Wednesday , March 20 2019
ಕೇಳ್ರಪ್ಪೋ ಕೇಳಿ
Home / News NOW / ದೈವ ಶಾಪ, ಭೂಮಾಫಿಯಾ, ಮದ್ಯಪಾನ, ಸ್ತ್ರೀಸಂಘ…? : ಶೀರೂರು ಶ್ರೀಗಳ ಸಾವಿನ ತನಿಖೆಗೆ ಹಲವು ಆಯಾಮ… : ಇಲ್ಲಿದೆ ವೀಡಿಯೋ

ದೈವ ಶಾಪ, ಭೂಮಾಫಿಯಾ, ಮದ್ಯಪಾನ, ಸ್ತ್ರೀಸಂಘ…? : ಶೀರೂರು ಶ್ರೀಗಳ ಸಾವಿನ ತನಿಖೆಗೆ ಹಲವು ಆಯಾಮ… : ಇಲ್ಲಿದೆ ವೀಡಿಯೋ

ಉಡುಪಿ ಪ್ರತಿನಿಧಿ ವರದಿ
ಉಡುಪಿ : ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವು ಈಗ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಇದು ಸಹಜ ಸಾವಾ? ಅಥವಾ ಕೊಲೆಯಾ ಎಂಬ ಸಂಶಯವೂ ಆರಂಭವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ, ಈ ಸಾವಿನ ಪ್ರಕರಣಕ್ಕೆ ಹಲವು ಆಯಾಮಗಳು ಸಿಗುತ್ತಿವೆ…

ದೈವಕ್ಕೆ ಅಪಮಾನ…? : ಶೀರೂರು ಶ್ರೀಗಳು ಬೃಂದಾವನಸ್ಥರಾಗುತ್ತಿದ್ದಂತೆಯೇ ಈ ಒಂದು ಚರ್ಚೆ ಶುರುವಾಗಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ಪಡುಬಿದ್ರೆಯಲ್ಲಿ ಕೊಡಮಣಿತ್ತಾಯ ದೈವದ ಧರ್ಮನೇಮೋತ್ಸವ ನಡೆಯುತ್ತಿತ್ತು. ಶ್ರೀಗಳೂ ಈ ನೇಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ದೈವ ಶ್ರೀಗಳ ಎದುರು ಬಂದು ನಿಂತಾಗ `ನೀನು ಏನೂ ಅಲ್ಲ. ಇಲ್ಲಿ ನಾನೇ ಎಲ್ಲಾ’ ಎಂಬಂತೆ ಕೈ ಸನ್ನೆಯ ಮೂಲಕ ಹೇಳಿದ್ದರು. ಈ ವೇಳೆ, ದೈವ `ನೀನಲ್ಲ… ಇಲ್ಲಿ ನಾನೇ ಎಲ್ಲಾ… ಇದನ್ನು ತೋರಿಸ್ತೇನೆ. ಮುಂದೊಂದು ದಿನ ಕಷ್ಟ ಬರಬಹುದು’ ಎಂಬ ಸೂಚನೆ ನೀಡಿತ್ತು… ಇದೇ ಶ್ರೀಗಳಿಗೆ ಮುಳುವಾಯ್ತಾ…? ಎಂಬ ಪ್ರಶ್ನೆ ಈಗ ಆಸ್ತಿಕರ ವಲಯದಲ್ಲಿ ಶುರುವಾಗಿದೆ. ಶ್ರೀಗಳು ಬೃಂದಾವನಸ್ಥರಾಗುತ್ತಿದ್ದಂತೆಯೇ ಈ ಹಳೇ ವೀಡಿಯೋ ವೈರಲ್ ಆಗುತ್ತಿದೆ…

