ್ಟು ಬಂದ ಬಳಿಕ ಅದ್ಯಾವುದೋ ಕಾರಣಕ್ಕೋ ಈ ಸಹೋದರರು ದೂರವೇ ಆಗಿ ಹೋದರು. ಆದರೂ, ಝಕರಿಯಾ ತಮ್ಮನಿಗಾಗಿ ಎಲ್ಲೆಲ್ಲೂ ಹುಡುಕಾಟ ನಡೆಸಿದ್ದರು. ಪ್ರತಿದಿನ ತಮ್ಮನನ್ನು ನೋಡಲು ಝಕರಿಯಾ ಮನಸ್ಸು ತುಡಿಯುತ್ತಿತ್ತು.. ಎಷ್ಟು ಪ್ರಯತ್ನಿಸಿದರೂ ತಮ್ಮನ ಮತ್ತು ಮನೆಯವರ ಸುಳಿವು ಇವರಿಗೆ ಸಿಗಲಿಲ್ಲ. ಅದಕ್ಕೆ ಕಾರಣವೂ ಇತ್ತು. ಲಿನೋ ಖಾರ್ಟೌಮ್​ನಲ್ಲಿ ತನ್ನ ತಂದೆಯ ಎರಡನೇ ಪತ್ನಿಯ ಮನೆಯಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದರು. ಇವರ ತಂದೆ ಸೂಡನ್​ನ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ತಂದೆಯ ಸಾವಿನ ನಂತರ ಲಿನೋ ಈಜಿಪ್ಟ್​ಗೆ ವಲಸೆ ಬಂದಿದ್ದರು. ಬಳಿಕ ಆಸ್ಪ್ರೇಲಿಯಾದಲ್ಲಿ ತನ್ನ ತಾಯಿ ಮತ್ತು ಸಂಬಂಧಿಗಳೊಂದಿಗೆ ಇವರು ವಾಸವಾಗಿದ್ದರು. ಹೀಗಾಗಿ, ಸಹೋದರ ಮತ್ತು ಮನೆಯವರ ಸಂಪರ್ಕವೇ ಕಡಿದು ಹೋಗಿತ್ತು…

ಇತ್ತ, ತಮ್ಮನಿಗಾಗಿ ಹುಡುಕಾಟ ನಡೆಸುವ ಸಲುವಾಗಿ ಝಕರಿಯಾ ವಿದ್ಯಾಭ್ಯಾಸ ಮುಗಿದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸಿಕ್ಕಿದವರ ಬಳಿಯೆಲ್ಲಾ ತಮ್ಮನ ಬಗ್ಗೆ ವಿಚಾರಿಸುತ್ತಿದ್ದರು. ಕುಟುಂಬ ಸ್ನೇಹಿತರು, ಸಂಬಂಧಿಕರು ಎಲ್ಲರೊಂದಿಗೂ ಇವರ ಬಗ್ಗೆ ಕೇಳುತ್ತಿದ್ದರು. ಆದರೆ, ಇವರ ಬಗ್ಗೆ ಯಾರಿಗೂ ಅಷ್ಟಾಗಿ ಮಾಹಿತಿಯೇ ಇರಲಿಲ್ಲ. ಹೀಗೆ. ತಮ್ಮನಿಗಾಗಿ ಹುಡುಕಾಟ ನಡೆಸುತ್ತಿದ್ದ ಜೊತೆ ಜೊತೆಗೇ ಬದುಕಿಗಾಗಿ ಝಕರಿಯಾ ಯುಎಇಗೆ ಬಂದಿದ್ದರು. ಇಲ್ಲೂ ಲಿನೋ ಹುಡುಕಾಟ ಮುಂದುವರಿದಿತ್ತು.

