ಅದು ‘ಕಾಯಾಮತ್ ಸೇ ಕಾಯಾಮತ್ ತಕ್’ ಚಿತ್ರದ ಹಾಡಿನ ರೆಕಾರ್ಡಿಂಗ್ ಸಂದರ್ಭ. ಈ ಹಾಡನ್ನು ರೆಕಾರ್ಡ್ ಮಾಡಲು ಸ್ಟುಡಿಯೋಗೆ ಬಂದಿದ್ದರು ಪ್ರಸಿದ್ಧ ಗಾಯಕಿ ಅಲ್ಕಾ ಯಾಗ್ನಿಕ್. ರಿಹರ್ಸಲ್ ಎಲ್ಲಾ ಮುಗಿಯಿತು. ಈ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಅಲ್ಕಾ ಅವರ ದೃಷ್ಟಿ ಒಬ್ಬ ಸುಂದರ ತರುಣನ ಮೇಲೆ ಬಿದ್ದಿತ್ತು. ಹೊರಗೆ ಕುಳಿತಿದ್ದ ಈ ತರುಣ ಹಾಡು ಹಾಡುತ್ತಿದ್ದ ಅಲ್ಕಾ ಅವರನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ. ಈ ಹುಡುಗ ಹೀಗೆ ತನ್ನನ್ನು ದುರುಗುಟ್ಟಿ ನೋಡುತ್ತಿರುವುದು ಅಲ್ಕಾ ಅವರಿಗೆ ಇಷ್ಟವಾಗಿರಲಿಲ್ಲ. ಮೊದಲ ಮೊದಲು ಅಲ್ಕಾ ಇದರ ಬಗ್ಗೆ ಅಷ್ಟಾಗಿ ಯೋಚಿಸಲಿಲ್ಲ. ಈ ವಿಷಯ ಅಲ್ಲಿಗೇ ಬಿಡೋಣ ಎಂದು ಅಂದುಕೊಂಡಿದ್ದರು. ಆದರೆ, ರೆಕಾರ್ಡಿಂಗ್ ಮಾಡುವ ಸಮಯ ಬಂದಾಗ ಆ ತರುಣ ಇದೇ ರೀತಿ ತನ್ನನ್ನು ನೋಡುವುದನ್ನು ಕಂಡ ಅಲ್ಕಾಗೆ ಕೊಂಚ ಇರುಸು ಮುರುಸಾಯ್ತು. ಹೀಗಾಗಿ, ಆ ತರುಣನನ್ನು ಕರೆದು ಇಲ್ಲಿಂದ ಹೊರಗೆ ಹೋಗಿ ಎಂದು ನೇರವಾಗಿ ಹೇಳಿ ಬಿಟ್ಟರು. ಆ ತರುಣ ಕೂಡಾ ಇವರ ಮಾತನ್ನು ಕೇಳಿ ಅಲ್ಲಿಂದ ಹೊರಗೆ ಹೋಗಿದ್ದರು. ಯಾಕೆಂದರೆ, ಅಲ್ಕಾ ಆಗ ಸ್ಟಾರ್ ಸಿಂಗರ್. ರೆಕಾರ್ಡಿಂಗ್ ಎಲ್ಲಾ ಮುಗಿಯಿತು.
ಆಗ ಚಿತ್ರದ ನಿರ್ದೇಶಕ ಮನ್ಸೂರ್ ಅಲಿ ಖಾನ್ ಅವರು ಅಲ್ಕಾ ಯಾಗ್ನಿಕ್ ಅವರಿಗೆ ಆ ತರುಣನ ಪರಿಚಯ ಮಾಡಿದರು. ‘ಅಲ್ಕಾಜಿ… ಇವರೇ ನಮ್ಮ ಚಿತ್ರದ ನಾಯಕ. ಹೆಸರು ಅಮೀರ್ ಖಾನ್’ ಎಂದರು. ಈ ವಿಷಯ ಕೇಳಿ ಅಲ್ಕಾ ಚಿಂತಿತರಾದರು. ಇದಕ್ಕಿಂತ ಮುಂಚೆ ಅಲ್ಕಾ ಅಮೀರ್ ಅವರನ್ನು ನೋಡಿರಲಿಲ್ಲ. ಅವರ ಹೆಸರು ಕೇಳಿರಲಿಲ್ಲ ಮತ್ತು ಅವರ ಪರಿಚಯವೂ ಇರಲಿಲ್ಲ. ಹೀಗಾಗಿ, ತಾನು ಅಮೀರ್ ಜೊತೆ ವರ್ತಿಸಿದ ರೀತಿಗೆ ತಾನು ಅವರಿಂದ ಕ್ಷಮೆ ಕೇಳಬೇಕೆಂದು ಅಲ್ಕಾಗೆ ಅನಿಸು. ತಕ್ಷಣ ಕ್ಷಮೆ ಕೂಡಾ ಕೇಳಿದರು.

ಆದರೆ, ಅಲ್ಕಾ ಕ್ಷಮೆ ಕೇಳುವಾಗ ಅಮೀರ್ ಪರವಾಗಿಲ್ಲ ಮೇಡಂ ಎಂದು ಹೇಳಿ ವಿಷಯ ಅಲ್ಲಿಗೇ ಬಿಟ್ಟಿದ್ದರು. ಇದಾದ ಬಳಿಕ ಹಲವು ವರ್ಷಗಳ ನಂತರ ಯಾವುದಾದರೂ ಸಭೆ ಸಮಾರಂಭಗಳಲ್ಲಿ ಒಟ್ಟಾಗಿ ಇದ್ದರೆ ಅಮೀರ್ ತಮಾಷೆಗೆಂದು ಈ ಪ್ರಕರಣವನ್ನು ಸದಾ ಹೇಳುತ್ತಿದ್ದರು. ‘ಒಬ್ಬರು ಸ್ಟಾರ್ ಸ್ಟುಡಿಯೋದಿಂದ ನನ್ನನ್ನು ಬೈದು ಹೊರಗಟ್ಟಿದ್ದರು’ ಎಂದು ಹೇಳುವ ಮೂಲಕ ಅಮೀರ್ ನಗೆಯುಕ್ಕಿಸುತ್ತಿದ್ದರು.