ರಿಯಲ್ ಎಸ್ಟೇಟ್ ಮಾಫಿಯಾ…? : ಅಷ್ಟಮಠಗಳ ಪೈಕಿಯೇ ಶೀರೂರು ಮಠ ಶ್ರೀಮಂತವಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಠಕ್ಕಿದೆ. ಉಡುಪಿ ನಗರದಲ್ಲೇ 100 ಕೋಟಿಯಷ್ಟು ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಶ್ರೀಗಳ ಸಾವಿಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ…? ಆಸ್ತಿ ವಿಷಯವೇ ಅವರಿಗೆ ಮುಳುವಾಯ್ತಾ ಎಂಬ ಚರ್ಚೆಯೂ ಶುರುವಾಗಿದೆ. ಆದ್ದರಿಂದ ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಮಠದ ಆಸ್ತಿ ಆರಾದ್ಯ ದೈವ ವಿಠಲ ದೇವರ ಹೆಸರಿನಲ್ಲಿದೆ. ಹೀಗಾಗಿ, ಇದನ್ನು ಮಾರಲು ಸಾಧ್ಯವಿಲ್ಲ. ಆದರೆ, ಲೀಸ್ ಅಥವಾ ಬಾಡಿಗೆಗೆ ನೀಡಬಹುದು. ಹೀಗಾಗಿ, ಶ್ರೀಗಳು ಈ ಮಠದ ಜಮೀನನಿನಲ್ಲಿ ಬಿಲ್ಡರ್‍ಗಳೊಂದಿಗೆ ಸೇರಿ ಮಾಲ್, ಥಿಯೇಟರ್, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಹಲವು ವಾಣಿಜ್ಯ ಕಟ್ಟಿದ್ದರು. ಕೋಟ್ಯಂತರ ರೂಪಾಯಿಯ ವ್ಯವಹಾರ ಇದಾಗಿತ್ತು. ಅದಕ್ಕಾಗಿ ಬ್ಯಾಂಕ್‍ನಿಂದ ಸಾಲ ಕೂಡಾ ಪಡೆದಿದ್ದರು. ಸಾಲ ಮರುಪಾವತಿ ಆಗದ ಹಿನ್ನೆಲೆಯಲ್ಲಿ ಬ್ಯಾಂಕ್‍ನವರು ಶ್ರೀಗಳನ್ನು ಭೇಟಿಯಾಗಿ ಸಾಲ ಮರುಪಾವತಿಸುವಂತೆ ಕೇಳಿದ್ದರು. ಮಠದ ಮುಂದೆ ಪ್ರತಿಭಟನೆಯೂ ಮಾಡಿದ್ದರು. ಇದು ಶ್ರೀಗಳನ್ನು ಸಂಕಷ್ಟಕ್ಕೆ ತಳ್ಳಿತ್ತು.. ಇದೇ ವೇಳೆ, ಭೂಮಾಫಿಯಾದಿಂದ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದ ಶ್ರೀಗಳು ಭದ್ರತೆಯೂ ಕೋರಿದ್ದರು. ಹೀಗಾಗಿ, ಶ್ರೀಗಳ ಸಾವಿಗೆ ಭೂಮಾಫಿಯಾವೂ ಕಾರಣವಾಯ್ತಾ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ..

ದೈವಗಳಿಗೂ ದೂರು ಕೊಟ್ಟಿದ್ದರು… : ಇನ್ನು, ತಮಗೆ ತಮ್ಮ ಶಿಷ್ಯರೇ ಕೋಟ್ಯಂತರ ರೂಪಾಯಿ ಹಣವನ್ನು ವಂಚಿಸಿದ್ದಾರೆ ಎಂದು ಶ್ರೀಗಳು ದೈವಗಳ ಬಳಿ ದೂರಿದ್ದರು. ಮೂಲಮಠದಿಂದ ಸ್ವಲ್ಪ ದೂರದಲ್ಲಿರುವ ನೇರಳಕಟ್ಟೆ ಎಂಬಲ್ಲಿ ನಡೆದಿದ್ದ ಕೊಡಮಣಿತ್ತಾಯ ಮತ್ತು ಕೋಟಿ ಚೆನ್ನಯ್ಯ ದೈವಗಳ ನೇಮೋತ್ಸವದಲ್ಲಿ ಶ್ರೀಗಳು ತಮಗೆ ಒಬ್ಬರು 14 ಕೋಟಿ ಮತ್ತು ಇನ್ನೊಬ್ಬರು 12 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ್ದರು. ಇಲ್ಲಿದೆ ಆ ವೀಡಿಯೋ…