ಫೇಸ್​ಬುಕ್​ ನೀಡಿತ್ತು ಸುಳಿವು…! : ಸುಮಾರು 2013ರ ಸಮಯ. ಝಕರಿಯಾ ತಮ್ಮ ಲಿನೋ ಬಗ್ಗೆ ವಿಚಾರಣೆ ಮಾಡುತ್ತಲೇ ಇದ್ದರು. ಈ ವೇಳೆ, ಫೇಸ್​ಬುಕ್​ ಚಾಟ್​ನಲ್ಲಿ ತನ್ನ ಸಂಬಂಧಿಯೊಂದಿಗೂ ಝಕರಿಯಾ ತಮ್ಮನ ಬಗ್ಗೆ ಕೇಳಿದರು. ಆಗ ಆ ಸಂಬಂಧಿಯೊಂದು ಸುಳಿವು ನೀಡಿದರು. ಅದೇನೆಂದರೆ, ತಾನು ಲಿನೋ ಜೊತೆ ಫೇಸ್​ಬುಕ್​ನಲ್ಲಿ ಈಗಷ್ಟೇ ಫ್ರೆಂಡ್​ ಆಗಿದ್ದೇನೆ ಎಂದು ಅವರು ಹೇಳಿದ್ದರು. ಮೊದಲು ಲಿನೋ ಬಗ್ಗೆ ಕೇಳುವಾಗ ಈ ಸಂಬಂಧಿಗೂ ಗೊತ್ತಾಗಿರಲಿಲ್ಲ. ಆದರೆ, ತಾಯಿಯ ಹೆಸರು ಹೇಳಿದ ಬಳಿಕ ಲಿನೋ ಬಗ್ಗೆ ಗೊತ್ತಾಯ್ತು. ಅಲ್ಲದೆ, ಇವರೆಲ್ಲಾ ಆಸ್ಟ್ರೇಲಿಯಾದ ಯಾವುದೋ ಒಂದು ಊರಲ್ಲಿ ಇದ್ದಾರೆ ಎಂಬುದಷ್ಟೇ ನನಗೆ ಗೊತ್ತಿದೆ ಎಂದಿದ್ದರು ಆ ಸಂಬಂಧಿ. ಇದಾದ ಬಳಿಕ ತಾಯಿಯನ್ನು ಪತ್ತೆಯ ಹಚ್ಚಿದ್ದ ಈ ಮಹಿಳೆ ಆಕೆಯ ಮೂಲಕ ಲಿನೋರನ್ನು ಫೇಸ್​ಬುಕ್​ ಮೂಲಕ ಸಂಪರ್ಕಿಸಿದ್ದರು..

ಫೇಸ್​ಬುಕ್​ನಲ್ಲೇ ಸಮಾಗಮ : ಇದಾದ ಬಳಿಕ ಝಕರಿಯಾ ಕೂಡಾ ಲಿನೋರನ್ನು ಫೇಸ್​ಬುಕ್ ಮೂಲಕ ಸಂಪರ್ಕಿಸಿದರು. ಆಗ ತಮ್ಮನನ್ನು ನೋಡಿದ ಸಂಭ್ರಮವೋ ಸಂಭ್ರಮ ಝಕರಿಯಾಗೆ.. ಯಾಕೆಂದರೆ, ಲಿನೋವನ್ನು ಕಡೇ ಬಾರಿಗೆ ಇವರು ನೋಡುವಾಗ ಅವರಿಗೆ ವಯಸ್ಸು ಬರೀ ನಾಲ್ಕು…! ಈಗ 29. ಫೇಸ್​ಬುಕ್​ನಲ್ಲೇ ಫೋಟೋ ಕಂಡು ಖುಷಿ ಪಟ್ಟ ಝಕರಿಯಾ ತಮ್ಮನನ್ನು ನೇರವಾಗಿ ನೋಡಲು ಹಾತೊರೆಯುತ್ತಿದ್ದರು. ಫೇಸ್​ಬುಕ್​ ಮೂಲಕ ಪರಿಚಯವಾಗಿ ನಾಲ್ಕು ವರ್ಷವಾದರೂ ಈ ಸಹೋದರರಿಗೆ ನೇರವಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ, ಇವರಿಬ್ಬರು ಫೋನ್​ ಮೂಲಕ ನಿರಂತರ ಸಂಪರ್ಕದಲ್ಲಿದ್ದರು…

ಕೊನೆಗೂ ಆಯ್ತು ಭೇಟಿ : ಹೀಗೆ ಸತತ ಪ್ರಯತ್ನದ ಬಳಿಕ 23 ವರ್ಷಗಳ ಬಳಿಕ ಅಣ್ಣ ತಮ್ಮಂದಿರು ಭೇಟಿಯಾಗಿದ್ದರು. ಬುಧವಾರ ಲಿನೋ ಅಬುದುಬೈಗೆ ಬಂದಿಳಿದರು. ಅಣ್ಣ ತಮ್ಮ ಇಬ್ಬರೂ ಪರಸ್ಪರ ಆಲಿಂಗಿಸಿಕೊಂಡು ಖುಷಿ ಪಟ್ಟರು. ಈ ಕ್ಷಣವನ್ನು ನೋಡಿದಾಗ ಅಲ್ಲಿದ್ದವರ ಕಣ್ಣೂ ಮಂಜಾಗಿತ್ತು..

 

About sudina

Check Also

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು …

Leave a Reply

Your email address will not be published. Required fields are marked *

error: Content is protected !!