Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / 6.5 ಸೆಂಟಿ ಮೀಟರ್ ಉದ್ದದ ಒಂದು ಸ್ಕ್ರೂನಿಂದ ಬಯಲಾಯ್ತು ನಿಗೂಢವಾಗಿಯೇ ಇದ್ದ ಕೊಲೆ ರಹಸ್ಯ…!

6.5 ಸೆಂಟಿ ಮೀಟರ್ ಉದ್ದದ ಒಂದು ಸ್ಕ್ರೂನಿಂದ ಬಯಲಾಯ್ತು ನಿಗೂಢವಾಗಿಯೇ ಇದ್ದ ಕೊಲೆ ರಹಸ್ಯ…!

ಕೊಚ್ಚಿ : ಈ ವರ್ಷದ ಆರಂಭದಲ್ಲಿ ಕೊಚ್ಚಿಯ ಕುಂಬಳಂನ ಹಿನ್ನೀರಿನ ಪಕ್ಕ ನೀಲಿ ಬಣ್ಣ ದೊಡ್ಡ ಬ್ಯಾರಲ್ ಒಂದನ್ನು ಮೀನುಗಾರರು ಕಂಡಿದ್ದರು. ಭಾರವಾಗಿಯೇ ಇದ್ದ ಈ ಬ್ಯಾರಲ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಪಕ್ಕಕ್ಕೆ ತಂದು ನೋಡಿದಾಗ ಅದಲ್ಲಿ ಕಾಂಕ್ರಿಟ್ ತುಂಬಿದ್ದು ಗೊತ್ತಾಗಿತ್ತು. ಇದಾದ ಬಳಿಕ ಅದನ್ನು ಜನ ಅಲ್ಲೇ ಬಿಟ್ಟಿದ್ದರು. ಆದರೆ, ಇದಾಗಿ ಕೆಲವು ದಿನಗಳ ಬಳಿಕ ಅಂದರೆ ಸುಮಾರು ಜನವರಿ 8ರ ಸುಮಾರಿಗೆ ಈ ಬ್ಯಾರಲ್ ಪಕ್ಕದಿಂದ ದುರ್ವಾಸನೆ ಬರುವುದಕ್ಕೆ ಆರಂಭಿಸಿತ್ತು. ಹೀಗಾಗಿ, ಇದರೊಳಗೆ ಏನಿರಬಹುದು ಅಂತ ಕಟ್ ಮಾಡಿದಾಗ ಈ ಕಾಂಕ್ರಿಟ್ ತುಂಬಿದ ಬ್ಯಾರಲ್‍ನೊಳಗೆ ಇತ್ತು ಒಂದು ಅಸ್ಥಿ ಪಂಜರ…! ತಕ್ಷಣ ವಿಷಯವನ್ನು ಪೊಲೀಸರಿಗೆ ಮುಟ್ಟಿಸಲಾಯ್ತು. ಪೊಲೀಸರು ಬಂದು ಪರಿಶೀಲನೆ ನಡೆಸಿದರು… ಆದರೆ, ಕೊಲೆಯಾದವರು ಯಾರು…? ಮಹಿಳೆಯ ಅಥವಾ ಪುರುಷನಾ ಎಂಬುದೂ ಗೊತ್ತಾಗದಷ್ಟು ಶವ ಸಂಪೂರ್ಣ ಕೊಳೆತು ಹೋಗಿತ್ತು. ಮೂಳೆಗಳೂ ಹಾಳಾಗಿದ್ದವು.

ಈಗ ಬಯಲಾಗಿದೆ ರಹಸ್ಯ…! : ಶವದ ಮೂಳೆಗಳೂ ಸಂಪೂರ್ಣ ಹಾಳಾಗಿದ್ದವು. ಆದರೆ, ಮೂಳೆಗಳಿಗೆ ಅಂಟಿಕೊಂಡಂತೆ ಸಾಫ್ಟ್ ಟಿಶೂಗಳು ಇದ್ದವು. ಇದನ್ನು ಪರಿಶೀಲಿಸಿದಾಗ ನಿಶ್ಚಯವಾಗಿ ಇದು ಮಹಿಳೆಯ ಅಸ್ಥಿಪಂಜರ ಎಂಬುದು ದೃಢವಾಗಿತ್ತು. ಜೊತೆಗೆ, ಇನ್ನೂ ಸುದೀರ್ಘವಾಗಿ ಮೂಳೆಗಳ ಪರಿಶೀಲನೆ ನಡೆಸಿದಾಗ ಅಲ್ಲೊಂದು 6.5 ಸೆಂಟಿ ಮೀಟರ್ ಉದ್ದದ ಸ್ಟೀಲ್‍ನಿಂದ ಮಾಡಿದ್ದ ಮ್ಯಾಲಿಯೋಲರ್ ಸ್ಕ್ರೂ ಪತ್ತೆಯಾಗಿತ್ತು. ಮೂಳೆUಳು ಫ್ರಾಕ್ಚರ್ ಆಗಿದ್ದ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ಈ ಸ್ಕ್ರೂ ಬಳಸುತ್ತಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಪೊಲೀಸರ ತನಿಖೆ ಇನ್ನೊಂದು ಘಟ್ಟ ತಲುಪಿತ್ತು…