ವಾಟ್ಸ್ ಆ್ಯಪ್  ಆಡಿಯೋ ವೈರಲ್ : ಇನ್ನೊಂದು ಕಡೆ ಲಕ್ಷ್ಮೀವರ ತೀರ್ಥರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ರಥಬೀದಿಯಲ್ಲಿ ಈಗ ಸೌಂಡ್ ಮಾಡುತ್ತಿದೆ. ತುಳುವಿನಲ್ಲಿರುವ ಈ ಆಡಿಯೋದಲ್ಲೂ ಒಂದು ಕೋಟಿಯ ಮಾತುಗಳು ಕೇಳಿ ಬರುತ್ತವೆ. `ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ. ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ. ಐವತ್ತು ಲಕ್ಷ ಅವರಿಗೆ ಕೊಡಬೇಕಂತೆ ಎಂದು ಮಾತನಾಡಿದ್ದಾರೆ. ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥಶ್ರಿಗಳ ಹೆಸರು ಪ್ರಸ್ತಾಪ ಮಾಡಿ, ಅವರ ಎಂಟು ಸಾವಿರ ಭಕ್ತರಿಂದ ಪ್ರತಿ ಮನೆಯಿಂದ ಒಂದು ಪವನ್ ಚಿನ್ನ ಒಟ್ಟುಗೂಡಿಸ್ತಾರಂತೆ. ಆದ್ರೆ ಆಡಿಯೋದಲ್ಲಿ ಯಾವುದೂ ಸ್ಪಷ್ಟ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಎಂಬ ಬಗ್ಗೆ ಮಾಹಿತಿಯಿಲ್ಲ. ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ…? ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆ ಇದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ… ಹೀಗಾಗಿ, ಈ ಆಡಿಯೋದ ಮೂಲದ ತನಿಖೆ ಆಗಬೇಕಾಗಿದೆ…

`ಸ್ತ್ರೀಸಂಘ, ಮದ್ಯಪಾನದಿಂದ ಹೀಗಾಗಿರಬಹುದು ಗೊತ್ತಿಲ್ಲ’ : ಇನ್ನು, ಶ್ರೀಗಳ ಸಾವಿನ ಬಗ್ಗೆ ಮಾತನಾಡಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಸ್ತ್ರೀಸಂಘ ಇತ್ತು ಮತ್ತು ಮದ್ಯಪಾನ ಕೂಡಾ ಮಾಡುತ್ತಿದ್ದರು. ಇದೂ ಅವರ ಸಾವಿಗೆ ಕಾರಣವಾಗಿರಬಹುದು. ಲಕ್ಷ್ಮೀವರ ತೀರ್ಥರದ್ದು ಕೊಲೆ ಅಲ್ಲ. ವಿಷ ಪ್ರಾಶಣ ಮಾಡುವಷ್ಟು ಯಾರೂ ಯೋಚನೆಯೂ ಮಾಡಿರಲಿಕ್ಕಿಲ್ಲ ಎಂದು ಹೇಳಿದರು. ಅಷ್ಟ ಮಠಗಳ ಕಡೆಯಿಂದ ಯಾವುದೇ ತಪ್ಪುಗಳು ನಡೆದಿಲ್ಲ. ಅವರಿಗೆ ಕುಡಿಯುವ ಮತ್ತು ಮಹಿಳೆಯರ ಚಟವಿತ್ತು. ಹೀಗಾಗಿ, ಸನ್ಯಾಸತ್ವಕ್ಕೆ ದ್ರೋಹ ಬಗೆದಿದ್ದರು. ಅವರಿಗೆ ಮೊದಲಿನಿಂದಲೂ ಅನಾರೋಗ್ಯ ಇತ್ತು. ಹೀಗಾಗಿ, ದುಶ್ಚಟಗಳನ್ನು ಬಿಡುವಂತೆ ಹಲವು ಬುದ್ಧಿವಾದ ಹೇಳಿದ್ದೆ. ಕೇಳಿರಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಆದರೆ, ಲಕ್ಷ್ಮೀವರತೀರ್ಥರಿಗೆ ಇದ್ದ ಒಳ್ಳೆಯ ಗುಣಗಳನ್ನೂ ಕೊಂಡಾಡಿದ್ದಾರೆ. ಉತ್ತಮ ಕಲಾವಿದರಾಗಿದ್ದರು. ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಸಹಾಯ ಮಾಡಿದ್ದರು. ಬ್ರಾಹ್ಮಣೇತರರೊಂದಿಗೂ ಬೆರೆತು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಕೆಲವೊಂದು ದುಶ್ಚಟದ ಕಾರಣದಿಂದ ಅವರು ಸನ್ಯಾಸ ಧರ್ಮಕ್ಕೆ ಅಪಚಾರವೆಸಗಿದ್ದರು. ಹೀಗಾಗಿ, ಶಿಷ್ಯ ಸ್ವೀಕಾರಕ್ಕೆ ಒತ್ತಾಯಿಸಿದ್ದೇವು ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ…

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!