Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ಬಿಬಿಎಂಪಿ ರೌಂಡ್ಸ್ : ಪಾಲಿಕೆ ಪ್ರಮುಖ ಸುದ್ದಿಗಳ ಒಂದು ನೋಟ

ಬಿಬಿಎಂಪಿ ರೌಂಡ್ಸ್ : ಪಾಲಿಕೆ ಪ್ರಮುಖ ಸುದ್ದಿಗಳ ಒಂದು ನೋಟ


ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅಧಿಕಾರ : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಬಿಎಂಪಿಯಿಂದ ವರ್ಗಾವಣೆಯಾಗಿದ್ದ ಮಂಜುನಾಥ್ ಪ್ರಸಾದ್ ಮತ್ತೆ ಆಯುಕ್ತರ ಸ್ಥಾನಕ್ಕೆ ಮರಳಿದ್ದಾರೆ. ಎರಡನೇ ಬಾರಿಗೆ ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು, ಮಂಜುನಾಥ್ ಪ್ರಸಾದ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಂದಿದ್ದ ಮಹೇಶ್ವರ್ ರಾವ್ ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದಾರೆ. ಇನ್ನು, ಬಿಬಿಎಂಪಿ ಕಮಿಷನರ್ ಆಗಿ ಮತ್ತೆ ಅಧಿಕಾರ ಸ್ವೀಕರಿಸಿದ ಮಂಜುನಾಥ್ ಪ್ರಸಾದ್ ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಶುಭಹಾರೈಸಿದರು. ಈ ವೇಳೆ ಮಾತನಾಡಿದ ಮಂಜುನಾಥ್ ಪ್ರಸಾದ್, ಎರಡನೇ ಬಾರಿಗೆ ಬಿಬಿಎಂಪಿ ಕಮಿಷನರ್ ಆಗಿ ನೇಮಕಗೊಂಡಿರೋದು ಖುಷಿ ತಂದಿದೆ. ಸಿಎಂ, ಡಿಸಿಎಂ, ಮೇಯರ್ ಮಾರ್ಗದರ್ಶನದಲ್ಲಿ ಶ್ರಮವಹಿಸಿ ಉತ್ತಮ ಕೆಲಸ ಮಾಡುತ್ತೇನೆ ಎಂದರು.

ಚೀನಾದ ಚೆಂಗ್ಡೂ ಮುನಿಪಲ್ ಕಾರ್ಪೊರೇಷನ್‍ನಿಂದ ಆಹ್ವಾನ : ಚೀನಾ ದೇಶದ ಚೆಂಗ್ಡೂ ಮುನ್ಸಿಪಲ್ ಕಾರ್ಪೊರೇಷನ್ ಕಾರ್ಯದರ್ಶಿ ಯಾಂಗ್ ಡಾಂಗ್ ಶೆಂಗ್ ಅವರ ನೇತೃತ್ವದ ನಿಯೋಗ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರನ್ನು ಭೇಟಿಯಾಗಿದೆ. ಜೊತೆಗೆ, ಮೇಯರ್ ಹಾಗೂ ಅಧಿಕಾರಿಗಳ ತಂಡವನ್ನು ಈ ನಿಯೋಗ ಚೀನಾಕ್ಕೆ ಆಹ್ವಾನಿಸಿದೆ. ಈ ಹಿಂದೆ ಬಿಬಿಎಂಪಿ ಹಾಗೂ ಚೆಂಗ್ಡೂ ಮುನ್ಸಿಪಲ್ ಕಾರ್ಪೊರೇಷನ್ `ಸಿಸ್ಟರ್ ಸಿಟಿ’ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಂತೆ ಎರಡು ನಗರದ ವಾಣಿಜ್ಯ, ಕೈಗಾರಿಕೆ ಮತ್ತು ನಗರ ಸಾರಿಗೆ ವ್ಯವಸ್ಥೆ ಹಾಗೂ ವಿವಿಧ ವಿಭಾಗಗಳಲ್ಲಿನ ತಂತ್ರಜ್ಞಾನದ ಬಗೆಗೂ ಚರ್ಚೆ ಮಾಡಲಾಯಿತು. ಚರ್ಚೆಯ ಬಳಿಕ ಮಾತನಾಡಿದ ಮೇಯರ್ ಸಂಪತ್ ರಾಜ್, ನಮ್ಮ ತಂಡ ಚೀನಾದ ಚೆಂಗ್ಡೂ ಮುನ್ಸಿಪಲ್‍ಗೆ ಭೇಟಿ ನೀಡಲಿದ್ದೇವೆ. ಅಲ್ಲಿನ ಹೊಸ ತಂತ್ರಜ್ಞಾನ ಹಾಗೂ ನಗರದ ವೀಕ್ಷಣೆಗಾಗಿ ಆಹ್ವಾನ ಬಂದಿದೆ ಎಂದು ಹೇಳಿದರು.

ಬಿಬಿಎಂಪಿ ವಿಭಜನೆಗೆ ವಿರೋಧ : ಬಿಬಿಎಂಪಿಯನ್ನು ಐದು ಪಾಲಿಕೆಯನ್ನಾಗಿ ಮಾಡುವ ಬಿ.ಎಸ್ ಪಾಟೀಲ್ ಸಮಿತಿ ವರದಿ ಈಗ ಬಿಬಿಎಂಪಿಯಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿದೆ. ಸಮಿತಿ ಈ ವರದಿಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ, ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಕಾರ್ಪೊರೇಟರ್‍ಗಳು ಕಪ್ಪು ಪಟ್ಟಿ ಕಟ್ಟಿಕೊಂಡು ಬರುವ ಮೂಲಕ ವರದಿಯನ್ನು ವಿರೋಧಿಸಿದರು. ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು `ಬೆಂಗಳೂರು ವಿಭಜನೆ ಬೇಡವೇ ಬೇಡ’ ಎಂದು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ, ಚರ್ಚಿಸಿ ನಿರ್ಧಾರಕ್ಕೆ ಬರೋಣ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು. ಹೀಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನು, ಈ ಬಗ್ಗೆ ಮೇಯರ್ ಸಂಪತ್ ರಾಜ್ ಮಾತನಾಡಿ ವರದಿಯನ್ನು ಕೌನ್ಸಿಲ್ ಸಭೆಗೆ ತರಿಸಿ ಸಾಧಕ ಬಾಧಕಗಳನ್ನು ಚರ್ಚಿಸಲಾಗುವುದು. ಮುಂದಿನ ನಿರ್ಧಾರ ಸರ್ಕಾರಕ್ಕೆ ಬಿಟ್ಟಿರುವುದು ಎಂದರು. ಈ ಚರ್ಚೆಯ ಬಳಿಕ ಮತ್ತೆ ಕಸದ ವಿಚಾರ ಕುರಿತು ಪಾಲಿಕೆ ಸದಸ್ಯರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ, ಉಳಿದಂತೆ ಕಸದ ಸಮಸ್ಯೆ, ಕೆರೆ ಬಫರ್ ಝೋನ್ ಹಾಗೂ ಪಾಲಿಕೆ ಶಾಲೆಗಳ ಬಗ್ಗೆಯೂ ಚರ್ಚೆ ನಡೆಯಿತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!