ಸ್ಕ್ರೂ ಹಿಂದೆ ಬಿದ್ದಿದ್ದರು ಪೊಲೀಸರು…! : ಸದ್ಯ ಈ ಅಸ್ಥಿ ಪಂಜರ ಯಾರದ್ದು ಎಂಬ ಪತ್ತೆಗೆ ಇದ್ದ ಒಂದೇ ಒಂದು ಸುಳಿವು ಈ ಸ್ಕ್ರೂ…! ಹೀಗಾಗಿ, ಪೊಲೀಸರ ತಂಡ ಈ ಸ್ಕ್ರೂ ಹಿಂದೆ ಬಿದ್ದಿತ್ತು. ಪುಣೆಯ ಸಂಸ್ಥೆಯೊಂದು ಈ ಸ್ಕ್ರೂ ಸಪ್ಲೈ ಮಾಡಿತ್ತು ಎಂಬ ಅಂಶ ತನಿಖೆ ವೇಳೆ ಗೊತ್ತಾಗುತ್ತದೆ. ಇದೇ ಬ್ಯಾಚ್ ನಂಬರ್‍ನ ಸ್ಕ್ರೂಗಳನ್ನು ಸರಿಸುಮಾರು 300 ಶಸ್ತ್ರಚಿಕಿತ್ಸೆಗೆ ಬಳಸಲಾಗಿದೆ ಎಂಬ ಅಂಶವೂ ಬಯಲಾಯ್ತು… ಹೀಗೆ ಆದ 300 ಶಸ್ತ್ರಚಿಕಿತ್ಸೆಯಲ್ಲಿ ಆರು ಶಸ್ತ್ರಚಿಕಿತ್ಸೆ ಕೊಚ್ಚಿಯಲ್ಲೇ ನಡೆದಿತ್ತು… ಹೀಗಾಗಿ, ಪೊಲೀಸರು ಮತ್ತೆ ಆ ಆರು ಶಸ್ತ್ರಚಿಕಿತ್ಸೆಯ ಮಾಹಿತಿಯ ಬೆನ್ನು ಬಿದ್ದಿದ್ದರು.. ತನಿಖೆ ಚುರುಕುಗೊಂಡಿತು. ಪೊಲೀಸರು ಆರು ಶಸ್ತ್ರಚಿಕಿತ್ಸೆಯ ಮಾಹಿತಿ ಪಡೆದರು. ಅದರಲ್ಲಿ ಐವರು ಶಸ್ತ್ರಚಿಕಿತ್ಸೆಯ ಬಳಿಕ ಸಂಪೂರ್ಣ ಗುಣಮುಖರಾಗಿ ಮನೆಯಲ್ಲಿ ಇರೋದು ಗೊತ್ತಾಗಿತ್ತು. ಆದರೆ, ಆರನೇಯವರು ನಾಪತ್ತೆಯಾಗಿದ್ದರು…! ಅವರೇ ಸುಮಾರು 52 ವರ್ಷದ ಶಕುಂತಳಾ… ಕೊಚ್ಚಿಯ ಉದಯಂಪುರ್‍ನ ನಿವಾಸಿ. ಅಲ್ಲಿಗೆ ಪೊಲೀಸರ ತನಿಖೆ ಒಂದು ಮಹತ್ವದ ದಡ ತಪ್ಪಿತ್ತು…

