ತಿರುವನಂತಪುರಂ : ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿಯನ್ನು ಅಪಹರಿಸಿ ಕಿರುಕುಳ ಕೊಟ್ಟಿದ್ದ ಪ್ರಕರಣದಲ್ಲಿ ಸಂಚು ರೂಪಿಸಿದ್ದ ಆರೋಪದಲ್ಲಿ ಮಲಯಾಳಂ ನಟ ದಿಲೀಪ್ ಸಿಕ್ಕಿಬಿದ್ದಿದ್ದು ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಇದೇ ಕೇಸ್ನ ಸಂಬಂಧ 85 ದಿನಗಳ ಜೈಲುವಾಸ ಅನುಭವಿಸಿದ್ದ ದಿಲೀಪ್ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು, ಈ ಕಿಡ್ನ್ಯಾಪ್ ಕೇಸ್ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಇದಾದ ಬಳಿಕ ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (‘ಅಮ್ಮ’) ದಿಲೀಪ್ರನ್ನು ಸಂಘದಿಂದ ತೆಗೆದು ಹಾಕಿತ್ತು. ಆದರೆ, ಇತ್ತೀಚಿನ ದಿಢೀರ್ ಬೆಳವಣಿಗೆಯಲ್ಲಿ ‘ಅಮ್ಮ’ ಮತ್ತೆ ದಿಲೀಪ್ರನ್ನು ತನ್ನ ಸದಸ್ಯನನ್ನಾಗಿ ಮಾಡಿತ್ತು. ಭಾನುವಾರ ಸೂಪರ್ಸ್ಟಾರ್ ಮೋಹನ್ಲಾಲ್ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಇದೀಗ ಇದೇ ವಿಷಯ ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಕಲಾವಿದೆಯರ ತೀವ್ರ ವಿರೋಧ : ಅಮ್ಮ ಸಂಘಟನೆಯ ಈ ನಿರ್ಧಾರವನ್ನು ‘ವುಮೆನ್ಸ್ ಕಲೆಕ್ಟಿವ್ ಇನ್ ಸಿನೆಮಾ’ ಎಂಬ ಕಲಾವಿದೆಯರ ಸಂಘಟನೆ ವಿರೋಧಿಸಿದೆ. ಇದೊಂದು ಮಹಿಳಾ ವಿರೋಧಿ ನೀತಿ ಎಂದು ಸಂಘಟನೆ ಹೇಳಿದೆ. ತನಿಖೆ ಪೂರ್ಣಗೊಳ್ಳುವ ಮೊದಲೇ ಸಂಘಟನೆ ದಿಲೀಪ್ ಬೆಂಬಲಕ್ಕೆ ನಿಂತಿರೋದಕ್ಕೆ ಇವರು ಆಕ್ಷೇಪ ವ್ಯಕ್ತಪಡಿಸಿದ್ದು, ಒಂದಷ್ಟು ಪ್ರಶ್ನೆಗಳನ್ನೂ ಕೇಳಿದ್ದಾರೆ.
ದಿವಂಗತ ತಿಲಕನ್ ಕ್ಷಮೆ ಕೇಳ್ತಾರಾ…? : ದಿಲೀಪ್ರನ್ನು ಮತ್ತೆ ಸಂಘಕ್ಕೆ ಸೇರಿಸಿಕೊಂಡಿರೋ ಸಂಘಟನೆಯ ‘ರಾಜ’ರು ಹಿರಿಯ ನಟ ದಿವಂಗತ ತಿಲಕನ್ ಕ್ಷಮೆ ಕೇಳ್ತಾರಾ ಎಂದು ನಿರ್ದೇಶಕ ಅಶಿಕ್ ಅಬು ಪ್ರಶ್ನಿಸಿದ್ದಾರೆ. ಸಣ್ಣ ಕಾರಣಕ್ಕೆ ತಿಲಕನ್ ಅವರನ್ನು ಸಂಘದಿಂದ ಹೊರಗಿಟ್ಟ ನಾಯಕರು ಅವರು ಕೊನೆಯುಸಿರೆಳೆಯುವ ತನಕ ಮತ್ತೆ ಸಂಘಕ್ಕೆ ಸೇರಿಸಿರಲಿಲ್ಲ ಎಂದು ಅಬು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಲಕನ್ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇರಲಿಲ್ಲ. ಅವರು ಸಂಘದಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು ಅಷ್ಟೇ. ಅಷ್ಟಕ್ಕೇ ಅವರನ್ನು ಸಂಘದಿಂದ ಕಿತ್ತು ಹಾಕಲಾಗಿತ್ತು. ತಮ್ಮ ಅಭಿಪ್ರಾಯ ಹೇಳಿದ್ದಕ್ಕೆ ಅವರನ್ನು ವೈರಿಯಂತೆ ನೋಡಲಾಗಿತ್ತು. ಸಾಯುವ ವರೆಗೂ ಅವರನ್ನು ಸಂಘಕ್ಕೆ ಸೇರಿಸಿರಲಿಲ್ಲ. ಈಗ ದಿಲೀಪ್ರನ್ನು ಸೇರಿಸಿದ್ದು ಎಷ್ಟು ಸರಿ…? ನಾಯಕರು ತಿಲಕನ್ ಕ್ಷಮೆ ಕೇಳಲು ಸಿದ್ಧರಿದ್ದಾರಾ ಎಂದು ಅಬು ತುಂಬ ಖಾರವಾಗಿಯೇ ಪ್ರಶ್ನಿಸಿದ್ದಾರೆ.