Monday , February 18 2019
ಕೇಳ್ರಪ್ಪೋ ಕೇಳಿ
Home / News NOW / ಕರುಣಾನಿಧಿ ಅಸ್ತಂಗತ : ಮರೀನಾ ಬೀಚ್‍ನಲ್ಲೇ ಅಂತ್ಯಸಂಸ್ಕಾರ

ಕರುಣಾನಿಧಿ ಅಸ್ತಂಗತ : ಮರೀನಾ ಬೀಚ್‍ನಲ್ಲೇ ಅಂತ್ಯಸಂಸ್ಕಾರ

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡ್ರಾವಿಡರ ಮೇರು ನಾಯಕ, ಬರಹಗಾರ ಕರುಣಾನಿಧಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಕರುಣಾನಿಧಿ ನಿನ್ನೆ ಸಂಜೆ 6.10ರ ಸುಮಾರಿಗೆ ವಿಧಿವಶರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ತಮಿಳುನಾಡಿನಲ್ಲಿ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿತ್ತು. ಹಲವು ಕಡೆ ಹಿಂಸಾಚಾರ ಕೂಡಾ ನಡೆದಿದೆ. ಕಾವೇರಿ ಆಸ್ಪತ್ರೆಯಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲಾರದೆ ಪೊಲೀಸರು ಲಾಠಿ ಪ್ರಹಾರವನ್ನೂ ಮಾಡಬೇಕಾಗಿತ್ತು.

ಪ್ರಧಾನಿ ಅಂತಿಮ ದರ್ಶನ : ಇನ್ನು, ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ರಾಜಾಜಿ ಹಾಲ್‍ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಕರುಣಾನಿಧಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಮರೀನಾ ಬೀಚ್‍ನಲ್ಲೇ ಅಂತ್ಯಕ್ರಿಯೆ : ಇತ್ತ, ಕರುಣಾನಿಧಿ ಅಂತ್ಯಕ್ರಿಯೆ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಡಿಎಂಕೆ ನಾಯಕನ ಅಂತ್ಯಕ್ರಿಯೆಗೆ ಸರ್ಕಾರ ಗಾಂಧಿ ಮಂಟಪದಲ್ಲಿ ಎರಡು ಎಕರೆ ಜಾಗ ನೀಡಿತ್ತು. ಆದರೆ, ಮರೀನಾ ಬೀಚ್‍ನಲ್ಲಿರುವ ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆಗೆ ಅವಕಾಶ ನೀಡಬೇಕೆಂದು ಡಿಎಂಕೆ ನಾಯಕರು ಪಟ್ಟು ಹಿಡಿದಿದ್ದರು. ಸೂಪರ್‍ಸ್ಟಾರ್ ರಜನಿಕಾಂತ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಇದಕ್ಕೆ ಧ್ವನಿಗೂಡಿಸಿದ್ದರು. ಈ ಹಗ್ಗಜಗ್ಗಾಟ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ, ನಿನ್ನೆ ತಡರಾತ್ರಿ ಈ ಬಗ್ಗೆ ವಿಚಾರಣೆ ನಡೆದಿತ್ತು. ಇವತ್ತು ಈ ಬಗ್ಗೆ ಆದೇಶ ಹೊರಬಿದ್ದಿದ್ದು, ಮರೀನಾ ಬೀಚ್‍ನಲ್ಲೇ ಅಂತ್ಯಕ್ರಿಯೆಗೆ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಅಸ್ತು ಎಂದಿದೆ.

ಕರುಣಾನಿಧಿ ನಿಧನ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಇವತ್ತು ಒಂದು ದಿನ ಶೋಕಾಚರಣೆ ನಡೆಯಲಿದೆ. ಹೀಗಾಗಿ, ಯಾವುದೇ ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಜೊತೆಗೆ, ಇವತ್ತು ನಿಗದಿಯಾಗಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನೂ ಮುಂದೂಡಲಾಗಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!