ಚೆನ್ನೈ : ಮಾಲಿಕನ ಮೇಲಿನ ಸಿಟ್ಟಿನಿಂದ ಕುದುರೆಯ ಕತ್ತು ಕೊಯ್ದು ಮೂವರು ಕ್ರೌರ್ಯ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೊಲೀಸ್ ರೇಸ್ನಲ್ಲಿದ್ದು ನಿವೃತ್ತಿಯಾದ ಮತ್ತು ಮರೀನಾ ಬೀಚ್ನಲ್ಲಿ ಜನರಿಗೆ ಸವಾರಿ ಮಾಡಿಸುತ್ತಿದ್ದ 10 ವರ್ಷದ ಕುದುರೆಯ ಕತ್ತು ಕೊಯ್ಯಲಾಗಿದೆ. ಮೂವರು ಯುವಕರು ಈ ಕೃತ್ಯವೆಸಗಿದ್ದಾರೆ. ಈ ಮೂವರಲ್ಲಿ ಒಬ್ಬನ ವಿರುದ್ಧ ಕುದುರೆ ಮಾಲಿಕ ಪೊಲೀಸರಿಗೆ ಮಾಹಿತಿ ನೀಡಿದ್ದ ಎಂಬ ಸಿಟ್ಟಿನಲ್ಲಿ ಇವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಸಂಬಂಧ ವಿಶಾಲ್ ಮತ್ತು ಕಾರ್ತಿಕ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ. ಕುದುರೆಯ ಕತ್ತಿನಲ್ಲಿ ರಕ್ತ ಬರುತ್ತಿದ್ದದ್ದನ್ನು ಕಂಡ ಪಕ್ಕದ ಮನೆಯವರು ಮಾಲಿಕರಿಗೆ ವಿಷಯ ತಿಳಿಸಿದ್ದರು. ತಕ್ಷಣ ಕುದುರೆಯನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಈಗ 25ಕ್ಕೂ ಹೆಚ್ಚು ಸ್ಟೀಚ್ ಹಾಕಲಾಗಿದೆ. ರಾಜೇಶ್ ಎಂಬುವವರು ಈ ಕುದುರೆಯನ್ನು ಸಾಕುತ್ತಿದ್ದು, ಮರೀನಾ ಬೀಚ್ನಲ್ಲಿ ಕುದುರೆ ಸವಾರಿ ಮಾಡಿಸಿ ಬಂದ ಸಂಪಾದನೆಯಲ್ಲೇ ಜೀವನ ನಿರ್ವಹಿಸುತ್ತಿದ್ದರು.