Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ ಸಂಜೆ 4 ಗಂಟೆಯ ತನಕ ಸೋಣ ಅಮಾವಾಸ್ಯೆ ಪವಿತ್ರ ತೀರ್ಥಸ್ನಾನ ಹಾಗೂ ಶ್ರೀ ದೇವರಿಗೆ ವಿಶೇಷ ಅಭಿಷೇಕ ಪೂಜೆಗಳು ಜರಗಲಿದೆ. ಅಂದು ಮುಂಜಾನೆಯಿಂದಲೇ ನವ ವಧು ವರರು ಪರ್ವತವೇರಿ ಪವಿತ್ರ ತೀರ್ಥ ಕೆರೆಗಳಲ್ಲಿ ಮಿಂದು ಶ್ರೀದೇವರಿಗೆ ಸೇವೆ ಸಲ್ಲಿಸಿ ಪುನೀತರಾಗುತ್ತಾರೆ.

ಶಿಕ್ಷಕರ ದಿನಾಚರಣೆ : ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು. ಮುಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್‍ನ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಈ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಈ ವೇಳೆ, ಶಿಕ್ಷಕರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದೇವದಾಸ್, ಉಪಾಧ್ಯಕ್ಷೆ ಶ್ರೀಮತಿ ಗೀತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ್ ಶೆಟ್ಟಿ ಅಳಿಕೆ ವಂದಿಸಿ, ಜೀವಶಾಸ್ತ್ರ ಉಪನ್ಯಾಸಕಿ ನೀತಾಶ್ರೀ ನಿರೂಪಿಸಿದರು.

ಅಧ್ಯಕ್ಷರ ಆಯ್ಕೆ : ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 2018 ರಿಂದ 2023ರವರೆಗಿನ ಅವಧಿಗೆ ನಿರ್ದೇಶಕ ಮಂಡಳಿಯ 12 ನಿರ್ದೇಶಕ ಸ್ಥಾನಗಳು ಇತ್ತೀಚಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರಾಗಿ ಸುಭಾಶ್ಚಂದ್ರ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು, ಉಪಾಧ್ಯಕ್ಷರಾಗಿ ಮಂಜುನಾಥ ರೈ ಸಾಲೆತ್ತೂರು ಪುನರಾಯ್ಕೆಗೊಂಡಿದ್ದಾರೆ.

ಫ್ರೀ ಮಿಡ್-ಡೇ ಮಿಲ್ ಸ್ಕೀಮ್ : ಸಮಾಜದ ವಿವಿಧ ನೆಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣವನ್ನರಸಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ಬರುತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವುದು ಶಿಕ್ಷಣ ಕೇಂದ್ರಗಳ ಜವಾಬ್ದಾರಿ. ಕಲಿಕೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗೆ ತಾನು ಕಲಿಯುವ ಪರಿಸರವೂ ಪರಿಣಾಮ ಬೀರುತ್ತದೆ. ಮನೆಯ ಪರಿಸರ, ಸ್ಥಿತಿಗತಿಗಳೂ ಸಹ ವಿದ್ಯಾರ್ಥಿಯ ಕಲಿಕೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕಲಿಕೆಯಲ್ಲಿ ಮುಂದೆ ಇದ್ದರೂ ಎಷ್ಟೋ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಸ್ಥಿತಿಗತಿ ಶಿಕ್ಷಣವನ್ನು ಮುಂದುವರಿಸಲು ತೊಡಕಾಗಿ ಪರಿಣಮಿಸುತ್ತದೆ. ಇದರಿಂದಾಗಿ ಎಷ್ಟೋ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಮನಗಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು. ಬಡ ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ಮಹತ್ವಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಮಾದರಿಯಾದ ಕೆಲಸ ಎಂದು ಬಂಟ್ವಾಳ ನಗರ ಆರಕ್ಷಕ ಠಾಣೆ ಸಬ್ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಹೇಳಿದರು.

ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ “ಫ್ರೀ ಮಿಡ್-ಡೇ ಮಿಲ್ ಸ್ಕೀಮ್ 2018”ನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ವಿ.ಎಸ್ ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಲಕ್ಷ್ಯದಲ್ಲಿಸಿಕೊಂಡು ಈ ಯೋಜನೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಎಸ್.ವಿ.ಎಸ್ ಕಾಲೇಜು ಉಪಪ್ರಾಂಶುಪಾಲೆ ಡಾ. ಸುಜಾತ ಎಚ್.ಆರ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಾರಾಯಣ ಭಂಡಾರಿ ವಂದಿಸಿ, ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.

ವರದಿ : ಯಾದವ್, ಬಿ.ಸಿ.ರೋಡ್

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!