ಈ ಶಕುಂತಳಾ 2016ರ ಸೆಪ್ಟೆಂಬರ್‍ನಲ್ಲಿ ತಿರುವನಂತಪುರಂನ ವಿಕೆಎನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಲಾಗಿದ್ದರು. ಸ್ಕೂಟರ್ ಆಕ್ಸಿಡೆಂಟ್‍ನಲ್ಲಿ ಮೂಳೆ ಮುರಿತಕ್ಕೊಳಗಾಗಿ ಶಕುಂತಳಾ ಆಸ್ಪತ್ರೆ ಸೇರಿದ್ದರು. ಈ ವೇಳೆ ಬಳಸಿದ್ದ ಈ ಸ್ಕ್ರೂ ಸಿಕ್ಕಿದ್ದರಿಂದಲೇ ಶಕುಂತಳಾರ ಅಸ್ಥಿ ಪಂಜರ ಸಿಕ್ಕಿತ್ತು…! ಇನ್ನು, ಶಕುಂತಳಾ ಸಾವಿಗೆ ಕಾರಣ ಅವರ ಕುಟುಂಬದ ಸಮಸ್ಯೆ. ಶಕುಂತಳಾ ಗಂಡ ಕ್ರಿಮಿನಲ್ ಕೇಸ್‍ನಿಂದ ಹಲವು ವರ್ಷದಿಂದ ಜೈಲಿನಲ್ಲೇ ಇದ್ದಾರೆ. ಕುಟುಂಬದಲ್ಲೂ ಸದಾ ಜಗಳ ಆಗುತ್ತಲೇ ಇತ್ತು. ಹೀಗಾಗಿ, ಶಕುಂತಳಾ ಮನೆ ಬಿಟ್ಟು ತನ್ನ ಮಗ ಪ್ರಮೋದ್ ಹಾಗೂ ಮಗಳು ಅಶ್ವತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಭಿಸಿದ್ದರು. ಇನ್ನು, ಈ ಆಕ್ಸಿಡೆಂಟ್ ಬಳಿಕ ಪ್ರಮೋದ್ ಆತ್ಮಹತ್ಯೆಗೆ ಶರಣಾಗಿದ್ದ. ಮಗಳು ಅಶ್ವತಿಗೆ ಮದುವೆಯಾಯ್ತು. ಹೀಗಾಗಿ, ಶಕುಂತಳಾ ಮತ್ತೆ ಒಂಟಿಯಾಗಿದ್ದರು. ಸ್ವಲ್ಪ ವರ್ಷಗಳ ಬಳಿಕ ಗಂಡನನ್ನು ತೊರೆದ ಅಶ್ವತಿ ಸಾಜಿತ್ ಎಂಬಾತನೊಂದಿಗೆ ಪ್ರೀತಿಗೆ ಬಿದ್ದದಳು. ಆದರೆ, ಈ ಪ್ರೀತಿಗೆ ಶಕುಂತಳಾ ವಿರೋಧಿಸಿದ್ದರು. ಯಾಕೆಂದರೆ, ಸಾಜಿತ್‍ಗೆ ಮದುವೆಯಾಗಿ ಮಕ್ಕಳು ಇದ್ದಾರೆ ಎಂಬ ವಿಷಯ ಶಕುಂತಳಾಗೆ ಗೊತ್ತಾಗಿತ್ತು. ಹೀಗಾಗಿ, ಶಕುಂತಳಾ ಕೊಲೆಗೆ ಇದೇ ಕಾರಣ ಎಂಬುದು ಪೊಲೀಸರಿಗೆ ಗೊತ್ತಾಗಿ ತನಿಖೆ ಇನ್ನಷ್ಟು ಚುರುಕು ಪಡೆದಿತ್ತು… ಶಕುಂತಳಾ ತನ್ನ ವಿಷಯವನ್ನು ಮನೆಗೆ ಹೇಳುತ್ತೇನೆ ಎಂದು ಬೆದರಿಸಿದ್ದ ಕಾರಣಕ್ಕೇ ಸಾಜಿತ್ ಶಕುಂತಳಾರನ್ನು ಕೊಂದಿದ್ದಾನೆ ಎಂಬ ಅನುಮಾನ ಪೊಲೀಸರಿಗೆ ಇತ್ತು. ಹೀಗಾಗಿ, ಎಲ್ಲರ ಬಳಿ ಸಾಜಿತ್‍ನ ಮಾಹಿತಿ ಸಂಗ್ರಹಿಸಿದ್ದರು. ಆಗ ಗೊತ್ತಾಗಿತ್ತು ಮತ್ತೊಂದು ಸತ್ಯ…!

ಸಾಜಿತ್ ಕೂಡಾ ಶವವಾಗಿದ್ದ…! : ಅಸಲಿಗೆ ಬ್ಯಾರಲ್‍ನಲ್ಲಿ ಶಕುಂತಳಾ ಶವ ತುಂಬಿ ನೀರಿಗೆ ಎಸೆದಂದೇ ಸಾಜಿತ್ ಕೂಡಾ ಶವವಾಗಿದ್ದ. ಶಕುಂತಳಾರ ಕೊಲೆಯಿಂದ ಭಯಗೊಂಡ ಸಾಜಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗ್ತಿದೆ… ಈಗ ಈ ಕೇಸ್‍ನ ತನಿಖೆಯಲ್ಲಿ ಉಳಿದಿರುವುದು ಶಕುಂತಳಾ ಮಗಳು ಅಶ್ವತಿ ಮಾತ್ರ… ಈಗ ಈಕೆಯ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ… ಒಟ್ಟಿನಲ್ಲಿ ಒಂದು ಬ್ಯಾರಲ್ ಮತ್ತು ಅದರೊಳಗೆ ಸಿಕ್ಕ ಸಣ್ಣ ಸ್ಕ್ರೂ ಒಂದು ದೊಡ್ಡ ಕೊಲೆ ರಹಸ್ಯವನ್ನೇ ಭೇದಿಸಿದೆ…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!