ಮೂಡಬಿದಿರೆ : ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದ ಮೂಡಬಿದಿರೆಯ ಸುದರ್ಶನ್ ಜೈನ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಸುದರ್ಶನ್ಗೆ 28 ವರ್ಷ ವಯಸ್ಸಾಗಿತ್ತು. ಇಲ್ಲಿನ ಪ್ರಭಾತ್ ಟೆಕ್ಸ್ ಟೈಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ಆಗಸ್ಟ್ 11 ರಿಂದ ನಾಪತ್ತೆಯಾಗಿದ್ದರು. ತಮ್ಮನೊಂದಿಗೆ ಬೈಕ್ನಲ್ಲಿ ಹೋಗಿದ್ದ ಸುದರ್ಶನ್ ನಂತರ ನಾಪತ್ತೆಯಾಗಿದ್ದರು. ಬಳಿಕ ತಮ್ಮನ ಬಳಿ ವಿಚಾರಿಸಿದಾಗ ಅಣ್ಣ ಅರ್ಧದಲ್ಲೇ ಬೈಕ್ನಿಂದ ಇಳಿದು ಜಗಳ ಮಾಡಿಕೊಂಡು ಹೋಗಿದ್ದಾಗಿ ಹೇಳಿದ್ದ. ಆದರೆ, ಇದೀಗ ಸುದರ್ಶನ್ ಶವ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.
ತಮ್ಮನಿಂದಲೇ ಕೊಲೆ…? : ಕೆಲಸ ಮುಗಿಸಿಕೊಂಡು ಹೊಸಬೆಟ್ಟುವಿನ ಮನೆ ಕಡೆ ತಮ್ಮನೊಂದಿಗೆ ಹೊರಟ್ಟಿದ್ದ ಸುದರ್ಶನ್ರನ್ನು ತಮ್ಮ ಸುಧೀರ್ ಮತ್ತು ಇಬ್ಬರು ಸ್ನೇಹಿತರು ಕರೆದೊಯ್ದು ಕೊಂದು ಫಲ್ಗುಣಿ ನದಿಗೆ ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಫಲ್ಗುಣಿ ನದಿಯಲ್ಲಿ ಸಿಕ್ಕ ಶವದ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳಾಗಿವೆ.
ಆಸ್ತಿ ಕಲಹವೇ ಕಾರಣನಾ…? : ಸುದರ್ಶನ್ ತಾಯಿ 2.7 ಎಕರೆ ಜಾಗವನ್ನು 27 ಲಕ್ಷಕ್ಕೆ ಮಾರಾಟ ಮಾಡಿದ್ದರು. ಇದರಲ್ಲಿ ಆರು ಲಕ್ಷ ಅಡ್ವಾನ್ಸ್ ಹಣ ಬಂದಿತ್ತು. ಸಿದ್ದಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟಿದ್ದ ಸುಧೀರ್ ಈ ಆರು ಲಕ್ಷದಲ್ಲಿ 3 ಲಕ್ಷ ಪಡೆದಿದ್ದ. ಜೊತೆಗೆ, ತನ್ನ ವ್ಯವಹಾರದಲ್ಲಿ ನಷ್ಟವಾಗಿದ್ದು ಬಾಕಿ ಉಳಿದ 3 ಲಕ್ಷಕ್ಕೂ ಬೇಡಿಕೆ ಇಟ್ಟಿದ್ದ. ಜೊತೆಗೆ, ಅಣ್ಣ ಸುದರ್ಶನ್ಗೂ ಕಿರುಕುಳ ಕೊಡುತ್ತಿದ್ದನಂತೆ. ಹೀಗಾಗಿ, ಅಣ್ಣ ತಮ್ಮನ ನಡುವೆ ಜಗಳ ಏರ್ಪಟ್ಟಿತ್ತು. ಇದೇ ಜಗಳ ಕೊಲೆಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಗಿದ ಬಳಿಕಷ್ಟೇ ಸತ್ಯಾಸತ್ಯತೆಗಳು ಹೊರಬರಲಿದೆ.